ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದೆ ಅಪರಾಧ ಕೃತ್ಯಗಳು ನಡೆದಿವೆ ಎಂದು ಆರೋಪಿಸಿರುವ ಪ್ರಕರಣದ ಸಾಕ್ಷಿ ದೂರುದಾರನಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಸೋಮವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಸಾಕ್ಷಿ ದೂರುದಾರನ ಪರ ವಕೀಲರು ಪ್ರಕರಣದಿಂದ ಹಿಂದೆ ಸರಿದಿದ್ದು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವಕೀಲರ ಸೇವೆಯನ್ನು ಆ ವಕೀಲರ ಮೂಲಕ ಜಾಮೀನಿಗೆ ಅರ್ಜಿ ಸಲ್ಲಿಸಲಾಗಿತ್ತು.
ಅರ್ಜಿ ಪುರಸ್ಕರಿಸಿದ ನ್ಯಾಯಾಧೀಶರಾದ ಬಸವರಾಜ್, ₹ 1 ಲಕ್ಷ ಭದ್ರತಾ ಠೇವಣಿ ಇಡಲು ಸೂಚಿಸಿ, ಸಾಕ್ಷಿದೂರುದಾರನಿಗೆ ಜಾಮೀನು ನೀಡಿದ್ದು, ಹಲವು ಷರತ್ತುಗಳನ್ನು ವಿಧಿಸಿದ್ದಾರೆ.
ತಲೆಮರೆಸಿಕೊಳ್ಳಬಾರದು, ಸಾಕ್ಷ್ಯ ತಿರುಚಬಾರದು, ಅನುಮತಿ ಪಡೆಯದೇ ಕೋರ್ಟ್ ವ್ಯಾಪ್ತಿ ಪ್ರದೇಶದಿಂದ ಹೊರಗೆ ಹೋಗಬಾರದು, ಈ ಪ್ರಕರಣದ ಸಂಬಂಧ ಯಾವುದೇ ಹೇಳಿಕೆ ಅಥವಾ ಸಂದರ್ಶನವನ್ನು ನೀಡಬಾರದು ಎಂಬುದು ಈ ಷರತ್ತುಗಳಲ್ಲಿ ಸೇರಿವೆ.
ಪ್ರಕರಣ ಸಂಬಂಧ ಆತನನ್ನು ಬಂಧಿಸಿದ್ದ ಎಸ್‌ಐಟಿ ಅಧಿಕಾರಿಗಳು ಆಗಸ್ಟ್ 23 ರಂದು ಬೆಳ್ತಂಗಡಿಯ ಜೆಎಂಎಫ್‌ಸಿ ಕೋರ್ಟ್‌ಗೆ ಹಾಜರುಪಡಿಸಿದ್ದರು. ಪ್ರಸ್ತುತ ಆತ ಶಿವಮೊಗ್ಗ ಜೈಲಿನಲ್ಲಿದ್ದಾನೆ.
