ದೆಹಲಿ: ದೆಹಲಿ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಜಸ್ಟಿಸ್ ಯಶವಂತ್ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ಬೃಹತ್ ಪ್ರಮಾಣದ ನಗದು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರ ಮೇಲಿನ ಆರೋಪಗಳು ಸಾಬೀತಾಗಿವೆ ಎಂದು ಸಂಸದೀಯ ತನಿಖಾ ಸಮಿತಿಯು ಸಂಸತ್ತಿಗೆ ವರದಿ ಸಲ್ಲಿಸಿದೆ. ಈ ಬೆನ್ನಲ್ಲೇ ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ.
ಜಸ್ಟಿಸ್ ವರ್ಮಾ ಅವರ ನಿವಾಸದಲ್ಲಿ ಪತ್ತೆಯಾದ ನೋಟಿನ ಕಟ್ಟುಗಳ ಕುರಿತು ತನಿಖೆ ನಡೆಸಲು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ರಚಿಸಿದ್ದ ತ್ರಿ ಸದಸ್ಯ ತನಿಖಾ ಸಮಿತಿಯು ಬುಧವಾರ ತನ್ನ ವರದಿಯನ್ನು ಸಂಸತ್ತಿಗೆ ಸಲ್ಲಿಸಿದೆ. ವರ್ಮಾ ಅವರು ಈಗಾಗಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರೂ, ಕೇಂದ್ರ ನ್ಯಾಯಾಂಗ ಸಚಿವಾಲಯವು ಅದನ್ನು ಇದುವರೆಗೆ ಅಧಿಕೃತವಾಗಿ ನೋಟಿಫೈ ಮಾಡಿಲ್ಲ. ಹೀಗಾಗಿ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿಗಳ ಪಟ್ಟಿಯಲ್ಲಿ ಅವರ ಹೆಸರು ಮುಂದುವರಿದಿದೆ.
ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ನ್ಯಾಯಮೂರ್ತಿಯೊಬ್ಬರು ಕೇವಲ ರಾಜೀನಾಮೆ ನೀಡಿದ ತಕ್ಷಣವೇ ಇಂಪೀಚ್‌ಮೆಂಟ್ ಪ್ರಕ್ರಿಯೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಲು ಹಲವು ಸಂಸದರು ಒಲವು ತೋರಿದ್ದಾರೆ. ಆದರೆ, ಅವರು ಈಗಾಗಲೇ ರಾಜೀನಾಮೆ ನೀಡಿರುವುದರಿಂದ ಇಂಪೀಚ್‌ಮೆಂಟ್ ಪ್ರಕ್ರಿಯೆ ಸ್ವಯಂಚಾಲಿತವಾಗಿ ಅಂತ್ಯಗೊಳ್ಳುತ್ತದೆ ಎಂಬುದು ಕೆಲವು ಕಾನೂನು ತಜ್ಞರ ಅಭಿಪ್ರಾಯವಾಗಿದೆ. ಆರೋಪಗಳು ಸಾಬೀತಾಗಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬಹುದು ಎಂದೂ ಕಾನೂನು ತಜ್ಞರು ಹೇಳಿದ್ದಾರೆ.
ಹಣದ ಮೂಲ ತಿಳಿಸದ ನ್ಯಾಯಮೂರ್ತಿ:
ತ್ರಿ ಸದಸ್ಯ ಸಮಿತಿಯು ಜಸ್ಟಿಸ್ ವರ್ಮಾ ವಿರುದ್ಧದ ಮೂರು ಪ್ರಮುಖ ಆರೋಪಗಳನ್ನು ಎತ್ತಿಹಿಡಿದಿದೆ:
- ಅವರ ಅಧಿಕೃತ ನಿವಾಸದಲ್ಲಿ ಲೆಕ್ಕಕ್ಕೆ ಸಿಗದ ಬೃಹತ್ ಪ್ರಮಾಣದ ನಗದು ಪತ್ತೆಯಾಗಿದೆ.
- ಆ ನಗದು ಹಣಕ್ಕೆ ಸಂಬಂಧಿಸಿದ ಭೌತಿಕ ಸಾಕ್ಷ್ಯಾಧಾರಗಳನ್ನು ಕಾಯ್ದುಕೊಳ್ಳಲು ಅವರು ವಿಫಲರಾಗಿದ್ದಾರೆ.
- ಹಣದ ಮೂಲದ ಕುರಿತು ಅವರು ನೀಡಿದ ವಿವರಣೆಯು ತೃಪ್ತಿಕರವಾಗಿರದೆ, ಜಾರಿಕೊಳ್ಳುವಂತಿತ್ತು.
ಕಳೆದ ವರ್ಷದ ಮಾರ್ಚ್ 14 ರಂದು ದೆಹಲಿಯ ತುಘಲಕ್ ರಸ್ತೆಯಲ್ಲಿರುವ ಜಸ್ಟಿಸ್ ವರ್ಮಾ ಅವರ ನಿವಾಸದಲ್ಲಿ ಸಂಭವಿಸಿದ ಅಗ್ನಿ ಅವಘಡದ ವೇಳೆ ಬೃಹತ್ ಪ್ರಮಾಣದ ನೋಟಿನ ಕಟ್ಟುಗಳು ಪತ್ತೆಯಾಗಿದ್ದವು. ಈ ಕುರಿತು ತನಿಖೆ ನಡೆಸಲು ಸ್ಪೀಕರ್ ಓಂ ಬಿರ್ಲಾ ಅವರು ಸೆಪ್ಟೆಂಬರ್‌ನಲ್ಲಿ ತ್ರಿ ಸದಸ್ಯ ಸಮಿತಿಯನ್ನು ನೇಮಿಸಿದ್ದರು. ನ್ಯಾಯಮೂರ್ತಿಗಳ ಮನೆಯ ಸ್ಟೋರ್ ರೂಮ್‌ನಲ್ಲಿ ಭಾರಿ ಪ್ರಮಾಣದ ₹500 ಮುಖಬೆಲೆಯ ನೋಟುಗಳಿರುವುದು ತನಿಖೆಯಲ್ಲಿ ದೃಢಪಟ್ಟಿದೆ.
