Sunday, June 16, 2024

ಸತ್ಯ | ನ್ಯಾಯ |ಧರ್ಮ

ತುಳುನಾಡಿನ ದೇವಾರಾಧನೆ- ದೈವಾರಾಧನೆಯ ಸಮಾನಾಂತರ ಶ್ರೇಣೀಕೃತ ವ್ಯವಸ್ಥೆಯೇ?

ಪರಶುರಾಮನ ಸೃಷ್ಟಿ ಎಂದೇ ಹೇಳಲಾಗುವ ಕಡಲ ಕರೆಯ ತುಳುನಾಡಿನಲ್ಲಿ, ಪುರಾಣ ಪುರುಷನಾದ ಪರಶುರಾಮ ಮತ್ತೊಮ್ಮೆ ಅವತರಿಸಿದ್ದಾನೆ. ಈ ಹಿಂದೆ, ಕೊಡಲಿ ಹಿಡಿದು ಕಡಲು ಸರಿಸಿ, ತುಳುನಾಡಿನ‌ ಸೃಷ್ಟಿಕರ್ತನಾಗಿ ಪರಶುರಾಮ ಅವತರಿಸಿದ್ದರೆ, ಈಗಿನ ಪರಶುರಾಮ, ಕಾರ್ಕಳದ ಥೀಮ್ ಪಾರ್ಕಿನ ಉಬ್ಬುಶಿಲ್ಪದಲ್ಲಿ ಅಣಿ ಕಳಚಿಕೊಂಡು, ಕೈಮುಗಿದು, ಕಾಲಡಿಯಲ್ಲಿ ಬೇಡಿಕೊಳ್ಳುವ ತುಳುನಾಡಿನ ದೈವಗಳನ್ನು ಅಧೀನಗೊಳಿಸಿ, ಕೊಡಲಿಧಾರಿಯಾಗಿ‌ ಮತ್ತೊಮ್ಮೆ ಅವತರಿಸಿದ್ದಾನೆ. ಧಾರ್ಮಿಕತೆಯ ಮೂಲಕ ಸಾಂಸ್ಕೃತಿಕ ಯಜಮಾನಿಕೆಯ ಪರಶುರಾಮನ ಅವತರಣಿಕೆ, ತುಳನಾಡಿನ ದೈವಗಳ ಅವಮಾನಿತ ನಡೆಯಾಗಿ ಮಾತ್ರವಲ್ಲ, ತುಳುನಾಡಿನ ಸಾಮಾಜಿಕ, ಧಾರ್ಮಿಕ, ರಾಜಕೀಯ, ಸಾಂಸ್ಕೃತಿಕ ಚರಿತ್ರೆಯಾಗಿಯೂ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೊಳಗಾಗುತ್ತಿದೆ.

ತುಳುನಾಡಿನ ದೈವಗಳನ್ನು ಅಧೀನಗೊಳಿಸಿ, ಸ್ವಾಧೀನಗೊಳಿಸುವ ಸಂಗತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಈ ಚರ್ಚೆಗೆ ಪೂರಕವಾಗಬಹುದಾದ ಕೆಲವು ಸಂದೇಹಗಳನ್ನು ಈ ಮೂಲಕ ಮುಂದಿಡುತ್ತಿದ್ದೇನೆ.

೧). ಭೂಮಿಯ ಚಲನಶೀಲತೆಯ ಕಾರಣವಾಗಿಯೇ ಕಡಲ ನೀರು ಹಿಂದಕ್ಕೆ ಸರಿದು, ಭೂಮಿ ತೆರೆದುಕೊಳ್ಳುವ ಪ್ರಕ್ರಿಯೆಯಲ್ಲಿ ಕರಾವಳಿ ತೀರ ಜನಬದುಕಿನ ಕೊಂಕಣವಾಯಿತು. ಪ್ರಕೃತಿ ಸಹಜವೆನಿಸುವ ಈ ನೈಸರ್ಗಿಕ ಮತ್ತು ವೈಜ್ಞಾನಿಕ ಸತ್ಯವನ್ನು, ಪರಶುರಾಮನ ಐತಿಹ್ಯದ ಮೂಲಕ ಪುರಾಣ ಸತ್ಯವನ್ನಾಗಿಸಿ ಸಹಜೀಕರಿಸಲಾಯಿತು. ಕಡಲು ಹಿಂದೆ ಸರಿದ ನೈಸರ್ಗಿಕ ಸತ್ಯ, ಪರಶುರಾಮನ ಸೃಷ್ಟಿ ಎಂದೆನ್ನುವ ಐತಿಹ್ಯದಲ್ಲಿ ಪೌರಾಣಿಕ ಸತ್ಯವಾಗಿ, ತುಳುವರ ಸಾಮಾಜಿಕ ಒಪ್ಪಿಗೆಯಾಗಿ ಯಾಕೆ ಮತ್ತು ಹೇಗೆ ಪ್ರಚಲಿತಗೊಂಡಿತು?

೨). ಕಬ್ಬಿಣದ ಕೊಡಲಿಯ ಬಳಕೆಯ ಕಾರಣದಿಂದ ಲೋಹಯುಗದಲ್ಲಿ, ತುಳುನಾಡಿನಲ್ಲಿ ಜನಬದುಕು ಆರಂಭಗೊಂಡಿತು ಅನ್ನುವುದು ಪರಶುರಾಮ ಐತಿಹ್ಯ ಕುರಿತ ವ್ಯಾಖ್ಯಾನಗಳಲ್ಲಿ ಒಂದು. ಮೂಲತ: ಮಯೂರ ಶರ್ಮನ ಕಾಲದಲ್ಲಿ ಅಹಿಚ್ಛತ್ರದಿಂದ ಪೌರೋಹಿತ್ಯಕ್ಕಾಗಿ ಕರೆತಂದವರು, ತಾವು ನೆಲೆಗೊಂಡ ಚಾರಿತ್ರಿಕ ಸನ್ನಿವೇಶವನ್ನು ನ್ಯಾಯಸಮ್ಮತಗೊಳಿಸುವ, ಧರ್ಮಬದ್ಧಗೊಳಿಸುವ ಸಲುವಾಗಿ ಈ ಐತಿಹ್ಯದ ಸಂಕಥನವನ್ನು ನಿರೂಪಿಸಲಾಗಿದೆ ಎಂಬುದು ಪರಶುರಾಮನ ಸೃಷ್ಟಿ ಕಥನದ ಕುರಿತ ಇನ್ನೊಂದು  ವ್ಯಾಖ್ಯಾನ.

೨೧ ಬಾರಿ ಭೂಮಿಯನ್ನು ಸುತ್ತಿ ಕ್ಷತ್ರಿಯರನ್ನು ಮಾತ್ರವಲ್ಲ, ಹೆತ್ತ ತಾಯಿಯನ್ನೇ ಕೊಂದ, (ಮತ್ತೆ ಜೀವಬರಿಸಿದ) ಪರಶುರಾಮ, ಸತ್ತವರನ್ನು ಹದಿನಾರರಲ್ಲಿ ಸೇರಿಸಿ, ಮರುಹುಟ್ಟು  ಇಲ್ಲದೆಯೇ ಸಂತಾನದ ನಿರಂತರತೆಯನ್ನು ಕಾಣುವ, ತಾಯಿಮೂಲದಲ್ಲಿಯೇ ಕೂಡುಕುಟುಂಬವನ್ನು ಕಟ್ಟಿಕೊಳ್ಳುವ ಕೌಟುಂಬಿಕ  ತುಳುನಾಡಿನ ಸೃಷ್ಟಿಕರ್ತ ಹೇಗಾದ?

೩). ದೈವಗಳನ್ನು ಪ್ರಧಾನವಾಗಿ ನಂಬುವ ತುಳುನಾಡಿನ ಆರಾಧನಾ  ಪರಂಪರೆಯಲ್ಲಿ ದೈವಗಳನ್ನು ದೇವರುಗಳ ಗಣಗಳನ್ನಾಗಿ ಕಾಯಪರಿವರ್ತನೆಗೊಳಿಸುವ, ದೈವಗಳನ್ನು ದೇವರುಗಳ ಅಧೀನ ಶಕ್ತಿಗಳನ್ನಾಗಿ ಸ್ವಾಧೀನಪಡಿಸುವ, ರಕ್ಷಕ ಶಕ್ತಿಗಳಾಗಿ ದೇವಸ್ಥಾನಗಳ ಕ್ಷೇತ್ರಪಾಲರನ್ನಾಗಿಸುವ, ಆ ಮೂಲಕ ದೈವಗಳನ್ನು ಅಂಚಿಗೆ ಸರಿಸಿರುವ ಸಂಗತಿಗಳು, ದೈವಾರಾಧಕ ತುಳುವರ ಸಮ್ಮತಿಯೊಂದಿಗೆ ತುಳುನಾಡಿನಲ್ಲಿ ಬಹಳ ಹಿಂದಿನಿಂದಲೂ ಮೌನವಾಗಿ ನಡೆದುಕೊಂಡು ಬಂದಿದೆ. ತುಳುನಾಡಿನ ದೇವಸ್ಥಾನಗಳ ಮಣೆಮಂಚ, ಕಡ್ಸಲೆ ಮೊಗಗಳು, ಊರ ಜಾತ್ರೆಯ ಸಂದರ್ಭದಲ್ಲಿ ಏರ್ಪಡುವ ದೈವ-ದೇವರುಗಳ ಭೇಟಿ ಇವೆಲ್ಲವೂ ತುಳುನಾಡಿನ ದೈವ-ದೇವರುಗಳ ನಡುವಿನ ಸಂಬಂಧ ಸ್ವರೂಪ ಮತ್ತು ಸ್ಥಾನಮಾನಗಳನ್ನು ನಿರೂಪಿಸುತ್ತಿಲ್ಲವೇ?

೪). ತುಳುನಾಡಿನ ದೈವಾರಾಧನೆ ಮತ್ತು ದೇವಾರಾಧನೆ ನಡುವೆ ಸಂವಾದಾತ್ಮಕವಾದ ಕಣ್ಣಿಗೆ ಕಾಣಿಸುವ ಅನೇಕ ಸಾಮಾನ್ಯ ಅಂಶಗಳಿವೆ. ಮನೆದೈವ, ಕುಟುಂಬ ದೈವ, ಗ್ರಾಮದೈವ, ಸೀಮೆದೈವ, ಮಾಗಣೆ ದೈವಗಳಾಗಿ, ಸ್ಥಳೀಯವಾಗಿ ವರ್ಷಾವಧಿಯಾಗಿ ನಡೆಯುವ ದೈವಾರಾಧನ ಪರಂಪರೆಗೆ ಸಮಾನಾಂತರವಾಗಿ ಮತ್ತು ಸಂರಚನಾತ್ಮಕವಾಗಿ ಸಾಮಾಜಿಕ, ಧಾರ್ಮಿಕ ಶ್ರೇಣೀಕೃತ ವ್ಯವಸ್ಥೆಯಾಗಿ, ದೇವಾರಾಧನೆ ಮೂಲಕ ಸ್ಥಳೀಯ ಆರಾಧನಾ ಪರಂಪರೆಯನ್ನು (ದೈವಾರಾಧನೆ ಮತ್ತು ನಾಗಾರಾಧನೆ) ಸ್ವಾಧೀನದಲ್ಲಿರಿಸಲಾಗಿದೆ (ನಾಗನನ್ನು ಕೊಂದರೆ ಬ್ರಾಹ್ಮಣ ಹತ್ಯೆಯ ಪಾಪ). ಇದೂ ಧಾರ್ಮಿಕ, ಸಾಂಸ್ಕೃತಿಕ ಶ್ರೇಣೀಕೃತ ಯಜಮಾನಿಕೆಯಲ್ಲವೇ?

ಕತೆ ಕಥನಗಳ ಮೂಲಕ ನಂಬಿಕೆಗಳನ್ನಾಗಿಸುತ್ತಿರುವ ಇಂದಿನ‌ ಚಾರಿತ್ರಿಕ ‌ಸನ್ನಿವೇಶದಲ್ಲಿ ಕಾರ್ಕಳದ ಉಬ್ಬುಶಿಲ್ಪದ ಕಥನವು ನಂಬಿಕೆಯಾಗುವ, ಚರಿತ್ರೆಯಾಗುವ ಅಪಾಯಕಾರಿ ಬೆಳವಣಿಗೆ ಇದೆ.   ಸಾಂಸ್ಕೃತಿಕ ಯಜಮಾನಿಕೆಯನ್ನು‌ ಸ್ಥಾಯಿಗೊಳಿಸುವ, ಸ್ಮಾರಕವಾಗಿಸುವ ಈ ಪ್ರಯತ್ನವನ್ನು ತುಳುವರೆಲ್ಲರೂ ವಿರೋಧಿಸಿ ಕೆಡವಲೇ ಬೇಕಾಗಿದೆ. ತುಳುವರ ಸಾಂಸ್ಕೃತಿಕ ಅಸ್ಮಿತೆ ಮತ್ತು ಅನನ್ಯತೆಯಾಗಿರುವ ದೈವಾರಾಧನೆಯನ್ನು ದೇವಾರಾಧನೆಗೆ ಸಮಾನಾಂತರ ಸಂರಚನಾತ್ಮಕ ಶ್ರೇಣೀಕೃತ ವ್ಯವಸ್ಥೆಯಾಗಿಸುವ ಸಾಂಸ್ಕೃತಿಕ ರಾಜಕಾರಣದ ಬಗ್ಗೆ ತುಳುವರೆಲ್ಲರೂ ಜಾಗೃತರಾಗಬೇಕಾಗಿದೆ.

ಪ್ರೊ. ಬಿ. ಶಿವರಾಮ ಶೆಟ್ಟಿ

ತುಳು ಜಾನಪದ ವಿದ್ವಾಂಸರು

Related Articles

ಇತ್ತೀಚಿನ ಸುದ್ದಿಗಳು