Friday, June 14, 2024

ಸತ್ಯ | ನ್ಯಾಯ |ಧರ್ಮ

ತುಳುವರಿಗೆ ಇದು ಒಪ್ಪುವ ಸಂಗತಿ ಅಲ್ಲ

ಇತ್ತೀಚೆಗೆ ಕಮರ್ಶಿಯಲ್‌ ಯಶಸ್ಸು ಪಡೆದ ಕಾಂತಾರ ಸಿನಿಮಾ ಮೂಲಕ ತುಳುನಾಡಿನ ದೈವಾರಾಧನೆಯ (ಬೂತಾರಾಧನೆ) ಮಹತ್ವ ಇಡೀ ಪ್ರಪಂಚಕ್ಕೇ ತಿಳಿಯಿತು. ತುಳುನಾಡಿನ ಧಾರ್ಮಿಕ ಸಾಂಸ್ಕೃತಿಕ ಬದುಕಿನಲ್ಲಿ ಪಂಜುರ್ಲಿ, ಜುಮಾದಿ, ಕಲ್ಲುರ್ಟಿ, ಕಲ್ಕುಡ, ಕೊರಗಜ್ಜ, ಬಬ್ಬುಸ್ವಾಮಿ ಮೊದಲಾದ ದೈವಗಳೇ ಪ್ರಮುಖ ಪಾತ್ರವಹಿಸುತ್ತವೆ. ಆದರೆ ಇತ್ತೀಚೆಗೆ ಕಾರ್ಕಳದಲ್ಲಿ ಉದ್ಘಾಟನೆಯಾದ ಪರಶುರಾಮ ಥೀಮ್‌ ಪಾರ್ಕಿನಲ್ಲಿ ತುಳುನಾಡ ದೈವಗಳಿಗೆ ಅಪಮಾನವಾಗುವಂತೆ ಉಬ್ಬುಚಿತ್ರಗಳನ್ನು ರಚಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ನಾಡಿನ ವಿದ್ವಾಂಸರು, ಚಿಂತಕರುಗಳಿಂದ ಅಭಿಪ್ರಾಯಗಳನ್ನು ಪೀಪಲ್‌ ಮೀಡಿಯಾ ಆಹ್ವಾನಿಸುತ್ತದೆ. ತುಳುನಾಡಿನ ಸಂಸ್ಕೃತಿ ವಿದ್ವಾಂಸರಾದ ಪೂವಪ್ಪ ಕಣಿಯೂರು ಈ ಕುರಿತು ಸ್ಪಷ್ಟ ಮಾತುಗಳಲ್ಲಿ ಬರೆದಿದ್ದಾರೆ – ಸಂ

ತುಳು ನಾಡಿಗೆ ವೈದಿಕರ ಪ್ರವೇಶವಾಗಿ ಇಲ್ಲಿನ ಪ್ರಭುತ್ವದೊಂದಿಗೆ ಅನುಸಂಧಾನಗೊಳ್ಳುವಲ್ಲಿಗೆ ತುಳುನಾಡಿನ ಮೂಲ ಆರಾಧನಾ ಪರಂಪರೆಯಲ್ಲಿ ಪಲ್ಲಟವೋ ಸ್ಥಾನಾಂತರವೋ ಆರಂಭವಾಗಿದೆ. ಈ ಪ್ರಕ್ರಿಯೆ ಕ್ರಮೇಣ ಸಮಾನಾಂತರ ಸಂಸ್ಕೃತಿಯನ್ನು ಸ್ವಾಧೀನ ಮಾಡುವಲ್ಲಿ ಸಫಲವೂ ಆಗಿದೆಯೆನ್ನುವುದರ ಕುರುಹು ಪರಶುರಾಮ ಪಾರ್ಕಿನಲ್ಲಿ ಕಲ್ಪಿತ ಪರಶುರಾಮನಿಗೆ ಅನನ್ಯ ಪರಿಕಲ್ಪನೆಯ ದೈವಗಳು ಕೈಮುಗಿದು  ದೈನ್ಯತೆ ತೋರುವಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಈ ಸ್ವಾಧೀನ ಪಡಿಸುವ ಪ್ರಕ್ರಿಯೆಯಲ್ಲಿ ಮೊದಲು ಬಲಿಯಾದದ್ದು ತುಳುನಾಡಿನ ನಾಗಾರಾಧನೆ. ನಾಗಾರಾಧನೆ ತುಳುವರ ಫಲ ಸಮೃದ್ಧಿಯ ಆಶಯವುಳ್ಳದ್ದು. ಇಲ್ಲಿನ ಪ್ರಧಾನ ದೇವತೆ ನಾಗ ಪ್ರಭು- ಪುರೋಹಿತರ ಸಂಯೋಜಿತ ವ್ಯವಸ್ಥೆಯಲ್ಲಿ ಸೇರಿದಾಗ ಅವನು ನಾಗ ಬ್ರಹ್ಮನಾದ. ಹಿರಿಯರ ಆರಾಧನೆಯ ಪರಿಕಲ್ಪನೆಯ ಮೂಲವಾಗಿ ‘ಅಮ್ಮೆರ್’  ‘ಬಿರ್ಮೆರ್ ‘ಆಗಿದ್ದ  ‘ನಾಗ ಬ್ರಹ್ಮ ‘ಆಗಿ ತರುವಾಯ ಕುದುರೆ ಮೇಲೆ ಕುಳಿತವನಾಗಿ ಅರಸು ಉಪಾಸನ ಪದ್ಧತಿಯಲ್ಲಿ ಸೇರಿ ಹೋದ.

ಬೆಳೆ ರಕ್ಷಕ ಮೂಲ ಪರಿಕಲ್ಪನೆಯ ದೈವಗಳು ಕೂಡ ಇದೇ ಪ್ರಭು ಮತ್ತು ಪುರೋಹಿತರ ಒಡಂಬಡಿಕೆಯಲ್ಲಿ ದೇವಸ್ಥಾನಗಳಲ್ಲಿ ದೇವರ ರಕ್ಷಣಾ ಭಾವದಲ್ಲಿ ಸೇರಿ ಹೋಗಿ ಶತಮಾನಗಳೇ ಕಳೆದಿವೆ. ಹೀಗೆ ಸೇರಿಗೆಯಾಗುವಲ್ಲಿ ವಿಭಿನ್ನ ಕಾರಣಗಳಿವೆ. ಅದರಲ್ಲಿ ಬಹಳ ಮುಖ್ಯವಾಗಿ ಊರ ಅಥವಾ ಗ್ರಾಮ ನೆಲೆಯ ದೈವಗಳನ್ನು ಬಂಡಾರ ಸಹಿತ ದೇವಸ್ಥಾನಗಳಿಗೆ ಹೊಂದಿಸುವಲ್ಲಿ ಆರಾಧಕರ ಸಮುದಾಯದವರನ್ನು ದೇವಾರಾಧನೆಯ ಶ್ರಮ ವಿಭಜನೆಯಲ್ಲಿ ತೊಡಗಿಸಿಕೊಳ್ಳುವ ಉದ್ದೇಶ ಪ್ರಧಾನವಾಗಿದೆ. ದೇವಸ್ಥಾನವೆನ್ನುವ ಸ್ಥಾವರಗಳಲ್ಲಿ ನೆಲೆಯಾಗಿರುವ ವೈದಿಕ ದೇವತೆಗಳೊಂದಿಗೆ  ದಾಕ್ಷಿಣಾತ್ಯ ತಾಂತ್ರಿಕ ಆಚರಣೆಯ ‘ಮಧು- ಮಾಂಸ- ರಕ್ತ ಬಲಿ’ ಎನ್ನುವ ಅಸುರ ಕ್ರಿಯೆಯ ಜನಪದ ಮೂಲದ ದೈವಗಳಿಗೆ ದೇವಸ್ಥಾನದ ಒಳಾಂಗಣದೊಳಗೆ ಪ್ರವೇಶ ಇಲ್ಲ. ರುದ್ರ ಚಾಮುಂಡಿ , ನಾಗ ʼಮಲರಾಯಿ’ ಜುಮಾದಿ’ ಪಂಜುರ್ಲಿ ಯಂತ (ಇವು ಮೂರು ಒಂದೇ ಮೂಲದ ಮೂರು ವರ್ಣಗಳು) ನೂರಾರು ದೈವಗಳು ರಕ್ಷಕ ನೆಲೆಯಲ್ಲಿ ದೇವಸ್ಥಾನದ ಹೊರಾಂಗಣಕ್ಕೆ ಸೀಮಿತವಾಗಿರುತ್ತವೆ. ದೇವಸ್ಥಾನಗಳ ರಕ್ಷಕ, ಕ್ಷೇತ್ರ ಪಾಲಗಳೆನ್ನುವ ನೆಲೆಯಲ್ಲಿ ಇವಿರುತ್ತವೆ. ರಥೋತ್ಸವ ಸಂದರ್ಭದಲ್ಲಿ ಇವುಗಳು ಆರಾಧನೆಯೊಂದಿಗೆ ದೇವರ ರಥವನ್ನು  ರಥ ಬೀದಿಯಲ್ಲಿ ಎಳೆವಾಗ, ಪಟ್ಟಣ ಸವಾರಿಯ ದಿನ ದೇವರ ಮೂರ್ತಿಯ ಮುಂದೆ ಬಂಟ ದೈವವಾಗಿ, ರಕ್ಷಣೆಯ ಭಾರ ಹೊರುವಲ್ಲಿಗೆ ಸೀಮಿತವಾಗಿರುತ್ತವೆ. ಒಟ್ಟಾರೆ ತುಳುನಾಡಿನ ಆದಿ ಮೂಲ ದೈವಗಳು ವೈದಿಕದಲ್ಲಿ ಸಂಯೋಜನೆ ಆಗುವಲ್ಲಿ ಕಾಣುವ ವಾಸ್ತವವೆಂದರೆ   ಶ್ರೇಷ್ಟತೆಯ ವ್ಯಸನದಲ್ಲಿ ಮಣಿಸುವ ದಾರ್ಷ್ಟ್ಯ. ನಾಗಾರಾಧಕ ಸಮುದಾಯವಾಗಿರುವ ತುಳುವರ ಪ್ರಕಾರ ನಾಡನ್ನು ಸೃಷ್ಟಿಸಿದವನು ‘ಪಾತಾಳ ಲೋಕದ ಪನಿಣಿನಾಗೆರ್’ ಎಂಬುದಾಗಿದೆ. ‘ಕೊಡರಿ ದಕ್ಕ್ ದ್’ (ಕೊಡಲಿ ಎಸೆದು)ಸೃಷ್ಟಿ ಮಾಡಿದ ಮಣ್ಣಿನೊಂದಿಗೆ ನೇರ ಸಂಬಂಧ ಹೊಂದಿರದ  ಪರಶುವಿನ ಪುರಾಣ ಇದನ್ನು ಸ್ಥಾನಾಂತರಿಸಿದ್ದು ವಿಪರ್ಯಾಸವೇ ಸರಿ. ಪರಶುರಾಮ ತುಳುನಾಡಿನ ಸೃಷ್ಟಿಕರ್ತ ಅಂದ ಮೇಲೆ ಇಲ್ಲಿನ ದೈವ, ಭೂತಗಳು ಅವನ ಸೃಷ್ಟಿಯಲ್ಲಿದ್ದು ಅವನಿಗೆ ಅಧೀನವಾಗಿ ಕೈಮುಗಿದು  ಇರುವಂತೆ ಒಡಂಬಡಿಸಲಾಗಿದ್ದು ಮೇಲ್ನೋಟಕ್ಕೆ ಸರಿಯೆನ್ನಿಸುತ್ತದೆ. ಆದರೆ ಪ್ರಜ್ಞಾವಂತ ಮತ್ತು ತಮ್ಮದೇ ಸಂಸ್ಕೃತಿಯ ಮೇಲೆ ಪ್ರೀತಿ ಇರುವ ತುಳುವರಿಗೆ ಇದು ಒಪ್ಪುವ ಸಂಗತಿ ಆಗದು. ಒಪ್ಪಿದರೆ ಅವರಿಗವರೇ ಮಾಡಿಕೊಳ್ಳುವ ಅಪಮಾನ. ಈ ಶ್ರೇಷ್ಠತೆಯ ವ್ಯಸನವನ್ನು ವಿರೋಧಿಸಬೇಕಾದುದು ತುಳುವರ ಕೆಚ್ಚಿನ ಸಂಕೇತವಾಗುತ್ತದೆ. ವಿಚಾರಗಳನ್ನು ಪರಸ್ಪರ ಗೌರವವಾಗಿ ಕಾಣಿಸಿಕೊಳ್ಳುವುದು  ಬಹುಮುಖಿ ಸಮಾಜಕ್ಕೆ ತಾವು ತೋರಿಸಿ ಕೊಡುವ ಗೌರವದ ಮಾದರಿಯಾಗುತ್ತದೆ.

ಪೂವಪ್ಪ ಕಣಿಯೂರು

ತುಳು ವಿದ್ವಾಂಸರು

Related Articles

ಇತ್ತೀಚಿನ ಸುದ್ದಿಗಳು