“..‘ದಿಡುಗು’ ಸಂಕಲನದ ಪ್ರತಿಯೊಂದು ಪಾತ್ರವೂ ಪುಸ್ತಕ ಮುಗಿದ ಮೇಲೆಯೂ ನಮ್ಮ ನೆನಪಿನಲ್ಲಿ ಸದಾ ಜೀವಂತವಾಗಿ ಉಳಿಯುತ್ತವೆ..” ಲೇಖಕಿ ರುಕ್ಮಿಣಿ ನಾಗಣ್ಣವರ ಬರಹದಲ್ಲಿ
ಮಲ್ಲಮ್ಮ ಜೊಂಡಿ ಅವರ ‘ದಿಡುಗು’ ಕಥಾಸಂಕಲನ ಓದಿ ಮುಗಿಸಿದ ಮೇಲೆಯೂ ನನ್ನ ಮನಸ್ಸಿನೊಳಗೆ ಪಾತ್ರಗಳು ಬಿಟ್ಟುಹೋದ ನೋವುಗಳು ಮತ್ತು ಅವು ಎತ್ತಿದ ಪ್ರಶ್ನೆಗಳು ಸತತವಾಗಿ ಕಾಡುತ್ತಲೇ ಇದ್ದವು. ಅದು ನಮಗೆ ಗೊತ್ತಿಲ್ಲದ ಜಗತ್ತನ್ನು ಪರಿಚಯಿಸುವುದಷ್ಟೇ ಅಲ್ಲ, ಗೊತ್ತಿದೆ ಎಂದುಕೊಂಡಿರುವ ಬದುಕನ್ನೂ ಮತ್ತೊಮ್ಮೆ ಆಳವಾಗಿ ನೋಡುವಂತೆ ಮಾಡುತ್ತದೆ. ನಾವು ದಿನವೂ ನೋಡುವ, ದಾಟಿ ಹೋಗುವ ತೀರಾ ಸಾಮಾನ್ಯ ಮನುಷ್ಯರ ಗರ್ಭದೊಳಗೆ ಇಳಿದು ನೋಡಿದಾಗ, ನಾವೆಂದೂ ಗಮನಿಸದ ಇನ್ನೊಂದು ಜಗತ್ತು ತೆರೆದುಕೊಳ್ಳುತ್ತದೆ. ‘ದಿಡುಗು’ ಸಂಕಲನದ ಎಂಟು ಕಥೆಗಳಲ್ಲಿ ಬರುವ ಮನುಷ್ಯರು ನಮಗೆ ತೀರಾ ಅಪರಿಚಿತರೇನೂ ಅಲ್ಲ; ನಮ್ಮ ಓಣಿಯಲ್ಲಿ, ಪಕ್ಕದ ಮನೆಯಲ್ಲಿ ಅಥವಾ ನಮ್ಮ ಮನೆಯೊಳಗೇ ಕಾಣಸಿಗುವ ಸರಳ ಜೀವಗಳಿವು.
ಸಂಕಲನದ ಶೀರ್ಷಿಕೆ ಕಥೆಯಾದ ‘ದಿಡುಗು’ವಿನ ಸುನಂದಿ ಮುಖದ ಹಲ್ಲುಗಳು ಹೊರಚಾಚಿಕೊಂಡಿವೆ ಎಂಬ ಒಂದೇ ಕಾರಣಕ್ಕೆ ಸಾಲು ಸಾಲು ಮದುವೆಯ ಸಂಬಂಧಗಳಿಂದ ತಿರಸ್ಕರಿಸಲ್ಪಡುತ್ತಾಳೆ. ಶಾಲೆಯಲ್ಲೂ ಅಪಹಾಸ್ಯಕ್ಕೆ ಗುರಿಯಾಗುವ ಅವಳಿಗೂ ಪ್ರೀತಿಸುವ ಮತ್ತು ಪ್ರೀತಿಸಲ್ಪಡುವ ಕನಸುಗಳಿದ್ದರೂ, ಸಮಾಜಕ್ಕೆ ಅವಳ ಪವಿತ್ರ ಮನಸ್ಸಿಗಿಂತ ಬಾಹ್ಯ ರೂಪವೇ ಮುಖ್ಯವಾಗುತ್ತದೆ. ಮದುವೆಯ ಮಾರುಕಟ್ಟೆಯಲ್ಲಿ ಹೆಣ್ಣಿನ ರೂಪಕ್ಕೆ ಕೊಡುವ ಬೆಲೆ, ಅವಳ ಒಳಗಿನ ವ್ಯಕ್ತಿತ್ವಕ್ಕೆ ಸಿಗದಿರುವುದು ನಮ್ಮ ಸಮಾಜದ ದೊಡ್ಡ ದುರಂತ. ಇನ್ನು ಅವಳ ಗೆಳತಿ ಸುಧಾಳಿಗೆ ಮದುವೆಯಾದ ಮೇಲೆಯೂ ನೆಮ್ಮದಿಯಿಲ್ಲ. ಮದುವೆಯಾಗದಿದ್ದರೆ ಸಮಾಜದ ಹೀಯಾಳಿಕೆ, ಮದುವೆಯಾದ ಮೇಲೆಯೂ ಕಷ್ಟಗಳನ್ನು ಸಹಿಸಿಕೊಂಡು ಬದುಕಬೇಕೆಂಬ ನಿರೀಕ್ಷೆ ಹೆಣ್ಣಿನ ಮೇಲಿದೆ. ಸುನಂದಿ ಕನಸಿನಲ್ಲಿ ಕಾಣುವ, ಆದರೆ ತಲುಪಲಾಗದ ‘ದಿಡುಗು ಜಲಪಾತ’ ಅವಳ ಕೈಗೆಟುಕದ ಆಸೆಗಳ ಸುಂದರ ರೂಪಕವಾಗಿ ನಿಲ್ಲುತ್ತದೆ. ಬದುಕು ಎಂದರೆ ಕೆಲವರ ಪಾಲಿಗೆ ಎಂದಿಗೂ ತಲುಪಲಾಗದ ತಾಣವನ್ನು ನೆನಪಿಸಿಕೊಳ್ಳುತ್ತಲೇ ಇರುವುದಾಗಿದೆ.
‘ಕಾಲಾವರಿ ಕಂಚಾವರಿ’ ಕಥೆ ಓದುವಾಗ ಸಮಾಜದ ಇರಸುಮುರುಸಿನ ನಡವಳಿಕೆಗೆ ಕೆಲವೆಡೆ ನಗು ಬಂದರೆ, ಇನ್ನು ಕೆಲವೆಡೆ ತೀವ್ರ ಸಿಟ್ಟು ಬರುತ್ತದೆ. ಗೋಪಾಲನಿಗೆ ಮದುವೆ ಮಾಡಲು ಹುಡುಗಿಯರನ್ನು ನೋಡುವ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಹುಡುಗಿಯಲ್ಲೂ ಒಂದಲ್ಲ ಒಂದು ಕೊರತೆ ಹುಡುಕಿ ತಿರಸ್ಕರಿಸುವುದೇ ಅವನ ಪಾಲಿಗೆ ಹಬ್ಬವಾಗಿರುತ್ತದೆ. ನಮ್ಮ ಸಮಾಜದಲ್ಲಿ ಹುಡುಗನಿಗೆ ಹುಡುಗಿ ಇಷ್ಟವಾಗಬೇಕು; ಅವಳ ರೂಪ, ಬಣ್ಣ, ನಡವಳಿಕೆ ಎಲ್ಲವೂ ಅವನಿಗೆ ಒಪ್ಪಿಗೆಯಾಗಬೇಕು. ಆದರೆ ಹುಡುಗನ ವಿದ್ಯಾಭ್ಯಾಸ, ಸಾಮರ್ಥ್ಯ ಮತ್ತು ಬದುಕಿನ ದೃಷ್ಟಿಕೋನದ ಬಗ್ಗೆ ಹುಡುಗಿಯ ಮನೆಯವರು ಪ್ರಶ್ನಿಸಿದರೆ ಅದು ಬಹುದೊಡ್ಡ ತಪ್ಪಾಗಿಬಿಡುತ್ತದೆ.
‘ದಿಡುಗು’ ಕಥೆಯ ಸುನಂದಿ ಸಮಾಜದ ರೂಪದ ಮಾನದಂಡಗಳ ಮುಂದೆ ಅಸಹಾಯಕಳಾಗಿ ಶರಣಾದರೆ, ‘ಕಾಲಾವರಿ ಕಂಚಾವರಿ’ ಕಥೆಯ ಸುಜಾತಾ ಅದಕ್ಕೆ ಎದುರಾಗಿ ನಿಂತು ವೈಚಾರಿಕವಾಗಿ ಪ್ರತಿರೋಧಿಸುತ್ತಾಳೆ. ಓದಿನಲ್ಲಿ ಮುಂದಿರುವ ಸುಜಾತಾ ಗೋಪಾಲನ ವಿದ್ಯಾಭ್ಯಾಸ ಹಾಗೂ ಯೋಗ್ಯತೆಯನ್ನು ಧೈರ್ಯವಾಗಿ ಪ್ರಶ್ನಿಸುತ್ತಾಳೆ. ಮದುವೆಯೇ ಹೆಣ್ಣಿನ ಬದುಕಿನ ಅಂತಿಮ ಗುರಿ ಎಂದು ಭಾವಿಸುವ ಪುರುಷಪ್ರಧಾನ ವ್ಯವಸ್ಥೆಯೊಳಗೆ ತನ್ನದೇ ಕನಸುಗಳನ್ನು ಉಳಿಸಿಕೊಳ್ಳಲು ಬಯಸುವ ದಿಟ್ಟ ಹೆಣ್ಣುಮಗಳು ಅವಳು. ಕಥೆಯ ಕೊನೆಯಲ್ಲಿ ಮದುವೆಯ ಕಾರ್ಯಕ್ರಮಕ್ಕೆ ಅವಳ ಮನೆಯವರು ಬದಿಗಾಲಾಗುವ ಅನಿಶ್ಚಿತ ನಿರ್ಧಾರ, ಹೆಣ್ಣಿಗೆ ತನ್ನ ಬದುಕನ್ನು ತಾನೇ ಆಯ್ಕೆ ಮಾಡಿಕೊಳ್ಳುವ ಮತ್ತು ಶಿಕ್ಷಣ ಪಡೆಯುವ ಹಕ್ಕಿರಬಾರದೇ ಎಂಬ ಮೂಲಭೂತ ಪ್ರಶ್ನೆಯನ್ನು ಸಮಾಜದ ಮುಂದಿಡುತ್ತದೆ.
‘ಮರಳಗೂಡು’ ಕಥೆಯ ಶಂಕ್ರಪ್ಪನಿಗೆ ಭೂಮಿ ಮತ್ತು ನದಿ ಬದುಕಿನ ಜೀವಂತ ಭಾಗಗಳು. ಆದರೆ ಸಾಲ ಮತ್ತು ಅಕ್ರಮ ಮರಳುಗಾರಿಕೆ ಅವನ ಹಸನಾದ ಬದುಕನ್ನು ನುಂಗಿಹಾಕುತ್ತವೆ. ಮಗನ ಶಿಕ್ಷಣಕ್ಕಾಗಿ ಸಾಲ ಮಾಡಲು ಸಿದ್ಧನಿರುವ ತಂದೆ, ಮಗಳ ಶಿಕ್ಷಣದ ವಿಷಯ ಬಂದಾಗ ಲಿಂಗಪಕ್ಷಪಾತದ ಹಳೆಯ ನಂಬಿಕೆಗಳಿಂದ ಹೊರಬರಲಾಗುವುದಿಲ್ಲ. ಒಬ್ಬ ವ್ಯಕ್ತಿಯಲ್ಲಿ ಒಳ್ಳೆಯ ಗುಣಗಳಿದ್ದ ಮಾತ್ರಕ್ಕೆ ಅವನ ಎಲ್ಲ ಆಲೋಚನೆಗಳೂ ಸರಿಯಾಗಿರುತ್ತವೆ ಎಂದೇನಿಲ್ಲ. ಹಾಗೆಯೇ, ಆರ್ಥಿಕ ಸ್ವಾತಂತ್ರ್ಯವಿಲ್ಲದ ಹೆಣ್ಣಿಗೆ ಹಣ ಮತ್ತು ಆಸ್ತಿಗಳು ಜೀವನದ ಭದ್ರತೆಯ ಸಂಕೇತವಾಗಿ ಕಾಣಿಸುವುದರ ಸಾಮಾಜಿಕ ಪರಿಸ್ಥಿತಿಯನ್ನೂ ನಾವು ಅರ್ಥಮಾಡಿಕೊಳ್ಳಬೇಕಾಗುತ್ತದೆ.
‘ಮುಗಿಲ ಹಕ್ಕಿ’ಯ ಪಾರೋಲಪ್ಪ ವಿಮಾನ ನಿಲ್ದಾಣಕ್ಕಾಗಿ ಜಮೀನು ಕಳೆದುಕೊಳ್ಳುವ ಕೃಷಿಕರ ನೋವಿನ ಪ್ರತಿನಿಧಿ. ‘ಅಭಿವೃದ್ಧಿ’ಯ ಹೊಳೆಯುವ ಕನಸಿನ ಬೆಲೆಯನ್ನು ಸದಾ ಬಡವರೇ ತಮ್ಮ ನೆಲ ಮತ್ತು ಬದುಕನ್ನು ಕಳೆದುಕೊಳ್ಳುವ ಮೂಲಕ ಪಾವತಿಸಬೇಕೇ? ಪಾರೋಲಪ್ಪ ಹೋರಾಟದಲ್ಲೇ ಸಾವನ್ನಪ್ಪಿದಾಗ, ಸತ್ತ ಮೇಲೆ ಸಿಗುವ ಸರಕಾರದ ಪರಿಹಾರದ ಹಣ ಕಳೆದುಹೋದ ಕರುಳಬಳ್ಳಿಯ ಜೀವವನ್ನು ಮರಳಿ ತರಲಾರದು. ಈ ಎರಡು ಕಥೆಗಳು ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವ ನಷ್ಟಗಳ ಅಂತಿಮ ಬೆಲೆ ಯಾರ ಪಾಲಿಗೆ ಬೀಳುತ್ತದೆ ಎಂಬ ದಿಗಿಲುಗೊಳಿಸುವ ಪ್ರಶ್ನೆಯಿಡುತ್ತವೆ.
‘ಗಾಜಿನ ಗೋಡೆ’ ಕಥೆಯ ಸಾವಿತ್ರಮ್ಮನಿಗೆ ವಯಸ್ಸಾದಂತೆ ನೆನಪುಗಳು ಕೈಕೊಡುತ್ತವೆ. ಅವಳು ಮನೆಯ ಗೋಡೆಗಳು ತನ್ನತ್ತ ನುಗ್ಗುತ್ತಿವೆ ಎಂದು ಭಾವಿಸಿ ಅವುಗಳನ್ನು ಹೊಡೆಯುವ ದೃಶ್ಯ, ಅವಳ ಸುತ್ತ ಆವರಿಸಿದ್ದ ಭೀಕರ ಒಂಟಿತನ ಮತ್ತು ಸ್ವಂತ ಕುಟುಂಬದೊಂದಿಗಿನ ಅಂತರಕ್ಕೆ ಸಾಕ್ಷಿಯಾಗಿದೆ. ರಕ್ತಸಂಬಂಧವಿಲ್ಲದ ಮಾದೇಶ ಅವಳನ್ನು ಕಾಳಜಿಯಿಂದ ನೋಡಿಕೊಳ್ಳುತ್ತಾನಾದರೂ, ಸುರಕ್ಷತೆಯ ಹೆಸರಿನಲ್ಲಿ ಸಾವಿತ್ರಮ್ಮನನ್ನು ಕೋಣೆಯಲ್ಲಿ ಬಂಧಿಸುವ ಸನ್ನಿವೇಶವು ಆರೈಕೆ ಮತ್ತು ಸ್ವಾತಂತ್ರ್ಯದ ನಡುವಿನ ಸಂಘರ್ಷವನ್ನು ಎತ್ತಿಹಿಡಿಯುತ್ತದೆ. ಬಾಲ್ಯದಲ್ಲಿ ಮಾದೇಶನಿಗೆ ಅನ್ಯಾಯ ಮಾಡಿದ್ದ ಪಾಟೀಲರು ಕೊನೆಗೆ ತಮ್ಮ ಜಮೀನನ್ನು ಅವನಿಗೆ ಬರೆದುಕೊಡುವುದರಲ್ಲಿಯೂ, ವೃದ್ಧ ಹೆಂಡತಿಯನ್ನು ನೋಡಿಕೊಳ್ಳುವ ಸ್ವಾರ್ಥದ ಹೊಣೆಗಾರಿಕೆ ಅಡಗಿದೆ. ಮನೆಯೊಳಗೆ ಎಲ್ಲರಿಗಾಗಿ ದುಡಿಯುವ ಹೆಣ್ಣಿಗೆ ಕೊನೆಗಾಲದಲ್ಲಿ ಭಾವನಾತ್ಮಕ ಸಾಂಗತ್ಯ ಹಾಗೂ ತನ್ನದೇ ಆದ ಆರ್ಥಿಕ ಸ್ವಾತಂತ್ರ್ಯವಿಲ್ಲದಿದ್ದರೆ ಆ ಬದುಕು ಶೂನ್ಯವಾಗುತ್ತದೆ.
‘ಕಪಾಟು’ ಕಥೆಯಲ್ಲಿಯೂ ವೃದ್ಧಾಪ್ಯದ ಒಂಟಿತನ ಬೇರೆ ರೂಪದಲ್ಲಿದೆ. ಅಜ್ಜ ಸತ್ತ ತಕ್ಷಣ ಆಸ್ತಿಯ ಪಾಲಿಗಾಗಿ ಓಡೋಡಿ ಬರುವ ಮಕ್ಕಳು ಹಳೆಯ ಕಪಾಟಿನ ಬೀಗದ ಕೈಗಾಗಿ ಹುಡುಕಾಡುತ್ತಾರೆ. ಆ ಕಪಾಟು ಕುಟುಂಬದ ತಲೆಮಾರುಗಳ ನೆನಪುಗಳು ಮತ್ತು ಸ್ವಾರ್ಥದ ಆಸೆಗಳನ್ನು ಬಚ್ಚಿಟ್ಟುಕೊಂಡಿರುವ ಸಾಕ್ಷಿಯಾಗಿದೆ. ಅಜ್ಜ ಬದುಕಿದ್ದಾಗ ಅವನ ಪ್ರೀತಿಯ ಮೌಲ್ಯ ತಿಳಿಯದವರು, ಸತ್ತ ಮೇಲೆ ಆಸ್ತಿಯ ಬೆಲೆ ಹುಡುಕುವುದು ಮನುಷ್ಯ ಸಂಬಂಧಗಳ ದೊಡ್ಡ ವಿಪರ್ಯಾಸ.
‘ಬನ್ನಿಕಟ್ಟಿ’ ಕಥೆಯಲ್ಲಿ ಹೊಸದಾಗಿ ಊರಿಗೆ ಬಂದ ರತ್ನಾ, ಅಪರಿಚಿತ ಅಜ್ಜಿಯನ್ನು ಮೊದಲು ಅನುಮಾನಿಸಿದರೂ ನಂತರ ಅವಳೊಂದಿಗೆ ಗಾಢ ಆತ್ಮೀಯತೆ ಬೆಳೆಯುತ್ತದೆ. ಆದರೆ ಆ ಅಜ್ಜಿ ಎರಡು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾಳೆ ಎಂಬ ತಿರುವು ಕಥೆಯನ್ನು ಅತೀಂದ್ರಿಯ ಅಥವಾ ಕಲ್ಪನಾ ಲೋಕಕ್ಕೆ ಒಯ್ಯುತ್ತದೆ. ಇಲ್ಲಿ ಅಜ್ಜಿಯ ಭೌತಿಕ ಅಸ್ತಿತ್ವಕ್ಕಿಂತ, ಉತ್ತರ ಕರ್ನಾಟಕದ ಗ್ರಾಮೀಣ ಹೆಣ್ಣುಮಕ್ಕಳ ಸಹಜ ‘ಸಮುದಾಯ ಕಾಳಜಿ’ ಹಾಗೂ ರತ್ನಾಳ ಮನಸ್ಸಿನಲ್ಲಿ ಹಿರಿಯರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಆ ಅಜ್ಜಿ ಮೂಡಿಸಿದ ತಾಳ್ಮೆ ಮತ್ತು ಪ್ರೀತಿ ಮುಖ್ಯವಾಗುತ್ತದೆ.
‘ಗುಳಿಕೆನ್ನೆ’ಯ ಅನಾಥ ಹುಡುಗ ಪರಶುರಾಮನ ತುಂಟಾಟದ ಹಿಂದೆ ತಂದೆ-ತಾಯಿಯನ್ನು ಕಳೆದುಕೊಂಡ ಆಳವಾದ ನೋವಿರುತ್ತದೆ. ಶಿಕ್ಷಕಿ ಅವನಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿದಾಗ ಅವನು ಬದಲಾಗುತ್ತಾನೆ. ಆದರೆ ನಂತರದ ಘಟನೆಯೊಂದರಲ್ಲಿ ಮಾದೇವಿ ಎಂಬ ಹುಡುಗಿಯ ಹೆಸರಿನೊಂದಿಗೆ ಅವನ ಹೆಸರನ್ನು ಸೇರಿಸಿ ಯಾರೋ ಬರೆದ ಚೀಟಿಯಿಂದಾಗಿ, ಹುಡುಗಿಯ ಓದೇ ನಿಂತುಹೋಗುತ್ತದೆ. ಆ ಸನ್ನಿವೇಶದಲ್ಲಿ ಅದೇ ಶಿಕ್ಷಕಿ ಪರಶುರಾಮನನ್ನು ಅನುಮಾನಿಸುವುದು ಸಮಾಜದ ಮಾನವೀಯ ದೌರ್ಬಲ್ಯವನ್ನು ತೋರಿಸುತ್ತದೆ. ಬಡತನ ಮತ್ತು ತಿರಸ್ಕಾರದ ನಡುವೆ ಬೆಳೆಯುವ ಮಕ್ಕಳಿಗೆ ನಮ್ಮ ತರಾತುರಿಯ ತೀರ್ಪಿಗಿಂತ ನಿರಂತರ ಕಾಳಜಿ ಮತ್ತು ಸರಿಯಾದ ಮಾರ್ಗದರ್ಶನ ಅಗತ್ಯ.
ಕಥೆಗಳಲ್ಲಿ ಉತ್ತರ ಕರ್ನಾಟಕದ ಆಡುಭಾಷೆಯ ಬಳಕೆ ತೀರಾ ಸಹಜವಾಗಿದ್ದು, ಕಥೆಗಳಿಗೆ ಸ್ಥಳೀಯ ಸೊಗಡನ್ನು ನೀಡಿ ಪಾತ್ರಗಳ ಒಡಲಾಳಕ್ಕೆ ನೇರವಾಗಿ ಕರೆದೊಯ್ಯುತ್ತದೆ. ಕೆಲವು ಕಥೆಗಳಲ್ಲಿ ಪಾತ್ರಗಳ ಅಸಹಾಯಕತೆಗಿಂತ ಅವರ ವೈಚಾರಿಕ ಪ್ರತಿರೋಧಕ್ಕೆ ಲೇಖಕಿ ಇನ್ನಷ್ಟು ಜಾಗ ನೀಡಿದ್ದರೆ ಕಥೆಗಳು ಮತ್ತಷ್ಟು ತೀಕ್ಷ್ಣವಾಗುತ್ತಿದ್ದವು ಎನಿಸಿದರೂ, ‘ದಿಡುಗು’ ಸಂಕಲನದ ಪ್ರತಿಯೊಂದು ಪಾತ್ರವೂ ಪುಸ್ತಕ ಮುಗಿದ ಮೇಲೆಯೂ ನಮ್ಮ ನೆನಪಿನಲ್ಲಿ ಸದಾ ಜೀವಂತವಾಗಿ ಉಳಿಯುತ್ತವೆ.
