ಚಿಂತಾಮಣಿ ಮಾ 13: ಕೇಂದ್ರದ ಆರ್ಥಿಕ ನೀತಿಯಿಂದ ವಿಪರೀತ ಬೆಲೆ ಏರಿಕೆ ಆಯ್ತು. ಇದರಿಂದ ಉಂಟಾದ ಜನರ ಸಂಕಷ್ಟ ಕಡಿಮೆ ಮಾಡಲು ನಾವು ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿದೆವು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ, ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಅತ್ಯಂತ ಸಂತೋಷದಿಂದ ಭಾಗವಹಿಸಿದ್ದೇನೆ.
ಜನರ ಜೇಬಿಗೆ, ಖಾತೆಗಳಿಗೆ ನೇರವಾಗಿ ಹಣ ಹಾಕಿ ನಮ್ಮ ನಾಡಿನ ಜನರ, ಅವರ ಕುಟುಂಬದ ಸಂಕಷ್ಟಕ್ಕೆ ಸ್ಪಂದಿಸಿದೆವು: ಸಿ.ಎಂ. ಸಿದ್ದರಾಮಯ್ಯ ವಿವರಿಸಿದರು.
ರಾಜ್ಯದ ಜನರನ್ನು ಮೂರ್ಖರನ್ನಾಗಿಸಲು ಹೊರಟ ಬಿಜೆಪಿಯವರೇ ನಾಡಿನ ಜನರ ಎದುರು ಮೂರ್ಖರಾಗಿದ್ದಾರೆ. ಒಂದೂ ಗ್ಯಾರಂಟಿ ಯೋಜನೆ ಜಾರಿ ಆಗಲು ಸಾಧ್ಯವೇ ಇಲ್ಲ ಎಂದು ಜನರನ್ನು ಬಕ್ರಾ ಮಾಡಲು ಹೋದರು. ನಾವು ಐದೂ ಗ್ಯಾರಂಟಿಗಳನ್ನು ಕೇವಲ ಎಂಟು ತಿಂಗಳಲ್ಲಿ ಜಾರಿ ಮಾಡಿದೆವು. ಈಗ ನಾಡಿನ ಜನರ ಎದುರು ಬಿಜೆಪಿಯವರು ಪರಮ ಮೂರ್ಖರಾಗಿದ್ದಾರೆ ಎಂದರು.
ಮೋದಿ ಅವರ ಸುಳ್ಳುಗಳಿಗೆ ಮಿತಿಯೇ ಇಲ್ಲ. ವಿದೇಶದಿಂದ ಕಪ್ಪು ಹಣ ತಂದು ಭಾರತೀಯರ ಖಾತೆಗೆ 15 ಲಕ್ಷ ರೂ ನೀಡುತ್ತೇವೆ ಎಂದರು. ಒಬ್ಬೇ ಒಬ್ಬ ಭಾರತೀಯನ ಖಾತೆಗೆ 15 ಲಕ್ಷ ಇರಲಿ, 15 ರೂಪಾಯಿ ಆದರೂ ಹಾಕಿದ್ರಾ ಮೋದಿಯವರೇ?
ರೈತರ ಆದಾಯ ದುಪ್ಪಟ್ಟು ಮಾಡ್ತೀನಿ ಅಂದಿದ್ದ ಮೋದಿಯವರು ಇದನ್ನು ಮಾಡಿದ್ರಾ ? ರೈತರ ಖರ್ಚು ಮೂರು ಪಟ್ಟು ಆಗಿದೆ. ಇದೇ ನಿಮ್ಮ ಅಚ್ಛೆ ದಿನವಾ ಎಂದು ಸಿಎಂ ಪ್ರಶ್ನಿಸಿದರು.
ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಅಂದಿದ್ದ ಮೋದಿಯವರು ಮಾಡಿದ್ರಾ ? ಹತ್ತು ವರ್ಷದಲ್ಲಿ 20 ಕೋಟಿ ಉದ್ಯೋಗ ಸೃಷ್ಟಿ ಮಾಡಬೇಕಿತ್ತು . ಮೋದಿಯವರು ಮಾಡಿದ್ರಾ ? ಎಂದು ಪ್ರಶ್ನಿಸಿದರು.
ನಾವು ಐದು ಗ್ಯಾರಂಟಿ ಘೋಷಣೆ ಮಾಡಿ, ಎಂಟೇ ತಿಂಗಳಲ್ಲಿ ಐದಕ್ಕೆ ಐದೂ ಗ್ಯಾರಂಟಿ ಜಾರಿ ಮಾಡಿ ಪ್ರತೀ ದಿನ, ಪ್ರತೀ ತಿಂಗಳು ನಾಡಿನ ಜನ ಇದರ ಫಲ ಬಳಸುತ್ತಿದ್ದಾರೆ. ನಾಡಿನ ಜನರ ಖಾತೆಗೆ ನೇರವಾಗಿ ಹಣ ಜಮೆ ಆಗುತ್ತಿದೆ. ಇದೇ ನಮಗೂ, ಮೋದಿಯವರಿಗೂ ಇವರು ವ್ಯತ್ಯಾಸ ಎಂದು ವಿವರಿಸಿದರು.
ನೀವೂ ಸೇರಿ 7 ಕೋಟಿ ಕನ್ನಡಿಗರಿಗೆ ದ್ರೋಹ ಎಸಗಿದ ಬಿಜೆಪಿ ಪಕ್ಷ ಮತ್ತು ಬಿಜೆಪಿ ಸಂಸದರಿಗೆ ಕ್ಷಮಿಸಬೇಡಿ
ನೀವೂ ಸೇರಿ 7 ಕೋಟಿ ಕನ್ನಡಿಗರಿಗೆ ದ್ರೋಹ ಎಸಗಿದ ಬಿಜೆಪಿ ಪಕ್ಷ ಮತ್ತು ಬಿಜೆಪಿ ಸಂಸದರಿಗೆ ಕ್ಷಮಿಸಬೇಡಿ. ನಾವು ಕೇಂದ್ರಕ್ಕೆ ಕೊಡುವ ಪ್ರತಿ 100 ರೂಪಾಯಿಯಲ್ಲಿ ರಾಜ್ಯಕ್ಕೆ ವಾಪಾಸ್ ಕೊಡುತ್ತಿರುವುದು ಕೇವಲ 13 ರೂ. ಈ ಭೀಕರ ಅನ್ಯಾಯವನ್ನು ರಾಜ್ಯದಿಂದ ಆರಿಸಿ ಹೋದ ಸಂಸದರು ಇವತ್ತಿನವರೆಗೂ ಪ್ರಶ್ನಿಸಿಲ್ಲ. ಈ ಸಂದರನ್ನು ಕ್ಷಮಿಸಬೇಡಿ ಎಂದು ಸಿಎಂ ಮನವಿ ಮಾಡಿದರು.
“ಸೆಕ್ಯುಲರ್” ಹೆಸರು ಕಿತ್ತಾಕಿ ದೇವೇಗೌಡರೇ
ಮೋದಿ ಪ್ರಧಾನಿ ಆದರೆ ದೇಶ ಬಿಟ್ಟು ಹೋಗ್ತೀನಿ, ಮುಂದಿನ ಜನ್ಮದಲ್ಲಿ ಮುಸ್ಲೀಮನಾಗಿ ಹುಟ್ಟುತ್ತೇನೆ ಎಂದು ಘೋಷಿಸಿದ್ದ ಮಾಜಿ ಪ್ರಧಾನಿ ದೇವೇಗೌಡರು ಈಗ ಬಿಜೆಪಿ ಜತೆ ಸೇರಿ ಪ್ಲೇಟ್ ಚೇಂಜ್ ಮಾಡಿದ್ದಾರೆ. “ತಮಗೂ ಮೋದಿಯವರಿಗೂ ನಡುವೆ ಅವಿನಾಭಾವ ಸಂಬಂಧ ಇದೆ” ಎಂದು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ ಸಿಎಂ, ದೇವೇಗೌಡರು ತಮ್ಮ ಪಕ್ಷದ ಹೆಸರಿನಲ್ಲಿರುವ “ಸೆಕ್ಯುಲರ್” ಪದ ಕಿತ್ತಾಕಿದರೆ ಒಳ್ಳೆಯದು ಎಂದರು.