Home ದೆಹಲಿ ಒಂದು ಗಂಟೆಯ ಭಾರಿ ಮಳೆಗೆ ತತ್ತರಿಸಿದ ದೆಹಲಿ: ವಿಮಾನ ನಿಲ್ದಾಣಕ್ಕೆ ನುಗ್ಗಿದ ನೀರು, ರೆಡ್ ಅಲರ್ಟ್...

ಒಂದು ಗಂಟೆಯ ಭಾರಿ ಮಳೆಗೆ ತತ್ತರಿಸಿದ ದೆಹಲಿ: ವಿಮಾನ ನಿಲ್ದಾಣಕ್ಕೆ ನುಗ್ಗಿದ ನೀರು, ರೆಡ್ ಅಲರ್ಟ್ ಘೋಷಣೆ

0

ದೆಹಲಿ: ಶುಕ್ರವಾರ ಮಧ್ಯಾಹ್ನ ಸುರಿದ ಕೇವಲ ಒಂದು ಗಂಟೆಯ ಧಾರಾಕಾರ ಮಳೆಗೆ ದೇಶದ ರಾಜಧಾನಿ ದೆಹಲಿ ಸಂಪೂರ್ಣವಾಗಿ ಜಲಾವೃತಗೊಂಡು ಅಸ್ತವ್ಯಸ್ತಗೊಂಡಿದೆ. ರಾಷ್ಟ್ರೀಯ ರಾಜಧಾನಿ ವಲಯ (ಎನ್‌ಸಿಆರ್) ಮತ್ತು ಪಶ್ಚಿಮ ದೆಹಲಿಯ ಬಹುತೇಕ ಪ್ರದೇಶಗಳು ನೀರಿನಲ್ಲಿ ಮುಳುಗಡೆಯಾಗಿವೆ.

ಸಾಗರ್‌ಪುರದ ಗಾಂಧಿ ಮಾರುಕಟ್ಟೆ ಸೇರಿದಂತೆ ಹಲವು ಪ್ರಮುಖ ಬಡಾವಣೆಗಳಲ್ಲಿ ಅಪಾರ ಪ್ರಮಾಣದ ನೀರು ನಿಂತಿದ್ದು, ರಸ್ತೆಗಳು ಕೆರೆಗಳಂತಾಗಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ದೆಹಲಿ-ಎನ್‌ಸಿಆರ್ ವ್ಯಾಪ್ತಿಗೆ ‘ರೆಡ್ ವಾರ್ನಿಂಗ್’ ಜಾರಿ ಮಾಡಿದ್ದು, ಶನಿವಾರವೂ ಭಾರಿ ಮಳೆ ಮತ್ತು ಗುಡುಗು ಸಹಿತ ಬಿರುಗಾಳಿ ಬೀಸುವ ಎಚ್ಚರಿಕೆ ನೀಡಿದೆ.

ಮಳೆಯ ಪ್ರವಾಹದಿಂದಾಗಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಒಳಭಾಗಕ್ಕೂ ನೀರು ನುಗ್ಗಿದ್ದು, ವಿಮಾನ ಸೇವೆಗಳಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ. ನಿಲ್ದಾಣದ ಪ್ರವೇಶ ದ್ವಾರಗಳ ಬಳಿ ನೀರು ತುಂಬಿಕೊಂಡಿದ್ದರಿಂದ ಪ್ರಯಾಣಿಕರು ಒಳಗೆ ಹೋಗಲು ಪರದಾಡುವಂತಾಯಿತು. ಹಲವು ಪ್ರಯಾಣಿಕರು ಮೊಣಕಾಲುದ್ದ ನೀರಿನಲ್ಲೇ ಲಗೇಜ್ ಟ್ರಾಲಿಗಳನ್ನು ತಳ್ಳಿಕೊಂಡು ಪ್ರವೇಶ ದ್ವಾರಗಳತ್ತ ಸಾಗುತ್ತಿದ್ದ ದೃಶ್ಯಗಳು ಕಂಡುಬಂದವು.

You cannot copy content of this page

Exit mobile version