Saturday, June 15, 2024

ಸತ್ಯ | ನ್ಯಾಯ |ಧರ್ಮ

ಅಮೆರಿಕದಲ್ಲಿ ಮೋದಿಯವರು ಸುಳ್ಳು ಹೇಳಿದರೇ?

ಪ್ರಧಾನಿ ನರೇಂದ್ರ ಮೋದಿಯವರಿಗೆ ‘ವಾಲ್ ಸ್ಟ್ರೀಟ್ ಜರ್ನಲ್’ ಪತ್ರಿಕೆಯ ವೈಟ್ ಹೌಸ್ ಕರೆಸ್ಪಾಂಡೆಂಟ್ ಸಬ್ರಿನಾ ಸಿದ್ದಿಖಿ ಕೇಳಿದ್ದು ಒಂದು ಸರಳ ಪ್ರಶ್ನೆ. ಭಾರತದಲ್ಲಿ ಮುಸ್ಲಿಮರು ಮತ್ತಿತರ ಅಲ್ಪಸಂಖ್ಯಾತರ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ, ಮಾನವಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ ಮತ್ತು ಅಭಿವ್ಯಕ್ತಿ ಹಕ್ಕನ್ನು ಹತ್ತಿಕ್ಕಲಾಗುತ್ತಿದೆ ಎಂದು ಬೆಟ್ಟು ಮಾಡುತ್ತಲೇ ಅದು, “ಈ ನಿಟ್ಟಿನಲ್ಲಿ ನೀವು ಏನು ಮಾಡಲಿದ್ದೀರಿ?” ಎಂಬುದಾಗಿತ್ತು. ನಮ್ಮ ಪ್ರಧಾನಿ ಸತ್ಯ ಹೇಳಿದರೇ? ಅಥವಾ ಹಸಿ ಹಸಿ ಸುಳ್ಳನ್ನು ಹೇಳಿದರೇ? ಆ ಮೂಲಕ ತಾನೂ ಮುಜುಗರಕ್ಕೀಡಾಗುವ ಜತೆಗೆ, ದೇಶವನ್ನೂ ಮುಜುಗರಕ್ಕೆ ಈಡು ಮಾಡಿದರೇ? – ಶ್ರೀನಿವಾಸ ಕಾರ್ಕಳ

ಅಮೆರಿಕಾದ ರಾಜಧಾನಿ ವಾಶಿಂಗ್ಟನ್ ನ ಶಕ್ತಿಕೇಂದ್ರ ವೈಟ್ ಹೌಸ್. ವೇದಿಕೆಯ ಮೇಲೆ ಪಕ್ಕದಲ್ಲಿ ವಿಶ್ವದ ಅತಿ ಬಲಾಢ್ಯ ದೇಶದ ಅಧ್ಯಕ್ಷ ನಿಂತಿದ್ದಾರೆ. ಮುಂದುಗಡೆ ನೂರಾರು ಪತ್ರಕರ್ತರು ನೆರೆದಿದ್ದಾರೆ. ಜಗತ್ತಿನ ಪ್ರತಿಷ್ಠಿತ ವಾರ್ತಾ ಸಂಸ್ಥೆಗಳ ಕ್ಯಾಮರಾಗಳು ದೃಶ್ಯವನ್ನು ಸೆರೆ ಹಿಡಿಯುತ್ತಿವೆ. ಇಡೀ ವಿಶ್ವ ಅಲ್ಲಿ ನಡೆಯುತ್ತಿರುವುದನ್ನು ಕುತೂಹಲದಿಂದ ನೋಡುತ್ತಿದೆ. ಇಂತಹ ಹೊತ್ತು, ಅಲ್ಲಿ ನಿಂತ ಭಾರತದ ಪ್ರಧಾನಿ ಪತ್ರಕರ್ತರ ಪ್ರಶ್ನೆಗೆ ಬಹಳ ಎಚ್ಚರಿಕೆಯಿಂದ ಮತ್ತು ಜವಾಬ್ದಾರಿಯುತವಾಗಿ ಉತ್ತರಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸತ್ಯ ಹೇಳಬೇಕು. ಯಾಕೆಂದರೆ ಅದು ವ್ಯಕ್ತಿಯ ಮಾತಲ್ಲ. ದೇಶದ ಮಾತು. ಶಾಶ್ವತ ದಾಖಲೆಗೆ ಸೇರುವ ಮಾತು. ಆದರೆ, ಅಲ್ಲಿ ನಮ್ಮ ಪ್ರಧಾನಿ ಸತ್ಯ ಹೇಳಿದರೇ? ಅಥವಾ ಹಸಿ ಹಸಿ ಸುಳ್ಳನ್ನು ಹೇಳಿದರೇ? ಆ ಮೂಲಕ ತಾನೂ ಮುಜುಗರಕ್ಕೀಡಾಗುವ ಜತೆಗೆ, ದೇಶವನ್ನೂ ಮುಜುಗರಕ್ಕೆ ಈಡು ಮಾಡಿದರೇ?

ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ‘ವಾಲ್ ಸ್ಟ್ರೀಟ್ ಜರ್ನಲ್’ ಪತ್ರಿಕೆಯ ವೈಟ್ ಹೌಸ್ ಕರೆಸ್ಪಾಂಡೆಂಟ್ ಸಬ್ರಿನಾ ಸಿದ್ದಿಖಿ ಕೇಳಿದ್ದು ಒಂದು ಸರಳ ಪ್ರಶ್ನೆ. ಆದರೆ, ಭಾರತವು ಒಂಬತ್ತು ವರ್ಷಗಳಿಂದ ಕೇಳಲು ಬಯಸುತ್ತಿದ್ದ ಬಹುಮುಖ್ಯ ಪ್ರಶ್ನೆ. ಅದು ಹೀಗಿತ್ತು- “ತಾನು ವಿಶ್ವದ ಬಹುದೊಡ್ಡ ಪ್ರಜಾತಂತ್ರ ಎಂದು ಭಾರತವು ದೀರ್ಘಕಾಲದಿಂದ ಹೆಮ್ಮೆ ಪಟ್ಟುಕೊಂಡಿದೆ. ಆದರೆ, ಅನೇಕ ಮಾನವ ಹಕ್ಕುಗಳ ಗುಂಪುಗಳು ಹೇಳುವ ಪ್ರಕಾರ, ನಿಮ್ಮ ಸರಕಾರವು ಮತೀಯ ಅಲ್ಪಸಂಖ್ಯಾತರ ವಿರುದ್ಧ ಭೇದ ಭಾವದಿಂದ ನಡೆದುಕೊಂಡಿದೆ ಮತ್ತು ತನ್ನ ಟೀಕಾಕಾರರ ಬಾಯಿ ಮುಚ್ಚಿಸಲು ಯತ್ನಿಸುತ್ತಿದೆ. ನಿಮ್ಮ ದೇಶದ ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರ ಹಕ್ಕುಗಳನ್ನು ಉತ್ತಮಗೊಳಿಸಲು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ನೀವು ಮತ್ತು ನಿಮ್ಮ ಸರಕಾರ ಏನು ಕ್ರಮ ಕೈಗೊಳ್ಳಲಿದೆ?”

ಸಬ್ರಿನಾ ಸಿದ್ದಿಖಿ

ಇದೊಂದು ತೀರಾ ಸರಳ ಪ್ರಶ್ನೆ. ಆದರೆ, ಭಾರತದಲ್ಲಿ ಮುಸ್ಲಿಮರು ಮತ್ತಿತರ ಅಲ್ಪಸಂಖ್ಯಾತರ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ, ಮಾನವಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ ಮತ್ತು ಅಭಿವ್ಯಕ್ತಿ ಹಕ್ಕನ್ನು ಹತ್ತಿಕ್ಕಲಾಗುತ್ತಿದೆ ಎಂದು ಬೆಟ್ಟು ಮಾಡುತ್ತಲೇ ಅದು, “ಈ ನಿಟ್ಟಿನಲ್ಲಿ ನೀವು ಏನು ಮಾಡಲಿದ್ದೀರಿ?” ಎಂಬ ಪ್ರಶ್ನೆಯನ್ನು ಕೇಳಿತ್ತು. “ಭಾರತವು ಒಂದು ಪ್ರಜಾತಂತ್ರವೇ?” ಎಂದು ಕೇಳಿರಲಿಲ್ಲ.

ಇದಕ್ಕೆ ಪ್ರಾಮಾಣಿಕ ಮತ್ತು ನೇರ ನಡೆನುಡಿಯ ನಾಯಕನೊಬ್ಬ ರಾಜಕೀಯವಾಗಿ ಸೂಕ್ತ ಎನಿಸುವ ಏನು ಉತ್ತರ ಕೊಡಬಹುದಿತ್ತು? “ಯಾವ ವ್ಯವಸ್ಥೆಯೂ ಪರಿಪೂರ್ಣವಲ್ಲ, ನಮ್ಮಲ್ಲೂ ಅಂತಹ ತಪ್ಪುಗಳು ಆಗಿರಬಹುದು, ಅಂತಹ ತಪ್ಪು ಆಗಿದ್ದರೆ ಅದನ್ನು ಸರಿಪಡಿಸಲು ಪ್ರಾಮಾಣಿಕವಾಗಿ ಯತ್ನಿಸುತ್ತೇನೆ” ಎನ್ನಬಹುದಿತ್ತು. ಆಗ ಯಾವ ವಿವಾದವೂ ಆಗುತ್ತಿರಲಿಲ್ಲ. ಆದರೆ ನೇರ ಪ್ರಶ್ನೆಗೆ ನೇರ ಉತ್ತರ ಕೊಡುವ ಬದಲು ನಮ್ಮ ಪ್ರಧಾನಿಯವರು ಪ್ರಜಾತಂತ್ರದ ಬಗ್ಗೆ ಒಂದು ದೀರ್ಘ ಉಪನ್ಯಾಸವನ್ನೇ ನೀಡಹೊರಟರು. “ಭಾರತವು ಪ್ರಜಾತಂತ್ರ ದೇಶ, ನಮ್ಮ ಡಿಎನ್ಎ ಯಲ್ಲಿಯೇ ಪ್ರಜಾತಂತ್ರ ಇದೆ, ನಾವು ಜಾತಿ, ಕುಲ, ಮತಧರ್ಮ, ಲಿಂಗತ್ವ ಹೀಗೆ ಯಾವುದೇ ನೆಲೆಯಲ್ಲಿಯೂ ಭೇದ ಭಾವ ಮಾಡುತ್ತಿಲ್ಲ, ಸರಕಾರಿ ಸೌಲಭ್ಯಗಳನ್ನು ಕೊಡುವಾಗ ಎಲ್ಲರಿಗೂ ಸಮಾನವಾಗಿ ಅದನ್ನು ಕೊಡಲಾಗುತ್ತದೆ” ಎಂದೆಲ್ಲ ಅಪ್ರಸ್ತುತ ವಿಷಯಗಳನ್ನು ಪ್ರಸ್ತಾಪಿಸಿದರು. ಆದರೆ ಮುಖ್ಯ ಪ್ರಶ್ನೆಗೆ ಕೊನೆಗೂ ಉತ್ತರ ಕೊಡಲೇ ಇಲ್ಲ!

ಮೊದಲ ಪತ್ರಿಕಾಗೋಷ್ಠಿ

ಪ್ರಧಾನಿಯಾಗಿ ತನ್ನ ಅಧಿಕಾರದ ಒಂಬತ್ತು ವರ್ಷಗಳಲ್ಲಿ ನರೇಂದ್ರ ಮೋದಿಯವರು ಎದುರಿಸಿದ ಮೊದಲ ಪತ್ರಿಕಾಗೋಷ್ಠಿಯಿದು. ಪ್ರಶ್ನೆ ಏನಿರಬಹುದು ಎಂಬ ಸುಳಿವೇ ಇಲ್ಲದೆ ಪತ್ರಕರ್ತರೊಬ್ಬರಿಂದ ಎದುರಿಸಿದ ಮೊದಲ ಪ್ರಶ್ನೆಯಿದು. ಮೋದಿಯವರು ಅಮೆರಿಕದ ಒತ್ತಡಕ್ಕೆ ಮಣಿದು ಪತ್ರಕರ್ತರ ಪ್ರಶ್ನೆ ಎದುರಿಸಲು ಒಪ್ಪಿಕೊಂಡದ್ದೇ ಹೊರತು ಪೂರ್ಣ ಮನಸಿನಿಂದ ಅಲ್ಲ. ಪತ್ರಿಕಾಗೋಷ್ಠಿಗೆ ಮೊದಲು ಭಾರತದ ಅಧಿಕಾರಿಗಳು ಸುತರಾಂ ಒಪ್ಪಲಿಲ್ಲ ಎಂದೂ ವರದಿಗಳು ಹೇಳುತ್ತಿವೆ.

ತಾನು ಪ್ರಧಾನಿಯಾದ ಬಳಿಕ ನರೇಂದ್ರ ಮೋದಿಯವರು ಯಾಕೆ ಪತ್ರಿಕಾಗೋಷ್ಠಿಯನ್ನು ನಡೆಸಿ ಎಂದೂ ಪತ್ರಕರ್ತರಿಂದ ಮುಕ್ತವಾಗಿ ಪ್ರಶ್ನೆಯನ್ನು ಎದುರಿಸುವ ಧೈರ್ಯ ತೋರಲಿಲ್ಲ? ಯಾಕೆಂದರೆ, ಅವರಲ್ಲಿ ಪ್ರಶ್ನೆಗಳಿಗೆ ಉತ್ತರಗಳಿರಲಿಲ್ಲ. ಅವರ ಮಾತು ಮತ್ತು ಕೃತಿಯ ನಡುವೆ ಅಗಾಧ ಅಂತರವಿತ್ತು. ಚುನಾವಣಾ ಕಾಲದಲ್ಲಿ ಕಪ್ಪು ಹಣ, ರೈತರ ಸಾಲ ಮನ್ನಾ, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ, ಸಬಕಾ ಸಾತ್ ಸಬಕಾ ವಿಕಾಸ್, ಆರ್ಥಿಕ ವಿಕಾಸ, ಬೆಲೆ ಇಳಿಕೆ ಹೀಗೆ ಅಚ್ಛೇದಿನದ ಚಂದ್ರನನ್ನೇ ಧರೆಗಿಳಿಸುವೆ ಎಂದು ಭರವಸೆ ನೀಡಿ, ಜನರನ್ನು ನಂಬಿಸಿ ಅಧಿಕಾರ ಹಿಡಿದ ಮೋದಿಯವರು, ಮುಂದೆ ಚುನಾವಣಾ ಭರವಸೆ ಈಡೇರಿಸುವ ಯಾವ ಯತ್ನವನ್ನೂ ಮಾಡಲಿಲ್ಲ. ಮಾಡಿದ್ದು ಆರ್ ಎಸ್ ಎಸ್ ನ ಅಜೆಂಡಾಗಳ ಜಾರಿಗೆ ಯತ್ನ. ಅದರ ಭಾಗವಾಗಿಯೇ ಮತಧರ್ಮದ ನೆಲೆಯಲ್ಲಿ ಒಡೆದು ಆಳುವ ನೀತಿಯ ಅನುಷ್ಠಾನ. ಹಿಂದೂ ರಾಷ್ಟ್ರ ನಿರ್ಮಾಣದತ್ತ ಒಂದೊಂದೇ ಹೆಜ್ಜೆ. ಅದರ ಭಾಗವಾಗಿಯೇ ರಾಮಮಂದಿರ ನಿರ್ಮಾಣ, ಸಂಸತ್ ಉದ್ಘಾಟನೆಯಲ್ಲಿ ಸರ್ವಧರ್ಮ ಸಮಭಾವಕ್ಕೆ ತಿಲಾಂಜಲಿ ನೀಡಿ, ಹಿಂದೂ ವೈದಿಕ ಪದ್ಧತಿಗಳ ವೈಭವೀಕರಣ. ಭಾರತದ ಬಹುತ್ವ ಸ್ವರೂಪಕ್ಕೆ ಮಾರಕ ಎನಿಸುವಂತೆ ‘ಒಂದು ದೇಶ ಒಂದು ಭಾಷೆ, ಒಂದು ಧರ್ಮ, ಒಂದು ಸಂಸ್ಕೃತಿ, ಒಬ್ಬ ನಾಯಕ’ ಆಲೋಚನೆಯ ಹೇರಿಕೆ, ನೋಟು ನಿಷೇಧ, ಲಾಕ್ ಡೌನ್ ನಂತಹ ಮಾರಕ ನಿರ್ಧಾರಗಳು, ನೆಲಕಚ್ಚಿದ ಆರ್ಥಿಕತೆ. ಈ ಎಲ್ಲ ಕಾರಣಗಳಿಂದಾಗಿ ಮೋದಿಯವರಿಗೆ ಪತ್ರಕರ್ತರ ಕಠಿಣ ಪ್ರಶ್ನೆಗಳನ್ನು ಎದುರಿಸುವ ಧೈರ್ಯ ಇರಲಿಲ್ಲ. ಹಾಗಾಗಿ, ಪತ್ರಿಕಾಗೋಷ್ಠಿಯನ್ನೇ ನಡೆಸದಿದ್ದರಾಯಿತಲ್ಲ!

ಭಿನ್ನ ದನಿಗಳನ್ನು ಹೊಸಕಿಹಾಕಿಲ್ಲವೇ?

ಈಗ, ಅಮೆರಿಕದಲ್ಲಿ ಮೋದಿಯವರು ನೀಡಿದ ಉತ್ತರದಲ್ಲಿನ ಎರಡು ಮುಖ್ಯ ವಿಷಯಗಳನ್ನು ಗಮನಿಸೋಣ. ಸರಕಾರದ ಟೀಕಾಕಾರರ ಬಾಯಿ ಮುಚ್ಚಿಸುವ ಯತ್ನಗಳ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿರುವ ಬಗ್ಗೆ ಸೂಕ್ತ ಪ್ರತಿಕ್ರಿಯೆ ನೀಡದ ನಮ್ಮ ಪ್ರಧಾನಿಗಳು ‘ನಮ್ಮ ಡಿಎನ್ಎ ಯಲ್ಲಿಯೇ ಪ್ರಜಾತಂತ್ರ ಇದೆ’ ಎನ್ನುತ್ತಾರೆ. ಆದರೆ, ಕಳೆದ ಒಂಬತ್ತು ವರ್ಷಗಳಲ್ಲಿ, ತಮ್ಮ ಸರಕಾರವನ್ನು ಟೀಕಿಸಿದವರ ಮತ್ತು ಪ್ರಶ್ನಿಸಿದವರ ವಿರುದ್ಧ ಕಠಿಣ ಕ್ರಮ, ಭೀಮಾ ಕೋರೇಗಾಂವ್ ಸುಳ್ಳು ಪ್ರಕರಣದಡಿಯಲ್ಲಿ ಸುಮಾರು 16 ಮಂದಿ ವಿದ್ವಾಂಸರು, ಮಾನವಹಕ್ಕುಗಳ ಪರ ಹೋರಾಟಗಾರರು, ಕವಿಗಳ ಬಂಧನ, ಸ್ಟಾನ್ ಸ್ವಾಮಿಯವರ ಕಸ್ಟಡಿ ಸಾವು, ದೆಹಲಿ ಗಲಭೆ ನೆಪದಲ್ಲಿ ಉಮರ್ ಖಾಲೀದ್ ಸಹಿತ ಅನೇಕ ವಿದ್ಯಾರ್ಥಿ ಹೋರಾಟಗಾರರು ಈಗಲೂ ಜೈಲಿನಲ್ಲಿರುವುದು, ಸಿದ್ದಿಖಿ ಕಪ್ಪನ್ ಎಂಬ ಪತ್ರಕರ್ತ ಎರಡು ವರ್ಷಗಳ ಕಾಲ ಜೈಲಿನಲ್ಲಿದ್ದುದು, ಪತ್ರಕರ್ತರ ವಿರುದ್ಧ ಪ್ರಕರಣಗಳು, ಕಾಶ್ಮೀರದಲ್ಲಿ ಮಾಧ್ಯಮಗಳ ವಿರುದ್ಧ ಕಾರ್ಯಾಚರಣೆ, ಪತ್ರಕರ್ತರ ಬಂಧನ, ಬಿಬಿಸಿ ಮತ್ತು ಟ್ವಿಟರ್ ಗಳ ಕಚೇರಿಗಳ ಮೇಲೆ ದಾಳಿ, ಆಮ್ನೆಸ್ಟಿ ಇಂಟರ್ ನ್ಯಾಶನಲ್, ಗ್ರೀನ್ ಪೀಸ್ ಸಹಿತ ಅನೇಕ ಎನ್ ಜಿ ಒ ಗಳ  ಕಾರ್ಯಾಚರಣೆ ಸ್ಥಗಿತಗೊಳಿಸಿದ್ದು, ಚುನಾಯಿತ ಸರಕಾರಗಳ ಉರುಳಿಸುವಿಕೆ, ವಿಪಕ್ಷಗಳ ಮೇಲೆ ಕೇಂದ್ರೀಯ ಏಜನ್ಸಿಗಳಿಂದ ದಾಳಿ ಇವೆಲ್ಲ ಏನನ್ನು ಹೇಳುತ್ತವೆ? ಈಗ, ಮೋದಿ ಅಂದರೆ ಸರಕಾರ, ಮೋದಿ ಎಂದರೆ ದೇಶ. ಮೋದಿಯವರನ್ನು, ಸರಕಾರವನ್ನು ಟೀಕಿಸುವುದು ಎಂದರೆ, ದೇಶವನ್ನು ಟೀಕಿಸುವುದು, ಹಾಗಾಗಿ ಅದು ದೇಶದ್ರೋಹದ ಕೆಲಸ ಎನ್ನುವಂತಾಗಿದೆ. ತುರ್ತುಸ್ಥಿತಿಯನ್ನು ಅಧಿಕೃತವಾಗಿಯೇನೋ ಘೋಷಿಸಿಲ್ಲ. ಆದರೆ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿರುವ ದೇಶದಲ್ಲಿ, ಮಾತಿನ ಸ್ವಾತಂತ್ರ್ಯವೇನೋ ಇದೆ. ಆದರೆ ಮಾತಿನ ಆನಂತರದ ಸ್ವಾತಂತ್ರ್ಯ ಇದೆಯೇ?

ಮುಸ್ಲಿಮರ ಪರಿಸ್ಥಿತಿ ಹೇಗಿದೆ?

ದೇಶದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ದಮನ ನಡೆಯುತ್ತಿಲ್ಲವೇ? ಹಾಗಾದರೆ 2014 ರ ನಂತರ ಗೋರಕ್ಷಣೆಯ ಹೆಸರಿನಲ್ಲಿ ಅಖ್ಲಾಕ್, ಪೆಹಲೂ ಖಾನ್, ಜುನೈದ್, ನಾಸಿರ್, ವಾರಿಸ್, ಇದ್ರಿಸ್ ಪಾಶಾ, ಅಲಿಮುದ್ದೀನ್ ಅನ್ಸಾರಿ, ಮೊಹಮ್ಮದ್ ಖಾಸಿಂ, ಅಫಾನ್ ಅನ್ಸಾರಿ ಹೀಗೆ 36 ಕ್ಕೂ ಅಧಿಕ ಮಂದಿಯ ಹತ್ಯೆ ಯಾಕಾಯಿತು? ಸಿಎಎ ಯಲ್ಲಿ ಮುಸ್ಲಿಮರನ್ನು ಮಾತ್ರ ಯಾಕೆ ಹೊರಗಿಡಲಾಯಿತು? ಮುಸ್ಲಿಮ್ ಬಾಹುಳ್ಯದ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಇಲ್ಲವಾಗಿಸಿ ಅದರ ರಾಜ್ಯ ಸ್ಥಾನಮಾನವನ್ನೇ ಯಾಕೆ ಕಿತ್ತು ಹಾಕಲಾಯಿತು? ಲವ್ ಜಿಹಾದ್ ಸುಳ್ಳಿನ ಹೆಸರಿನಲ್ಲಿ ಮುಸ್ಲಿಮರ ಮೇಲೆ ನಡೆದ ದಾಳಿಗಳು ಎಷ್ಟು? ಅಪರಾಧ ಸಾಬೀತಾಗುವ ಮುನ್ನವೇ ಎಷ್ಟು ಮುಸ್ಲಿಮರ ಮನೆಗಳನ್ನು ಬುಲ್ ಡೋಜರ್ ಬಳಸಿ ನೆಲಸಮಗೊಳಿಸಲಾಯಿತು? ಮುಸ್ಲಿಮರ ಮಾರಣ ಹೋಮಕ್ಕೆ ಹಿಂದುತ್ವ ನಾಯಕರು ಬಹಿರಂಗ ಕರೆಕೊಟ್ಟಾಗ, ಮುಸ್ಲಿಮರೊಡನೆ ವ್ಯಾಪಾರ ಮಾಡಬೇಡಿ ಎಂದು ಸಂಸದರೇ ಕರೆಕೊಟ್ಟಾಗ, ಉತ್ತರಾಖಂಡದ ಮುಸ್ಲಿಮರು ಊರು ತೊರೆಯಬೇಕು ಎಂದು ಬಹಿರಂಗವಾಗಿ ಬೆದರಿಕೆ ಹಾಕಿದಾಗ ಸರಕಾರ ಏನು ಮಾಡಿತು? ಮತ್ತು ಪ್ರಧಾನಿಗಳು ಆಗಲಾದರೂ ಮೌನ ಮುರಿದರೇ? ಕರ್ನಾಟಕದಲ್ಲಿ ಹಿಜಾಬ್ ಧರಿಸಿದ ಹೆಣ್ಣುಮಕ್ಕಳನ್ನು ಶಾಲೆಯಿಂದ ಹೊರಹಾಕಲಾಯಿತು, ಮುಸ್ಲಿಮರ ನಾಲ್ಕು ಪ್ರತಿಶತ ಮೀಸಲಾತಿಯನ್ನು ಕಿತ್ತು ಹಾಕಲಾಯಿತು, ಹಲಾಲ್ ವಿರುದ್ಧ ಅಭಿಯಾನ ನಡೆಸಲಾಯಿತು, ಜಾತ್ರೆಯ ಸಂದರ್ಭದಲ್ಲಿ ದೇಗುಲಗಳ ವಠಾರದಲ್ಲಿ ಮುಸ್ಲಿಮರು ವ್ಯಾಪಾರ ಮಾಡಬಾರದು ಎಂದು ಹೇಳಲಾಯಿತು, ನಮಾಜ್ ನಡೆಸುತ್ತಿರುವವರ ಮೇಲೆ ದಾಳಿ ನಡೆಸಲಾಯಿತು, ಕ್ರೈಸ್ತರನ್ನು ಮತಾಂತರಿಗಳು ಎಂದು ಹಂಗಿಸಲಾಯಿತು, ಈ ಸಂಬಂಧ ಮತಾಂತರ ನಿಷೇಧ ಮಸೂದೆ ತರಲಾಯಿತು, ಚರ್ಚ್ ಗಳ ಮೇಲೆ ದಾಳಿ ನಡೆಸಲಾಯಿತು, ಮಣಿಪುರದಲ್ಲಿ ಕ್ರೈಸ್ತ ಮತಾನುಯಾಯಿಗಳ ಮೇಲೆ ದಾಳಿ ನಡೆಸಲಾಯಿತು, ಅವರ ನೂರಾರು ಚರ್ಚ್ ಗಳನ್ನು ಸುಟ್ಟು ಹಾಕಲಾಯಿತು. ಇವೆಲ್ಲ ಸಾಲದು ಎಂಬಂತೆ ಈಗ ಸಮಾನ ನಾಗರಿಕ ಕಾಯಿದೆ ತರಲು ವೇದಿಕೆ ಸಜ್ಜುಗೊಳಿಸಲಾಗುತ್ತಿದೆ. ಇವೆಲ್ಲ ಅಲ್ಪಸಂಖ್ಯಾತರೂ ನಮ್ಮವರು ಎಂಬ ‘ಸಬ್ ಕಾ ಸಾತ್’  ಪರಿಕಲ್ಪನೆಯೇ?

ಇದನ್ನೂ ಓದಿ-11 ಕೊಲೆ, 69 ಖುಲಾಸೆ…!

ಈಗ ನಿರೀಕ್ಷೆಯಂತೆಯೇ, ಪ್ರಶ್ನೆ ಕೇಳಿದ ಸಬ್ರಿನಾ ಸಿದ್ದಿಖಿ ಮೇಲೆ ದಾಳಿ ನಡೆಸಲಾಗುತ್ತಿದೆ. ಆಕೆಯ ಹೆತ್ತವರು, ದೇಶ, ಧರ್ಮ ಎಲ್ಲವನ್ನೂ ಜಾಲಾಡಲಾಗುತ್ತಿದೆ. ಮುಸ್ಲಿಮರ ವಿರುದ್ಧ ಭೇದ ಮಾಡಬೇಡಿ ಎಂದ ಬರಾಕ್ ಒಬಾಮಾ ವಿರುದ್ಧ ಬಿಜೆಪಿಯ ದೊಡ್ಡ ನಾಯಕರು ಮುಗಿಬಿದ್ದಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹೇಮಂತ್ ಬಿಸ್ವ ಶರ್ಮ ಒಬಾಮಾರ ಮುಸ್ಲಿಂ ಐಡೆಂಟಿಯನ್ನು ಗುರಿ ಮಾಡಿ ಮಾತನಾಡಿದ್ದಾರೆ. ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಬರಾಕ್ ಆರು ಮುಸ್ಲಿಂ ದೇಶಗಳ ಮೇಲೆ ಬಾಂಬು ಹಾಕಿದವರು ಎಂದು ಛೇಡಿಸಿದ್ದಾರೆ. ರಕ್ಷಣಾ ಮಂತ್ರಿ ರಾಜನಾಥ ಸಿಂಗ್ ಕೂಡಾ ಒಬಾಮಾ ವಿರುದ್ಧ ಟೀಕೆಯ ಮಾತಾಡಿದ್ದಾರೆ. ಹೀಗೆ ಮೆಸೇಜ್ ಗಳ ಬದಲಿಗೆ ಮೆಸೆಂಜರ್ ಗಳನ್ನು ಗುರಿ ಮಾಡುವ ಮೂಲಕ ಮತ್ತೆ ಇವರು ಒಬಾಮಾ ಮತ್ತು ಸಬ್ರಿನಾ ಸಿದ್ದಿಖಿಯ ಮಾತನ್ನೇ ರುಜುವಾತು ಪಡಿಸುತ್ತಿಲ್ಲವೇ? ಇಂತಹ ನಡೆ ದೇಶಕ್ಕೆ ಒಳ್ಳೆಯ ಹೆಸರು ತರುವುದೇ? ಇದು ಭಾರತೀಯರ ಡಿ ಎನ್ ಎ ಯಲ್ಲಿಯೇ ಪ್ರಜಾತಂತ್ರ ಇರುವುದರ ದ್ಯೋತಕವೇ?

ನಿಜ, ಈ ಬಾರಿಯ ನಮ್ಮ ಪ್ರಧಾನಿಗಳ ಅಮೆರಿಕಾ ಪ್ರವಾಸ ಐತಿಹಾಸಿಕವಾಗಿತ್ತು. ಯಾಕೆಂದರೆ, ಅವರು ಒಂಬತ್ತು ವರ್ಷಗಳಲ್ಲಿ ಮೊದಲ ಬಾರಿಗೆ ಪತ್ರಿಕಾಗೋಷ್ಠಿಯನ್ನು ಎದುರಿಸಿದರು. ಅಮೆರಿಕ ಪತ್ರಕರ್ತೆಯ ಮೂಲಕವಾದರೂ ಈಗ ಅವರಿಗೆ ಭಾರತದ ಮಾನವಹಕ್ಕುಗಳ ವಸ್ತು ಸ್ಥಿತಿ ಅರ್ಥವಾಗಿರಬಹುದು. ಅಲ್ಲದೆ, ಭಾರತದ ವಿದ್ಯಮಾನಗಳನ್ನು ಜಗತ್ತು ಗಮನಿಸುತ್ತಿದೆ ಎಂಬುದೂ ಗೊತ್ತಾಗಿರಬಹುದು. ಹಾಗಾಗಿ, ಇನ್ನಾದರೂ ನರೇಂದ್ರ ಮೋದಿಯವರು ಮಾನವಹಕ್ಕುಗಳ ವಿಷಯದಲ್ಲಿ ತಮ್ಮ ಆಡಳಿತ ಕಾಲದಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸುವರು, ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ತಡೆಯುವರು, ಭಾರತದ ಬಹುತ್ವ ಸ್ವರೂಪವನ್ನು ಉಳಿಸಲು ಯತ್ನಿಸುವರು ಎಂದು ಭಾವಿಸೋಣವೇ?

ಶ್ರೀನಿವಾಸ ಕಾರ್ಕಳ

ಚಿಂತಕರೂ, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.

ಇದನ್ನೂ ಓದಿ-ಅಘೋಷಿತ ತುರ್ತುಪರಿಸ್ಥಿತಿಯ ಅಗಣಿತ ರೂಪಗಳು

Related Articles

ಇತ್ತೀಚಿನ ಸುದ್ದಿಗಳು