ಹೊಸದೆಹಲಿ: ದಕ್ಷಿಣ ದೆಹಲಿಯ ಗೋವಿಂದಪುರಿ ಪ್ರದೇಶದಲ್ಲಿ ಶುಕ್ರವಾರ ನಡುರಾತ್ರಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಐದು ಅಂತಸ್ತಿನ ವಸತಿ ಕಟ್ಟಡವೊಂದರಲ್ಲಿ ಕಾಣಿಸಿಕೊಂಡ ಬೆಂಕಿಗೆ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಬಲಿಯಾಗಿದ್ದಾರೆ. ಘಟನೆಯಲ್ಲಿ ಇಬ್ಬರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೋವಿಂದಪುರಿ ಪೊಲೀಸ್ ಠಾಣೆಗೆ ಇಂದು ಮುಂಜಾನೆ ಸುಮಾರು 2:24 ರ ಸುಮಾರಿಗೆ ತುಘಲಕಾಬಾದ್ ಎಕ್ಸ್‌ಟೆನ್ಶನ್‌ನಲ್ಲಿರುವ ವಸತಿ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ತುರ್ತು ಕರೆ (PCR Call) ಬಂದಿತ್ತು.
ದೆಹಲಿ ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತ (DCP) ಹೇಮಂತ್ ತಿವಾರಿ ಈ ಕುರಿತು ಮಾಹಿತಿ ನೀಡಿ, “ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಇಡೀ ಐದು ಅಂತಸ್ತಿನ ಕಟ್ಟಡವನ್ನು ದಟ್ಟವಾದ ಹೊಗೆ ಆವರಿಸಿಕೊಂಡಿತ್ತು. ಇದರಿಂದಾಗಿ ಹಲವಾರು ನಿವಾಸಿಗಳು ಮನೆಯಿಂದ ಹೊರಬರಲಾರದೆ ಒಳಗೆ ಸಿಲುಕಿಕೊಂಡಿದ್ದರು. ಪೊಲೀಸ್ ಮತ್ತು ರಕ್ಷಣಾ ಸಿಬ್ಬಂದಿಯ ಜಂಟಿ ಕಾರ್ಯಾಚರಣೆಯ ಮೂಲಕ ಒಟ್ಟು 8 ಜನರನ್ನು ಕಟ್ಟಡದಿಂದ ಯಶಸ್ವಿಯಾಗಿ ರಕ್ಷಿಸಿ, ತಕ್ಷಣವೇ ಚಿಕಿತ್ಸೆಗಾಗಿ ಸಫ್ದರ್ಜಂಗ್ ಆಸ್ಪತ್ರೆ ಮತ್ತು ಏಮ್ಸ್ (AIIMS) ಟ್ರಾಮಾ ಸೆಂಟರ್‌ಗೆ ದಾಖಲಿಸಲಾಯಿತು,” ಎಂದು ತಿಳಿಸಿದ್ದಾರೆ.
ಆಸ್ಪತ್ರೆಗೆ ದಾಖಲಾದವರ ಪೈಕಿ 22 ವರ್ಷದ ಯುವಕ ಹಾಗೂ ಇಬ್ಬರು ಮಹಿಳೆಯರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಇನ್ನುಳಿದ ಇಬ್ಬರು ಗಾಯಾಳುಗಳ ಪರಿಸ್ಥಿತಿ ಇಂದಿಗೂ ಅತ್ಯಂತ ಚಿಂತಾಜನಕವಾಗಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಕಟ್ಟಡದ ನೆಲ ಮಹಡಿಯಲ್ಲಿ (Ground Floor) ಸಂಭವಿಸಿದ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಈ ಭೀಕರ ಅಗ್ನಿ ಅವಘಡ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
