ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು ಯತ್ನಿಸಿದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರಮುಖ ಕಾರ್ಯಕರ್ತರಾದ ಸೌರವ್ ದಾಸ್, ಅಶುತೋಷ್ ರಾಂಕಾ ಹಾಗೂ ಅಜಿಂಕ್ಯ ಶಿಂಧೆ ಅವರನ್ನು ದೆಹಲಿ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಿದ್ದಾರೆ (Preventive Arrest). ಮಂಗಳವಾರ ವಶಕ್ಕೆ ಪಡೆಯಲಾಗಿದ್ದ ಈ ಮೂವರನ್ನು ಬುಧವಾರ ಬೆಳಗ್ಗೆ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಹಾಜರುಪಡಿಸಲಾಗುತ್ತಿದ್ದು, ಅಲ್ಲಿಂದ ಅವರನ್ನು ನ್ಯಾಯಾಂಗ ಬಂಧನಕ್ಕೆ (ತಿಹಾರ್ ಜೈಲಿಗೆ) ಕಳುಹಿಸುವ ಸಾಧ್ಯತೆಯಿದೆ ಎಂದು ಸಿಜೆಪಿ ಕಾನೂನು ಮುಖ್ಯಸ್ಥೆ (ಲೀಗಲ್ ಹೆಡ್) ರತ್ನಾ ಸಿಂಗ್ ತಿಳಿಸಿದ್ದಾರೆ.
ಅಧಿಕೃತ ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ಜಂತರ್ ಮಂತರ್ ಅನ್ನು ಕೈಬಿಟ್ಟಿದ್ದರೂ, ಅನುಮತಿಯಿಲ್ಲದೆ ಜಂತರ್ ಮಂತರ್ ಆವರಣಕ್ಕೆ ನುಗ್ಗಿದ, ಬಾಂಡ್ ನಿಯಮಗಳನ್ನು ಉಲ್ಲಂಘಿಸಿದ ಮತ್ತು ಕರ್ತವ್ಯನಿರತ ಸರ್ಕಾರಿ ಅಧಿಕಾರಿಗಳಿಗೆ ಅಡ್ಡಿಪಡಿಸಿದ ಆರೋಪದಡಿ ಇವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ತಮ್ಮ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ರತ್ನಾ ಸಿಂಗ್, ಪೊಲೀಸರ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. “ಮಂಗಳವಾರ ವಶಕ್ಕೆ ಪಡೆದ ನಂತರ ಸುಮಾರು 24 ಗಂಟೆಗಳ ಕಾಲ ನಮ್ಮ ನಾಯಕರಿಗೆ ತಮ್ಮ ವಕೀಲರನ್ನು ಭೇಟಿಯಾಗಲು ಪೊಲೀಸರು ಅವಕಾಶ ನೀಡಲಿಲ್ಲ. ಇಂದು ನಸುಕಿನ ಜಾವ 3 ಗಂಟೆ ಸುಮಾರಿಗೆ ಖಾಸಗಿ ವ್ಯಾನ್ವೊಂದರಲ್ಲಿ ಅವರನ್ನು ಸಂಸತ್ ಮಾರ್ಗ ಪೊಲೀಸ್ ಠಾಣೆಗೆ ಕರೆತರಲಾಯಿತು. ಇಷ್ಟೆಲ್ಲಾ ಕಾನೂನುಬಾಹಿರ ಕೃತ್ಯಗಳು, ಕಿರುಕುಳಗಳ ನಡುವೆಯೂ ನಮ್ಮ ಕಾರ್ಯಕರ್ತರ ನೈತಿಕ ಸ್ಥೈರ್ಯ ಕುಗ್ಗಿಲ್ಲ,” ಎಂದು ಅವರು ಹೇಳಿದ್ದಾರೆ.
ಬಳಿಕ ನೀಡಿದ ಮತ್ತೊಂದು ಅಪ್ಡೇಟ್ನಲ್ಲಿ, ಸಂಸತ್ ಮಾರ್ಗ ಠಾಣೆಯಿಂದ ಮಂದಿರ್ ಮಾರ್ಗ್ ಪೊಲೀಸ್ ಠಾಣೆಯಲ್ಲಿರುವ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (SEM) ಮುಂದೆ ಇವರನ್ನು ಹಾಜರುಪಡಿಸುವ ಸಾಧ್ಯತೆಯಿದ್ದು, ಕಾನೂನುಬದ್ಧ 24 ಗಂಟೆಗಳ ಕಾಲಾವಕಾಶ ಮುಕ್ತಾಯವಾಗುತ್ತಿದೆ ಎಂದು ಅವರು ಎಚ್ಚರಿಸಿದ್ದಾರೆ.
ಸಾಮಾನ್ಯವಾಗಿ ಯಾವುದೇ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರೆ ಸಂಜೆಯ ಹೊತ್ತಿಗೆ ಬಿಡುಗಡೆ ಮಾಡುವ ದೆಹಲಿ ಪೊಲೀಸರು, ಸಿಜೆಪಿ ಮುಖಂಡರನ್ನು ಮಾತ್ರ ರಾತ್ರಿಯಿಡೀ ಕಸ್ಟಡಿಯಲ್ಲಿಟ್ಟುಕೊಂಡು ಪ್ರಿವೆಂಟಿವ್ ಅರೆಸ್ಟ್ ಮಾಡಿರುವುದು ಕೇಂದ್ರ ಸರ್ಕಾರದ ಹಸ್ತಕ್ಷೇಪ ಹಾಗೂ ದ್ವೇಷದ ರಾಜಕಾರಣವನ್ನು ತೋರಿಸುತ್ತದೆ ಎಂದು ಪಕ್ಷದ ಮುಖಂಡ ಅಭಿಜೀತ್ ದೀಪ್ಕೆ ಆರೋಪಿಸಿದ್ದಾರೆ.
