Monday, June 17, 2024

ಸತ್ಯ | ನ್ಯಾಯ |ಧರ್ಮ

ದೇವರು ಕೊಟ್ಟಿದ್ ಬ್ಯಾಡ ಅನ್ನಕೆ ನಾವ್ಯಾರು..

ಇದುವರೆಗೆ…
ಗಂಗೆಯ ಅಣ್ಣಂದಿರಾದ ಚಂದ್ರಹಾಸ ಮತ್ತು ಗಿರೀಶ ಮೋಹನನ ಮನೆ ನೋಡಲು ಅವನ ಊರಿಗೆ ಹೋಗುತ್ತಾರೆ. ಮೊದಲೇ ಯೋಚನೆ ಮಾಡಿಕೊಂಡಂತೆ ಅಲ್ಲಿ ಮೋಹನ ತನ್ನದೆಂದು ವಿಶಾಲವಾದ ತೋಟ, ಹೊಲ, ರಾಶಿ ರಾಶಿ ಫಸಲುಗಳನ್ನು ತೋರಿಸುತ್ತಾನೆ. ಖುಷಿಯಾದ ಅಣ್ಣಂದಿರು ಮದುವೆಯ ಮಾತುಕತೆ ನಡೆಸಿ ವಾಪಾಸಾಗುತ್ತಾರೆ. ಗಂಗೆಯ ಮದುವೆ ನಡೆಯಿತೇ? ಓದಿ.. ವಾಣಿ ಸತೀಶ್‌ ಅವರ ತಂತಿ ಮೇಲಣ ಹೆಜ್ಜೆ -೩

 ವಾತಾ, ಪಿತ್ತ, ನೆಗಡಿ, ಕೆಮ್ಮು, ಹುಣ್ಣು, ಉಳುಕು ಹೀಗೆ ನಾನಾ ತರದ ಸಮಸ್ಯೆಗಳಿಗೆಲ್ಲಾ ನಾಟಿ ಮದ್ದು ಮಾಡುವುದರಲ್ಲಿ ನಿಸ್ಸೀಮನಾಗಿದ್ದ ಅಪ್ಪ, ಅಂದು ಬೆಳಬೆಳಗ್ಗೆಯೇ ಆಮಶಂಕೆ ಹಿಡಿದು ಮನೆಗೆ ಓಡಿ ಬಂದಿದ್ದ ಕೆಂಚನಿಗೆ ಮದ್ದರೆಯುವುದರಲ್ಲಿ ಮುಳುಗಿ ಹೋಗಿದ್ದ. ಗಂಟಲು ಸರಿಪಡಿಸಿಕೊಳ್ಳುವಂತೆ ಸದ್ದು ಮಾಡಿ ಅಪ್ಪನ ಗಮನ ಸೆಳೆದ ಚಂದ್ರಹಾಸ ಗಿರಿಧರರಿಬ್ಬರೂ ಮೋಹನನ ಆಸ್ತಿ, ಅಂತಸ್ತು, ರಾಶಿ ಬೀಳುವ ಫಸಲುಗಳ ಬಗ್ಗೆ ಹಾಡಿ ಹೊಗಳ ತೊಡಗಿದರು. ಅಪ್ಪ ಅದ್ಯಾವುದಕ್ಕೂ ಕ್ಯಾರೆ ಕೆತ್ತೆ ಅನ್ನುವ ಲಕ್ಷಣ ಕಾಣಲಿಲ್ಲ. ಕೊನೆಗೆ ಗಿರಿಧರ “ನೋಡಪ್ಪ ನಾವಿರೋ ಈ ಪರಿಸ್ಥಿತಿಲಿ ಹುಡುಗನಿಗೆ ವರದಕ್ಷಿಣೆ ಕೊಟ್ಟು, ಮೈತುಂಬ ಬಂಗಾರ ಹಾಕಿ, ಸಾಲ ಸೋಲ ಮಾಡಿ ಮದುವೆ ಮಾಡಕಾಯ್ತದ ಯೋಚನೆ ಮಾಡು. ನಮ್ ಗಂಗೆ ಅದೃಷ್ಟವೋ ಇಲ್ಲ ನಮ್ಮ ಅದೃಷ್ಟವೋ ಚಿನ್ನದಂತ ಹುಡುಗ ತಾನೇ ಹುಡುಕೊಂಡು ನಮ್ಮ್ ಮನೆ ಬಾಗಿಲಿಗೆ ಬಂದು,  ದೇವಸ್ಥಾನದಲ್ಲಿ ಮದುವೆ ಮಾಡಿಕೊಡಿ ಸಾಕು ಅಂತಾವ್ನೆ. ಇಂಥ ಹೊತ್ನಲ್ಲಿ ಕಣ್ಣು ಮುಚ್ಚ್ಕೊಂಡು ಕೂತ್ಕೊಂಡ್ರೆ ನಷ್ಟ ಅನುಭವಿಸೋರು ನಾವು. ನಷ್ಟ…!? ಅನ್ನುವ ಮಾತು ಕೇಳಿ ಕಣ್ಣು ಕೆಕ್ಕರಿಸಿದ ಅಪ್ಪ ನಡುವೆ ಬಾಯಿ ಹಾಕಿ “ಬಂಚತ್  ಮುಚ್ಚೋ ಬಾಯಿ. ಇದು ಲಾಭ ನಷ್ಟದ ಮಾತಾಡೋ ವಿಚಾರವೆನ್ಲಾ. ಒಂದ್ ಹೆಣ್ಮಗಿನ್ ಜೀವನುದ್ ಪ್ರಶ್ನೆ. ಹಗಲು ರಾತ್ರಿ ಕಣ್ಣಿಗೆ ಎಣ್ಣೆ ಬುಟ್ಕೊಂಡು ಅಷ್ಟೋ ಇಷ್ಟೋ ಆಸ್ತಿ ಮಾಡಿಟ್ಟಿದ್ದೀನಿ. ನೀವಂತೂ ಗೇಯ್ದು ಉಣ್ಣೊ ಕುಳ ಅಲ್ಲ. ಹೆಸ್ರಿಗೆ ಆರ್ ಜನ ಗಂಡು ಮಕ್ಕಳು, ಏನ್ ಕಡ್ದು ಕಟ್ಟೆ ಹಾಕಿದ್ದೀರಿ ಹೇಳು. ನನ್ನೊಬ್ಬನ ಕೈ ದುಡಿಮೆ, ತಿನ್ನೋದು ಮಾತ್ರ ಹದ್ನಾರು ಬಾಯಿ. ಬಡತನ ಬರದೆ ಸಿರಿತನ ಬತ್ತದ ಮೈಗಳ್ಳ್ ನನ್ನಮಕ್ಳಾ. ಅವಳೇನು ನಿಮ್ಮ ಎದೆ ಮೇಲ್ ಕೂತವ್ಳಾ. ನಿಂತ್ಕಾಲ್ ಮೇಲೆ ಅವಳ ಮದುವೆ ಮಾಡಬೇಕು ಅಂತ ಯಾಕೆ ಕುಣಿತಿದಿರಿ. ನಿಧಾನವಾಗೆ ಆಗ್ಲಿ.. ಪರವಾಗಿಲ್ಲ ಒಂದಿಷ್ಟು ಜಮೀನ್ ಮಾರಾದ್ರೂ ಸರಿ, ಒಳ್ಳೆ ಸಂಬಂಧಕ್ಕೆ ಕೊಟ್ಟು ಅವಳ ಮದುವೆ ಮಾಡ್ತೀನಿ… ಅವನ್ಯಾವ ಸೀಮೆ ಗಂಡ್ಸಯ್ಯ?  ಅವ್ವ ಅಪ್ಪ ಹೋಗ್ಲಿ ಯಾರಾದ್ರು ಸಂಬಂಧಿಕ್ರುನ್ನಾದ್ರು  ಕರ್ಕೊಂಡ್ ಬಾ ಅಂದ್ರೆ ಅದಕ್ಕೂ ತಯಾರಿಲ್ಲ. ಅಂತದ್ರಲ್ಲಿ ಯಾವ ನಂಬ್ಕೆ ಇಟ್ಟು ನನ್ನ ಮಗಳನ್ನ ಅವನಿಗೆ ಕಟ್ಲಿ ? ಬೋಳಿ ಮಕ್ಳಾ ಇನ್ನೊಂದ್ಸರಿ ಅವಳ ಮದುವೆ ಮಾತೆತ್ತಬೇಡಿ” ಎಂದು ಗರ ಗರನೆ ಮದ್ದರೆಯ ತೊಡಗಿದ. “ಜಮೀನು ಮಾರಿಯಾದರು…” ಅನ್ನುವ ಮಾತು ಚಂದ್ರಹಾಸನ ಎದೆಗೆ ಕೊಳ್ಳಿ ತಾಕಿಸಿದಂತಾಯಿತು. ಬರುವ ಕೋಪವನ್ನು ಹಲ್ಲು ಕಚ್ಚಿ ತಡೆದುಕೊಳ್ಳುತ್ತಾ “ನೋಡಪ್ಪ ಆ ಹುಡುಗನಿಗೆ ಮಾತು ಕೊಟ್ಟು ಬಂದಿದ್ದೀವಿ. ಇನ್ನು ಒಂದು ತಿಂಗಳಲ್ಲಿ ಅವನು ಮದುವೆ ಮಾಡ್ಕೊಂಡು, ಹೆಂಡ್ತಿ ಸಮೇತ ಪೂನಾಕ್ಕೋಗ್ಬೇಕು. ಮಸೂರ ಹಾಕಿ ಹುಡುಕಿದ್ರೂ ಇವತ್ತು  ಕೆಲಸದಲ್ಲಿರೋ ಹುಡುಗನ್ನ ಹುಡ್ಕಾಕಾಯ್ತದ ನಮ್ಮ ಕೈಲಿ ಹೇಳು. ಅಣ್ಣಂದಿರಾಗಿ ನಮಗೂ ಜವಾಬ್ದಾರಿ ಅಂತ ಇರೋ ಹೊತ್ತಿಗೆ ತಾನೆ, ಆ ಹುಡುಗುನ ಮನೆ ಮಠ  ನೋಡ್ಕೊಂಡು ಬಂದಿದ್ದು. ಒಳ್ಳೆ ಆಸ್ತಿವಂತ್ರು ಮನೆ ಹುಡುಗ, ನಾಳೆ  ಕೆಲ್ಸ ಹೋಯ್ತು ಅಂದ್ರು ದುಡ್ಕೊಂಡು ತಿನ್ನಕೆ ಊರು ತುಂಬಾ ಆಸ್ತಿ ಐತೆ. ನೆರಳಿಗೆ ತಮ್ಮದೇ ಸೂರ್ ಐತೆ. ಇದಕ್ಕಿಂತ ಇನ್ನ ಏನ್ ಬೇಕು. ಸಿರಿ ಬಂದಾಗ ಕಣ್ ಮುಚ್ಕೊಂಡು ಕೂತ್ರು ಅನ್ನೊಹಂಗೆ ಆಗದ್ ಬ್ಯಾಡ. ರಿಜಿಸ್ಟ್ರು ಮದುವೆ ಮಾಡನ. ನಾಳೆ ಹೆಚ್ಚು ಕಮ್ಮಿ ಆದ್ರು ಕೇಳಕೆ ಕಾನೂನಿರ್ತದೆ. ಅವ್ನುಗೂ ಒಂದು ಭಯ ಇರ್ತದೆ” ಎಂದು ಹೇಳಿ ಅಪ್ಪನ ಮುಖ ನೋಡಿದ. ಇವರ ಯಾವ ಮಾತಿಗೂ ಸೊಪ್ಪು ಹಾಕದ ಅಪ್ಪ, “ಹಕ್ಕಿನ್ ಸಾಕಿ ಬೆಕ್ಕಿನ ಕೈಗೆ ಕೊಡಕ್ಕೆ ನಾನ್ ಸುತ್ರಾಮ್ ತಯಾರಿಲ್ಲ. ಅವ್ವ ಗಂಗಾ ಈ ಔಸ್ತಿ ತೇದು ಬಾಟ್ಲಿಗೆ ತುಂಬ್ಸು. ಹಂಗೆ ಆ ಕೆಂಚ ಬಂದ್ರೆ ಕೊಟ್ಕಳ್ಸು” ಎಂದು ಹೇಳಿ ಬೆನ್ನಿಗೆ ಗುದ್ದಲಿ ಹಾಕಿಕೊಂಡು ಹೊಲದ ಕಡೆ ಹೊರಟ. ಚಂದ್ರಹಾಸನ ತಾಳ್ಮೆಯ ಕಟ್ಟೆ ಒಡೆಯಿತು. ಅಪ್ಪನ ದಾರಿಗೆ ಅಡ್ಡಲಾಗಿ ನಿಂತು ಅಪ್ಪನನ್ನು ನೂಕಾಡುತ್ತಾ  ಕೂಗಾಡತೊಡಗಿದ. ಅಡಿಗೆ ಕೋಣೆಯಲ್ಲಿದ್ದ ಅವ್ವ, ಗಂಗೆ, ಚಂದ್ರಹಾಸನ ಹೆಂಡತಿ ಯಶೋಧೆ ತಡಬಡಾಯಿಸಿ ಹೊರಗೋಡಿ ಬಂದು, ಅಪ್ಪನ ಕೊರಳ ಪಟ್ಟಿಗೆ ಕೈ ಹಾಕಿ ನಿಂತ ಚಂದ್ರಹಾಸನನ್ನು ಒಳಕೋಣೆಗೆ ಎಳೆದುಕೊಂಡು ಹೋದರು.

ಯಾರೊಂದಿಗೂ ಹೆಚ್ಚು ಮಾತಾಡದ, ಯಾರನ್ನೂ ನೋಯಿಸಲು ಇಚ್ಚಿಸದ ಅಪ್ಪ, ಮಗನ ದಾಳಿಗೆ ತತ್ತರಿಸಿ ಹೋದ. ಗಂಡು ಮಕ್ಕಳೆಂದು ತಲೆ ಮೇಲೆ ಹೊತ್ತು ಮಕ್ಕಳನ್ನು ಹಾಳುಗೆಡವಿದ್ದ ಹೆಂಡತಿ ಸಾಕಿಯ ಬಗ್ಗೆ ಅಪ್ಪನಿಗೆ ಅಸಹ್ಯ ಎನ್ನಿಸಿತು. ಮಾತಿಗೆ ಮಾತು ತಾಗಿಸಿ ಇನ್ನಷ್ಟು ಬೆಂದು ಹೋಗಲು ಇಚ್ಚಿಸದೆ ಏನೊಂದು ಮಾತಾಡದೆ ಹೊಲದ ಗುಡಿಸಲು ಸೇರಿಕೊಂಡ. ಅಪ್ಪ ತನ್ನ ಮನಸ್ಸಿಗೆ ಘಾಸಿಯಾದಾಗಲೆಲ್ಲಾ  ಹೊಲದ ಗುಡಿಸಲು ಸೇರಿ ಒಂದಷ್ಟು ದಿನ  ಒಂಟಿಯಾಗಿದ್ದು ಬಿಡುತ್ತಿದ್ದುದು ಮಾಮೂಲಾಗಿತ್ತು.

ಅಪ್ಪ ಹೀಗೆ ಹೊಲ ಸೇರಿದಾಗೆಲ್ಲಾ ಗಂಗೆಗೆ ಹಿಂದೆ ನಡೆದ ಒಂದು  ಘಟನೆ ಧುತ್ತನೆ ಕಣ್ಮುಂದೆ ಬಂದು ಹೋಗಿ ಬಿಡುತ್ತಿತ್ತು.  ಬಹುಶಃ ಗಂಗೆಗೆ ಆಗ ಹದಿನಾಲ್ಕೊ ಹದಿನೈದೋ ವರ್ಷವಿರಬೇಕು. ಅವ್ವನಿಗೆ ಮಕ್ಕಳ ಮೇಲೆ ಮಕ್ಕಳು ಹುಟ್ಟುತ್ತಲೇ ಇದ್ದವು. ಹೆತ್ತ ಏಳು ಮಕ್ಕಳಲ್ಲದೆ ದತ್ತು ಮಗಳು ಲಕ್ಷ್ಮಿಯೂ  ಸೇರಿ ಒಟ್ಟು ಎಂಟು ಮಕ್ಕಳಿದ್ದ ದೊಡ್ಡ ಕುಟುಂಬವಾಗಿತ್ತದು. ಅಪ್ಪನಿಗೆ ದೊಡ್ಡ ಕುಟುಂಬದ ಜವಾಬ್ದಾರಿ ತೂಗಿಸುವುದೇನು ಸುಲಭದ ಮಾತಾಗಿರಲಿಲ್ಲ. ಪ್ರತೀ ದಿನವು ಅಪ್ಪನದು ಒಂದೇ ರಾಗ “ಮಕ್ಳು ಸಾಕಿನ್ನು ಆಪ್ರೇಶನ್ ಮಾಡುಸ್ಕೋ ಸಾಕಿ”…. ಹುಹೂಂ ಅವ್ವನದು ಒಂದೇ ಹಠ “ದೇವ್ರು ಕೊಟ್ಟಿದ್ ಬ್ಯಾಡ ಅನ್ನಕ್ಕೆ ನಾವ್ಯಾರು ಸುಮ್ಮನೆ ಬಾಯಿ ಮುಚ್ಕೊಂಡು ಹೋಗು ಗೌಡ”.  ಹೀಗೆ ಇಬ್ಬರ ನಡುವೆ ಸದಾ  ಜಟಾಪಟಿ ನಡೆಯುತ್ತಲೇ ಇತ್ತು. ಹೀಗೆ ಒಂದು ಸಾರಿ ಅಪ್ಪನಂತೆಯೇ ಹೆಂಡತಿಯರನ್ನು ಒಪ್ಪಿಸಲಾರದೆ ರೋಸಿಹೋದ ಊರಿನ ಕೆಲವು ಗಂಡಸರು ಮಾತಾಡಿಕೊಂಡು ಒಗ್ಗಟ್ಟಾಗಿ ಮಾದಲಾಪುರದ ಗೌರ್ಮೆಂಟ್ ಆಸ್ಪತ್ರೆಗೆ ಹೋಗಿ, ತಾವೇ ಮಕ್ಕಳಾಗದಂತೆ ಆಪರೇಷನ್ ಮಾಡಿಸಿಕೊಂಡು ಮನೆಗೆ ಬಂದರು. ಬಾಗಿಲಲ್ಲೇ ಗಂಗೆಯೊಂದಿಗೆ ಕುಳಿತಿದ್ದ ಅವ್ವ “ಅಲ್ಲ ಬೆಳಗಿನಿಂದ ಒಂದು ಮಾತ್ನು ಹೇಳ್ದಂಗೆ ಎಲ್ಲೊಂಟು ಹೋಗಿದ್ರಿ” ಎಂದು ಕೇಳಿದಳು. ಅಪ್ಪ ತನ್ನ ಕೈ ಚೀಲವನ್ನು ಹೆಂಡತಿಗೆ ಕೊಡುತ್ತಾ “ನೋಡು ಇದ್ರಲ್ಲಿ ಆಸ್ಪತ್ರೆಲಿ ಆರೈಕೆಗೆ ಅಂತ ಕೊಟ್ಟ ಬೆಣ್ಣೆ, ಮೊಟ್ಟೆ, ಜ್ವಾಳ, ಕಾಳು, ಕಡ್ಡಿ, ಹಣ್ಣು ಅಂಪ್ಲವೆ. ಮಕ್ಳುಗು ನನಗೂ ಅಚ್ಚ್ಕಟ್ಟಾಗಿ ಮಾಡಾಕು” ಅಂದ. ಅರ್ಥವಾಗದ ಅವ್ವ ಅಪ್ಪನ ಮುಖ ನೋಡಿದಳು. ಅಪ್ಪ ತನ್ನ ಆಪರೇಷನ್ ವಿಷಯವನ್ನು  ತಿಳಿಸಿದ್ದೇ ತಡ ಅವ್ವ ಚಂಡಿ ಚಾಮುಂಡಿಯಾದಳು.  “ಅಯ್ಯೋ ನಿನ್ ಮನೆ ಕಾಯೋಗ..  ಹೊರೋಳ್ ನಾನು ಹೆರೋಳ್ ನಾನು ನಿನಗೇನಯ್ಯ ಬಂದಿತ್ತು ದೊಡ್ಡ್ರೋಗ” ಎಂದು ದೊಡ್ಡ ರಂಪ ರಾಮಾಯಣವನ್ನೇ ಮಾಡಿ, ಒಂದು ಗುಟುಕು ನೀರನ್ನೂ ಕೊಡದೇ ಅಪ್ಪನನ್ನು ಮನೆಯಿಂದ ಹೊರಗಟ್ಟಿದಳು. ಅಂದಿನಿಂದ ಅಪ್ಪ ಒಂದಷ್ಟು ತಿಂಗಳುಗಳ ಕಾಲ, ಅವ್ವನ ಹೊಟ್ಟೆಯುರಿ ತಣ್ಣಗಾಗುವವರೆಗೂ ಇದೇ ಹೊಲದ ಗುಡಿಸಲಿನಲ್ಲಿ ವಾಸ್ತವ್ಯ ಹೂಡುವಂತಾಯಿತು. ಕಣ್ಣ ಮುಂದೆಯೇ ನಡೆದ ಈ ಜಗಳದ ಒಳ ಮರ್ಮ ಅರ್ಥವಾಗದ ಗಂಗೆ, ಕುತೂಹಲ ತಾಳಲಾರದೆ ಆಚೆ ಮನೆಯ ತನ್ನ ಸೋದರ ಅತ್ತೆಯೊಂದಿಗೆ ಅದರ ವಿವರಣೆ ತಿಳಿದು ತುಸು ಸಂಕೋಚದಿಂದಲೇ ಮನೆ ಸೇರಿದ್ದಳು. ಈಗಲೂ ಗಂಗೆಗೆ ಹೊಲದ ಮನೆ ಎಂದರೆ ಸಾಕು ಆಪರೇಶನ್ ಮಾಡಿಸಿಕೊಂಡು ಬಾಡಿದ ಮೋರೆ ಹೊತ್ತು ಕಾಲೆಳೆಯುತ್ತಾ ನಡೆದು ಬಂದ ಅಪ್ಪನ ಚಿತ್ರ, ಹುಲಿಯಂತೆ ದಾಳಿ ನಡೆಸಿ ಅಪ್ಪನನ್ನು ತಲೆ ಎತ್ತದಂತೆ ಮಾಡಿ ಹೊಲದ ಮನೆಗಟ್ಟಿದ ಅವ್ವನ ರೌದ್ರ ಅವತಾರದ ಚಿತ್ರವೇ  ನೆನಪಾಗುತ್ತದೆ.

ಇಂದು ಕೂಡ ಅಣ್ಣನ ದಾಳಿಯನ್ನು ಮನಸ್ಸಿಗೆ ಹಚ್ಚಿಕೊಂಡ ಅಪ್ಪ ಹದಿನೈದು ದಿನವಾದರೂ  ಮನೆಯ ಕಡೆ ತಲೆ ಹಾಕಲೇ ಇಲ್ಲ. ಸದಾ ಅಪ್ಪನನ್ನು ನೆನೆದು ಸಂಕಟ ಪಡುತ್ತಿದ್ದವಳೆಂದರೆ ಗಂಗೆ ಮಾತ್ರ. ಪರಸ್ಪರ ಬೆಟ್ಟದಷ್ಟು ಪ್ರೀತಿ ಹೊತ್ತಿದ್ದ ಅಪ್ಪ ಮಗಳಿಬ್ಬರೂ ಒಂದು ದಿನವೂ ಅದನ್ನು ಮುಖತಃ ವ್ಯಕ್ತಪಡಿಸಿಕೊಳ್ಳುವುದಿರಲಿ ಮುಖಕ್ಕೆ ಮುಖ ಕೊಟ್ಟು ಒಮ್ಮೆಯೂ ಮಾತಾಡಿ ಕೊಂಡವರಲ್ಲ. ಅಪ್ಪ ಅಂದರೆ ಒಂದು ರೀತಿ ಸಂಕೋಚ, ಅಂಜಿಕೆ. ಒಂದು ಮಾತಾಡಿದರೂ ಎಲ್ಲಿ ಜಾಸ್ತಿ ಆದೀತು ಎನ್ನುವ ಭಯ. ಇಷ್ಟಿದ್ದರೂ ಅವಳು ಸದಾ ಅಪ್ಪನ ಧ್ಯಾನಿ. ಮನೆಯವರೆಲ್ಲಾ ಅಪ್ಪನನ್ನು ಕಡೆಗಣಿಸಿ ನೋಡುತ್ತಿದ್ದುದನ್ನಂತೂ ಇವಳ ಕೈಲಿ ಸಹಿಸಲು ಸಾಧ್ಯವೇ ಆಗುತ್ತಿರಲಿಲ್ಲ. ಆ ಗಂಡು ಸಂತತಿಯೊಳಗೆ ತನ್ನ ಮಾತಿಗಾಗಲಿ, ಭಾವನೆಗಳಿಗಾಗಲಿ ಯಾವುದೇ ಬೆಲೆ ಇಲ್ಲ ಎಂಬುದು ಅವಳಿಗೆ ಅರ್ಥವಾಗಿತ್ತು. ಹಾಗಾಗಿ ಆದಷ್ಟು ತೆಪ್ಪಗಿರುವುದನ್ನು ರೂಢಿಸಿಕೊಂಡಿದ್ದಳು.

ಪ್ರತಿದಿನ ಅಪ್ಪನಿಗಾಗಿ ಊಟ ಕಟ್ಟಿಕೊಂಡು ಹೊಲದ ಗುಡಿಸಲಿಗೆ ಹೋಗೋದು ಅಲ್ಲಿ ಅಪ್ಪನಿಂದ “ಬಂಚತ್ ನನಗೆ ಆ ಮನೆ ಊಟ ತರಬೇಡ ಅಂತ ಎಷ್ಟ್ಸಾರಿ ಹೇಳೋದು ನಡಿ ಇಲ್ಲಿಂದ” ಅಂತ ಬೈಸಿಕೊಂಡು ವಾಪಸ್ ಬರೋದು ಗಂಗೆಯ ಪ್ರತಿದಿನದ ಕಾಯಕವಾಗಿತ್ತು. ಈ ಹದಿನೈದು ದಿನದಿಂದ ಅಪ್ಪ ನಾರಿಪುರದ ಅಬ್ದುಲ್ಲನ ಹೊಟೇಲಿನಲ್ಲಿ ಲೆಕ್ಕ ಬರೆಸಿ ಒಪ್ಪತ್ತು ಮಾತ್ರ ಉಂಡು ಬರುತ್ತಿದ್ದನು. ಇದನ್ನು ನೋಡಲಾರದ ಗಂಗೆ ಧೈರ್ಯ ಮಾಡಿ ಒಂದು ದಿನ ಅಪ್ಪನ ಮುಂದೆ ಮಾತಿಗೆ ಕುಳಿತಳು. “ಅಪ್ಪ ನಾನು ಹಿಂಗಂತೀನಿ ಅಂತ ತಪ್ಪು ತಿಳಿಬೇಡಿ. ನಾನು ಮಾತಾಡದೆ ಇದ್ರೆ ನೀವು ನರಳೋದು ತಪ್ಪದಿಲ್ಲ. ನೋಡ್ರಪ್ಪ  ಇವರೆಲ್ಲರ ಜೊತೆ ಎಣಗಾಡಿ ಎಣಗಾಡೇ ನಿಮ್ಮ ಆಯಸ್ಸ್  ಕಳ್ದೋಯ್ತು. ಈ ಇಳಿ ವಯಸ್ನಲ್ಲಿ ನೀವ್ ಯಾಕೆ ಅಣ್ಣಂದಿರಿಗೆ ನಿಷ್ಟೂರಾಯ್ತಿರಿ. ಏನಾದ್ರು ಆದ್ರೆ ಅವಮಾನ ಬವುಮಾನ ಒತ್ಕೊಳ್ಳೋರು ಅವರು. ನಾಳೆ ಕರ್ದು ಕಳ್ಸಕೆ ಅಣ್ಣ ತಮ್ಮಂದಿರು ಬೇಕು. ನೀವು ಮದುವೆಗೆ ಒಪ್ಕೊಳ್ಳಿ ಅದೇನ್ ಮಾಡ್ತಾರೋ ಮಾಡ್ಲಿ. ನನ್ ಮಗಳು ಮದುವೆ ಆಗೋ ಆಸೆಗೆ ಹಿಂಗ್ ಅಂತವ್ಳೆ ಅನ್ಕೋಬೇಡಿ. ನಾನಿರೋ ತನಕ ಇವರಿಗೆಲ್ಲಾ ಭಾರವೆಯ. ಗಿರಿಧರಣ್ಣನು ನನ್ನ ಮದುವೆ ಆಗಲಿ ಅಂತ ತನ್ನ್ ಮದುವೆ ಮುಂದಕ್ ಹಾಕ್ಕೊಂಡು ಕೂತವ್ನೆ. ಈ ಪಡಿಪಾಟ್ಲೆಲ್ಲಾ ಯಾಕ್ ಬೇಕು ಹೇಳಿ ಎಂದು ಅಪ್ಪನ ಮುಖ ನೋಡಿದಳು. ಕಣ್ಣಲ್ಲಿ ಉಕ್ಕುತ್ತಿದ್ದ ನೀರು ಮಗಳಿಗೆ ಕಾಣಿಸಬಾರದೆಂದು ತಲೆತಗ್ಗಿಸಿ ಕುಳಿತಿದ್ದ ಅಪ್ಪ ಅವಳು ಮರೆಯಾಗುವವರೆಗೂ ತಲೆ ಎತ್ತಿ ನೋಡಲೇ ಇಲ್ಲ.

(ಮುಂದುವರೆಯುವುದು)

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು