Monday, June 17, 2024

ಸತ್ಯ | ನ್ಯಾಯ |ಧರ್ಮ

ಮುಸ್ಲೀಂ ಬಾಂಧವರು ಬಕ್ರೀದ್ ಹಬ್ಬದ ಊಟಕ್ಕೆ ಕರೆಯಲಿಲ್ಲವೇ?

ಬಕ್ರೀದ್ ಗೆ ಮುಸ್ಲಿಂ ಬಾಂಧವರು ಊಟಕ್ಕೆ ಕರೆಯಲಿಲ್ಲವೆಂದು ಪ್ರೀತಿಯಿಂದ ಆರೋಪಿಸೋದು ಒಂದ್ಕಡೆಯಾದ್ರೆ, ಮುಸ್ಲೀಂ ಭಾಂಧವರ ಮನೆಗಳಲ್ಲಿ ಬಕ್ರೀದ್ ಹಬ್ಬಕ್ಕೆ ಹೋಗಿ ಊಟ ಮಾಡಿದ್ದರ ಚಿತ್ರ ಹಾಕೊಂಡು ಖುಷಿ ಪಡೋದು ಮತ್ತೊಂದ್ಕಡೆ.

ಆದ್ರೆ ಇಷ್ಟು ವರ್ಷ ಯುಗಾದಿ, ದೀಪಾವಳಿ, ನಾಗರಪಂಚಮಿ, ಊರಮ್ಮನ ಜಾತ್ರೆ ಮೊದಲಾದ ಇಂತಹ ಸಾಲು ಸಾಲು ಹಿಂದುಗಳ ಹಬ್ಬಗಳಲ್ಲಿ ನಮ್ಮನ್ಯಾಕೆ ಕರೀಲಿಲ್ಲ ಎನ್ನುವ ಪ್ರೀತಿಯ ಆರೋಪವನ್ನೂ ಮುಸ್ಲಿಂ‌ ಭಾಂಧವರು‌ ಮಾಡಿದ್ದನ್ನು ನಾನು ನೋಡಲಿಲ್ಲ.

ಅಂತೆಯೇ ನಾನು ಈ ಹಬ್ಬಗಳಲ್ಲಿ ಇ‌ಂತಿಂತವರ ಮನೆಯಲ್ಲಿ ಹಬ್ಬದೂಟ ಮಾಡಿದೆ ಎಂದು ಫೋಟೋ ಹಾಕಿಕೊಂಡಿದ್ದನ್ನೂ ನಾ ಕಾಣೆ… ಇದ್ದರೆ ಬೆರಳೆಣಿಕೆಯ ಉದಾಹರಣೆ ಸಿಗಬಹುದು.

ಯಾಕೆ ಹೀಗೆ ಅಂತ?
ಮುಸ್ಲೀಮರ ಮನೆಗಳಲ್ಲಿ ಊಟ ಮಾಡುವುದನ್ನು ವಿಶೇಷವೆನ್ನಿಸುವಂತೆ ಬಿಂಬಿಸುವ ನಾವುಗಳು‌ ನಮ್ಮಮನೆಗಳಲ್ಲಿ ಮುಸ್ಲೀಮರ ಊಟವನ್ನು ಸಹಜವೆಂದು ಭಾವಿಸುತ್ತೇವೆಯೆ? ಅಥವಾ ಭಾವಿಸುತ್ತಿಲ್ಲ ಯಾಕೆ?
ಅಥವಾ
ನಮ್ಮಹಬ್ಬಗಳಿಗೆ ಮುಸ್ಲೀಮರನ್ನು ಆಹ್ವಾನಿಸಿದರೆ ಅದನ್ನೂ ಸೌಹಾರ್ಧತೆಯ ಭಾಗವಾಗಿ ಸಾರ್ವಜನಿಕವಾಗಿ ಹಂಚಿಕೊಳ್ಳುವುದು ಕಡಿಮೆ.

ಯಾಕೆ ಹೀಗೆ..?
ಹೀಗೆ ಮಾಡುವ ಮೂಲಕ ಅನುಕಂಪ ತೋರುವುದು, ವಿಶೇಷವೆಂಬಂತೆ ತೋರಿಸುತ್ತಲೇ ಮುಸ್ಲಿಂ ಬಾಂಧವರನ್ನು ಎಂಥದೋ‌ ‘ಅವರು’ ಎಂಬ ಪ್ರತ್ಯೇಕತೆಯ ಸಾಂಕೇತಿಕತೆಯನ್ನು ಬಲಗೊಳಿಸುತ್ತೇವೆಯಾ? ಎನ್ನುವ ಅನುಮಾನ. ಇದು ಹೊಸ ತಲೆಮಾರಿನ ಮಕ್ಕಳಲ್ಲಿ ಹೀಗೆಯೇ ಪರಿಣಾಮ ಬೀರಿದಂತೆ ಕಾಣುತ್ತದೆ.

ಉತ್ತರ ಕರ್ನಾಟಕ-ಕಲ್ಯಾಣ ಕರ್ನಾಟಕದ ಹಳ್ಳಿಗಳಲ್ಲಿ ಹಿಂದು-ಮುಸ್ಲೀಮರು ಮದುವೆ ಮುಂಜಿಗಳಲ್ಲಿ ಬೆರೆಯುವುದು, ಮೊಹರಂ ಹಬ್ಬದಲ್ಲಿ ತಾತ್ಕಾಲಿಕವಾಗಿ ಧರ್ಮದ ಗಡಿಗೆರೆ ಅಳಿಸಿ ಒಂದಾಗುವುದು, ಅಳಿಯ ಮಾವ, ಅಣ್ಣ ತಮ್ಮ, ದೊಡ್ಡಮ್ಮ ಚಿಕ್ಕಮ್ಮ ಮೊದಲಾದ ಸಂಬಂಧ ವಾಚಕಗಳಲ್ಲಿ ಆತ್ಮೀಯತೆ ತೋರುವುದು ಸಹಜವೆಂಬಂತೆ ಕಾಣುತ್ತವೆ.

ಇಂತಹ ಸಹಜ ಹೊಂದಾಣಿಕೆ ಕೊಡುಕೊಳೆ ಇಂದು ಮುಖ್ಯ ಅನ್ನಿಸುತ್ತೆ, ಪ್ರತ್ಯೇಕವೆಂಬಂತೆ ತೋರುವ ಯಾವ ಚಟುವಟಿಕೆಗಳೂ ಧರ್ಮದ ಗಡಿಗೆರೆಗಳನ್ನು ತಾತ್ಕಾಲಿಕವಾಗಿಯೂ ಅಳಿಸಿದಂತೆ ಕಾಣುವುದಿಲ್ಲ.

ಅಂಬೇಡ್ಕರ್ ಜಾತಿ ವಿನಾಶಕ್ಕಾಗಿ ಹೇಳುವ ಸಹಭೋಜನದ ಪರಿಣಾಮ ತೀರಾ ಕಡಿಮೆಯೇನಲ್ಲ.

ದಲಿತರೆ ಮಾಡುವ ಗ್ರಾಮದೇವತೆಯ ಬೇಟೆ ಹಬ್ಬಗಳಲ್ಲಿ ಊರಿನ ಅನೇಕ ಮೇಲ್ಜಾತಿಗಳು ಉಂಡು ಬರುತ್ತಾರೆ. ಈ ಊಟವನ್ನು ಸಾರ್ವಜನಿಕಗೊಳಿಸುವುದಿಲ್ಲ. ಅಪರೂಪಕ್ಕೆ ದಲಿತ ಮೇಲ್ಮದ್ಯಮ ವರ್ಗದ ಯುವಕ ಯುವತಿಯರು ಮೇಲ್ಮಧ್ಯಮ ಜಾತಿಗಳ ಮನೆಗಳಲ್ಲೂ ಊಟ ಮಾಡಬಹುದು. ಅದನ್ನೂ ಸಾರ್ವಜನಿಕಗೊಳಿಸುವುದು ಕಡಿಮೆ. ಅಂದರೆ ಜಾತಿಗಳ ಬೆರೆಯುವಿಕೆ ಸಾರ್ವಜನಿಕ ಸುದ್ದಿಯಾಗದು. ಧರ್ಮಗಳ ಬೆರೆಯುವಿಕೆ ಸಾರ್ವಜನಿಕ ಸುದ್ದಿಯಾಗುವುದರ ಹಿಂದಣ ಇರುವ ಆಶಯವೇನು?

ದಲಿತ ಮೇಲ್ಜಾತಿಗಳ ಬೆರೆಯುವಿಕೆಯ ಗೌಪ್ಯತೆ ಕಾಪಾಡುವುದರ ಹಿಂದೆ ಜಾತೀಯತೆಯನ್ನು ಹಾಗೇ ಉಳಿಸುವ ಮನಸ್ಥಿತಿ ಕೆಲಸ ಮಾಡುತ್ತದೆ.

ಇನ್ನಾದರೂ ಸಾಮಾಜಿಕ‌‌ ಜಾಲತಾಣಗಳಲ್ಲಿ ಮೇಲುಜಾತಿಗಳು ದಲಿತರ‌ ಮನೆಗಳಲ್ಲಿ ಊಟ ಮಾಡಿದ್ದನ್ನು, ತಮ್ಮ ಮನೆಗಳಲ್ಲಿ ದಲಿತರು ಊಟ ಮಾಡಿದ್ದರ ಚಿತ್ರಗಳನ್ನು ಹೀಗೆ ಸಾರ್ವಜನಿಕವಾಗಿ ಹಂಚಿಕೊಳ್ಳುವ ಅಭಿಯಾನವೂ ಶುರುವಾಗಲಿ.

ಭಾರತದ ಸಂವಿಧಾನದ ಪ್ರಸ್ತಾವನೆ ‘ಭಾರತದ ಜನೆತೆಯಾದ ನಾವು’ ಎಂದು ಶುರುವಾಗುತ್ತದೆ. ಈ ಜನತೆಯಾದ ‘ನಾವು’ ಗಳಲ್ಲಿ ಮುಸ್ಲೀಮರೂ ಇದ್ದಾರೆ. ಸೂಕ್ಷ್ಮವಾಗಿ ಗಮನಿಸಿ ಪ್ರಜ್ಞಾವಂತರೂ ಮುಸ್ಲೀಮರನ್ನು ‘ಅವರು’ ಎಂದು ಸಂಭೋದಿಸಲು ಶುರು ಮಾಡಿದ್ದಾರೆ. ಒಂದು ಊರಿನ ಮೇಲ್ಜಾತಿಗಳೂ ದಲಿತರನ್ನೂ ‘ಅವರು’ ಎಂದೇ ಗುರುತಿಸಿತ್ತಿದ್ದರು. ಗಂಡಸರೆಲ್ಲಾ ಒಟ್ಟಾದಾಗ ಗಂಡುಕುಲದ ಬಗ್ಗೆ ಮಾತನಾಡುವಾಗ ಮಹಿಳೆಯರನ್ನೂ ಹೀಗೆ ‘ಅವರು’ ಎಂದೇ ಗುರುತಿಸುತ್ತಾರೆ.

ಈ ‘ಅವರು’ ‘ನಾವು’ ಎನ್ನುವ ಬೌಂಡರಿಯನ್ನು ಸಂವಿಧಾನ ಹೊಡೆದು ಹಾಕಿಯೇ ‘ಜನತೆಯಾದ ನಾವುಗಳು’ ಎಂದಿದೆ. ಹಾಗಾಗಿ ನಮ್ಮಲ್ಲಿಯ ಕೆಲವರು ಅವರಾಗುವುದು ಬೇಡ. ‘ನಾವು’ ನಾವಾಗಿರಲು ಪ್ರಯತ್ನಿಸೋಣ.

~ ಅರುಣ್‌ ಜೋಳದಕುಡ್ಲಿಗಿ

Related Articles

ಇತ್ತೀಚಿನ ಸುದ್ದಿಗಳು