Sunday, June 23, 2024

ಸತ್ಯ | ನ್ಯಾಯ |ಧರ್ಮ

ದಿಲ್ಲಿ ಎಂಸಿಡಿ ಫಲಿತಾಂಶ: ಬಾಗಿಲು ಮುಚ್ಚಿದ ಕಾಂಗ್ರೆಸ್ ಕಚೇರಿ

ಹೊಸದಿಲ್ಲಿ: ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶಗಳು ಹೊರಬೀಳುತ್ತಿರುವಂತೆಯೇ ಹೀನಾಯ ಸೋಲಿನ ಭೀತಿಯಲ್ಲಿರುವ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ದಿಲ್ಲಿ ಕಚೇರಿಯಲ್ಲಿ ನೀರವ ಮೌನ ಆವರಿಸಿದೆ. ಕಚೇರಿಯ ಗೇಟುಗಳು, ಬಾಗಿಲುಗಳನ್ನು ಮುಚ್ಚಲಾಗಿದೆ.

ಕಾಂಗ್ರೆಸ್ ಕಚೇರಿಯಲ್ಲಿ ಯಾವುದೇ ರೀತಿಯ ಚಟುವಟಿಕೆಗಳು ಇಲ್ಲದೆ ಬಿಕೋ ಎನ್ನುತ್ತಿದ್ದು, ಪಕ್ಷದ ನಾಯಕರುಗಳು ಕಚೇರಿಯ ಬಳಿಯೇ ಸುಳಿಯದೇ ಇರುವುದು ಕಂಡುಬಂದಿದೆ.

250 ಸ್ಥಾನಗಳಿಗೆ ಡಿಸೆಂಬರ್ 4ರಂದು ನಡೆದ ಚುನಾವಣೆಯಲ್ಲಿ ಬಹುಮತ ಗಳಿಸಲು 126 ಸ್ಥಾನಗಳ ಅಗತ್ಯವಿದ್ದು, ಎಎಪಿ ಮತ್ತು ಬಿಜೆಪಿ ನಡುವೆ ತೀವ್ರ ಹಣಾಹಣಿ ನಡೆದಿದೆ.

ಶೇ.50.48ರಷ್ಟು ಸಾಧಾರಣ ಪ್ರಮಾಣದ ಮತದಾನವಾದ ಈ ಚುನಾವಣೆಯಲ್ಲಿ 1349 ಅಭ್ಯರ್ಥಿಗಳ ಭವಿಷ್ಯ ಇಂದು ತೀರ್ಮಾನ ಆಗಲಿದೆ.

ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಗಳಲ್ಲಿ ಆಮ್ ಆದ್ಮಿ ಪಾರ್ಟಿ ಭಾರೀ ಬಹುಮತ ಗಳಿಸಲಿದೆ ಎಂದು ಬಿಂಬಿಸಲಾಗಿತ್ತು. ಆದರೆ ಬೆಳಿಗ್ಗೆಯಿಂದ ನಡೆಯುತ್ತಿರುವ ಮತ ಎಣಿಕೆಗಳಲ್ಲಿ ಎಎಪಿ ಮತ್ತು ಬಿಜೆಪಿ ನಡುವೆ ತೀವ್ರ ಹಣಾಹಣಿ ಕಂಡುಬಂದಿದೆ.

ಸದ್ಯ 123 ಸ್ಥಾನಗಳಲ್ಲಿ ಎಎಪಿ ಮುನ್ನಡೆ ಕಾಯ್ದಿರಿಸಿಕೊಂಡಿದ್ದರೆ, ಬಿಜೆಪಿ 115 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ, ಕಾಂಗ್ರೆಸ್ ಕೇವಲ 7 ಮತ್ತು ಪಕ್ಷೇತರರು 5 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು