Friday, June 14, 2024

ಸತ್ಯ | ನ್ಯಾಯ |ಧರ್ಮ

ದೇವತೆಯಂಥ ಹುಡುಗಿಯ ದಾರುಣ ವರ್ತನೆ!

(ಈ ವರೆಗೆ…)

ಚಿನಕುರುಳಿಯಂತೆ ಇದ್ದ ಲಕ್ಷ್ಮಿಯ ಆರೋಗ್ಯ ಒಮ್ಮಿಂದೊಮ್ಮೆಯೇ ಹದಗೆಡುತ್ತದೆ. ವೈದ್ಯರಿಗೆ ಇದೊಂದು ಸವಾಲಾಗುತ್ತದೆ. ಕಂಡ ಕಂಡ ಪರಿಹಾರಗಳನ್ನು ತಮ್ಮ ಮುದ್ದಿನ ಮಗಳಿಗಾಗಿ ಅಪ್ಪ ಅಮ್ಮ ಮಾಡುತ್ತಾರೆ. ಮನೆಗೆ ಹಿಂದಿರುಗುವ ಹಾದಿಯಲ್ಲಿ ಮಸೀದಿಯ ಶರೀಫ ಕಾಕಾ ತಾಯತವೊಂದನ್ನು ಆಕೆಗೆ ಕಟ್ಟುತ್ತಾರೆ. ವೈದ್ಯರ ಔಷಧಿ ಕೆಲಸ ಮಾಡಿತೇ? ತಾಯತ ಪರಿಣಾಮ ಬೀರಿತೇ? ಲಕ್ಷ್ಮಿ ಮೊದಲಿಂತಾದಳೇ? ಉತ್ತರಕ್ಕಾಗಿ ಓದಿ ವಾಣಿ ಸತೀಶ್‌ ಅವರ ತಂತಿ ಮೇಲಣ ಹೆಜ್ಜೆಯ ಎಂಟನೇ ಕಂತು

ಎಡಗೈಗೆ ಕಟ್ಟಿದ ತಾಯತದಿಂದ ಕಿರಿಕಿರಿ ಅನುಭವಿಸುತ್ತಿದ್ದ ಲಕ್ಷ್ಮಿ ದಾರಿಯುದ್ದಕ್ಕೂ ಅದನ್ನು ಕಿತ್ತೆಸೆಯುವ ಸಾಹಸ ಮಾಡುತ್ತಲೇ ಇದ್ದಳು. ಅವಳು ಎಳೆದಷ್ಟು ಆ ದಾರ ಕಗ್ಗಂಟಾಗುತ್ತಲೇ ಇತ್ತು. ಇದನ್ನು ಕಣ್ಣ ತುದಿಯಲ್ಲಿಯೇ ನೋಡುತ್ತಿದ್ದ ಅವ್ವ ಕಾಣದವಳಂತೆ ಹರಿದು ಹೋಗುವ ಹಾದಿ ನೋಡುತ್ತಾ ಕೂತಳು. ಲಕ್ಷ್ಮಿಯ ಸಹನೆಯ ಕಟ್ಟೆ ಒಡೆದು ಅವ್ವನ ಮೇಲೆ ಹರಿಹಾಯ್ದಳು. ಮಗಳ ಒರಟುತನ ನೋಡಿ ಬೆಚ್ಚಿದ ಅವ್ವ ಮನೆಗೆ ಹೋದ ಕೂಡಲೇ ಬಿಚ್ಚಿ ಹಾಕುವುದಾಗಿ ಸಮಾಧಾನ ಮಾಡಿ ಹಾಗೆಯೇ ಮಲಗಿಸಿದಳು.

ಮನೆ ಬಾಗಿಲಿಗೆ ಬಂದದ್ದೇ ತಡ, ಇವರ ದಾರಿಯನ್ನೇ ಕಾಯುತ್ತಾ ನಿಂತಿದ್ದ ಕೊನೆಯ ತಮ್ಮ ಶಂಕರನನ್ನು ಹತ್ತಿರ ಕರೆದ ಲಕ್ಷ್ಮಿ“ಶಂಕ್ರು ಈ ದಾರ ಬಾಳ ಬಿಗಿತೈತೆ ಕಣ್ಲಾ. ನೋಡಿಲ್ಲಿ ರಟ್ಟೆ ಹೆಂಗೆ ಸೇದ್ತೈತೆ ಅಂತ, ಎಲ ಒಂಚೂರು ಆ ಕುಡ್ಲು ತಗಂಬಂದು ಇದ್ನಾ ಕತ್ರುಸಾಕು ಮಗ ನೋಡನ” ಎಂದು ಕೈಯನ್ನು ಮುಂದೆ ಚಾಚಿದಳು. ಶಂಕರ “ಅಯ್ಯೋ ಅಷ್ಟೇಯ, ತಡಿ ಕೈಯಲ್ಲೇ ಸಡ್ಲಾ ಮಾಡ್ತೀನಿ” ಎಂದು ಮುಂದೆ ಬಂದ. ಅವ್ವ ಕಣ್ಣ ಸನ್ನೆಯಲ್ಲಿಯೇ ಶಂಕರನನ್ನು ಹಿಂದಕ್ಕೆ ಹೋಗಲು ಹೇಳಿದಳು. ಯಾರು ತನ್ನ ಮಾತನ್ನು ಕೇಳುತ್ತಿಲ್ಲ ಎಂದು ಕೋಪಿಸಿಕೊಂಡ ಲಕ್ಷ್ಮಿ, ಮುನಿದು ಮಂಚದ ಮೇಲೆ ಬಿದ್ದು ಕೊಂಡವಳು ಹಾಗೆಯೇ ನಿದ್ರೆಗೆ ಜಾರಿದಳು.

ಬೆಳಗಿನ ಓಡಾಟ ದಿಂದ ಆಯಾಸಗೊಂಡಿದ್ದ ಅವ್ವ , ಬೇಗ ಹಾಸಿಗೆ ಸೇರಬೇಕು ಎಂದು  ಚುರುಕಾಗಿ ಅಡಿಗೆ ಕೆಲಸ ಮುಗಿಸಿದಳು. ಹಸಿದು ಕುಳಿತಿದ್ದ ಎಲ್ಲರಿಗೂ ಊಟಕ್ಕಿಟ್ಟು ಲಕ್ಷ್ಮಿಗೂ ಬಿಸಿ ಅನ್ನಕ್ಕಿಷ್ಟು  ತುಪ್ಪ ಸೇರಿಸಿ ತಂದು, ತಿನ್ನಿಸಲು ಎಬ್ಬಿಸಿದಳು. ಜಪ್ಪಯ್ಯ ಎಂದರು ಲಕ್ಷ್ಮಿ ಮಿಸುಕಾಡಲಿಲ್ಲ. “ಅವ್ಳುನ್ನ ಹೆಂಗ್ ಏಳುಸ್ಬೇಕು ಅಂತ ನಂಗೊತ್ತು  ಈ ಕಡೆ ಬಾರವ್ವ ” ಎಂದು ಗಿರಿಧರ ನೀರಿನ ತಂಬಿಗೆ ಹಿಡಿದು ಹತ್ತಿರ ಬಂದ. ಗೋಡೆಯ ಕಡೆ ಮುಖ ತಿರುಗಿಸಿ ಪ್ರಜ್ಞೆ ಇಲ್ಲದವಳಂತೆ ಮಲಗಿದ್ದ ಲಕ್ಷ್ಮಿ ಗರಕ್ಕನೆ ತಿರುಗಿ ಅವ್ವ ಹಿಡಿದಿದ್ದ ಬಿಸಿ ಅನ್ನದ ತಟ್ಟೆಯನ್ನು  ಕಸಿದುಕೊಂಡು ಗಿರಿಧರನೆಡೆಗೆ ಬಿರುಸಾಗಿ ತೂರಿದಳು.

ಅಲ್ಲಿದ್ದ ಯಾರು ಕನಸಿನಲ್ಲಿಯೂ ಊಹಿಸಿಕೊಳ್ಳಲು ಸಾಧ್ಯವಿಲ್ಲದ ಲಕ್ಷ್ಮಿಯ ಆ ವಿಕೃತ ಮುಖ ಕಂಡು ಬೆಕ್ಕಸ ಬೆರಗಾಗಿ ಕೂತರು.  ತಟ್ಟೆ ಬಡಿದು ಹಣೆಗೆ ಜೋರಾಗಿ ಪೆಟ್ಟಾದ  ಗಿರಿಧರ ಹಲ್ಲು ಕಡಿಯುತ್ತ “ಎಷ್ಟು ಸೊಕ್ಕೆ ಮುಂಡೆ ನಿಂಗೆ” ಎಂದು ಅವಳ ಕೂದಲಿಗೆ ಕೈ ಹಾಕಿದ. ಚಂಗನೆ ಎಗರಿ ನಿಂತ ಲಕ್ಷ್ಮಿ ಗಂಡಸರು ಪಂಚೆಕಟ್ಟಿಕೊಳ್ಳುವಂತೆ ತನ್ನ ಸೀರೆಯನ್ನು ಮೇಲೆತ್ತಿ ಕಟ್ಟಿಕೊಳ್ಳುತ್ತ “ಎಲಾ ನನ್ನ ಮಗನೇ  ನನಗೆ ಹೊಡಿಯಕ್ ಬತ್ತಿಯೇನ್ಲಾ. ಬಾ ನಾನು ಒಂದು ಕೈ ನೋಡೇ ಬುಡ್ತೀನಿ” ಎಂದು ಗಿರಿಧರನ ಕೊರಳ ಪಟ್ಟಿಗೆ ಕೈ ಹಾಕಿದಳು.

ಕೋಪಿಷ್ಟ ಗಿರಿಧರ ಹಿಂದೆ ಮುಂದೆ ಯೋಚಿಸದೆ ಬಲವಾಗಿ ಅವಳ ಕುತ್ತಿಗೆ ಹಿಡಿದು ಗೋಡೆಗೆ ಸೇರಿಸಿಕೊಂಡ. ಅಪ್ಪ ಅವ್ವ ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಲಕ್ಷ್ಮಿ ಮತ್ತೆ ಮೇಲುಸಿರು ಎಳೆಯುತ್ತಾ  ಬಿದ್ದು ಹೋದಳು. “ನಿಂಗೇನು ಮನುಸತ್ವ ಐತೆನ್ಲಾ ಆ ಹುಸಾರಿಲ್ಲುದ ಮಗಿಂತವ ಹಂಗ್ ಆಡ್ತಿದ್ದಿಯಲ್ಲಾ”  ಎಂದು ಅವ್ವ ಅವನನ್ನು ದೂರ ತಳ್ಳಿದಳು. ಲಕ್ಷ್ಮಿಯನ್ನು ಎತ್ತಿ ಕೂರಿಸಿಕೊಳ್ಳಲು ಅವಳ ಬೆನ್ನಿಗೆ ಕೈ ಹಾಕಿದಳು. ಲಕ್ಷ್ಮಿ ಕೆಂಡದಂತೆ ಸುಟ್ಟು ಹೋಗುತ್ತಿದ್ದಳು. ಇದ್ದಕ್ಕಿದ್ದಂತೆ ಬಾಯಿಯ ಅಂಚಿನಿಂದ ನೊರೆ ಹೊರ ಬರಲಾರಂಭಿಸಿತು. “ಅಯ್ಯೋ ನಾನು ಕೆಟ್ಟೆ ಕಣ್ರಪ್ಪೋ ಯಾರಾರ ನನ್ನ ಮಗಿನ ಉಳುಸ್ಕೊಡ್ರಪ್ಪೋ” ಎಂದು ಅವ್ವ ಎದೆ ಬಡಿದು ಕೊಳ್ಳಲಾರಂಭಿಸಿದಳು. ಅವ್ವನ ಕೂಗಿಗೆ ಅಕ್ಕ ಪಕ್ಕದ ಮನೆಯವರೆಲ್ಲಾ ಓಡಿ ಬಂದರು. ಬಂದವರೆಲ್ಲಾ  ದೇವತೆಯಂತ  ಹುಡುಗಿಯ ಆ ಅವಸ್ಥೆ ಕಂಡು ಲೊಚಗುಟ್ಟುತ್ತಾ ಕ್ಷಣಾರ್ಧದಲ್ಲಿ ಅಪ್ಪನೊಂದಿಗೆ ಸೇರಿ ತಮಗೆ ತೋಚಿದ ಎಲ್ಲಾ ಔಷಧೋಪಚಾರಗಳನ್ನು ಮಾಡಿದರು. ಲಕ್ಷ್ಮಿಯ ದೇಹ ಮಾತ್ರ ಯಾವುದಕ್ಕೂ ಸ್ಪಂದಿಸದೆ ಸೆಟೆದು ಕೊಳ್ಳಲಾರಂಭಿಸಿತು. ಅಪ್ಪನಿಗೆ ತಡ ಮಾಡಿದರೆ ಕೆಟ್ಟೆವು ಎಂದು ಅರಿವಾಗ ತೊಡಗಿದ್ದೇ, ಹಿತ್ತಿಲಿಗೆ ಓಡಿ ಬಿಚ್ಚಿದ್ದ ಎತ್ತನ್ನು ಮತ್ತೆ ಗಾಡಿಗೆ ಕಟ್ಟಿದ. ಲಕ್ಷ್ಮಿಯನ್ನು ಕಂಬಳಿಯಲ್ಲಿ ಬೆಚ್ಚಗೆ ಸುತ್ತಿಕೊಂಡು ಅವ್ವನೊಂದಿಗೆ ಹೊಸ ನಾರಿ ಪುರದಲ್ಲಿದ್ದ ಸಿಂಗು ಡಾಕ್ಟರರ ಮನೆಗೆ ಕರೆತಂದ.

ಅಪ್ಪನ ಕಾಲದಿಂದಲೂ ಈ ನಾರಿ ಪುರದಲ್ಲಿಯೇ ನೆಲೆಯೂರಿದ್ದ ಸಿಂಗು ಡಾಕ್ಟರ್ ಮಾದಲಾಪುರದ ಗೌರ‍್ಮೆಂಟ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಹೆಚ್ಚು ಕಮ್ಮಿ ಅಪ್ಪನ ವಯಸ್ಸಿನವರೇ ಆದ ಈ ಡಾಕ್ಟರ್, ಅಪ್ಪ ಅವ್ವನ ಬಗ್ಗೆ ವಿಶೇಷ ಅಭಿಮಾನ ಇಟ್ಟು ಕೊಂಡಿದ್ದರು. ಅಪ್ಪ, ಬೆಳೆದ ಕಾಳು ಕಡಿ  ಕೊಡಲು ಅವರ ಮನೆಗೆ ಹೋದಾಗೆಲ್ಲಾ, “ಬಹಳ ದೊಡ್ಡ ಮನುಷ್ಯ ಬಿಡಯ್ಯ ನೀನು”ಎಂದು ಪ್ರೀತಿಯಿಂದ ಅಪ್ಪನ ಬೆನ್ನು ಚಪ್ಪರಿಸುತ್ತಾ ಲಕ್ಷ್ಮಿಯ ಬಗ್ಗೆ ಕಳಕಳಿ ಯಿಂದ ವಿಚಾರಿಸಿ ಕೊಳ್ಳುತ್ತಿದ್ದರು. ಅಲ್ಲದೇ ತಮ್ಮಲ್ಲಿಗೆ ಬರುವ ಕೆಲವು ರೋಗಿಗಳನ್ನು  ಅಪ್ಪನ ಬಳಿ ನಾಟಿ ಔಷಧಕ್ಕೂ ಕಳುಹಿಸುತ್ತಿದ್ದುದುಂಟು.

ಆಗಷ್ಟೇ ಊಟ ಮುಗಿಸಿ ಅಂಗಳದಲ್ಲಿ ರೇಡಿಯೋ ಕೇಳಲು ಕುಳಿತ ಡಾಕ್ಟರ್ ಮನೆಯ ಮುಂದೆ ಎತ್ತಿನ ಗಾಡಿ ಬಂದಿದ್ದನ್ನು ನೋಡಿ. “ಯಾರದು? ಇಷ್ಟು ಹೊತ್ತಿನಲ್ಲಿ” ಎಂದು ದನಿ ಎತ್ತರಿಸಿ ಕೇಳಿದರು. “ನಾನು ಡಾಕ್ಟ್ರೆ ಬೋಪಯ್ಯ” ಎಂದ ಅಪ್ಪ .“ಎಂತ ಆಯ್ತಾ ಬೋಪಯ್ಯ ನಿನ್ನ ದನಿ ಯಾಕೆ ಕುಗ್ಗಿದೆ ಮಾರಾಯ” ಎನ್ನುತ್ತಾ  ಟಾರ್ಚ್ ಹಾಕಿಕೊಂಡು  ಎತ್ತಿನ ಗಾಡಿಯ ಹತ್ತಿರ ಬಂದರು. ಅಪ್ಪ ಸೆಟೆದುಕೊಂಡು ಮಲಗಿದ್ದ ಲಕ್ಷ್ಮಿಯನ್ನು ತೋರಿಸುತ್ತಾ “ನನ್ನ ಮಗ್ಳುನ್ನ ಉಳ್ಸಿಕೊಟ್ಬುಡಿ ಡಾಕ್ಟ್ರೆ“ ಎಂದು ಕೈ ಮುಗಿದು ನಿಂತ.  ಡಾಕ್ಟರ್ ಕಮಾನು ಕಟ್ಟಿದ ಗಾಡಿ ಒಳಗೆ ಇಣುಕಿ ನೋಡಿದರು. ಲಕ್ಷ್ಮಿಯ ಕಚ್ಚಿಕೊಂಡಿದ್ದ ನಾಲಿಗೆಯಿಂದ ರಕ್ತ ಒಸರುತ್ತಿತ್ತು. ಇಡೀ ದೇಹ ಕರೆಂಟು ಕೊಟ್ಟಂತೆ ಬಿರುಸಾಗಿ ಅದುರಲು ಆರಂಭಿಸಿತ್ತು . ಅವಳ ಅವಸ್ಥೆ ಕಂಡು ಕ್ಷಣ ಡಾಕ್ಟರರೇ ನಡುಗಿ ಹೋದರು. ಕೂಡಲೇ ಅಪ್ಪನೊಂದಿಗೆ ಕೈ ಜೋಡಿಸಿ, ರೋಗಿಗಳನ್ನು ನೋಡಲೆಂದೇ ಮನೆಯ ಪಕ್ಕದಲ್ಲಿ ಕಟ್ಟಿಸಿದ್ದ ಒಂದು ಪುಟ್ಟ ಕೋಣೆಗೆ ತಂದು ಮಲಗಿಸಿದರು. ಮೊದಲಿಗೆ ಕಚ್ಚಿ ಕೊಂಡ ನಾಲಿಗೆಯನ್ನು ಬಿಡಿಸಿ ಹಲ್ಲಿನ ನಡುವೆ ಹತ್ತಿಯ ದೊಡ್ಡ ಉಂಡೆಗಳನ್ನಿರಿಸಿದರು. ಲಕ್ಷ್ಮಿ ಯನ್ನು ಬಿಗಿಯಾಗಿ ಹಿಡಿದು ಕೊಳ್ಳಲು ಹೇಳಿ ಸೊಂಟಕ್ಕೆ  ಸೂಜಿ ಚುಚ್ಚಿ ಮೈ ಅದುರುವುದನ್ನು ನಿಲ್ಲಿಸಿದರು. ಹೀಗೆ ಒಂದಷ್ಟು ಶುಶ್ರೂಷೆಯ ನಂತರ ಲಕ್ಷ್ಮಿ ತುಸು ಮಟ್ಟಿಗೆ ಸುಧಾರಿಸಿ ಕೊಂಡಳು. ಆದರು ಕಣ್ಣು ಬಿಟ್ಟು ನೋಡುವ ಸ್ಥಿತಿಯಲ್ಲಿರಲಿಲ್ಲ.

ಡಾಕ್ಟರ್ ಅಪ್ಪ ಅವ್ವನಿಗೆ ಧೈರ್ಯ ತುಂಬಿ, ತಡ ಮಾಡದೆ ಲಕ್ಷ್ಮಿಯನ್ನು  ಸೋಪಾನ ಪೇಟೆಯ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಒಳ್ಳೆಯದೆಂದು ಸಲಹೆ ನೀಡಿದರು. ಯಾಕೋ ಅವ್ವನಿಗೆ ಆ ರಾತ್ರಿ ಲಕ್ಷ್ಮಿಯನ್ನು ಮರಳಿ ಮನೆಗೆ ಕರೆದುಕೊಂಡು ಹೋಗಲು ಧೈರ್ಯವಾಗಲಿಲ್ಲ. ಹಾಗಾಗಿ ಅಲ್ಲಿಯೇ ಉಳಿದು ಬೆಳಗ್ಗೆ ಬಿಸಿಲೇರುವುದರೊಳಗೆ ನಲವತ್ತು ಮೈಲು ದೂರದ ಸೋಪನ ಪೇಟೆಯನ್ನು ಸೇರಿಕೊಳ್ಳುವುದೆಂದು  ನಿರ್ಧರಿಸಿದರು.

ಇಡೀ ರಾತ್ರಿ ಕಣ್ಣು ಮುಚ್ಚದಂತೆ ಚಾತಕ ಪಕ್ಷಿಗಳಂತೆ ಬೆಳಗಾಗುವುದನ್ನೆ ಕಾಯುತ್ತಾ ಕುಳಿತಿದ್ದ ಅಪ್ಪ ಅವ್ವ, ಡಾಕ್ಟರ್ ಮನೆಯ ಗಡಿಯಾರ ಐದು ಗಂಟೆ ಹೊಡೆಯುತ್ತಿದ್ದಂತೆ, ಮೃದುವಾಗಿ ಲಕ್ಷ್ಮಿಯನ್ನು ಎಬ್ಬಿಸಿ ಒದ್ದೆ ಕೈಯಿಂದ ಅವಳ ಮುಖವರಿಸಿ, ಹಿಂದಿನ ದಿನವೇ ಸಿಂಗು ಡಾಕ್ಟರ್  ತಮ್ಮ ಪರಿಚಯದ ಡಾಕ್ಟರರಿಗೆ ಬರೆದು ಕೊಟ್ಟಿದ್ದ ಪತ್ರವನ್ನು ಹಿಡಿದು ಎತ್ತಿನ ಗಾಡಿ ಏರಿದರು.

ಲಕ್ಷ್ಮಿ ಹುಟ್ಟಿದಾಗಿನಿಂದಲೂ ನಾರಿಪುರದ ಹೊರತು ಬೇರೊಂದು ಊರನ್ನು ಕಂಡವಳಲ್ಲ. ಇವಳ ವಯಸ್ಸಿನವಳೇ ಆದ ಪಕ್ಕದ ಮನೆಯ  ಅಲಮೇಲು, ರಜೆಗೆ ಬಂದಾಗೆಲ್ಲ ತಾನು ಕಾಲೇಜು ಓದುತ್ತಿದ್ದ ಸೋಪಾನ ಪೇಟೆಯ ಬಗ್ಗೆ ಸದಾ ಲಕ್ಷ್ಮಿಯ ಬಳಿ ಹಾಡಿ ಹೊಗಳುತ್ತಿದ್ದಳು. ಅದನ್ನು ಕೇಳುತ್ತಿದ್ದ ಲಕ್ಷ್ಮಿ ತಾನು ಕೂಡ ಒಮ್ಮೆಯಾದರು ಸೋಪಾನ ಪೇಟೆ ನೋಡಿ ಬರಬೇಕು ಅನ್ನುವ ಕನಸು ಕಾಣುತ್ತಿದ್ದಳು.

ಹೀಗೆ ಒಮ್ಮೆ ಜಿಟಿ ಜಿಟಿ ಮಳೆಯ ಒಂದು ಸಂಜೆ, ಮನೆಯವರೆಲ್ಲಾ ಒಟ್ಟಿಗೆ ಸೇರಿ ಮಧ್ಯದಲ್ಲಿ ಕಡಲೇ ಪುರಿ ಹರವಿಕೊಂಡು ತಿನ್ನುತ್ತಾ, ಕಾಫಿ ಹೀರುತ್ತಿದ್ದರು. ತಾನು ನೋಡಿದ ಅನುಭವಿಸಿದ ಘಟನೆಗಳನ್ನೆಲ್ಲಾ ಚಂದದ ಕತೆ ಕಟ್ಟಿ ಆಗಾಗ ಮಕ್ಕಳ ಮುಂದೆ ಹೇಳುತ್ತಿದ್ದ  ಅವ್ವ, ಅಂದು ಕೂಡ ತಾನು ಮದುವೆಯಾದ ಹೊಸದರಲ್ಲಿ ಅಪ್ಪನೊಂದಿಗೆ ಸೋಪಾನ ಪೇಟೆ ನೋಡಲು ಹೋಗಿದ್ದ ಕತೆಯನ್ನು ಹೇಳ ತೊಡಗಿದಳು.    

ಸೋಪಾನಪೇಟೆ ಅಂತ ಮಾತು ತೆಗೆದದ್ದೆ ಲಕ್ಷ್ಮಿಯ ಮೈ ನವಿರೆದ್ದಂತಾಯಿತು. ಅವ್ವ ಮುಂದಿನ ಮಾತು ತೆಗೆಯುವ ಮೊದಲೆ ಸದಾ ಮಂಜು ಸುರಿಯುವ ಸೋಪಾನ ಪೇಟೆಯ ಬೆಟ್ಟ, ಗುಡ್ಡ, ಕಾಡು, ಅಲ್ಲಲ್ಲಿ ನೊರೆಯುಕ್ಕಿಸಿ ಧುಮ್ಮಿಕ್ಕುವ ಜಲಪಾತ, ಬೆಟ್ಟದ ತುತ್ತತುದಿಯಿಂದ ಬೆಳ್ಳಗೆ ಹಾವು ಹರಿದಂತೆ ಕಾಣುವ ಅಂಕುಡೊಂಕಾದ ಹೊಳೆ, ಕಪ್ಪು ಮತ್ತು ಕೆಂಪನೆಯ ರಸ್ತೆ, ಅಲ್ಲಿನ ಕೋಟೆ ಕೊತ್ತಲ ದೇವಸ್ಥಾನ ಹೀಗೆ ಒಂದೇ ಎರಡೇ, ಸ್ವತಃ ತಾನೇ ಹೋಗಿ ನೋಡಿ ಅನುಭವಿಸಿ ಬಂದವಳಂತೆ ವರ್ಣಿಸ ತೊಡಗಿದಳು . ಸುತ್ತ ಕೂತವರೆಲ್ಲಾ ಅವಳ ಅರಳು ಹುರಿದಂತಹ  ವರ್ಣನೆಯ ಲಹರಿ ಕಂಡು  ಇವಳು ನಮ್ಮ ಲಕ್ಷ್ಮಿಯೇ…? ಎಂಬಂತೆ ಕಣ್ಣರಳಿಸಿ ನೋಡಿದರು. ವರ್ಣನೆ ಎಲ್ಲಾ ಮುಗಿಯುತ್ತಿದ್ದಂತೆ ಲಕ್ಷ್ಮಿ ಪಕ್ಕದಲ್ಲಿದ್ದ ಅವ್ವನ ಕಡೆ ತಿರುಗಿ, ಪುಟ್ಟ ಮಗುವಿನಂತೆ ಕಣ್ಣರಳಿಸಿ  ಅವ್ವನ ಎರಡು ಕೆನ್ನೆಗಳನ್ನು ಸವರುತ್ತಾ “ ನಿನ್ನ ದಮ್ಮಯ್ಯ ಕನವ್ವ  ನನ್ನೂ ಒಂದಪ ಅಲ್ಲಿಗೆ ಕರ‍್ಕೊಂಡೋಗು” ಎಂದಳು. ಅಸಹನೆಯಿಂದಲೇ ಅವಳ ಮಾತಿಗೆ ಕಿವಿಕೊಟ್ಟಿದ್ದ ಚಂದ್ರಹಾಸ, ಪಟೀರನೆ ಅವಳ ತೋಳಿನ ಮೇಲೆ ಹೊಡೆದು “ಅದೇನು ಒಳಗೋಗಿ ಕೇಮೆ ನೋಡೆ. ಇದ್ನೆಲ್ಲಾ ಆ ಬಿನ್ನಾಣ್ಗಿತ್ತಿ ಅಲ್ಮಲ್ಲಿ ನಿನ್ನ ತಲೆಗೆ ತುಂಬುದ್ಲಾ. ಅವಳ್ನ ಮನೆಗೆ ಕೂಡ್ಬ್ಯಾಡ ಅಂತ ಎಷ್ಟ್ಸಲ ಹೇಳಿದಿನಿ ನಿಂಗೆ. ಇರು ಇನ್ನೊಂದಪ ಈ ಕಡಿಕೆ ತಲೆ ಹಾಕ್ಲಿ ಅವಳು, ಸರಿಯಾಗಿ ಗ್ರಾಚಾರ ಬುಡ್ಸಿ ಕಳುಸ್ತೀನಿ” ಎಂದು ರವರವನೆ ಕೆಂಗಣ್ಣು ಬಿಟ್ಟ. ಜಿಂಕೆ ಮರಿಯಂತೆ ಹೆದರಿ ಹೋದ ಲಕ್ಷ್ಮಿ, ಕನಸಿನ ತನ್ನ ಆ ಆಸೆಗೆ ಅಲ್ಲಿಯೇ ಎಳ್ಳು ನೀರು ಬಿಟ್ಟು ಸದ್ದಿಲ್ಲದಂತೆ ಅಡಿಗೆ ಕೋಣೆ ಸೇರಿದಳು.

ಇಂದು ಸೋಪಾನ ಪೇಟೆಯ ಒಂದು ಎತ್ತರದ ಸ್ಥಳಕ್ಕೆ  ಗಾಡಿ ಹೋಗುತ್ತಿದ್ದಂತೆ “ಏನೀ ಒಂದಿಷ್ಟ್ ಗಾಡಿ ನಿಲ್ಸಿ” ಎಂದಳು ಅವ್ವ. ಲಕ್ಷ್ಮಿಯ ತಲೆಯನ್ನು ಮೆಲ್ಲಗೆ ಎತ್ತಿ ನಿಲ್ಲಿಸಲು ಪ್ರಯತ್ನಿಸುತ್ತ “ಲಕ್ಷ್ಮು ನೀನು ನೋಡಬೇಕು ಅಂತ ಆಸೆ ಪಟ್ಟಿದ್ದಲ್ಲ ಅದೇ ಸೋಪಾನ್ಪೇಟೆಗೆ ಬಂದಿದ್ದೀವಿ. ಎಷ್ಟು ಪಸಂದಾಗ್ ಕಾಣ್ತೈತೆ ಒಂದಪ ಕಣ್ಬುಟ್ಟು ನೋಡು ಮಗ ಎಂದಳು. ಅವ್ವನ ಆರ್ದ್ರವಾದ ದನಿ  ಕೇಳಿ ಲಕ್ಷ್ಮಿ ಕಣ್ಣು ತೆರೆಯಲು ಪ್ರಯತ್ನಿಸಿ ಸೋತು ಹಾಗೆಯೇ ಮಲಗಿದಳು. ಅಪ್ಪ, ಅವ್ವನ ಕಡೆ ತಿರುಗಿ “ಮಗಿಗೆ ಹಿಂಸೆ ಮಾಡ್ಬ್ಯಾಡ ಬುಡು ಬಲು ಸುಸ್ತಾಗೈತೆ. ಅವಳು ಹುಸಾರಾದ್ಮೇಲೆ ಇಡೀ ಸೋಪಾನ್ಪೇಟೆಲಿರೊ ದೇವ್ರುಗಳ್ಗೆಲ್ಲಾ ಅವಳ ಕೈಲೆ ಪೂಜೆ ಮಾಡ್ಸಿ ಕಾಣ್ಕೆ ಹಾಕ್ಸನ” ಎಂದು ಹೇಳಿ ಎತ್ತುಗಳ ಮೇಲೆ ಮೃದುವಾಗಿ ಚಾಟಿ ಆಡಿಸುತ್ತಾ  ಗಾಡಿ ಓಡಿಸಲು ಆರಂಭಿಸಿದ…

(ಮುಂದುವರೆಯುವುದು..)

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು