Home ದೇಶ ದೆಹಲಿ ಪ್ರತಿಭಟನೆಗಳಿಂದ 2,000 ಕೋಟಿ ರೂ. ನಷ್ಟ: ಪ್ರಧಾನಿ ಮೋದಿಗೆ ವರ್ತಕರ ಪತ್ರ, ಪರಿಹಾರ ಹಾಗೂ...

ದೆಹಲಿ ಪ್ರತಿಭಟನೆಗಳಿಂದ 2,000 ಕೋಟಿ ರೂ. ನಷ್ಟ: ಪ್ರಧಾನಿ ಮೋದಿಗೆ ವರ್ತಕರ ಪತ್ರ, ಪರಿಹಾರ ಹಾಗೂ ಪ್ರತಿಭಟನೆ ನಿಷೇಧಕ್ಕೆ ಆಗ್ರಹ

0

ದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇತ್ತೀಚೆಗೆ ನಡೆದ ಸರಣಿ ಪ್ರತಿಭಟನೆಗಳು, ಬ್ಯಾರಿಕೇಡ್‌ಗಳ ಅಳವಡಿಕೆ ಹಾಗೂ ಸಂಚಾರ ನಿರ್ಬಂಧಗಳಿಂದಾಗಿ ವ್ಯಾಪಾರ ವಹಿವಾಟು ನೆಲಕಚ್ಚಿದ್ದು, ಅಂದಾಜು 2,000 ಕೋಟಿ ರೂಪಾಯಿಗಳ ನಷ್ಟ ಸಂಭವಿಸಿದೆ ಎಂದು ಆರೋಪಿಸಿ ದೆಹಲಿಯ ಪ್ರಮುಖ ವ್ಯಾಪಾರಿ ಸಂಘಟನೆಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿವೆ. ಹಬ್ಬದ ಋತುವಿನಲ್ಲಿ ವಾಣಿಜ್ಯ ಮಾರುಕಟ್ಟೆಗಳಲ್ಲಿ ಪ್ರತಿಭಟನೆಗಳನ್ನು ನಿಷೇಧಿಸಬೇಕು ಮತ್ತು ವ್ಯಾಪಾರಿಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಫೆಡರೇಶನ್ ಲಜಪತ್ ನಗರ ಟ್ರೇಡರ್ಸ್ ಅಸೋಸಿಯೇಷನ್, ಆಟೋಮೋಟಿವ್ ಪಾರ್ಟ್ಸ್ ಮರ್ಚೆಂಟ್ಸ್ ಅಸೋಸಿಯೇಷನ್ (APMA) ಮತ್ತು ಸರೋಜಿನಿ ಮಾರ್ಕೆಟ್ ಶಾಪ್-ಕೀಪರ್ಸ್ ಅಸೋಸಿಯೇಷನ್ (SMSA) ಸೇರಿದಂತೆ ಹಲವು ವಾಣಿಜ್ಯ ಸಂಸ್ಥೆಗಳು ಪ್ರಧಾನಿಯವರ ಮಧ್ಯಪ್ರವೇಶವನ್ನು ಕೋರಿವೆ.

ಅಕ್ಟೋಬರ್ 10ರಂದು ನಡೆದ ಬೃಹತ್ ಪ್ರತಿಭಟನಾ ಕರೆಯಿಂದಾಗಿ ಹಬ್ಬದ ವ್ಯಾಪಾರಕ್ಕೆ ಬಂದ ಗ್ರಾಹಕರಲ್ಲಿ ಭೀತಿ ಮತ್ತು ಅನಿಶ್ಚಿತತೆ ಉಂಟಾಗಿದ್ದು, ಪ್ರತಿಭಟನೆಗೆ ಮುನ್ನ ಹಾಗೂ ನಂತರದ 4-5 ದಿನಗಳ ಕಾಲ ಮಾರುಕಟ್ಟೆಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು ಎಂದು ವರ್ತಕರು ತಿಳಿಸಿದ್ದಾರೆ.

ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳು ವರ್ಷದ ಒಟ್ಟು ವ್ಯಾಪಾರದ ಸಿಂಹಪಾಲನ್ನು ಒಳಗೊಂಡಿದ್ದು, ಇದೇ ಸಮಯದಲ್ಲಿ ಪದೇಪದೇ ಪ್ರತಿಭಟನೆಗಳು ನಡೆದರೆ ಸಣ್ಣ ವ್ಯಾಪಾರಿಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಪ್ರತಿಭಟನೆಯಿಂದ ಉಂಟಾದ ನಷ್ಟವನ್ನು ಪಾರದರ್ಶಕವಾಗಿ ಅಂದಾಜು ಮಾಡಿ, ಅದಕ್ಕೆ ಕಾರಣರಾದವರಿಂದಲೇ ಪರಿಹಾರ ವಸೂಲಿ ಮಾಡಬೇಕೆಂದು ವ್ಯಾಪಾರಿಗಳು ಒತ್ತಾಯಿಸಿದ್ದಾರೆ. ಇತ್ತ ಕನ್ನಾಟ್ ಪ್ಲೇಸ್ ಮತ್ತು ಪಾಲಿಕಾ ಬಜಾರ್‌ನಲ್ಲೂ ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆಗಳ ಹಿನ್ನೆಲೆಯಲ್ಲಿ ವ್ಯಾಪಾರ ಸಂಪೂರ್ಣ ಕುಸಿದಿದೆ.

ಕನ್ನಾಟ್ ಪ್ಲೇಸ್ ವ್ಯಾಪ್ತಿಯಲ್ಲಿ ದಿನಕ್ಕೆ ಸುಮಾರು 200 ಕೋಟಿ ರೂಪಾಯಿಗಳ ವಹಿವಾಟು ಅಪಾಯದಲ್ಲಿದೆ ಎಂದು ವ್ಯಾಪಾರಿ ಸಂಘಟನೆಗಳ ಪರ ವಕೀಲರು ಸುಪ್ರೀಂ ಕೋರ್ಟ್ ಗಮನಕ್ಕೆ ತಂದಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಸಣ್ಣ ವ್ಯಾಪಾರಿಗಳ ಹಿತಾಸಕ್ತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಈ ವಿಚಾರವನ್ನು ದಸರಾ ರಜೆಯ ನಂತರ ಅಕ್ಟೋಬರ್ 26 ಅಥವಾ 27 ರಂದು ಪರಿಶೀಲಿಸುವುದಾಗಿ ತಿಳಿಸಿದೆ.

You cannot copy content of this page

Exit mobile version