Monday, June 17, 2024

ಸತ್ಯ | ನ್ಯಾಯ |ಧರ್ಮ

ಪತ್ರಕರ್ತರ ಮನೆಗಳ ಮೇಲೆ ದೆಹಲಿ ಪೊಲೀಸ್‌ ದಾಳಿ: ನ್ಯೂಸ್‌ಕ್ಲಿಕ್‌ ಮೇಲೆ UAPA ಅಡಿಯಲ್ಲಿ ಕೇಸ್


ನವದೆಹಲಿ,ಸಪ್ಟೆಂಬರ್.‌3: ದೆಹಲಿ ಪೊಲೀಸರು ಮಂಗವಾರ ಬೆಳಗ್ಗೆ ದೆಹಲಿ, ನೋಯ್ಡಾ ಮತ್ತು ಗಾಜಿಯಾಬಾದ್‌ ಸೇರಿದಂತೆ  ನ್ಯೂಸ್‌ಕ್ಲಿಕ್ ಸುದ್ದಿ ಪೋರ್ಟಲ್‌ಗೆ ಸಂಬಂಧಿಸಿದ 30 ಸ್ಥಳಗಳ ಹಾಗೂ ಪತ್ರಕರ್ತರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಚೀನಾದಿಂದ ಹಣಕಾಸು ನಿಧಿಯನ್ನು ಸ್ವೀಕರಿಸಿದ ಆಪಾದನೆಗಾಗಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (Unlawful Activities (Prevention) Act –  UAPA) ಅಡಿಯಲ್ಲಿ ಆಗಸ್ಟ್ 17 ರಂದು ದಾಖಲಾಗಿದ್ದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ನೂರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳಿಂದ ಈ ದಾಳಿ ನಡೆದಿದೆ.

ನ್ಯೂಸ್‌ಕ್ಲಿಕ್ (NewsClick) ಚೀನಾದಿಂದ ಅಮೇರಿಕಾ ಮೂಲಕ ಹಣವನ್ನು ಸ್ವೀಕರಿಸಿದೆ ಎಂಬ ಆರೋಪದಡಿಯಲ್ಲಿ ಆರ್ಥಿಕ ಅಪರಾಧಗಳ ವಿಭಾಗ (Economic Offences Wing – EOW) ಮತ್ತು ಜಾರಿ ನಿರ್ದೇಶನಾಲಯ (Enforcement Directorate – ED) ಯ ಕಣ್ಗಾವಲಿನಲ್ಲಿತ್ತು. ಈ ಸುದ್ದಿ ಪೋರ್ಟಲ್ ಮೇಲೆ 2021 ರಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ಕೂಡ ನಡೆಸಿತ್ತು.

ದಿ ಪ್ರಿಂಟ್‌ ವರದಿಯಂತೆ ಈ ಹಿಂದೆ ನ್ಯೂಸ್‌ಕ್ಲಿಕ್‌ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಸಂಜಯ್ ರಾಜೌರಾ ಅವರ ಮನೆಯ ಮೇಲೆ ಕೂಡ ದಾಳಿ ನಡೆಸಲಾಗಿದ್ದು, ಅವರ ಫೋನ್ ಮತ್ತು ಲ್ಯಾಪ್‌ಟಾಪ್ ವಶಪಡಿಸಿಕೊಳ್ಳಲಾಗಿದೆ.

ಪತ್ರಕರ್ತರಾದ ಅಭಿಸಾರ್‌ ಶರ್ಮ, ರಾಜೌರಾ, ಭಾಷಾ ಸಿಂಗ್, ಊರ್ಮಿಲೇಶ್, ಔನಿಂದ್ಯೋ ಚಕ್ರಬೊರ್ತಿ, ನ್ಯೂಸ್‌ಕ್ಲಿಕ್ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಮತ್ತು ಮೌಖಿಕ ಇತಿಹಾಸಕಾರರಾದ ಸೊಹೈಲ್ ಹಶ್ಮಿ ಸೇರಿದಂತೆ ಹಲವರ ಮನೆಗಳ ಮೇಲೆ ದಾಳಿ ಇಟ್ಟು ಲ್ಯಾಪ್‌ಟಾಪ್, ಮೊಬೈಲ್ ಫೋನ್ ಮತ್ತು ಹಳೆಯ ಡಿವಿಡಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಾನವ ಹಕ್ಕುಗಳ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರ ಮುಂಬೈನ ಮನೆಯ ಮೇಲೂ ದಾಳಿ ನಡೆಸಲಾಗಿದ್ದು, ನ್ಯೂಸ್‌ಕ್ಲಿಕ್‌ನಿಂದ ತೀಸ್ತಾ ಕುಟುಂಬಕ್ಕೆ ಸುಮಾರು 40 ಲಕ್ಷ ರೂಪಾಯಿ ಮತ್ತು ಪತ್ರಕರ್ತ- ಲೇಖಕ ಪರಂಜಯ್ ಗುಹಾ ಠಾಕುರ್ತಾ ಅವರಿಗೆ ಸುಮಾರು 72 ಲಕ್ಷ ರೂಪಾಯಿ ಹಣ ವರ್ಗಾವಣೆಯಾಗಿರುವ ಬಗ್ಗೆ ED ತನಿಖೆ ನಡೆಸುತ್ತಿದೆ ಎಂದು ದಿ ಪ್ರಿಂಟ್‌ ವರದಿ ಮಾಡಿದೆ.

2021 ರ ಫೆಬ್ರವರಿಯಲ್ಲಿ  ಸಂಪಾದಕ ಪುರಕಾಯಸ್ಥ ಅವರ ಕಚೇರಿಗಳ ಮೇಲೆ ಇಡಿ ದಾಳಿ ನಡೆದಿತ್ತು. ಇದೇ ಸಂದರ್ಭದಲ್ಲಿ ಲೇಖಕಿ ಗೀತಾ ಹರಿಹರನ್ ಅವರನ್ನೂ ವಿಚಾರಣೆಗಾಗಿ ಬಂಧಿಸಲಾಗಿತ್ತು.

ಏನೀ ಆರೋಪ?

ನ್ಯೂಸ್‌ಕ್ಲಿಕ್‌ ಮೇಲೆ ಮನಿ ಲಾಂಡರಿಂಗ್‌ ಆರೋಪವಿದ್ದು ಅಮೇರಿಕಾ ಮೂಲಕವಾಗಿ ಚೈನಾದಿಂದ 76.84 ಕೋಟಿ ರುಪಾಯಿ ಪಡೆದಿರುವ ಆಪಾದನೆಯಿದೆ.  ಇದು ಇಡೀ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಶಾಂಘೈ ಮೂಲದ ಅಮೇರಿಕನ್ ಉದ್ಯಮಿ ನೆವಿಲ್ಲೆ ರಾಯ್ ಸಿಂಘಮ್ (Neville Roy Singham) ಅವರಿಂದ ಈ ಫಂಡ್‌ ಬಂದಿದೆ ಎಂಬ ಎಳೆಯನ್ನು ಬಳಸಿ ಇಡೀ ಸುದ್ದಿ ಸಂಸ್ಥೆಯ ಜೊತೆಗೆ ಚೀನಾದ ಸಂಬಂಧವನ್ನು ಕಲ್ಪಿಸಲಾಗಿದೆ. ಪ್ರಧಾನ ಸಂಪಾದಕ ಪ್ರಬೀರ್ ಪುರ್ಕಾಯಸ್ಥರಿಗೆ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (CPC) ಜೊತೆಗೆ ನಂಟಿರುವ ಈ ಉದ್ಯಮಿ ಹಾಗೂ ದೇಣಿಗೆದಾರ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸ್‌ವಾದಿ (ಸಿಪಿಐ-ಎಂ), ಹಾಗೂ ಅನೇಕ ಪತ್ರಕರ್ತರೊಂದಿಗೆ ಇ-ಮೇಲ್‌ ಮಾತುಕತೆ ನಡೆಸಿರುವ ಬಗ್ಗೆ ವರದಿಯಾಗಿದೆ.

ಚೀನಾದಿಂದ ಪಡೆದ ಈ ಹಣವನ್ನು ಸಿಪಿಐ(ಎಂ)ನ ಸೋಷಿಯಲ್‌ ಮೀಡಿಯಾವನ್ನು ನಿರ್ವಹಿಸುವ ನ್ಯೂಸ್‌ಕ್ಲಿಕ್‌ಗೆ ಹಾಗೂ ಭೀಮಾ-ಕೋರೆಗಾಂವ್‌ ಆರೋಪಿ ಎಂದು ಸದ್ಯ ಬಂಧನದಲ್ಲಿರುವ ಗೌತಮ್ ನವಲಾಖಾ ಅವರಿಗೆ ಸಂಬಳವಾಗಿ ನೀಡಲು ಬಳಸಲಾಗಿದೆ ಎಂದು ಆರೋಪ ಮಾಡಲಾಗಿದೆ.

ಅಗಸ್ಟ್‌ ತಿಂಗಳಲ್ಲಿ ನ್ಯೂಯಾರ್ಕ್‌ ಟೈಮ್ಸ್‌ (New York Times)  ನ್ಯೂಸ್‌ಕ್ಲಿಕ್‌ ತನ್ನ ವರದಿಗಳಲ್ಲಿ “ಚೀನಾ ಸರ್ಕಾರದ ಮಾತುಗಳನ್ನು” ಸೇರಿಸುತ್ತಿದೆ ಎಂದು ತನಿಖಾ ವರದಿ ಮಾಡಿತ್ತು.  

Related Articles

ಇತ್ತೀಚಿನ ಸುದ್ದಿಗಳು