ದೆಹಲಿಯಲ್ಲಿ ಸತತ 2ನೇ ದಿನವೂ ವಿಪಕ್ಷಗಳ ರಣಕಹಳೆ: ಜಂತರ್ ಮಂತರ್ ಚಲೋ ತಡೆದ ಪೊಲೀಸರು; ರಸ್ತೆಯಲ್ಲೇ ಮಲಗಿ ಪ್ರಿಯಾಂಕಾ ಗಾಂಧಿ ಧರಣಿ, ರಾಹುಲ್ ಬಂಧನ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಪಟ್ಟುಹಿಡಿದು ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ (INDIA) ಒಕ್ಕೂಟದ ಸಂಸದರು ದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ಬುಧವಾರ ಎರಡನೇ ದಿನವೂ ಮುಂದುವರಿದಿದ್ದು, ರಾಜಧಾನಿಯ ಹೃದಯಭಾಗ ರಣರಂಗವಾಗಿ ಮಾರ್ಪಟ್ಟಿತು.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಜನ್‌ಪಥ್‌ನಲ್ಲಿ ಆಯೋಜಿಸಿದ್ದ ಭೋಜನ ಕೂಟದ ಬಳಿಕ ನೂರಾರು ಸಂಸದರು ಬಸ್‌ಗಳನ್ನೇರಿ ಜಂತರ್ ಮಂತರ್ ಕಡೆಗೆ ಮೆರವಣಿಗೆ ಹೊರಟರು. ಆದರೆ ಅಶೋಕಾ ರಸ್ತೆಯ ಶಾಂಗ್ರಿಲಾ ಹೋಟೆಲ್ ಜಂಕ್ಷನ್ ಬಳಿ ಪೊಲೀಸರು ಬೃಹತ್ ಬ್ಯಾರಿಕೇಡ್‌ಗಳನ್ನು ಹಾಕಿ ಬಸ್‌ಗಳನ್ನು ತಡೆದಾಗ ತೀವ್ರ ಹೈಡ್ರಾಮಾ ಸೃಷ್ಟಿಯಾಯಿತು.

ಮುಂದಕ್ಕೆ ಸಾಗಲು ಸಾಧ್ಯವಾಗದಿದ್ದಾಗ ಬಸ್‌ಗಳಿಂದ ಕೆಳಗಿಳಿದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್, ಟಿಎಂಸಿ, ಸಿಪಿಐ, ಸಿಪಿಎಂ ಹಾಗೂ ಆರ್‌ಜೆಡಿ ಪಕ್ಷಗಳ ಸಂಸದರು ರಸ್ತೆಯಲ್ಲೇ ಕುಳಿತು ಧಿಕ್ಕಾರ ಕೂಗಿದರು (ಸಮಾಜವಾದಿ ಪಕ್ಷದ ಸಂಸದರು ಈ ಪ್ರತಿಭಟನೆಯಿಂದ ದೂರವುಳಿದಿದ್ದರು).

ಈ ವೇಳೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಂವಿಧಾನದ ಪ್ರತಿಯನ್ನು ಕೈಯಲ್ಲಿ ಹಿಡಿದು ನಡುರಸ್ತೆಯಲ್ಲೇ ಮಲಗಿ ವಿನೂತನ ಪ್ರತಿಭಟನೆ ನಡೆಸಿದರು. ಪೊಲೀಸರು ರಾಹುಲ್ ಗಾಂಧಿಯವರನ್ನು ಕೈಕಾಲು ಹಿಡಿದು ಎತ್ತಿಕೊಂಡು ಬಲವಂತವಾಗಿ ಪೊಲೀಸ್ ಬಸ್ಸಿಗೆ ಹತ್ತಿಸಿ ಬಾರಾಖಂಬಾ ಪೊಲೀಸ್ ಠಾಣೆಗೆ ಕರೆದೊಯ್ದರು. ಇದೇ ವೇಳೆ ಕೆ.ಜಿ. ಮಾರ್ಗದಲ್ಲಿ ರಾಹುಲ್ ಇದ್ದ ಪೊಲೀಸ್ ಬಸ್‌ನ ಟೈರ್‌ಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಪಂಕ್ಚರ್ ಮಾಡಿ ಆಕ್ರೋಶ ಹೊರಹಾಕಿದರು.

ನಂತರ ಮಹಿಳಾ ಪೊಲೀಸರ ದೊಡ್ಡ ದಂಡು ಆಗಮಿಸಿ ರಸ್ತೆಯಲ್ಲಿ ಮಲಗಿದ್ದ ಪ್ರಿಯಾಂಕಾ ಗಾಂಧಿ ಹಾಗೂ ಇತರ ಮಹಿಳಾ ನಾಯಕಿಯರನ್ನು ಎಳೆದೊಯ್ದು ಬಸ್‌ಗೆ ತುಂಬಿತು.

ಬಂಧನದ ನಂತರ ಮಾತನಾಡಿದ ರಾಹುಲ್ ಗಾಂಧಿ, “ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ಕೊಡುವವರೆಗೂ ನಮ್ಮ ಈ ಹೋರಾಟ ನಿಲ್ಲುವುದಿಲ್ಲ. ಪ್ರಜಾಪ್ರಭುತ್ವದ ಅತ್ಯಂತ ಪವಿತ್ರವಾದ ಮತದಾನದ ಹಕ್ಕನ್ನು ರಕ್ಷಿಸಲು ನಾವು ಬೀದಿಗಿಳಿದಿದ್ದೇವೆ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಎಷ್ಟೇ ಸರ್ವಾಧಿಕಾರ ತೋರಿದರೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ” ಎಂದು ಗುಡುಗಿದರು.

ಇತ್ತ ತಮ್ಮನ್ನು ವಶಕ್ಕೆ ಪಡೆಯುವಾಗ ಪೊಲೀಸರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಗಂಭೀರ ಆರೋಪ ಮಾಡಿದ್ದು, “ಚುನಾವಣಾ ಆಯೋಗವನ್ನು ಭೇಟಿಯಾಗಲು ಬಯಸುವ ಸಂಸದರನ್ನು ನಡೆಸಿಕೊಳ್ಳುವ ರೀತಿ ಇದೇನಾ? ಪೊಲೀಸರು ನನ್ನನ್ನು ಕೆಳಗೆ ತಳ್ಳಿ ಉಗುರುಗಳಿಂದ ಪರಚಿದ್ದಾರೆ, ಗಾಯಗೊಳಿಸಿದ್ದಾರೆ. ಎಷ್ಟೇ ಬಲಪ್ರಯೋಗ ಮಾಡಿದರೂ ನಾವು ಹೆದರಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ” ಎಂದು ಆಕ್ರೋಶ ಹೊರಹಾಕಿದರು.

Related Articles

ಇತ್ತೀಚಿನ ಸುದ್ದಿಗಳು