Thursday, February 26, 2026

ಸತ್ಯ | ನ್ಯಾಯ |ಧರ್ಮ

‘ಪಾಸ್ ವಿಥೌಟ್ ಹಿಂದಿ’ ಕಾನೂನು ಜಾರಿಗೆ ಒತ್ತಾಯ: ಕನ್ನಡ ಪರ ಸಂಘಟನೆಗಳಿಂದ ಎಚ್ಚರಿಕೆ

ಬೆಂಗಳೂರು: ರಾಜ್ಯದಲ್ಲಿ ಹಿಂದಿ ಹೇರಿಕೆ ವಿರುದ್ಧ ದಶಕಗಳಿಂದ ನಡೆಯುತ್ತಿರುವ ಹೋರಾಟದ ಭಾಗವಾಗಿ ‘ಪಾಸ್ ವಿಥೌಟ್ ಹಿಂದಿ’ ಕಾನೂನು ಜಾರಿಗೊಳಿಸುವಂತೆ ಕನ್ನಡ ಪರ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ. ಶಾಲಾ ಹಂತದಲ್ಲಿ ಮೂರನೇ ಭಾಷೆಯಾಗಿ ಹಿಂದಿಯನ್ನು ಕಡ್ಡಾಯಗೊಳಿಸುವುದರಿಂದ ವಿದ್ಯಾರ್ಥಿಗಳಿಗೆ ಅನವಶ್ಯಕ ಭಾರವಾಗುತ್ತಿದ್ದು, ಇದರಿಂದ ಕನ್ನಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡಚಣೆ ಉಂಟಾಗುತ್ತಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ.

ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮುಖ್ಯ ಕಾರ್ಯದರ್ಶಿ ರಶ್ಮಿ ಮಹೇಶ್ ಅವರನ್ನು ಭೇಟಿ ಮಾಡಿ ಎಚ್ಚರಿಕೆ ಪತ್ರ ಸಲ್ಲಿಸಲಾಗಿದೆ. ಬಳಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಲು ವಿಧಾನಸೌಧಕ್ಕೆ ತೆರಳಿದಾಗ ಅವರು ಗೈರು ಹಾಜರಾಗಿದ್ದರಿಂದ, ಅವರ ಆಪ್ತ ವಲಯದ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ವಿಷಯವನ್ನು ಗಮನಕ್ಕೆ ತರಲಾಗಿದೆ.

ಹೋರಾಟಗಾರರ ಮನವಿಗೆ ಸ್ಪಂದಿಸಿದ ಅಧಿಕಾರಿಗಳು 2-3 ದಿನಗಳಲ್ಲಿ ತುರ್ತು ಸಭೆ ಕರೆಯಲಾಗುವುದು, ಸಚಿವರ ಸಮ್ಮುಖದಲ್ಲಿ ಚರ್ಚೆ ನಡೆಸುವ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.

ಇದೇ ವೇಳೆ, ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿಯ ನಿರ್ದೇಶಕರಿಗೆ ಹಿಂದಿ ವಿರೋಧಿ ಕರ್ನಾಟಕ ಸಮಿತಿ ಸಲ್ಲಿಸಿದ್ದ ಎಚ್ಚರಿಕೆ ಪತ್ರಕ್ಕೆ ವಾರ ಕಳೆದರೂ ಲಿಖಿತ ಉತ್ತರ ಲಭ್ಯವಾಗದಿರುವುದಕ್ಕೆ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅಧಿಕಾರಿಗಳು ಇನ್ನೆರಡು ಮೂರು ದಿನಗಳಲ್ಲಿ ಸ್ಪಷ್ಟನೆ ನೀಡುವುದಾಗಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಪ್ರತಿವರ್ಷ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೂರನೇ ಭಾಷೆಯಾಗಿ ಹಿಂದಿಯಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ. ಇದರಿಂದ ಅನೇಕ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಕುಂಠಿತಗೊಳ್ಳುತ್ತಿದೆ ಎಂದು ಸಂಘಟನೆಗಳು ವಾದಿಸಿವೆ. ಹೀಗಾಗಿ ಈ ವರ್ಷದಿಂದಲೇ ‘ಪಾಸ್ ವಿಥೌಟ್ ಹಿಂದಿ’ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಲಾಗಿದೆ.

ಇಲ್ಲವಾದಲ್ಲಿ ಮಾರ್ಚ್ 30ರಂದು ನಡೆಯಲಿರುವ ಹಿಂದಿ ಪರೀಕ್ಷೆಯ ವೇಳೆ ಪರೀಕ್ಷಾ ಕೊಠಡಿಗಳಿಗೆ ನುಗ್ಗಿ ಪ್ರಶ್ನೆಪತ್ರಿಕೆ ಹರಿದುಹಾಕುವಂತಹ ತೀವ್ರ ಹೋರಾಟ ಕೈಗೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಸಂಘಟನೆಗಳು ಎಚ್ಚರಿಕೆ ನೀಡಿವೆ.

ಇಂದಿನ ಪ್ರತಿಭಟನೆಯಲ್ಲಿ ದ್ರಾವಿಡ ಕನ್ನಡಿಗರು ಅಭಿ ಒಕ್ಕಲಿಗ, ಜೈ ಶಂಕರ್, ಆನಂದ್ ಬುದ್ಧಿಸ್ಟ್, ಕನ್ನಡ ಪರ ಹೋರಾಟಗಾರರಾದ ಶಂಕರೇಗೌಡ, ಅಶ್ವಥ್, ಮಂಜು ಗಣಪತಿಪುರ, ಸಂವಿಧಾನ ಸೇನೆಯ ಡಾ. ಲೋಕೇಶ್ ಮೌರ್ಯ, ನರಸಿಂಹಮೂರ್ತಿ, ಸಿದ್ದರಾಮು, ವಕೀಲರಾದ ಚರಣ್ ಗೌಡ, ಸಚಿನ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page