Home ಇನ್ನಷ್ಟು ಕೋರ್ಟು - ಕಾನೂನು ಸೋನಮ್ ವಾಂಗ್ಚುಕ್ ಅವರನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಕೋರಿ ಅರ್ಜಿ: ವೈದ್ಯಕೀಯ ವರದಿ ಸಲ್ಲಿಸಲು ದೆಹಲಿ...

ಸೋನಮ್ ವಾಂಗ್ಚುಕ್ ಅವರನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಕೋರಿ ಅರ್ಜಿ: ವೈದ್ಯಕೀಯ ವರದಿ ಸಲ್ಲಿಸಲು ದೆಹಲಿ ಹೈಕೋರ್ಟ್ ನಿರ್ದೇಶನ

0

ಹೋರಾಟಗಾರ ಸೋನಮ್ ವಾಂಗ್ಚುಕ್ ಅವರನ್ನು ಕುಟುಂಬಸ್ಥರು ಕೋರಿರುವ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸುವ ಕುರಿತು ತೀರ್ಪು ನೀಡುವ ಮುನ್ನ, ಅವರ ಎಲ್ಲಾ ವೈದ್ಯಕೀಯ ಮತ್ತು ರೋಗನಿರ್ಣಯ (ಪಾಥಾಲಜಿಕಲ್) ವರದಿಗಳನ್ನು ಸಲ್ಲಿಸುವಂತೆ ದೆಹಲಿ ಹೈಕೋರ್ಟ್ ಸೋಮವಾರ ಸಫ್ದರ್‌ಜಂಗ್ ಆಸ್ಪತ್ರೆಗೆ ನಿರ್ದೇಶನ ನೀಡಿದೆ.

ಮಂಗಳವಾರ ಮಧ್ಯಾಹ್ನ 12.30ಕ್ಕೆ ನಿಗದಿಯಾಗಿರುವ ಮುಂದಿನ ವಿಚಾರಣೆಯ ವೇಳೆ ನ್ಯಾಯಾಲಯಕ್ಕೆ ನೆರವಾಗುವಂತೆ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಮತ್ತು ಸಫ್ದರ್‌ಜಂಗ್ ಆಸ್ಪತ್ರೆಯ ವೈದ್ಯರಿಗೆ ಮುಖ್ಯ ನ್ಯಾಯಮೂರ್ತಿ ಡಿ. ಕೆ. ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ತೇಜಸ್ ಕರಿಯಾ ಅವರಿದ್ದ ಪೀಠ ಸೂಚನೆ ನೀಡಿದೆ.

ವಾಂಗ್ಚುಕ್ ಅವರನ್ನು ಸಫ್ದರ್‌ಜಂಗ್ ಆಸ್ಪತ್ರೆಯಿಂದ ಮೇದಾಂತ ಆಸ್ಪತ್ರೆಗೆ ಸ್ಥಳಾಂತರಿಸಲು ಅನುಮತಿ ನೀಡದ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಅವರ ಪತ್ನಿ ಗೀತಾಂಜಲಿ ಆಂಗ್ಮೊ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿತ್ತು.

ವಾಂಗ್ಚುಕ್ ಅವರ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಹೆಲ್ತ್ ಬುಲೆಟಿನ್‌ಗಳು ಮತ್ತು ವರದಿಗಳನ್ನು ಪ್ರಮಾಣಪತ್ರದ (ಅಫಿಡವಿಟ್) ಮೂಲಕ ದಾಖಲಿಸುವಂತೆ ಸಫ್ದರ್‌ಜಂಗ್ ಆಸ್ಪತ್ರೆಗೆ ಪೀಠ ನಿರ್ದೇಶಿಸಿದೆ. ಅಲ್ಲದೆ, ಸಫ್ದರ್‌ಜಂಗ್ ಆಸ್ಪತ್ರೆ, ಏಮ್ಸ್ ಮತ್ತು ಖಾಸಗಿ ಪ್ರಯೋಗಾಲಯವು ಪರೀಕ್ಷಿಸಿದ ರಕ್ತದ ಮಾದರಿಗಳ ಆಧಾರದ ಮೇಲಿನ ವರದಿಗಳನ್ನು ನ್ಯಾಯಾಲಯ ಕೋರಿದೆ.

ಏಮ್ಸ್‌ನ ಹಂಗಾಮಿ ನಿರ್ದೇಶಕರು ಹಾಗೂ ಸಂಸ್ಥೆಯ ತುರ್ತು ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಅಕ್ಷಯ್ ಮುಂದಿನ ವಿಚಾರಣೆಗೆ ಹಾಜರಾಗುವಂತೆ ವಿನಂತಿಸಲಾಗಿದೆ. ವಾಂಗ್ಚುಕ್ ಕುಟುಂಬದವರು ಸಂಪರ್ಕಿಸಿದ ವೈದ್ಯರಿಗೂ ಉಪಸ್ಥಿತರಿರಲು ಸೂಚಿಸಲಾಗಿದೆ.

ನೀಟ್ (NEET) ಪರೀಕ್ಷೆಯ ಅಕ್ರಮಗಳನ್ನು ವಿರೋಧಿಸಿ ವಿದ್ಯಾರ್ಥಿಗಳು ಮತ್ತು ಕಾಕ್ರೋಚ್ ಜನತಾ ಪಾರ್ಟಿ ನಡೆಸುತ್ತಿರುವ ಆಂದೋಲನಕ್ಕೆ ಬೆಂಬಲವಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ವಾಂಗ್ಚುಕ್ ಅವರನ್ನು ದೆಹಲಿ ಪೊಲೀಸರು ಜುಲೈ 18 ರಂದು ಜಂತರ್ ಮಂತರ್‌ನಿಂದ ಸಫ್ದರ್‌ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದರು.

ಕೇಂದ್ರ ಸರ್ಕಾರವು ವಾಂಗ್ಚುಕ್ ಅವರನ್ನು ಪ್ರತಿದಿನ ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕು ಮತ್ತು ಅಗತ್ಯವಿದ್ದಾಗ ಚಿಕಿತ್ಸೆ ನೀಡಬೇಕು ಎಂದು ಜುಲೈ 16 ರಂದು ಹೈಕೋರ್ಟ್ ನೀಡಿದ್ದ ನಿರ್ದೇಶನದ ಬೆನ್ನಲ್ಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆಂಗ್ಮೊ ಪರ ವಾದ ಮಂಡಿಸಿದ ಹಿರಿಯ ವಕೀಲ ಅಖಿಲ್ ಸಿಬಲ್, ಯಾವುದೇ ಮುನ್ಸೂಚನೆ ನೀಡದೆ ಮತ್ತು ತುರ್ತು ವೈದ್ಯಕೀಯ ಪರಿಸ್ಥಿತಿಯನ್ನು ನಿರೂಪಿಸುವ ಯಾವುದೇ ವರದಿಯನ್ನು ಕುಟುಂಬಕ್ಕೆ ತೋರಿಸದೆ ವಾಂಗ್ಚುಕ್ ಅವರನ್ನು ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸಲಾಗಿದೆ ಎಂದು ವಾದಿಸಿದರು.

ವಾಂಗ್ಚುಕ್ ಅವರ ಪೊಟ್ಯಾಸಿಯಮ್ ಮಟ್ಟ ಕುಸಿದಿದೆ ಎಂದು ಕುಟುಂಬಕ್ಕೆ ಕೇವಲ ಮೌಖಿಕವಾಗಿ ತಿಳಿಸಲಾಗಿದೆಯೇ ಹೊರತು ಪರೀಕ್ಷಾ ವರದಿಗಳ ಪ್ರತಿಗಳನ್ನು ನೀಡಲಾಗಿಲ್ಲ ಎಂದು ಅವರು ಹೇಳಿದರು.

ವಾಂಗ್ಚುಕ್ ಅವರು ಪ್ರಜ್ಞಾವಸ್ಥೆಯಲ್ಲಿದ್ದಾರೆ, ಎಚ್ಚರವಾಗಿದ್ದಾರೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಸಿಬಲ್ ನ್ಯಾಯಾಲಯಕ್ಕೆ ತಿಳಿಸಿದರು. ತದನಂತರದ ವರದಿಗಳು ಅವರ ಪೊಟ್ಯಾಸಿಯಮ್ ಮಟ್ಟವು ಸಾಧಾರಣ ಪ್ರಮಾಣದಲ್ಲಿದೆ ಎಂದು ತೋರಿಸಿವೆ ಎಂದರು.

ವಾಂಗ್ಚುಕ್ ಅವರು ಪ್ರತಿಭಟನೆಯ ಅಂತಿಮ ಹಂತದಲ್ಲಿ ಭಾಗವಹಿಸಲು ತಾತ್ಕಾಲಿಕವಾಗಿ ತೆರಳಲು ಅನುಮತಿ ಕೋರಿ ಸಫ್ದರ್‌ಜಂಗ್ ಆಸ್ಪತ್ರೆಗೆ ಪತ್ರ ಬರೆದಿದ್ದರು, ಆದರೆ ಅವರ ವಿನಂತಿಯನ್ನು ಸ್ವೀಕರಿಸಲಾಗಿಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಬಂಧನಕ್ಕೊಳಗಾಗದ ಅಥವಾ ವಶಕ್ಕೆ ಪಡೆಯಲ್ಪಡದ, ಪ್ರಜ್ಞಾವಸ್ಥೆಯಲ್ಲಿರುವ ವ್ಯಕ್ತಿಯನ್ನು ನಿರ್ದಿಷ್ಟ ಆಸ್ಪತ್ರೆಯಲ್ಲೇ ಉಳಿಯಲು ಅಥವಾ ಮಾಹಿತಿಯುಕ್ತ ಸಮ್ಮತಿಯಿಲ್ಲದೆ ಚಿಕಿತ್ಸೆಗೆ ಒಳಪಡಿಸಲು ಒತ್ತಾಯಿಸಬಹುದೇ ಎಂದು ವಕೀಲರು ಪ್ರಶ್ನಿಸಿದರು.

ಸುಪ್ರೀಂ ಕೋರ್ಟ್‌ನ ‘ಕಾಮನ್ ಕಾಸ್’ ಪ್ರಕರಣದ ತೀರ್ಪನ್ನು ಉಲ್ಲೇಖಿಸಿದ ಸಿಬಲ್, ದೈಹಿಕ ಸ್ವಾಯತ್ತತೆ ಮತ್ತು ರೋಗಿಯ ಮಾಹಿತಿಯುಕ್ತ ವೈದ್ಯಕೀಯ ಆಯ್ಕೆಗಳ ಹಕ್ಕನ್ನು ಸಾಧಾರಣವಾಗಿ ನಿರ್ಲಕ್ಷಿಸುವಂತಿಲ್ಲ ಎಂದು ವಾದಿಸಿದರು.

ಆದಾಗ್ಯೂ, ಚಿಕಿತ್ಸೆಯನ್ನು ಪ್ರಾರಂಭಿಸುವ ಮೊದಲು ರೋಗಿಗೆ ತೀವ್ರ ನಿಗಾ ಅಗತ್ಯವಿರುವವರೆಗೆ ವೈದ್ಯರು ಕಾಯಬೇಕೇ ಎಂದು ಪೀಠ ಪ್ರಶ್ನಿಸಿತು.

ಕುಟುಂಬವು ವೈದ್ಯಕೀಯ ಆರೈಕೆಗೆ ವಿರುದ್ಧವಾಗಿಲ್ಲ, ಆದರೆ ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಕೊರತೆಯ ಬಗ್ಗೆ ಕಳವಳ ಹೊಂದಿದೆ ಎಂದು ಸಿಬಲ್ ಸ್ಪಷ್ಟಪಡಿಸಿದರು. ಅವರು ಈ ಪರಿಸ್ಥಿತಿಯನ್ನು “ನಂಬಿಕೆಯ ಅಭಾವ” ಎಂದು ಬಣ್ಣಿಸಿದರು.

ವಾಂಗ್ಚುಕ್ ಅವರ ವೈದ್ಯಕೀಯ ವರದಿಗಳನ್ನು ಅವರ ಕುಟುಂಬದೊಂದಿಗೆ ಹಂಚಿಕೊಳ್ಳಬೇಕಿತ್ತು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಆದಾಗ್ಯೂ, ಅವರ ಜೀವಕ್ಕೆ ಕಂಟಕ ಬರುವಂತಾದಾಗ ಮಾತ್ರ ವೈದ್ಯರು ಮಧ್ಯಪ್ರವೇಶಿಸಬೇಕು ಎಂಬ ಸಲಹೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿತು.

ಕೇಂದ್ರವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸಾಮಾನ್ಯವಾಗಿ ವ್ಯಕ್ತಿಗೆ ಚಿಕಿತ್ಸೆಯನ್ನು ಸ್ವೀಕರಿಸುವ ಅಥವಾ ನಿರಾಕರಿಸುವ ಹಕ್ಕಿರುತ್ತದೆ ಎಂದು ಹೇಳಿದರು. ವಾಂಗ್ಚುಕ್ ಅವರ ಆರೋಗ್ಯದಲ್ಲಿ ತೀವ್ರ ಕುಸಿತ ಉಂಟಾದರೆ ಅದು ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಸೃಷ್ಟಿಸಬಹುದಾದ್ದರಿಂದ, ಅವರ ಜೀವವನ್ನು ರಕ್ಷಿಸುವ ಜವಾಬ್ದಾರಿಯೂ ಸರ್ಕಾರದ ಮೇಲಿದೆ ಎಂದು ಅವರು ಹೇಳಿದರು.

ವಾಂಗ್ಚುಕ್ ಅವರ ರಕ್ತದ ಮಾದರಿಗಳನ್ನು ಸಫ್ದರ್‌ಜಂಗ್ ಆಸ್ಪತ್ರೆ, ಏಮ್ಸ್ ಮತ್ತು ಖಾಸಗಿ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗಿದ್ದು, ಫಲಿತಾಂಶಗಳು ಬಹುಮಟ್ಟಿಗೆ ಒಂದೇ ರೀತಿಯಾಗಿವೆ ಎಂದು ಮೆಹ್ತಾ ಹೇಳಿದರು.

ಸಫ್ದರ್‌ಜಂಗ್ ಆಸ್ಪತ್ರೆಯ ಒಂದು ವರದಿಯು ವಾಂಗ್ಚುಕ್ ಅವರ ಪೊಟ್ಯಾಸಿಯಮ್ ಮಟ್ಟವನ್ನು 2.8 ಎಂದು ತೋರಿಸಿದ್ದರೆ, ಮೇಲ್ಮನವಿದಾರರು ಸಲ್ಲಿಸಿದ ವರದಿಯು ಅದನ್ನು 3.5 ಎಂದು ದಾಖಲಿಸಿದೆ ಎಂಬುದನ್ನು ಪೀಠ ಗಮನಿಸಿತು.

ಮುಖ್ಯ ನ್ಯಾಯಮೂರ್ತಿ ಉಪಾಧ್ಯಾಯ ಅವರು, ರೋಗನಿರ್ಣಯದ ವರದಿಗಳನ್ನು ಪ್ರತ್ಯೇಕವಾಗಿ ನೋಡಲಾಗುವುದಿಲ್ಲ ಮತ್ತು ರೋಗಿಯ ಕ್ಲಿನಿಕಲ್ ಸ್ಥಿತಿಯೊಂದಿಗೆ ಮೌಲ್ಯಮಾಪನ ಮಾಡಬೇಕಾಗುತ್ತದೆ ಎಂದು ಹೇಳಿದರು.

“ನ್ಯಾಯಾಲಯದ ಕಾಳಜಿ ಮೊದಲಿಗೆ ಅವರ ಜೀವವನ್ನು ಉಳಿಸುವುದಾಗಿದೆ. ಬೇರೇನೂ ಅಲ್ಲ,” ಎಂದು ಪೀಠ ಹೇಳಿದೆ.

ವಾಂಗ್ಚುಕ್ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ದಾಖಲಾಗಿರುವಾಗ ಮೇದಾಂತ ಆಸ್ಪತ್ರೆಯ ವೈದ್ಯರಿಗೆ ಸಲಹೆ ನೀಡಲು ಅಥವಾ ಮಧ್ಯಪ್ರವೇಶಿಸಲು ಅನುಮತಿಸಬೇಕು ಎಂಬ ಕುಟುಂಬದ ಸಲಹೆಗೆ ನ್ಯಾಯಾಲಯ ಅಸಮ್ಮತಿ ವ್ಯಕ್ತಪಡಿಸಿದ್ದು, ಆಸ್ಪತ್ರೆಗಳು ಸಾಮಾನ್ಯವಾಗಿ ಹೊರಗಿನ ತಜ್ಞರಿಂದ ವೈದ್ಯಕೀಯ ಚಿಕಿತ್ಸೆಗೆ ಅನುಮತಿಸುವುದಿಲ್ಲ ಎಂದು ಹೇಳಿದೆ.

ಮುಂದಿನ ವಿಚಾರಣೆಗೆ ಮುನ್ನ ಖಾಸಗಿ ಪ್ರಯೋಗಾಲಯಗಳು ನಡೆಸಿದ ಪರೀಕ್ಷೆಗಳ ವರದಿಗಳನ್ನು ಸಲ್ಲಿಸುವಂತೆ ಆಂಗ್ಮೊ ಅವರಿಗೆ ನಿರ್ದೇಶಿಸಲಾಗಿದೆ.

You cannot copy content of this page

Exit mobile version