Tuesday, June 25, 2024

ಸತ್ಯ | ನ್ಯಾಯ |ಧರ್ಮ

ಉಪವಾಸ ಸತ್ಯಾಗ್ರಹ : ದೆಹಲಿ ಸಚಿವೆ ಅತಿಶಿ ಆಸ್ಪತ್ರೆಗೆ ದಾಖಲು

ಪ್ರತಿ ದಿನ 100 ಮಿಲಿಯನ್ ಗ್ಯಾಲನ್ ನೀರು (ಎಂಜಿಡಿ) ಬಿಡುಗಡೆ ಮಾಡದ ಹರಿಯಾಣ ಸರ್ಕಾರದ ವಿರುದ್ಧ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ದೆಹಲಿ ಸಚಿವೆ ಅತಿಶಿ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳವಾರ ಮುಂಜಾನೆ ಅತಿಶಿ ಅವರನ್ನು ರಾಷ್ಟ್ರ ರಾಜಧಾನಿಯ ಲೋಕನಾಯಕ ಜೈ ಪ್ರಕಾಶ್ (LNJP) ಆಸ್ಪತ್ರೆಗೆ ದಾಖಲಿಸಲಾಗಿದೆ. ಅತಿಶಿ ಅವರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಂಗಳವಾರ ಐದನೇ ದಿನಕ್ಕೆ ಕಾಲಿಟ್ಟಿದೆ.

ಈ ಹಿಂದೆ ಹರಿಯಾಣ ದೆಹಲಿಯ ಪಾಲಿನ ನೀರನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಅವರು ಹರಿಯಾಣ ಸರ್ಕಾರದ ವಿರುದ್ಧ ದೂರಿದ್ದರು. ಆ ನಂತರ ಜೂನ್ 22 ರಂದು, ಅತಿಶಿ ದೆಹಲಿ ನೀರಿನ ಹಂಚಿಕೆಯ ವಿಚಾರಕ್ಕೆ ಹರಿಯಾಣ ವಿರುದ್ಧ ಪ್ರತಿಭಟಿಸಿ ತನ್ನ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು.

ಆತಿಶಿ ಅವರ ಆರೋಗ್ಯ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ ಆದರೆ ಆಕೆ ತನ್ನ ಪ್ರಾಣವನ್ನು ಪಣಕ್ಕಿಟ್ಟು ದೆಹಲಿಯ ನ್ಯಾಯಯುತ ನೀರಿನ ಪಾಲಿಗಾಗಿ ಹೋರಾಡುತ್ತಿದ್ದಾರೆ ಎಂದು ಹೇಳಿದೆ.ಎಎಪಿ ಪತ್ರಿಕಾ ಪ್ರಕಟಣೆಯ ಪ್ರಕಾರ, ಸಚಿವರ ಆರೋಗ್ಯ ತಪಾಸಣೆಯಲ್ಲಿ ಅವರ ರಕ್ತದೊತ್ತಡ ಮತ್ತು ಸಕ್ಕರೆ ಮಟ್ಟವು ತೀವ್ರವಾಗಿ ಕುಸಿದಿದೆ ಎಂದು ತಿಳಿದುಬಂದಿದೆ.

ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಜಲ ಸಚಿವೆ ಅತಿಶಿ, ಹರಿಯಾಣ ಸರ್ಕಾರವು ದೆಹಲಿಗೆ ಅಗತ್ಯ ಪ್ರಮಾಣದ ನೀರನ್ನು ಒದಗಿಸುವವರೆಗೆ ಮತ್ತು ಹತ್ನಿಕುಂಡ್ ಬ್ಯಾರೇಜ್‌ನ ಗೇಟ್‌ಗಳನ್ನು ತೆರೆಯುವವರೆಗೆ ತನ್ನ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುವುದಾಗಿ ಎಎಪಿ ಹಾಗೂ ಜಲಸಂಪನ್ಮೂಲ ಸಚಿವೆ ಅತಿಶಿ ಹೇಳಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚಿನ ತಾಪಮಾನ ಮತ್ತು ಶಾಖದ ಅಲೆಗಳೊಂದಿಗೆ ನೀರಿನ ಕೊರತೆಯ ಸಮಸ್ಯೆ ಉದ್ಭವಿಸಿದೆ. ದೆಹಲಿಯ ಜನರು ತಮ್ಮ ದೈನಂದಿನ ನೀರಿನ ಅವಶ್ಯಕತೆಗಳನ್ನು ಪಡೆಯಲು ದುಬಾರಿ ನೀರಿನ ಟ್ಯಾಂಕರ್‌ಗಳನ್ನು ಅವಲಂಬಿಸುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು