2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಬೃಹತ್ ಸಂಚು ಪ್ರಕರಣದಲ್ಲಿ ಹೋರಾಟಗಾರರಾದ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರು ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿರುವ ಹೊಸ ಜಾಮೀನು ಅರ್ಜಿಗಳನ್ನು ದೆಹಲಿ ಪೊಲೀಸರು ಬಲವಾಗಿ ವಿರೋಧಿಸಿದ್ದಾರೆ.
ಪ್ರತ್ಯೇಕವಾಗಿ ಸಲ್ಲಿಸಲಾದ ಪ್ರಮಾಣಪತ್ರಗಳಲ್ಲಿ ಖಾಲಿದ್ ಮತ್ತು ಇಮಾಮ್ ಅವರನ್ನು ಗಲಭೆಯ ಮುಖ್ಯ “ರೂವಾರಿಗಳು” ಎಂದು ಪೊಲೀಸರು ಕರೆದಿದ್ದು, ಅವರ ಹೊಸ ಜಾಮೀನು ಅರ್ಜಿಗಳು ಕಾನೂನುಬಾಹಿರವಾಗಿದ್ದು, ನ್ಯಾಯಾಲಯವನ್ನು ತಪ್ಪುದಾರಿಗೆಳೆಯುವ ಯತ್ನ ಎಂದು ವಾದಿಸಿದ್ದಾರೆ.
ಗುಲ್ಫಿಶಾ ಫಾತಿಮಾ ಪ್ರಕರಣದಲ್ಲಿ ಜನವರಿ 2026 ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ ಇವರಿಬ್ಬರ ಜಾಮೀನನ್ನು ತಿರಸ್ಕರಿಸಲಾಗಿತ್ತು. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ (UAPA) ಸೆಕ್ಷನ್ 43D(5) ರ ಅನ್ವಯಿಕತೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಹೀಗಾಗಿ ಮತ್ತೆ ಜಾಮೀನು ಪರಿಗಣಿಸಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ರಕ್ಷಣೆ ಪಡೆದ ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡ ನಂತರ ಅಥವಾ ಆದೇಶದ ದಿನಾಂಕದಿಂದ ಒಂದು ವರ್ಷ ಕಳೆದ ನಂತರವಷ್ಟೇ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಲು ಸುಪ್ರೀಂ ಕೋರ್ಟ್ ಈ ಹಿಂದೆ ಅವಕಾಶ ನೀಡಿತ್ತು. ಆ ಷರತ್ತುಗಳು ಇನ್ನೂ ಪೂರ್ಣಗೊಂಡಿಲ್ಲ ಎಂದು ಪೊಲೀಸರು ಪ್ರತಿಪಾದಿಸಿದ್ದಾರೆ. ಈ ಹಿಂದೆ ವಿಚಾರಣಾ ನ್ಯಾಯಾಲಯ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳು ಇವರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದ್ದವು. ಜನವರಿ 2026 ರಲ್ಲಿ ಸುಪ್ರೀಂ ಕೋರ್ಟ್ ಇತರ ಐವರು ಆರೋಪಿಗಳಿಗೆ ಜಾಮೀನು ನೀಡಿದ್ದರೂ, ಖಾಲಿದ್ ಮತ್ತು ಇಮಾಮ್ ಅವರಿಗೆ ಪರಿಹಾರ ನಿರಾಕರಿಸಿತ್ತು.
ಸೈಯದ್ ಇಫ್ತಿಕಾರ್ ಅಂದ್ರಬಿ ಪ್ರಕರಣದಲ್ಲಿನ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿ ಜಾಮೀನಿಗೆ ಮನವಿ ಮಾಡಿರುವ ಆರೋಪಿಗಳ ವಾದವನ್ನು ಪೊಲೀಸರು ತಳ್ಳಿಹಾಕಿದ್ದು, ಆ ಪ್ರಕರಣಕ್ಕೂ ದೆಹಲಿ ಗಲಭೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಹ-ಆರೋಪಿ ತಸ್ಲೀಮ್ ಅಹ್ಮದ್ ಪ್ರಕರಣದಲ್ಲಿನ ಬೆಳವಣಿಗೆಗಳನ್ನೂ ಖಾಲಿದ್ ಮತ್ತು ಇಮಾಮ್ ಪ್ರಕರಣಗಳಿಗೆ ಅನ್ವಯಿಸಲು ಸಾಧ್ಯವಿಲ್ಲ ಎಂದು ಪೊಲೀಸರು ವಾದಿಸಿದ್ದು, ದೆಹಲಿ ಹೈಕೋರ್ಟ್ ಇದೀಗ ಪೊಲೀಸರ ಆಕ್ಷೇಪಣೆಗಳೊಂದಿಗೆ ಜಾಮೀನು ಅರ್ಜಿಗಳ ವಿಚಾರಣೆ ನಡೆಸಲಿದೆ.
