ದೆಹಲಿ: ಒಂದು ಮತ, ಒಂದು ಮೌಲ್ಯದ ಆಧಾರದ ಮೇಲೆ ಕ್ಷೇತ್ರಗಳ ಪುನರ್ವಿಂಗಡಣೆಯು ಜನಸಂಖ್ಯಾ ನಿಯಂತ್ರಣದಲ್ಲಿ ಸಡಿಲವಾಗಿರುವ ಮಧ್ಯ ಭಾರತದ ರಾಜ್ಯಗಳಿಗೆ ಮಾತ್ರ ಪ್ರಯೋಜನವನ್ನು ನೀಡುತ್ತದೆ ಎಂದು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಗುರುವಾರ ಹೇಳಿದ್ದಾರೆ.
ಹೀಗಾಗಿ ಹೊಸ ಸೂತ್ರದ ಆಧಾರದ ಮೇಲೆ ಕ್ಷೇತ್ರಗಳ ಪುನರ್ವಿಂಗಡಣೆ ಮಾಡಬೇಕೆಂದು ಅವರು ಒತ್ತಾಯಿಸಿದರು. ಜನಸಂಖ್ಯೆಯ ಆಧಾರದ ಮೇಲೆ ಸಂಸದೀಯ ಕ್ಷೇತ್ರಗಳ ಪುನರ್ವಿಂಗಡಣೆಯಿಂದ ವಿವಾದ ಉಂಟಾಗುವ ಲಕ್ಷಣಗಳು ಕಂಡುಬರುತ್ತಿರುವ ಮಧ್ಯೆ ಕಾಂಗ್ರೆಸ್ ಸಂಸದರು ಈ ಬೇಡಿಕೆಯನ್ನು ಮಂಡಿಸಿದ್ದಾರೆ.
ಈ ನಡುವೆ 1971ರ ಜನಗಣತಿಯನ್ನು ಆಧರಿಸಿ ಕ್ಷೇತ್ರಗಳ ಪುನರ್ವಿಂಗಡಣೆ ಮಾಡಬೇಕೆಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಒತ್ತಾಯಿಸುತ್ತಿದ್ದಾರೆ. “ಒಬ್ಬ ನಾಗರಿಕ, ಒಂದು ಮತ, ಒಂದು ಮೌಲ್ಯದ ಆಧಾರದ ಮೇಲೆ ಕ್ಷೇತ್ರಗಳ ವಿಂಗಡಣೆ ನಡೆದರೆ, ದಕ್ಷಿಣ ಮತ್ತು ಉತ್ತರ ರಾಜ್ಯಗಳಿಗೆ ಅನ್ಯಾಯವಾಗುತ್ತದೆ, ಆದರೆ ಜನಸಂಖ್ಯಾ ನಿಯಂತ್ರಣದಲ್ಲಿ ವಿಫಲವಾಗಿರುವ ಮಧ್ಯ ಭಾರತದ ರಾಜ್ಯಗಳು ಪ್ರಯೋಜನ ಪಡೆಯುತ್ತವೆ” ಎಂದು ಮನೀಶ್ ತಿವಾರಿ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.