Sunday, June 16, 2024

ಸತ್ಯ | ನ್ಯಾಯ |ಧರ್ಮ

ದೆಹಲಿ ಪ್ರತಿಭಟನೆಗೆ ರಾಜಕೀಯ ಉದ್ದೇಶ ಇಲ್ಲ: ಸಿಎಂ ಸಿದ್ದರಾಮಯ್ಯ

ನವದೆಹಲಿ: ಕೇಂದ್ರ ಸರ್ಕಾರ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಮಾಡಿರುವ ಅನ್ಯಾಯದ ವಿರುದ್ಧ ಇಂದು ನವದೆಹಲಿಯ ಜಂತರ್ ಮಂತರ್ ನಲ್ಲಿ ಹಮ್ಮಿಕೊಂಡಿರುವ ಹೋರಾಟ ಇದು. ಕರ್ನಾಟಕದ, ಕನ್ನಡಿಗರ ಹಿತ ಕಾಪಾಡುವ ಚಳವಳಿ ಅಷ್ಟೇ. ಇದರ ಹಿಂದೆ ರಾಜಕೀಯ ಉದ್ದೇಶ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.


ಬುಧವಾರ ನವದೆಹಲಿಯ ಜಂತರ್ ಮಂತರ್‌ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಬರಬೇಕಿದ್ದ ₹1,87,000 ಅನುದಾನವನ್ನು ರಾಜ್ಯಕ್ಕೆ ನೀಡಲಾಗಿಲ್ಲ. ಈ ಅನ್ಯಾಯದ ವಿರುದ್ಧ ಪ್ರತಿಭಟನೆಯನ್ನು ಮಾಡಲಾಗುತ್ತಿದೆ ಎಂದರು.

ಜಂತರ್ ಮಂತರ್ ಐತಿಹಾಸಿಕ ಸ್ಥಳವಾಗಿದ್ದು, ಅನೇಕ ಚಳವಳಿಗೆ ಸಾಕ್ಷಿಯಾದ ಸ್ಥಳ. ಇಂತಹ ಜಾಗದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲ ಸಚಿವರು, ಶಾಸಕರು ಈ ಹೋರಾಟದಲ್ಲಿ ಭಾಗವಹಿಸಿದ್ದಾರೆ. ಇದು ರಾಜಕೀಯ ಚಳವಳಿ ಅಲ್ಲ. ಕೇಂದ್ರ ಸರ್ಕಾರದ ವಿರುದ್ಧದ ಈ ಹೋರಾಟವನ್ನು ಪಕ್ಷಾತೀತವಾಗಿ ಮಾಡಬೇಕೆಂಬ ಮನವಿಯನ್ನು ರಾಜ್ಯ ಬಿಜೆಪಿಯ ನಾಯಕರಿಗೂ ತಿಳಿಸಿದ್ದೇವೆ ಎಂದರು.

100 ರೂ. ಇಸ್ಕೊಂಡು ವಾಪಸ್‌ 13 ರೂ. ಮಾತ್ರ ಬಿಡುಗಡೆ.
14 ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ತೆರಿಗೆ ಪಾಲು 4.71 % ಬಂದಿತ್ತು. 15 ನೇ ಹಣಕಾಸು ಆಯೋಗದಲ್ಲಿ 3.64 % ಕ್ಕೆ ಇಳಿಯಿತು. ಇದರಿಂದ ರಾಜ್ಯಕ್ಕೆ ಬರುವ ತೆರಿಗೆಯಲ್ಲಿ ಶೇ. 40 ರಿಂದ 45 ರವರೆಗೆ ಕಡಿತವಾಗಿದೆ. ಒಟ್ಟಾರೆಯಾಗಿ 14 ನೇ ಹಣಕಾಸು ಆಯೋಗದ ಶಿಫಾರಸ್ಸನ್ನೇ 15 ನೇ ಹಣಕಾಸು ಆಯೋಗದಲ್ಲಿ ಅನುಸರಿಸಿದ್ದರೆ, ರಾಜ್ಯಕ್ಕೆ ₹62,098 ಕೋಟಿ ರಾಜ್ಯಕ್ಕೆ ಬರುತ್ತಿತ್ತು. ರಾಜ್ಯದಿಂದ ಒಟ್ಟು ₹4,30,000 ಕೋಟಿ ತೆರಿಗೆ ಮೊತ್ತವನ್ನು ಕೇಂದ್ರಕ್ಕೆ ನೀಡಲಾಗುತ್ತದೆ. ಅಂದರೆ 100 ರೂಪಾಯಿ ತೆರಿಗೆಯಲ್ಲಿ ರಾಜ್ಯಕ್ಕೆ ಕೇವಲ 12 ರಿಂದ 13 ರೂಪಾಯಿ ದೊರೆಯುತ್ತಿದೆ. ಇದು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ. ಕರ್ನಾಟಕದಿಂದ 25 ಸಂಸದರು ಆಯ್ಕೆಯಾಗಿದ್ದು, ಒಬ್ಬರೂ ಈ ಬಗ್ಗೆ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿಲ್ಲ ಎಂದರು.


ಆದರೆ, ಉತ್ತರಪ್ರದೇಶಕ್ಕೆ ಕೇಂದ್ರ ₹2,80,000 ಕೋಟಿ ನೀಡುತ್ತಿದೆ. ಅಂತೆಯೇ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನಗಳಿಗೂ ನೀಡುತ್ತಿದೆ. ಈ ಯಾವ ರಾಜ್ಯಗಳೂ ಜನಸಂಖ್ಯಾ ನಿಯಂತ್ರಣದ ಬಗ್ಗೆ ಕ್ರಮ ಕೈಗೊಂಡಿಲ್ಲ. ಜನಸಂಖ್ಯೆ, ತಲಾ ಆದಾಯ, ಸಮುದಾಯಗಳ ಅಭಿವೃದ್ಧಿ ಸೇರಿದಂತೆ ಹಲವು ಮಾನದಂಡಗಳಿಂದ ಅನುದಾನ ಹಂಚಿಕೆಯನ್ನು ನಿರ್ಧರಿಸಲಾಗುತ್ತದೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅಥವಾ ಬಸವರಾಜ ಬೊಮ್ಮಾಯಿಯವರು ಈ ಅನ್ಯಾಯವನ್ನು ಸರಿಪಡಿಸುವ ಕೆಲಸ ಮಾಡಿಲ್ಲ. ಅವರದೇ ಪಕ್ಷದ ಸರ್ಕಾರವಿದ್ದುದರಿಂದ ಅವರು ಮಾಡಬಹುದಿತ್ತು. ಈ ಎಲ್ಲ ಕಾರಣಗಳಿಗಾಗಿ ಇಂದು ದೆಹಲಿ ಚಲೋ ನಡೆಸುತ್ತಿದ್ದೇವೆ ಎಂದರು

Related Articles

ಇತ್ತೀಚಿನ ಸುದ್ದಿಗಳು