ತಮಿಳುನಾಡಿನ ರಾಜಕೀಯದಲ್ಲಿ ಹೊಸ ವಿವಾದ ಭುಗಿಲೆದ್ದಿದ್ದು, ನಟಿ ತ್ರಿಷಾ ಕೃಷ್ಣನ್ ಕುರಿತು ದ್ವಿಮುಖ ಅರ್ಥ ಬರುವ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಡಿಎಂಕೆ ನಾಯಕ ಹಾಗೂ ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾವೇರಿ ಜಲ ಹಂಚಿಕೆ ವಿಚಾರವಾಗಿ ತಂಜಾವೂರಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಉದಯನಿಧಿ ಸ್ಟಾಲಿನ್ ಭಾಷಣ ಮಾಡುತ್ತಿದ್ದ ವೇಳೆ, ಜನಸಮೂಹದ ಕೆಲವರು “ತ್ರಿಷಾ, ತ್ರಿಷಾ” ಎಂದು ಘೋಷಣೆ ಕೂಗಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, “ನೀರು ಬೇರೆಲ್ಲಿಗಾದರೂ ತಲುಪಲಿ ಅಥವಾ ತಲುಪದಿರಲಿ, ಅದು ಅಲ್ಲಿಗೆ ತಲುಪಬೇಕು” ಎಂದು ಹೇಳಿ, ಬಳಿಕ ತಾವು ಕಾವೇರಿ ನೀರಿನ ಕುರಿತು ಮಾತನಾಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು. ಆದರೆ ಈ ಹೇಳಿಕೆಯನ್ನು ನಟಿ ತ್ರಿಷಾ ಕೃಷ್ಣನ್ ಅವರನ್ನು ಉದ್ದೇಶಿಸಿ ದ್ವಿಮುಖ ಹಾಗೂ ಅಶ್ಲೀಲ ಅರ್ಥದಲ್ಲಿ ಹೇಳಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
ಈ ಸಂಬಂಧ ತಂಜಾವೂರು ಟಿವಿಕೆ ಕೇಂದ್ರ ಜಿಲ್ಲಾ ಮಹಿಳಾ ವಿಭಾಗದ ಸಂಘಟಕಿ ಎಸ್. ಬೈರವಿ ಅವರು ತಂಜಾವೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ, ಉದಯನಿಧಿ ಸ್ಟಾಲಿನ್ ಹಾಗೂ ಡಿಎಂಕೆ ಐಟಿ ವಿಭಾಗದ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಮಹಿಳೆಯರನ್ನು ಅವಮಾನಿಸಿದ್ದು, ಈ ಮೂಲಕ ನಟಿ ಸೇರಿದಂತೆ ಮಹಿಳೆಯರಿಗೆ ಮಾನಸಿಕ ನೋವು ಉಂಟುಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯ ಎರಡು ನಿಮಿಷಕ್ಕೂ ಅಧಿಕ ಅವಧಿಯ ವೀಡಿಯೊವನ್ನು ಡಿಎಂಕೆ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಉದ್ದೇಶಪೂರ್ವಕವಾಗಿ ಹಂಚಿಕೊಂಡಿದೆ ಎಂಬ ಆರೋಪವೂ ಕೇಳಿಬಂದಿದೆ.
ವಿವಾದ ತೀವ್ರಗೊಂಡ ಹಿನ್ನೆಲೆಯಲ್ಲಿ ಟಿವಿಕೆ ಮುಖಂಡರಾದ ಆಧವ್ ಅರ್ಜುನ ಮತ್ತು ಎನ್. ಆನಂದ್ ಡಿಎಂಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಈ ರೀತಿಯ ವರ್ತನೆ ಸಂಪೂರ್ಣ ಅಸಹ್ಯಕರ ಹಾಗೂ ರಾಜಕೀಯ ಸಂಸ್ಕೃತಿಯ ಕುಸಿತವನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.
ಇದೇ ವೇಳೆ, ಭಾರತೀಯ ಜನತಾ ಪಕ್ಷದ ತಮಿಳುನಾಡು ಘಟಕದ ಮುಖ್ಯ ವಕ್ತಾರ ನಾರಾಯಣನ್ ತಿರುಪತಿ ಕೂಡ ಉದಯನಿಧಿ ಸ್ಟಾಲಿನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದು, ಅವರ ಹೇಳಿಕೆಯನ್ನು “ಅಶ್ಲೀಲ, ಅಸಭ್ಯ ಹಾಗೂ ನಾಚಿಕೆಗೇಡಿನ” ಎಂದು ಖಂಡಿಸಿದ್ದಾರೆ.
ಟಿವಿಕೆ ಶಾಸಕ ರೇವಂತ್ ಚರಣ್ ಕೂಡ ಡಿಎಂಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪಕ್ಷದ ರಾಜಕೀಯ ಸಂಸ್ಕೃತಿ ಮತ್ತಷ್ಟು ಅಧೋಗತಿಗೆ ಇಳಿದಿದೆ ಎಂದು ಆರೋಪಿಸಿದ್ದಾರೆ. ಸಾರ್ವಜನಿಕರನ್ನು ಸೆಳೆಯಲು ಅಗ್ಗದ ಪ್ರಚೋದನೆಯ ರಾಜಕಾರಣ ಮಾಡಲಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಈ ಘಟನೆ ತಮಿಳುನಾಡಿನ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಉದಯನಿಧಿ ಸ್ಟಾಲಿನ್ ವಿರುದ್ಧ ದಾಖಲಾಗಿರುವ ದೂರಿನ ಕುರಿತು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
