Saturday, January 17, 2026

ಸತ್ಯ | ನ್ಯಾಯ |ಧರ್ಮ

‘ಕೋಮುವಾದದ ಕಾಲ’ದಲ್ಲಿ ದೇವರಾಜ ಅರಸು ಮತ್ತು ಸಿದ್ದರಾಮಯ್ಯ

“..ಕರ್ನಾಟಕದಲ್ಲಿ ಭಾರೀ ಪ್ರಭಾವಶಾಲಿಯಾಗಿದ್ದ ಕಾರ್ಮಿಕ ಚಳವಳಿಯು ದೇವರಾಜ ಅರಸು ಅವರನ್ನು ವಿರೋಧಿಸುತ್ತಿತ್ತು. ರಾಜೀನಾಮೆ ಎಂಬ ಪದ ದೇವರಾಜ ಅರಸು ಅವರನ್ನು ಕಾಡಿದಷ್ಟು ಯಾವ ರಾಜಕಾರಣಿಯನ್ನೂ ಕಾಡಿದ್ದಿಲ್ಲ..” ಪತ್ರಕರ್ತರಾದ ನವೀನ್ ಸೂರಿಂಜೆ ಅವರ ಬರಹದಲ್ಲಿ

‘ದೇವರಾಜ ಅರಸ್ ಕಾಲಕ್ಕೂ ಸಿದ್ದರಾಮಯ್ಯ ಕಾಲಕ್ಕೂ ವ್ಯತ್ಯಾಸಗಳಿವೆ. ಅರಸು ಅವರಿಗೆ ಕೋಮುವಾದದ ಸವಾಲುಗಳಿರಲಿಲ್ಲ. ಸಿದ್ದರಾಮಯ್ಯ ಅವರು ಕೋಮುವಾದದ ಸವಾಲುಗಳನ್ನು ಎದುರಿಸಬೇಕಾಗಿದೆ’ ಎಂದು ಸಿದ್ದರಾಮಯ್ಯ ಮತ್ತು ದೇವರಾಜ ಅರಸು ರಾಜಕಾರಣವನ್ನು ವಿಶ್ಲೇಷಿಸಲಾಗುತ್ತಿದೆ. ಸಿದ್ದರಾಮಯ್ಯ ಸರ್ಕಾರದ ವೈಫಲ್ಯಗಳಿಗೆ ಇದೊಂದು ಸಮರ್ಥನೆಯಷ್ಟೆ. ದೇವರಾಜ ಅರಸು ಅವರು ಸಿದ್ದರಾಮಯ್ಯರಿಗಿಂತಲೂ ಕಟುವಾದ ಕೋಮುವಾದವನ್ನು ಎದುರಿಸಿದ್ದರು. ದೇವರಾಜ ಅರಸು ಮುಖ್ಯಮಂತ್ರಿಯಾಗಿ ಎದುರಿಸಿದ್ದ ‘ಕಷ್ಟದ ಕಾಲ’ದ ಮುಂದೆ ಸಿದ್ದರಾಮಯ್ಯನವರ ಕಾಲ ಏನೇನೂ ಅಲ್ಲ.

ದೇವರಾಜ ಅರಸು ಅವರಿಗೆ ಇದ್ದ ಎದುರಾಳಿಗಳು ಒಬ್ಬಿಬ್ಬರಲ್ಲ. ಕಾಂಗ್ರೆಸ್(ಒ), ಜನಸಂಘ, ಆರ್.ಎಸ್.ಎಸ್, ಸಿಪಿಐ, ಸಿಪಿಐಎಂ, ರೈತ ಸಂಘ, ಕನ್ನಡ ಚಳವಳಿ, ವಿದ್ಯಾರ್ಥಿ ಚಳವಳಿಗಳು ದೇವರಾಜ ಅರಸುರವರನ್ನು ಖಡಾಖಂಡಿತವಾಗಿ ವಿರೋಧಿಸುತ್ತಿದ್ದವು. ಎಲ್ಲಕ್ಕಿಂತ  ಆಗ ಕರ್ನಾಟಕದಲ್ಲಿ ಭಾರೀ ಪ್ರಭಾವಶಾಲಿಯಾಗಿದ್ದ ಕಾರ್ಮಿಕ ಚಳವಳಿಯು ದೇವರಾಜ ಅರಸು ಅವರನ್ನು ವಿರೋಧಿಸುತ್ತಿತ್ತು. ರಾಜೀನಾಮೆ ಎಂಬ ಪದ ದೇವರಾಜ ಅರಸು ಅವರನ್ನು ಕಾಡಿದಷ್ಟು ಯಾವ ರಾಜಕಾರಣಿಯನ್ನೂ ಕಾಡಿದ್ದಿಲ್ಲ.   ಇವೆಲ್ಲವನ್ನು ಎದುರಿಸಿಕೊಂಡು ದೇವರಾಜ ಅರಸರು ಕೋಮುವಾದವನ್ನು ನಿಗ್ರಹಿಸಿ, ಉಳುವವನೇ ಹೊಲದೊಡೆಯ ಎಂದು ಭೂ ಸುಧಾರಣಾ ಕಾಯ್ದೆ, ರಾಜ್ಯದ ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ (ಅಹಿಂದ) ಸಮುದಾಯಗಳಿಗೆ ಸೇರಿದ ಅನೇಕರಿಗೆ ಭೂಮಿ ದಕ್ಕುವಂತೆ ಮಾಡಿದ್ದಲ್ಲದೇ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮುಖ್ಯವಾಹಿನಿಗೆ ತರಲು ಬೇಕಾದ ಯೋಜನೆಗಳನ್ನು ರೂಪಿಸಿದರು. ಸಿದ್ದರಾಮಯ್ಯನವರು ಏನೂ ಮಾಡಿಲ್ಲವೆಂದಲ್ಲ ; ಹಾಗಂತ ಕೋಮುವಾದ, ಅಸಮಾನತೆ, ದಲಿತ ದೌರ್ಜನ್ಯಗಳನ್ನು ತಡೆಗಟ್ಟುವಲ್ಲಿ ಅವರ ಶ್ರಮ ಏನೇನೂ ಇಲ್ಲ. ಹಾಗಾಗಿ ದೇವರಾಜ ಅರಸು ಜೊತೆ ಸಿದ್ದರಾಮಯ್ಯರ ಹೋಲಿಕೆಯೇ ಸಲ್ಲ. ಹಾಗೆ ಹೋಲಿಕೆಗೆ ಅರ್ಹರಾಗದಿರುವಿಕೆಗೆ ದೇವರಾಜ ಅರಸರ ‘ಕಾಲ’ವನ್ನು ತೋರಿಸಿ ನುಣುಚಿಕೊಳ್ಳುವಂತಿಲ್ಲ.

ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯದಲ್ಲಿ ಹತ್ತಾರು ಕೋಮುಗಲಭೆಗಳು, ಗುಂಡು ಹಾರಾಟಗಳು, ಲಾಠಿಚಾರ್ಜ್ ಗಳು ನಡೆದಿವೆ. ಸಿದ್ದರಾಮಯ್ಯರ ಅವಧಿಯಲ್ಲೂ ಕೋಮುಗಲಭೆ, ಪೊಲೀಸರಿಂದ  ಮುಸ್ಲಿಂ ವ್ಯಾಪಾರಿ ಮೇಲೆ ಶೂಟೌಟ್, ಕೊಲೆಗಳು, ನೈತಿಕ ಪೊಲೀಸ್ ಗಿರಿಗಳು, ದಲಿತರ ಮೇಲಿನ ದಾಳಿ, ಹತ್ಯೆಗಳು ನಡೆದಿದೆ. ದೇವರಾಜು ಅರಸು ಕಾಲದಲ್ಲಿ ಅರಸರು ಈ ಹಿನ್ನಲೆಯಲ್ಲಿ ಭಾರೀ ಪ್ರತಿಭಟನೆಗಳನ್ನು ಎದುರಿಸಿದರು. ಸಿದ್ದರಾಮಯ್ಯರ ಕಾಲದಲ್ಲಿ ಏನೂ ಆಗಿಲ್ಲವೇನೋ ಅನ್ನುವ ರೀತಿಯ ಸಮಾಜದ ಪ್ರತಿಕ್ರಿಯೆ ಇದೆ. ಅರಸು ಕಾಲದಲ್ಲಿ ಸಿಪಿಐ, ಸಿಪಿಐಎಂ, ರೈತ ಸಂಘ, ಕನ್ನಡ ಚಳವಳಿಯ ಹತ್ತಾರು ಶಾಸಕರು, ಸಾಹಿತಿ, ಚಿಂತಕರ ಜೊತೆ ಬೀದಿಯಲ್ಲಿದ್ದರು. ಜಾತ್ಯಾತೀತ ಪಕ್ಷ, ಸಂಘಟನೆಗಳ ಸೈದ್ದಾಂತಿಕ ಹಿನ್ನಲೆಯ ಶಾಸಕರೇ ಇಲ್ಲದ ಸಿದ್ದರಾಮಯ್ಯರ ಪ್ರತಿಭಟನೆ ನಡೆಸಬೇಕಾದ ನಾಡಿನ ಸಾಕ್ಷಿ ಪ್ರಜ್ಞೆಗಳು ಸಿದ್ದರಾಮಯ್ಯರ ಮನೆಯಲ್ಲೇ ಸದಾ ಕಾಲ ಕಾಣ ಸಿಗುತ್ತಾರೆ. ದೇವರಾಜ ಅರಸುರವರಿಗೆ ಸಿದ್ದರಾಮಯ್ಯರಂತರ ‘ಅಮೃತ ಕಾಲ’ದ ಭಾಗ್ಯ ಇರಲಿಲ್ಲ. ಇಂತಹ ಅಮೃತ ಕಾಲದಲ್ಲಿ ಸಿದ್ದರಾಮಯ್ಯನವರು ದೇವರಾಜ ಅರಸುರಂತಹ ಸಾಧನೆ ಮಾಡಿದ್ದಾರೆಯೇ ? ಇಲ್ಲ ಎಂದಾದರೆ, ಅದಕ್ಕಾಗಿ ‘ಕಾಲ’ವನ್ನು ದೂರುವ ಅಗತ್ಯವಿಲ್ಲ.

ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗಿನ ಕಾಲದ ಕೆಲವು ಘಟನೆಗಳನ್ನು ನೋಡೋಣಾ. 1973 ಸೆಪ್ಟೆಂಬರ್ ತಿಂಗಳ ಸಮಯ. ಮೈಸೂರು ರಾಜ್ಯದ  ಇತಿಹಾಸದಲ್ಲೇ ಎಂದೂ ಕಾಣದಂತಹ ಒಂದು ಭಯಂಕರ ಗಲಭೆ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಇಡೀ ರಾಜ್ಯದಂತ ಕೋಮುಗಲಭೆ ಉಂಟಾಗುತ್ತದೆ. ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಕೋಮುವಿಷಜ್ವಾಲೆ ಹರಡುತ್ತಿರುತ್ತದೆ.  ನಾಗರಿಕ ಜನಜೀವನ ಅಸ್ತವ್ಯಸ್ಥಗೊಳ್ಳುತ್ತದೆ. 144 ಸೆಕ್ಷನ್ ಗಳು, ಕರ್ಫ್ಯೂಗಳು ಯಾವುದೂ ಕೂಡಾ ಕೋಮು ಗಲಭೆಯನ್ನು ತಣ್ಣಗಾಗಿಸಲು ಸಾಧ್ಯವಾಗಲಿಲ್ಲ.

ಬಹುಶಃ ಕೇವಲ ಧರ್ಮದ ಕಾರಣಕ್ಕಾಗಿ ಕೋಮುಗಲಭೆ ನಡೆದಿದ್ದರೆ ನಿಲ್ಲುತ್ತಿತ್ತೋ ಏನೋ ! ಆದರೆ  ಈ ಕೋಮುಗಲಭೆಯ ಮೂಲ ಇದ್ದಿದ್ದು ಹಸಿವಿನಲ್ಲಿ ! ರಾಜ್ಯದಲ್ಲಿನ ನಿರುದ್ಯೋಗ ಮತ್ತು ಬೆಲೆಏರಿಕೆಯನ್ನು ವಿರೋಧಿಸಿ ವಿದ್ಯಾರ್ಥಿಗಳು ಬೀದಿಗಿಳಿದಿದ್ದರು. ಮೈಸೂರು ರಾಜ್ಯ ಬಂದ್ಗೆ ವಿದ್ಯಾರ್ಥಿಗಳು ಕರೆ ಕೊಟ್ಟಿದ್ದರು. ಈ ಬಂದ್ ಗೆ ರೈತ ಸಂಘ, ಕನ್ನಡಚಳವಳಿಗಳು, ಎಡಪಂಥೀಯ ಸಂಘಟನೆಗಳು, ಪಕ್ಷಗಳು ಬೆಂಬಲ ನೀಡಿದ್ದವು. ರಾಜ್ಯದ ಎಲ್ಲಾ ಕಡೆ ಶಾಂತಿಯುತ ಪ್ರತಿಭಟನೆ ನಡೆಯುತ್ತಿತ್ತು. ಆದರೆ, ಮಂಡ್ಯದ ಮದ್ದೂರಿನಲ್ಲಿ ಮಾತ್ರ ಸಮಸ್ಯೆಯಾಯಿತು. ಮದ್ದೂರಿನಲ್ಲಿ ವಿದ್ಯಾರ್ಥಿಗಳು ಜಾಥಾ ನಡೆಸುತ್ತಿದ್ದ ವೇಳೆ ‘ಹಬೀಬ್ ಟ್ರೆಡರ್ಸ್’ ಹೆಸರಿನ ಅಂಗಡಿ ತೆರೆದಿರುವುದನ್ನು ಗಮನಿಸಿದರು. ಹಾಗಾಗಿ ವಿದ್ಯಾರ್ಥಿಯೊಬ್ಬ ಜಾಥಾದಿಂದ ನೇರ ಅಂಗಡಿಯತ್ತಾ ಹೋಗಿ, ಅಂಗಡಿ ಮಾಲೀಕನಿಗೆ ಬಂದ್ ಹಿನ್ನಲೆ ವಿವರಿಸಿ ಅಂಗಡಿಯ ಷಟರ್ ಎಳೆದನು. ಅಂಗಡಿ ಮಾಲೀಕ ಇದನ್ನು ಪ್ರತಿರೋಧಿಸಿದ್ದಲ್ಲದೇ, ತನ್ನಲ್ಲಿದ್ದ ಬಾಳೆಹಣ್ಣು  ಕೊಯ್ಯುವ ಚೂರಿಯಿಂದ ವಿದ್ಯಾರ್ಥಿಗೆ ಇರಿದನು. ವಿದ್ಯಾರ್ಥಿಯ ಸಾವು ಸಂಭವಿಸಿತು. ಇದನ್ನು ತಡೆಯಲು ಹೋದ ಇಬ್ಬರಿಗೆ ಚೂರಿ ಇರಿತವಾಯಿತು. ಒಳ್ಳೆ  ಆಶಯದ ವಿದ್ಯಾರ್ಥಿ ಹೋರಾಟವು ಕೋಮುಗಲಭೆಯಾಗಿ ಪರಿವರ್ತನೆಯಾಯಿತು.

ಹೀಗೆ  ಆರಂಭವಾದ ಕೋಮುಗಲಭೆ ಇಡೀ ರಾಜ್ಯಾದ್ಯಂತ ಪಸರಿಸಿತು. ಪೊಲೀಸರು ಲಾಠಿಚಾರ್ಜ್ ಮಾಡಿದರು. ರಾಜ್ಯದಲ್ಲಿ  ಒಟ್ಟು  231 ಮನೆಗಳಿಗೆ ಬೆಂಕಿ ಹಾಕಲಾಯಿತು. ಪೊಲೀಸರು ಅನಿವಾರ್ಯವಾಗಿ ಗುಂಡು ಹಾರಾಟ ಮಾಡಬೇಕಾಯಿತು. ಕೋಮುಗಲಭೆಯಿಂದ ತಪ್ಪಿಸಿಕೊಂಡು ಬಂದ ಹೊಟೇಲು ಸಪ್ಲೈಯರ್ ತನ್ನ ಮನೆ ಸೇರಲು ಹತ್ತಡಿ ಇರುವಾಗ ರಸ್ತೆಯಲ್ಲಿದ್ದ ಪೊಲೀಸರು ಗುಂಡು ಹಾರಿಸಿದರು. ಆತ ಸ್ಥಳದಲ್ಲೇ ಕುಸಿದು ಬಿದ್ದ. ಕುಸಿದು ಬಿದ್ದ ಮಗನನ್ನು ಕಂಡ ತಂದೆ ಓಡೋಡಿ ಬಂದು ಮಗನಿಗೆ ನೀರು ಕುಡಿಸುತ್ತಿರುವಾಗ ಪೊಲೀಸರು ತಂದೆಯ ಮೇಲೂ ಗುಂಡಿನ ದಾಳಿ ನಡೆಸಿದರು. ಅಪ್ಪ ಮಗ ಇಬ್ಬರೂ ಸಾವನ್ನಪ್ಪಿದರು. ಇದು ಕೋಮುಗಲಭೆಯನ್ನು ಹೆಚ್ಚಿಸಿದ್ದು ಮಾತ್ರವಲ್ಲ, ದೇವರಾಜ ಅರಸುರವರನ್ನು ವಿಲನ್ ಆಗಿ ಬಿಂಬಿಸಿತು.

ದೇವರಾಜ ಅರಸು ಅವರು ಈಗ ಅನಿವಾರ್ಯವಾಗಿ ಸೈನ್ಯವನ್ನು ಕರೆಸಿಕೊಳ್ಳಬೇಕಿತ್ತು. ಹಾಗಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದ ದೇವರಾಜ ಅರಸರು ‘ಮಿಲಿಟರಿ ಸಹಾಯ’ ಕೇಳಿದರು. ಈಗ ಎಲ್ಲರೂ ಸೇರಿ ದೇವರಾಜ ಅರಸರ ರಾಜೀನಾಮೆ ಕೇಳಿದರು. ಕಾನೂನು ಸುವ್ಯವಸ್ಥೆಯನ್ನು ನಿಭಾಯಿಸಲಾಗದ ಮುಖ್ಯಮಂತ್ರಿ ಎಂಬುದನ್ನು ಒಪ್ಪಿಕೊಂಡ ಬಳಿಕ ರಾಜೀನಾಮೆ ಕೊಡಲೇಬೇಕು ಎಂದು ಆಗ್ರಹಿಸಲಾಯಿತು. ಕೇಂದ್ರದ ಮಿಲಿಟರಿ ಸಹಾಯ ಕೇಳಿದ್ದಾರೆ ಎಂದರೆ ರಾಷ್ಟ್ರಪತಿ ಆಳ್ವಿಕೆಗೆ ಸೂಕ್ತ ಸಮಯ ಎಂಬ ಆಗ್ರಹಗಳು ಕೇಳಿ ಬಂತು. ಇವೆಲ್ಲವನ್ನೂ ಮೆಟ್ಟಿ ನಿಂತು ದೇವರಾಜ ಅರಸುರವರು ಕೋಮುಗಲಭೆಯನ್ನು ನಿಗ್ರಹಿಸಿ, ಮೃತರ ಕುಟುಂಬಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದರು. ಅವರು ಅವರ ಜಾತ್ಯಾತೀತ, ಕೋಮುವಿರೋಧಿ ಸಿದ್ದಾಂತದಿಂದ ಒಂದು ಹೆಜ್ಜೆಯೂ ಹಿಂದಡಿ ಇಡಲಿಲ್ಲ. ಇವೆಲ್ಲದರ ಮಧ್ಯೆ ದಲಿತ-ಹಿಂದುಳಿದ-ಅಲ್ಪಸಂಖ್ಯಾತರ ಪರ ಯೋಜನೆಗಳನ್ನು ರೂಪಿಸಿದರು. ಕೋಮುವಾದ ಎನ್ನುವುದು ಅವರಿಗೆ ನೆಪವಾಗಲಿಲ್ಲ.

ಇದಕ್ಕೂ ಮೊದಲು ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಅಂಜುಮಾನ್ ಇಸ್ಲಾಂ ಸಂಸ್ಥೆಯವರಿಗೆ ಅನುಮತಿ ನೀಡಿದ್ದರೂ ಜನಸಂಘದವರು ಅದನ್ನು ವಿರೋಧಿಸಿ ಗದ್ದಲ ಎಬ್ಬಿಸಿದರು. 1972ರ ಮಾರ್ಚ್ 17ರಂದು ಈ ಸಂಬಂಧ ಹುಬ್ಬಳ್ಳಿ ಪಾಲಿಕೆಯಲ್ಲಿ ಸಭೆ ನಡೆಯುತ್ತಿರುವಾಗ ಪಾಲಿಕೆ ಕಚೇರಿ ಎದುರು ಎರಡು ಗುಂಪುಗಳ ಜನರು ಸೇರಿದರು. ಪರಸ್ಪರ ಘೋಷಣೆ, ಕಲ್ಲು ತೂರಾಟವೂ ಆರಂಭವಾಯಿತು. ಪೊಲೀಸರು ಲಾಠಿ ಚಾರ್ಜ್ ನಡೆಸಿ ಈ ಅಕ್ರಮ ಗುಂಪನ್ನು ಚದುರಿಸಿದರು. ಆದರೆ ಅವರು ಆ ಪ್ರದೇಶದಿಂದ ಹೊರಟು ನಗರದಲ್ಲಿನ ಇತರ ಭಾಗಗಳಲ್ಲಿ ಕಲ್ಲು ತೂರಾಟ ನಡೆಸಿದರು. ಅಂದು ಸಂಜೆ 6.45 ಕ್ಕೆ ಮೈಸೂರು ಪೊಲೀಸ್ ಕಾಯ್ದೆಯ ಸೆಕ್ಷನ್ 35ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಯಿತು. ಇದು ಏಳು ದಿನಗಳ ಕಾಲ ಜಾರಿಯಲ್ಲಿದ್ದು, ನಂತರ ಮಾರ್ಚ್ 31, 1972ರವರೆಗೆ ವಿಸ್ತರಿಸಲಾಯಿತು. ಅದೇ ದಿನ ಸಂಜೆ ಸುಮಾರು 7 ಗಂಟೆಗೆ, ಜನಸಂಘದ  ಶ್ರೀಕಾಂತ್ ವಾಮನ್ ಚಿಪ್ಕರ್ ಎಂಬವರಿಗೆ ಅಪರಿಚಿತರು ಚಾಕು ಇರಿದರು. 1972ರ ಮಾರ್ಚ್ 21ರಂದು ಬೆಳಿಗ್ಗೆ 4.30 ಗಂಟೆಗೆ ಶ್ರೀಕಾಂತ್ ವಾಮನ್ ಚಿಪ್ಕರ್ ಅವರು ನಿಧನರಾದರು. ಅಂದು ಮಧ್ಯಾಹ್ನ ಸುಮಾರು 12 ಗಂಟೆಗೆ ನಗರದಲ್ಲಿನ ವಿವಿಧ ಭಾಗಗಳಲ್ಲಿ ಗುಂಪುಗಳು ಸೇರಿ ಕಲ್ಲು ತೂರಾಟ ಆರಂಭಿಸಿತು. ಪೊಲೀಸರು ಲಾಠಿ ಚಾರ್ಜ್ ನಡೆಸಿ ಈ ಗುಂಪುಗಳನ್ನು ಚದುರಿಸಿದರು. ಓಣಿಯ ಬಳಿ ಗುಂಪೊಂದು ಮಸೀದಿಗೆ ಬೆಂಕಿ ಹಚ್ಚಿತು. ಪೊಲೀಸರು ಮತ್ತು ಅಗ್ನಿಶಾಮಕ ದಳ ತಕ್ಷಣ ಸ್ಥಳಕ್ಕೆ ಬಂದು ಬೆಂಕಿಯನ್ನು ನಂದಿಸಿ ಮಸೀದಿಗೆ ಆಗುವ ಹಾನಿಯನ್ನು ತಡೆದರು. ಈದ್ಗಾ ಮೈದಾನದ ಬಳಿ ಇದ್ದ ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಲಾಯಿತು. ಈ ಘಟನೆಯಲ್ಲಿ 13 ಪೊಲೀಸ್ ಸಿಬ್ಬಂದಿಗಳು ಗಾಯಗೊಂಡರು.

ಈ ಘಟನೆಯ ಸಂಬಂಧ ಮುಖ್ಯಮಂತ್ರಿ ದೇವರಾಜ ಅರಸರು  ವಿಧಾನಸಭೆಯಲ್ಲಿ ಹೇಳಿಕೆ ನೀಡುವಾಗ ಮಧ್ಯಪ್ರವೇಶಿಸಿದ ಸಿಪಿಐ ಶಾಸಕರು ‘ಇದು ಜನಸಂಘದ ಪಿತೂರಿ ಅಲ್ಲವೇ ? ಜನಸಂಘದ ವಿರುದ್ಧ ಏನು ಕ್ರಮ ತೆಗೆದುಕೊಂಡಿದ್ದೀರಿ ಹೇಳಿ’ ಎಂದು ಪ್ರಶ್ನಿಸುತ್ತಾರೆ. ಆಗ ಭಾವುಕವಾಗಿ ಉತ್ತರಿಸಿದ ದೇವರಾಜ ಅರಸರು ‘ಜನಸಂಘವೋ, ಕಾಂಗ್ರೆಸ್ ಓ ಪಕ್ಷದವರೋ,  ಕಾಂಗ್ರೆಸ್ ಆರ್ ಪಕ್ಷದವರೋ ಗೊತ್ತಾಗ್ತಾ ಇಲ್ಲ’ ಎಂದು ಮಾರ್ಮಿಕವಾಗಿ ಬೇಸರ ವ್ಯಕ್ತಪಡಿಸಿದ್ದರು. ನಂತರ ತಕ್ಷಣ ಸಾವರಿಸಿಕೊಂಡು ‘ಮಾನ್ಯ ಶಾಸಕರು ಹೇಳಿದ್ದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇನೆ’ ಎನ್ನುವ ಮೂಲಕ ಜನಸಂಘದ ಕೋಮುವಾದವನ್ನು ನಿರ್ಲಕ್ಷಿಸುವಂತಿಲ್ಲ ಎಂಬ ಸೂಚನೆ ನೀಡಿದರು. ದೇವರಾಜ ಅರಸು ಅವರಿಗಿದ್ದ ಶತ್ರುಪಾಳಯ ಹೇಗಿತ್ತು ? ಯಾವ್ಯಾವ ಹೆಸರಿನಲ್ಲಿತ್ತು ಎನ್ನುವುದನ್ನು ಈ ಘಟನೆ ಸೂಚಿಸುತ್ತದೆ.

ಕೇವಲ ಕೋಮುಗಲಭೆಗಳು ಮಾತ್ರವಲ್ಲ, ಕಾರ್ಮಿಕ ಚಳವಳಿ ದೇವರಾಜ ಅರಸರನ್ನು ಇನ್ನಿಲ್ಲದಂತೆ ಕಾಡಿದ್ದವು. ಹೊರಗಡೆ ಬೀದಿಯಲ್ಲಿ ಕಾರ್ಮಿಕ ಚಳವಳಿ ನಡೆದರೆ, ಅದನ್ನುಪ್ರತಿನಿಧಿಸಿ ವಿಧಾನಸಭೆಯ ಒಳಗಡೆ ಸಿಪಿಐ, ಸಿಪಿಐಎಂ, ಕನ್ನಡಚಳವಳಿ, ರೈತ ಸಂಘದ ಶಾಸಕರು ಪ್ರತಿಭಟನೆ, ಸಭಾತ್ಯಾಗ ನಡೆಸುತ್ತಿದ್ದರು. ಈಗಿನಂತೆ ಬೀದಿಯಲ್ಲಿ ನಡೆಯುವ ಪ್ರತಿಭಟನೆಗೆ ಸದನದಲ್ಲಿ ಉತ್ತರ ಕೊಡದಿರುವ ಅವಕಾಶ ದೇವರಾಜ ಅರಸುಗೆ ಇರಲಿಲ್ಲ. ಕಡ್ಡಾಯವಾಗಿ ಬೀದಿ ಚಳವಳಿಗಳಿಗೆ ಸದನದಲ್ಲಿ ಉತ್ತರ ನೀಡಲೇಬೇಕಿತ್ತು.

1972 ಎಪ್ರಿಲ್ 07 ರಂದು ಎನ್.ಜಿ.ಇ.ಎಫ್ ಫ್ಯಾಕ್ಟರಿಯಲ್ಲಿ ಕಾರ್ಮಿಕರು ಪ್ರತಿಭಟನೆ ಘೋಷಿಸಿದ್ದರು. ಪ್ರತಿಭಟನೆ ಇನ್ನೂ ಆರಂಭಗೊಂಡಿರಲಿಲ್ಲ. ಇನ್ನೂ ಕೆಲಸ ಮಾಡುತ್ತಿದ್ದಾಗ ಪೋಲೀಸಿನವರು ಅಲ್ಲಿಗೆ ಪ್ರವೇಶ ಮಾಡಿ ಕಾರ್ಮಿಕರನ್ನು ಸಿಕ್ಕಾಪಟ್ಟೆ ಹೊಡೆದಿದ್ದಾರೆ. ಇದರಿಂದ ಅನೇಕರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ದೇವರಾಜ ಅರಸು ಅವರ ಸರ್ಕಾರ ಬಂದು ಆಗ ಬಹುಶಃ ಒಂದು ತಿಂಗಳಾಗಿದೆಯಷ್ಟೆ ! ಸಿಪಿಐ ಪಕ್ಷದ ಶಾಸಕರು ಈ ವಿಷಯವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸುತ್ತಾರೆ. ಮುಖ್ಯಮಂತ್ರಿಗಳು ಪೊಲೀಸರ ಮೇಲೆ ಮತ್ತು ಫ್ಯಾಕ್ಟರಿ ಮೇಲೆ  ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸುತ್ತಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮುಖ್ಯಮಂತ್ರಿಗಳು ವಿಧಾನಸಭೆಯನ್ನು ಮುಂದೂಡಿ ಆಸ್ಪತ್ರೆಗೆ ಭೇಟಿ ಕೊಟ್ಟು ಗಾಯಾಳು ಪ್ರತಿಭಟನಾಕಾರರ ಆರೋಗ್ಯ ವಿಚಾರಿಸಬೇಕು ಎಂದು ಒತ್ತಾಯಪಡಿಸುತ್ತಾರೆ. ಇದು ಗದ್ದಲಕ್ಕೆ ಕಾರಣವಾಗಿ, ಸ್ಪೀಕರ್ ಅವರು ವಿಧಾನಸಭೆಯನ್ನು ಊಟದ ವಿರಾಮಕ್ಕೆ ಮುಂದೂಡುತ್ತಾರೆ. ಊಟದ ವಿರಾಮದ ಸಮಯದಲ್ಲಿ ವಿಧಾನಸೌಧದಿಂದ ಹೊರಟ ವಾಟಾಳ್ ನಾಗರಾಜರು ಆಸ್ಪತ್ರೆಗೆ ಹೋಗಿ ಗಾಯಾಳು ಕಾರ್ಮಿಕ ಮುಖಂಡರನ್ನು ಭೇಟಿಯಾಗಿ, ಅವರ ರಕ್ತಸಿಕ್ತ ಬಟ್ಟೆಯೊಂದನ್ನು ಮಡಚಿ ಪೊಟ್ಟಣದಲ್ಲಿರಿಸಿಕೊಂಡು ಸದನದೊಳಗೆ ಬರುತ್ತಾರೆ. ಮದ್ಯಾಹ್ನದ ನಂತರ ಸಿಪಿಐ ಶಾಸಕರ ವಿಷಯವನ್ನು  ಕನ್ನಡ ಚಳವಳಿಯ  ಶಾಸಕ ವಾಟಾಳ್ ನಾಗರಾಜ್ ಕೈಗೆತ್ತಿಕೊಳ್ಳುತ್ತಾರೆ. ‘ದಯವಿಟ್ಟು ಸದನ ಮುಂದಕ್ಕೆ ಹಾಕಿ, ನಿಮ್ಮ ಪೊಲೀಸರಿಂದ ಗಾಯಗೊಂಡಿರುವ ಕಾರ್ಮಿಕ ನಾಯಕರನ್ನು ಭೇಟಿಯಾಗಿ’ ಎಂದು ಒತ್ತಾಯಿಸುತ್ತಾರೆ. ಮುಖ್ಯಮಂತ್ರಿ ದೇವರಾಜ ಅರಸರು  ಬಗ್ಗದೇ ಇದ್ದಾಗ ಪೊಟ್ಟಣ ಬಿಚ್ಚಿ, ರಕ್ತಸಿಕ್ತ ಬಟ್ಟೆಯನ್ನು ಮುಖ್ಯಮಂತ್ರಿ ದೇವರಾಜ ಅರಸರ ಮುಖಕ್ಕೆ ಬಿಸಾಡುತ್ತಾರೆ.

‘ಈ ಸರ್ಕಾರಿ ಕಾರ್ಖಾನೆಯ ಕಾರ್ಮಿಕರ ಮೇಲೆ ನಡೆಸಿದಂಥ ಹಲ್ಲೆಯ ಪರಿಣಾಮವಾಗಿಕಾರ್ಮಿಕ ನೊಬ್ಬನ ರಕ್ತದ ಕಲೆಯಿರುವ ಬಟ್ಟೆಯನ್ನು ಕೊಟ್ಟು ಹೋಗುತ್ತೇನೆ. ಇದು ಹೊಸ ಸರ್ಕಾರದ ಪ್ರಥಮ ಕೊಡುಗೆ. ಈ ರಕ್ತಪಾತದ ಬಟ್ಟೆ ನೋಡಿದರೆ ಕಣ್ಣಿನಲ್ಲಿ ರಕ್ತ ಬರುತ್ತದೆ ಮತ್ತು ಅತೀವ ದುಖಃವಾಗುತ್ತದೆ. ನನಗೆ ಅದನ್ನು ನೋಡಲು ಸಾಧ್ಯವಾಗುತ್ತಿಲ್ಲ. ನನಗೆ ಏನು ಮಾತನಾಡುವುದಕ್ಕೂ ಮನಸ್ಸು ಬರುತ್ತಾ ಇಲ್ಲ’ ಎಂದು ಹೇಳಿ ವಾಟಾಳ್ ನಾಗರಾಜ್ ಅವರು ಸಭಾತ್ಯಾಗ ಮಾಡುತ್ತಾರೆ.

ದೇವರಾಜ ಅರಸರು ಕಾರ್ಮಿಕ, ರೈತ, ಹಿಂದುಳಿದ, ದಲಿತ, ಅಲ್ಪಸಂಖ್ಯಾತರ ಪರವಾಗಿದ್ದರೂ ಅವರ  ಸುತ್ತ ಸಾಹಿತಿ-ಚಿಂತಕರು, ಜಾತ್ಯಾತೀತರ ಕೋಟೆ ಇರಲಿಲ್ಲ. ಹಾಗಾಗಿ ದೇವರಾಜ ಅರಸರನ್ನೂ, ಅವರ ಸರ್ಕಾರವನ್ನೂ ಅನುಮಾನದಿಂದಲೇ ನೋಡುತ್ತಿದ್ದರು. ಅವರ ಸಮಾಜವಾದವನ್ನು ‘ನಕಲಿ ಸಮಾಜವಾದ’ಎಂದೇ ನೇರವಾಗಿ ಟೀಕಿಸುತ್ತಿದ್ದರು.

ಕಾರ್ಮಿಕರ ಪ್ರತಿಭಟನೆಯ ವೇಳೆ  ಪೊಲೀಸರು ಫೋಮ್ ನ ಅಶ್ರುವಾಯು ಸಿಡಿಸಿದರು. ಇದರಿಂದಾಗಿ ಕಾರ್ಮಿಕರಾಗಿದ್ದ ಅಮಲನಾಥ್ ಎಂಬವರು ನಿಧನರಾದರು. ಇದನ್ನು ಸಿಪಿಐನ ಮಲ್ಲೇಶ್ವರಂ ಶಾಸಕ ಎಂ ಎಸ್ ಕೃಷ್ಣನ್ ಅವರು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದರು. ಮುಖ್ಯಮಂತ್ರಿ ದೇವರಾಜ ಅರಸರು ಅದಕ್ಕೆ ಉತ್ತರ ನೀಡುತ್ತಿದ್ದರು. ತಕ್ಷಣ ಮಧ್ಯಪ್ರವೇಶಿಸಿದ ಸಿಪಿಐ ಶಾಸಕ ಎಂ ಎಸ್ ಕೃಷ್ಣನ್  ಅವರು ‘ಮುಖ್ಯಮಂತ್ರಿಗಳೇ, ನೀವು ಪೊಲೀಸರು ಬರೆದುಕೊಟ್ಟಿದ್ದನ್ನು ಓದುವುದನ್ನು ಬಿಡಿ. ವಾಸ್ತವ ಏನೆಂದು ತಿಳಿದು ಉತ್ತರ ನೀಡಿ’ ಎಂದರು. ಪ್ರತ್ಯುತ್ತರ ನೀಡಿದ ದೇವರಾಜ ಅರಸರು ‘ನಿಮ್ಮ ಪಕ್ಷ (ಸಿಪಿಐ) ಅಧಿಕಾರಕ್ಕೆ ಬಂದಾಗ ಪೊಲೀಸ್  ಇಲಾಖೆಯನ್ನು ಇಟ್ಟುಕೊಳ್ಳಬೇಡಿ. ಇಲಾಖೆಯನ್ನು ರದ್ದು ಮಾಡಿಬಿಡಿ’ ಎಂದು ವ್ಯಂಗ್ಯವಾಗಿ ಹೇಳಿದರು. ತಕ್ಷಣ ಎದ್ದು ನಿಂತ ವಾಟಾಳ್  ನಾಗರಾಜರು ‘ಎಲ್ಲಿಯವರೆಗೆ ಸಮಾಜವಾದದ ಸುಳ್ಳು ಘೋಷಣೆ ನಡೆಯುತ್ತಿರುತ್ತದೋ ಅಲ್ಲಿಯವರೆಗೆ ನೀವೇ ಅಧಿಕಾರದಲ್ಲಿರುತ್ತೀರಿ. ಅಸಲೀ ಸಮಾಜವಾದಿಗಳು ಅಧಿಕಾರಕ್ಕೆ ಬರಲಾಗಲ್ಲ’ ಎನ್ನುತ್ತಾರೆ. ಇವೆಲ್ಲವೂ ಉದಾಹರಣೆ ಮಾತ್ರ. ಇಂತಹ ನೂರಾರು ಘಟನೆಗಳ ಸಾವಿರಾರು ಪುಟಗಳ ಪುಸ್ತಕವನ್ನೇ ಬರೆಯಬಹುದು.

ಹೀಗೆ ಒಂದು ಕಡೆ ಕೋಮುವಾದಿಗಳು, ಇನ್ನೊಂದೆಡೆ  ಕಾಂಗ್ರೆಸ್ (ಒ) ಗುಂಪು ಮತ್ತೊಂದೆಡೆ ಅತ್ಯುಗ್ರ ಸ್ವರೂಪದಲ್ಲಿದ್ದ ಕಾರ್ಮಿಕ-ಎಡ-ದಲಿತ ಚಳವಳಿಗಳನ್ನು ದೇವರಾಜ ಅರಸರು ಎದುರಿಸಬೇಕಿತ್ತು. ಅದಲ್ಲದೆ, ದೇವರಾಜ ಅರಸರ ಕಾಲದಲ್ಲಿ ಪ್ರತಿಪಕ್ಷದ ನಾಯಕರಾಗಿದ್ದವರು ಎಸ್ ಬಂಗಾರಪ್ಪ ಎಂಬ ಬೆಂಕಿ ಚೆಂಡು. ಅರಸರು ಕೂತರೂ, ನಿಂತರೂ ಸೈದ್ದಾಂತಿಕ ಸ್ಪಷ್ಟತೆಯಿಂದ ವಿರೋಧಿಸುವ ಬಂಗಾರಪ್ಪರಂತಹ ಇನ್ನೊಬ್ಬ ವಿರೋಧ ಪಕ್ಷದ ನಾಯಕನನ್ನು ರಾಜ್ಯ ಕಂಡಿಲ್ಲ. ಬಂಗಾರಪ್ಪ ಮತ್ತು ದೇವರಾಜ ಅರಸು ಅವರು ಸದನದಲ್ಲಿ ನಡೆಸಿದ ಸಂಘರ್ಷಗಳನ್ನು ಓದುವಾಗಲೇ ನಾವು ದಂಗಾಗಿ ಹೋಗುತ್ತೇವೆ. ಬಂಗಾರಪ್ಪ, ಹೆಚ್ ಡಿ ದೇವೇಗೌಡ, ಸಿಪಿಐ, ಸಿಪಿಐಎಂ, ಕನ್ನಡ ಚಳವಳಿ, ರೈತ ಸಂಘದ ಘಟಾನುಘಟಿ ಶಾಸಕ ವಿರೋಧಗಳ ಮಧ್ಯೆ ಅವರೆಲ್ಲರೂ ಒಪ್ಪುವ ದಲಿತ-ಹಿಂದುಳಿದ-ಅಲ್ಪಸಂಖ್ಯಾತ ಪರವಾಗಿನ ಯೋಜನೆಗಳನ್ನು ಜಾರಿಗೆ ತರಬೇಕಿತ್ತು. ಇಂತಹ ಪರಿಸ್ಥಿತಿಯನ್ನು ಸಿದ್ದರಾಮಯ್ಯ ಎದುರಿಸಿದ್ದಾರೆಯೇ ?

ಸಿದ್ದರಾಮಯ್ಯರಿಗೆ ಈ ಸಮಾಜದ ಪ್ರಜ್ಞಾವಂತರು, ಸಾಹಿತಿ, ಚಿಂತಕರು, ಜಾತ್ಯಾತೀತ ಪಕ್ಷಗಳು, ರೈತ-ಕನ್ನಡ ಸಂಘಟನೆಗಳು, ಜಾತಿ ಎಲ್ಲಾ ಬೆಂಬಲ ಇದ್ದು ಅವರಿಗೊಂದು ‘ಕಂಪರ್ಟ್ ಝೋನ್’ ಸೃಷ್ಟಿಸಿಕೊಟ್ಟಿದೆ. ಕೋಮುವಾದವನ್ನು ಏಕಾಂಗಿಗೊಳಿಸಿ ಸಿದ್ದರಾಮಯ್ಯರಿಗೆ ಬಲ ತುಂಬಿದರೂ ಬಹುಸಂಖ್ಯಾತ ದಲಿತ-ಅಲ್ಪಸಂಖ್ಯಾತ-ಹಿಂದುಳಿದವರ ಪರ ಕೆಲಸ ಮಾಡಲಾಗುತ್ತಿಲ್ಲ ಎಂದರೆ ಅದು ವೈಫಲ್ಯವಲ್ಲದೇ ಇನ್ನೇನೂ  ಅಲ್ಲ. ಈ ವೈಫಲ್ಯವನ್ನು ‘ಕಾಲ’ದಲ್ಲಿ ಮರೆಮಾಚುವಂತಿಲ್ಲ. ದೇವರಾಜ ಅರಸರ ಸಂಕಟದ ಕಾಲವನ್ನು ಸಿದ್ದರಾಮಯ್ಯನವರ ಕಂಫರ್ಟ್ ಝೋನ್ ಗೆ ಹೋಲಿಸುವುದೇ ವಾಸ್ತವವನ್ನು ದಾರಿ ತಪ್ಪಿಸುವ ಪ್ರಕ್ರಿಯೆಯಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page