ನೀಟ್ ಪರೀಕ್ಷಾ ಅಕ್ರಮದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ನಂತರ, ಅವರ ಮುಂದಿನ ರಾಜಕೀಯ ಭವಿಷ್ಯದ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ರಾಜ್ಯ ರಾಜಕಾರಣದಿಂದ ದೆಹಲಿಯ ಅಂಗಳದವರೆಗೆ ಬೆಳೆದ 57 ವರ್ಷದ ಧರ್ಮೇಂದ್ರ ಪ್ರಧಾನ್, ರಾಷ್ಟ್ರೀಯ ರಾಜಕೀಯದಲ್ಲಿ ಒಡಿಶಾದ ಧ್ವನಿಯಾಗಿದ್ದರು. ಇದೀಗ ಅವರ ನಿರ್ಗಮನದಿಂದ ರಾಜ್ಯ ಬಿಜೆಪಿಯ ಆಂತರಿಕ ಅಧಿಕಾರದ ಸಮತೋಲನದಲ್ಲಿ ಬದಲಾವಣೆಯಾಗಲಿದೆಯೇ ಎಂಬ ಪ್ರಶ್ನೆ ಮೂಡಿದೆ. ಆದರೆ ಒಡಿಶಾ ಬಿಜೆಪಿ ನಾಯಕರ ಪ್ರತಿಕ್ರಿಯೆಗಳನ್ನು ಗಮನಿಸಿದರೆ, ಈ ರಾಜೀನಾಮೆಯಿಂದ ರಾಜ್ಯ ರಾಜಕಾರಣದಲ್ಲಿ ಅವರಿಗಿರುವ ಪ್ರಾಬಲ್ಯವೇನೂ ಕಡಿಮೆಯಾಗುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಪ್ರಧಾನ್ ಬೆಂಬಲಕ್ಕೆ ನಿಂತ ಬಿಜೆಪಿ ಹೈಕಮಾಂಡ್
ಒಡಿಶಾ ಬಿಜೆಪಿಯಲ್ಲಿ ಧರ್ಮೇಂದ್ರ ಪ್ರಧಾನ್ ಸದಾ “ಅಪ್ರತಿಮ ದಬ್ದಬಾ” ಹೊಂದಿರುವ ನಾಯಕರಾಗಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಪ್ರಧಾನ್ ಅವರ ರಾಜೀನಾಮೆಯು ಪಕ್ಷದಲ್ಲಿ ಅವರ “ಸ್ಥಾನಮಾನ ಕುಸಿತ”ವನ್ನು ಸೂಚಿಸುವುದಿಲ್ಲ, ಅದು “ರಾಜಕೀಯ ಹೊಣೆಗಾರಿಕೆ”ಯ (Political Accountability) ಸಂಕೇತವಾಗಿದೆ ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. ರಾಜೀನಾಮೆಯ ಹೊರತಾಗಿಯೂ ಪಕ್ಷದ ಹೈಕಮಾಂಡ್ ಅವರ ಬೆಂಬಲಕ್ಕೆ ನಿಂತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಿರಿಯ ನಾಯಕರು ದೇಶದ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರಲು ಪ್ರಧಾನ್ ಶ್ರಮಿಸಿದ್ದನ್ನು ಬೆಂಬಲಿಸಿದ್ದಾರೆ.
ಪ್ರಧಾನ್ ಅವರಿಗೆ ಹೈಕಮಾಂಡ್ ಬೆಂಬಲ ಏಕೆ ಮುಖ್ಯ?
ವಿಪಕ್ಷಗಳು ಪ್ರಧಾನ್ ಅವರ ರಾಜೀನಾಮೆಯನ್ನು ಸಚಿವಾಲಯದ ವೈಫಲ್ಯ ಮತ್ತು “ಯುವಶಕ್ತಿಯ ವಿಜಯ” ಎಂದು ಬಿಂಬಿಸುತ್ತಿರುವಾಗ ಹೈಕಮಾಂಡ್ ಬೆಂಬಲ ಅತ್ಯಂತ ನಿರ್ಣಾಯಕವಾಗಿದೆ. ಬಿಜು ಜನತಾ ದಳ (BJD) ಅಧ್ಯಕ್ಷ ನವೀನ್ ಪಟ್ನಾಯಕ್ ಈ ರಾಜೀನಾಮೆಯನ್ನು “ಜೆನ್ ಜೀ (Gen Z) ಯುವಕರ ವಿಜಯ” ಎಂದು ಕರೆದಿದ್ದಾರೆ. ಇದಕ್ಕೆ ಪ್ರತಿಯಾಗಿ, ಬಿಜೆಪಿಯು ಪ್ರಧಾನ್ ಅವರ “ರಾಜಕೀಯ ಹೊಣೆಗಾರಿಕೆ, ತ್ಯಾಗ ಮತ್ತು ಸ್ವಾರ್ಥಕ್ಕಿಂತ ದೇಶಹಿತವೇ ಮುಖ್ಯ” ಎಂಬ ಕಥನವನ್ನು (Narrative) ಮುನ್ನೆಲೆಗೆ ತರುತ್ತಿದೆ.
ರಾಜ್ಯ ರಾಜಕೀಯದ ಮೇಲೆ ಬೀರುವ ಪರಿಣಾಮವೇನು?
ಒಡಿಶಾ ಬಿಜೆಪಿಯಲ್ಲಿ ಪ್ರಧಾನ್ ಅವರನ್ನು ಮೂಲೆಗುಂಪು ಮಾಡಲಾಗಿದೆ ಎಂಬ ಮಾತನ್ನು ರಾಜ್ಯ ನಾಯಕರು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. 2014 ರಿಂದ ಪ್ರಧಾನ್ ಅವರು ಪಟ್ಟ ಶ್ರಮದ ಫಲವಾಗಿಯೇ ಪಕ್ಷವು ರಾಜ್ಯದಲ್ಲಿ ತಳವೂರಿ, 2024 ರ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಬಿಜೆಡಿ ಮತ್ತು ಕಾಂಗ್ರೆಸ್‌ನ ಪ್ರಭಾವಿ ನಾಯಕರನ್ನು ಪಕ್ಷಕ್ಕೆ ಕರೆತಂದು ಹಲವು ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಬಲಪಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
‘ಒಡಿಶಾದ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಧಾನ್ ಹಿಡಿತ’
ಒಡಿಶಾದ ಒಟ್ಟು 78 ಬಿಜೆಪಿ ಶಾಸಕರ ಪೈಕಿ ಬಹುತೇಕರು ಪ್ರಧಾನ್ ಅವರ ಆಯ್ಕೆಯಾಗಿದ್ದು, ರಾಜ್ಯದ 16 ಸದಸ್ಯರ ಸಚಿವ ಸಂಪುಟದ ಶೇ. 40 ರಷ್ಟು ಸಚಿವರು ಪ್ರಧಾನ್ ಆಪ್ತರೆಂದೇ ಗುರುತಿಸಿಕೊಂಡಿದ್ದಾರೆ. “ಒಡಿಶಾ ಬಿಜೆಪಿಯಲ್ಲಿ ಪ್ರಧಾನ್ ಹೊರತುಪಡಿಸಿ ಎಲ್ಲಾ 147 ವಿಧಾನಸಭಾ ಕ್ಷೇತ್ರಗಳ ಮೇಲೆಯೂ ಹಿಡಿತ ಹೊಂದಿರುವ ಮತ್ತೊಬ್ಬ ನಾಯಕನಿಲ್ಲ. ಇತ್ತೀಚಿನ ವಿವಾದದ ಸಮಯದಲ್ಲಿ ಅವರ ಬೆಂಬಲಿಗರು ನಿಂತ ರೀತಿ ರಾಜ್ಯ ಬಿಜೆಪಿಯಲ್ಲಿ ಅವರಿಗಿರುವ ಪ್ರಭಾವಕ್ಕೆ ಸಾಕ್ಷಿ” ಎಂದು ಸ್ಥಳೀಯ ನಾಯಕರೊಬ್ಬರು ಹೇಳಿದ್ದಾರೆ.
ಒಡಿಶಾದ 20 ಬಿಜೆಪಿ ಸಂಸದರ ಪೈಕಿ ಭರ್ತೃಹರಿ ಮಹತಾಬ್ ಸೇರಿದಂತೆ 11 ಸಂಸದರು, ರಾಜ್ಯ ಸಂಪುಟ ಸಚಿವ ಪೃಥ್ವಿರಾಜ್ ಹರಿಚಂದನ್ ಮತ್ತು ವಿವಿಧ ಜಿಲ್ಲಾ ಘಟಕಗಳು ಪ್ರಧಾನ್ ಬೆಂಬಲಕ್ಕೆ ನಿಂತಿವೆ.
ಒಡಿಶಾದಿಂದ ಹೊಸ ಮುಖಗಳಿಗೆ ಅವಕಾಶ?
ಕೇಂದ್ರ ಸಚಿವ ಸಂಪುಟದಿಂದ ಪ್ರಧಾನ್ ನಿರ್ಗಮನದಿಂದ ದೆಹಲಿ ರಾಜಕಾರಣದಲ್ಲಿ ಒಡಿಶಾದ ಪ್ರಾತಿನಿಧ್ಯಕ್ಕೆ ಸದ್ಯ ಸಣ್ಣ ಖಾಲಿಜಾಗ ಸೃಷ್ಟಿಯಾಗಿದೆ. ಇದು ಒಡಿಶಾದ ಇತರ ಬಿಜೆಪಿ ನಾಯಕರಿಗೆ ಕೇಂದ್ರ ಸಂಪುಟ ಸೇರಲು ಹಾದಿ ಮಾಡಿಕೊಡಲಿದ್ದು, ರಾಜ್ಯ ಮತ್ತು ಕೇಂದ್ರ ನಾಯಕತ್ವದ ನಡುವೆ ಹೊಸ ಅಧಿಕಾರ ಕೇಂದ್ರ ಅಥವಾ ಸಮನ್ವಯದ ಕೊಂಡಿಯಾಗಿ ಹೊರಹೊಮ್ಮಲು ಅವಕಾಶ ನೀಡಲಿದೆ.
