ಹೊಸದಿಲ್ಲಿ: ಡಿಸೆಂಬರ್ 4 ರಂದು ನಡೆಯಲಿರುವ ದೆಹಲಿ ಮಹಾನಗರ ಪಾಲಿಕೆ ಚುನಾವಣೆಗೆ ಆಮ್ ಆದ್ಮಿ ಪಕ್ಷವು 117 ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಶನಿವಾರ ಪ್ರಕಟಿಸಿದೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ, ಎಎಪಿ ರಾಜಕೀಯ ವ್ಯವಹಾರಗಳ ಸಮಿತಿಯ ಮ್ಯಾರಥಾನ್ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಯಿತು.
ಈ ಹಿನ್ನಲೆಯಲ್ಲಿ, ʼತಮ್ಮ ಪ್ರದೇಶಗಳಲ್ಲಿ ಬಲವಾದ ಉಪಸ್ಥಿತಿಯನ್ನು ಹೊಂದಿರುವ 117 ಮಂದಿ ಪಕ್ಷದ ಹಳೆಯ ಮತ್ತು ಕಠಿಣ ಪರಿಶ್ರಮಿ ಸ್ವಯಂಸೇವಕರು ಟಿಕೆಟ್ ಹಂಚಿಕೆಯಲ್ಲಿ ಆದ್ಯತೆ ಪಡೆದಿದ್ದಾರೆʼ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು 250 ಸದಸ್ಯರ ಸದನಕ್ಕೆ ಶುಕ್ರವಾರ ತನ್ನ ಮೊದಲ ಪಟ್ಟಿಯನ್ನು ಪ್ರಕಟಿಸಿತ್ತು. ಈ ಹಿಂದೆ ʼಜನರ ಆಯ್ಕೆ ಪಕ್ಷದ ಧ್ವನಿಯಾಗಿದೆʼ ಎಂದು ಪಕ್ಷವು ಹೇಳಿಕೆಯಲ್ಲಿ ತಿಳಿಸಿತ್ತು. ಅದರಂತೆ ಎಲ್ಲಾ ಸಮೀಕ್ಷೆಗಳಲ್ಲಿ ಉನ್ನತ ಸ್ಥಾನ ಪಡೆದ ನಂತರ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಹಳೆಯ ಪಕ್ಷದ ಕಾರ್ಯಕರ್ತರು ಆದ್ಯತೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಟಿಕೆಟ್ ನೀಡುವ ಮೊದಲು, ಎಎಪಿ ಎಲ್ಲಾ ಅಭ್ಯರ್ಥಿಗಳನ್ನು ಸಮೀಕ್ಷೆ ಮಾಡಿ ಸಾರ್ವಜನಿಕರ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಈ ಕಾರಣ ಮುಂಬರುವ ನಾಗರಿಕ ಚುನಾವಣೆಯಲ್ಲಿ ಸ್ಪರ್ಧಿಸಲು 20,000 ಕ್ಕೂ ಹೆಚ್ಚು ಪಕ್ಷದ ಕಾರ್ಯಕರ್ತರು ಅರ್ಜಿ ಸಲ್ಲಿಸಿದ್ದರು.
ಸತತ ಎರಡನೇ ದಿನವೂ ಎಎಪಿಯ ರಾಜಕೀಯ ವ್ಯವಹಾರಗಳ ಸಮಿತಿ (ಪಿಎಸಿ) ಶನಿವಾರ ಸಭೆ ಸೇರಿದ್ದು, ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಮತ್ತು ಚುನಾವಣೆಗೆ ಸಂಬಂಧಿಸಿದ ಇತರ ವಿಷಯಗಳ ಬಗ್ಗೆ ಚರ್ಚಿಸಿತು.