ನವದೆಹಲಿ: ನ್ಯಾಷನಲ್ ಹೆರಾಲ್ಡ್‌ಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ್ದ ಪ್ರಾಸಿಕ್ಯೂಷನ್ ದೂರನ್ನು ಪರಿಗಣಿಸಲು ನಿರಾಕರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಇಡಿ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಸೋಮವಾರ ಕಾಂಗ್ರೆಸ್ ನಾಯಕರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಇತರ ಆರೋಪಿಗಳಿಂದ ಪ್ರತಿಕ್ರಿಯೆ ಕೋರಿದೆ.
ನ್ಯಾಯಮೂರ್ತಿ ರವೀಂದ್ರ ದುಡೇಜಾ ಅವರ ನೇತೃತ್ವದ ಪೀಠವು, ಡಿಸೆಂಬರ್ 16ರಂದು ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ತಡೆ ನೀಡುವಂತೆ ಇಡಿ ಸಲ್ಲಿಸಿದ್ದ ಅರ್ಜಿಯ ಮೇರೆಗೆ ನೋಟಿಸ್ ಜಾರಿ ಮಾಡಿದ್ದು, ಪ್ರತಿವಾದಿಗಳು ತಮ್ಮ ಉತ್ತರಗಳನ್ನು ಸಲ್ಲಿಸುವಂತೆ ಸೂಚಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್ 12ಕ್ಕೆ ಪಟ್ಟಿ ಮಾಡಲಾಗಿದೆ.
ಪಿಎಂಎಲ್‌ಎ (ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ) ಅಡಿಯಲ್ಲಿ ಪ್ರಕರಣ ದಾಖಲಿಸಲು ಪೂರ್ವನಿರ್ಧರಿತ ಅಪರಾಧದಲ್ಲಿ ಎಫ್‌ಐಆರ್ ಅಗತ್ಯವಿದೆ ಎಂಬ ಮೂಲಭೂತ ಪ್ರಶ್ನೆಯನ್ನು ಮುಂದಿಟ್ಟುಕೊಂಡು, ವಿಚಾರಣಾ ನ್ಯಾಯಾಲಯ ಇಡಿ ತನಿಖೆಯನ್ನು ಮುಂದುವರಿಸಲು ನಿರಾಕರಿಸಿತ್ತು. ನಿಗದಿತ ಅಪರಾಧದ ಅರಿವನ್ನು ಮ್ಯಾಜಿಸ್ಟ್ರೇಟ್ ಸ್ವೀಕರಿಸದೇ ಇರುವಾಗ ಪಿಎಂಎಲ್‌ಎ ಅಡಿಯಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂಬ ಅನುಮಾನಗಳನ್ನು ಇಡಿಯ ಆಂತರಿಕ ದಾಖಲೆಗಳೇ ವ್ಯಕ್ತಪಡಿಸುತ್ತವೆ ಎಂದು ನ್ಯಾಯಾಲಯ ಗಮನಿಸಿತ್ತು.
ಇದಲ್ಲದೆ, 2014ರಲ್ಲಿ ಸಿಬಿಐಗೆ ಮಾಹಿತಿ ಹಂಚಿಕೊಂಡ ಬಳಿಕ ಸುಮಾರು ಏಳು ವರ್ಷಗಳ ನಂತರ, 2021ರಲ್ಲಿ ಇಡಿ ಇಸಿಐಆರ್ (ECIR) ದಾಖಲಿಸಿರುವ ಕ್ರಮವನ್ನು ನ್ಯಾಯಾಲಯ ಟೀಕಿಸಿತ್ತು. ಪಿಎಂಎಲ್‌ಎ ಕಾಯ್ದೆಯಡಿ ಮೊದಲು ನಿಗದಿತ ಅಪರಾಧದ ತನಿಖೆ ನಡೆಯಬೇಕು, ನಂತರ ಹಣ ಅಕ್ರಮ ವರ್ಗಾವಣೆ ತನಿಖೆ ನಡೆಯಬೇಕು ಎಂಬ ಶಾಸನಬದ್ಧ ಕ್ರಮವನ್ನು ಇಡಿ ಉಲ್ಲಂಘಿಸಿದೆ ಎಂದು ವಿಚಾರಣಾ ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.
ಆದರೆ, ಮೇಲ್ಮನವಿಯಲ್ಲಿ ಇಡಿ, ಖಾಸಗಿ ದೂರಿನ ಆಧಾರದಲ್ಲೇ ಸಕ್ಷಮ ನ್ಯಾಯಾಲಯವು ನಿಗದಿತ ಅಪರಾಧದ ಅರಿವನ್ನು ಈಗಾಗಲೇ ತೆಗೆದುಕೊಂಡಿದ್ದು, ಇದು ಪಿಎಂಎಲ್‌ಎ ಅಡಿಯಲ್ಲಿ ಅಗತ್ಯವಿರುವ ಮೂಲಭೂತ ಷರತ್ತುಗಳನ್ನು ಪೂರೈಸುತ್ತದೆ ಎಂದು ವಾದಿಸಿದೆ. ಪಿಎಂಎಲ್‌ಎ ಕಾಯ್ದೆಯು ನಿಗದಿತ ಅಪರಾಧದ ಅಸ್ತಿತ್ವವನ್ನೇ ಕೇಳುತ್ತದೆಯೇ ಹೊರತು ಅದು ಕಡ್ಡಾಯವಾಗಿ ಪೊಲೀಸ್ ಎಫ್‌ಐಆರ್ ಮೂಲಕಲೇ ಆರಂಭವಾಗಬೇಕೆಂಬ ನಿಯಮ ಇಲ್ಲ ಎಂದು ಇಡಿ ಸ್ಪಷ್ಟಪಡಿಸಿದೆ.
ವಿಚಾರಣಾ ನ್ಯಾಯಾಲಯದ ವ್ಯಾಖ್ಯಾನವು ಖಾಸಗಿ ದೂರಿನಿಂದ ಆರಂಭವಾಗುವ ಪ್ರಕರಣಗಳಲ್ಲಿ ಹಣ ಅಕ್ರಮ ವರ್ಗಾವಣೆ ಆರೋಪಿಗಳಿಗೆ ತಪ್ಪಿಸಿಕೊಳ್ಳಲು ಅವಕಾಶ ನೀಡುತ್ತದೆ ಎಂದು ಇಡಿ ಆಕ್ಷೇಪಿಸಿದೆ. ಡಿಸೆಂಬರ್ 16ರ ಆದೇಶಕ್ಕೆ ತಡೆ ನೀಡಬೇಕು ಮತ್ತು ಪ್ರಾಸಿಕ್ಯೂಷನ್ ದೂರನ್ನು ಪರಿಗಣಿಸಲು ನಿರಾಕರಿಸಿದ ಕ್ರಮ ಕಾನೂನುಬದ್ಧವಲ್ಲ ಎಂದು ಇಡಿ ಹೈಕೋರ್ಟ್‌ಗೆ ಮನವಿ ಮಾಡಿದೆ.
ಇಡಿ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಗೂ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ವಾದ ಮಂಡಿಸಿದರೆ, ಗಾಂಧಿ ಕುಟುಂಬದ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದಿಸಿದರು.
