Home ದೇಶ ಮರಾಠ ಮೀಸಲಾತಿಗೆ ಒತ್ತಾಯ: ಜ.5ರಿಂದ ಜಾರಂಗೆಯಿಂದ ಮತ್ತೆ ಅನಿರ್ದಿಷ್ಟಾವಧಿ ಉಪವಾಸ

ಮರಾಠ ಮೀಸಲಾತಿಗೆ ಒತ್ತಾಯ: ಜ.5ರಿಂದ ಜಾರಂಗೆಯಿಂದ ಮತ್ತೆ ಅನಿರ್ದಿಷ್ಟಾವಧಿ ಉಪವಾಸ

0

ಜಲ್ನಾ: ಮರಾಠರಿಗೆ ಮೀಸಲಾತಿ ನೀಡಬೇಕು ಮತ್ತು ಮರಾಠರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಮೀಸಲಾತಿ ಹೋರಾಟಗಾರ ಮನೋಜ್‌ ಜಾರಂಗೆ ಜ.5ರಿಂದ ಮತ್ತೆ ಅನಿರ್ದಿಷ್ಟಾವಧಿ ಉಪವಾಸ ಮಾಡುವುದಾಗಿ ಘೋಷಿಸಿದ್ದಾರೆ.

ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಅಂತರವಾಲಿ ಸಾರತಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಅವರು ಇಂದು ಮಾತನಾಡಿದರು. ಮರಾಠ ಸಮುದಾಯದವರು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು. ಯಾರೂ ಮನೆಯಲ್ಲಿ ಉಳಿಯಬಾರದು. ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹಕ್ಕೆ ಬನ್ನಿ, ನಮ್ಮ ಒಕ್ಕೂಟದ ಶಕ್ತಿಯನ್ನು ತೋರಿಸೋಣ ಎಂದು ಅವರು ಕರೆ ನೀಡಿದರು.

ಸರ್ಕಾರ ತನ್ನ ಭರವಸೆಗಳನ್ನು ಈಡೇರಿಸಲು ವಿಫಲವಾಗಿದೆ ಎಂದು ಆರೋಪಿಸಿದ ಅವರು, ಸರ್ಕಾರ ನಮಗೆ ಮೋಸ ಮಾಡಿದೆ. ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಈ ಸಲ ಬಿಡುವುದಿಲ್ಲ. ಕಳೆದ ಒಂದು ವರ್ಷದಲ್ಲಿ ಆರು ಉಪವಾಸ ಸತ್ಯಾಗ್ರಹಗಳನ್ನು ನಡೆಸಲಾಗಿದೆ. ಇದು ಸ್ವಯಂಪ್ರೇರಿತವಾಗಿದ್ದು ಮರಾಠಾ ಸಮುದಾಯದ ಯಾವುದೇ ಸದಸ್ಯರು ಭಾಗವಹಿಸಬಹುದು. ಯಾರು ಬೇಕಾದರೂ ಸೇರಬಹುದು. ಯಾರ ಮೇಲೂ ಬಲವಂತ ಅಥವಾ ಒತ್ತಡವಿಲ್ಲ ಎಂದು ಜಾರಂಗೆ ತಿಳಿಸಿದರು.

ಇದೇ ವರ್ಷ ಫೆಬ್ರುವರಿಯಲ್ಲಿ ಶಿಕ್ಷಣ, ಸರ್ಕಾರಿ ಉದ್ಯೋಗಗಳಲ್ಲಿ ಮರಾಠಾಗಳಿಗೆ ಪ್ರತ್ಯೇಕ ವರ್ಗದ ಅಡಿಯಲ್ಲಿ ಶೇ. 10ರಷ್ಟು ಮೀಸಲಾತಿ ಒದಗಿಸುವ ಮಸೂದೆಯನ್ನು ಮಹಾರಾಷ್ಟ್ರ ಸರ್ಕಾರ ಅಂಗೀಕರಿಸಿದೆ. ಆದರೆ ಜರಾಂಗೆ ಅವರು ಮರಠಾ ಸಮುದಾಯಕ್ಕೆ ಓಬಿಸಿ ಅಡಿಯಲ್ಲಿ ಮೀಸಲಾತಿ ನೀಡುವಂತೆ ಆಗ್ರಹಿಸುತ್ತಿದ್ದಾರೆ.

You cannot copy content of this page

Exit mobile version