ಹಾಸನ: ಕುರಿಗಳನ್ನು ಮೇಯಿಸಲು ಬಂದಿದ್ದ ಕುರಿಗಾಹಿಗಳಿಗೆ ಬರಸಿಡಿಲಿನಂತಹ ದುರ್ಘಟನೆ ಎದುರಾಗಿದೆ. ವಿಷಕಾರಿ ಮೇವು ತಿಂದು ನೂರಾರು ಕುರಿಗಳು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಜಾವಗಲ್ ಹೋಬಳಿ ದೊಡ್ಡಘಟ್ಟ ಗ್ರಾಮದಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಶಿರಾ ಭಾಗದಿಂದ ಕುರಿ ಮಂದೆಯನ್ನು ಮೇಯಿಸಲು ಕುರಿಗಾಹಿಗಳು ಇಲ್ಲಿಗೆ ಬಂದಿದ್ದರು. ಮೆಕ್ಕೆಜೋಳದ ಚಿಗುರು ತಿಂದು ಕುರಿಗಳು ವಿಷಬಾಧೆಗೆ ಒಳಗಾಗಿ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಹೊಲಗಳ ತುಂಬೆಲ್ಲಾ ಕುರಿಗಳು ಸತ್ತು ಬಿದ್ದಿರುವ ದೃಶ್ಯ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಈಗಾಗಲೇ ಸುಮಾರು 100ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ್ದು, ಇನ್ನೂ ಹಲವು ಕುರಿಗಳು ಸಾವಿನಂಚಿನಲ್ಲಿ ಇರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಹಾಸನದಿಂದ ಮೂರು ಮಂದಿ ಪಶುವೈದ್ಯರ ತಂಡ ಸ್ಥಳಕ್ಕೆ ತೆರಳಿ ಚಿಕಿತ್ಸೆ ನೀಡುತ್ತಿದೆ.
ಮಂದೆಯಲ್ಲಿ ಸುಮಾರು 800 ಕುರಿಗಳು ಇದ್ದು, ಅವು ತುಮಕೂರು ಜಿಲ್ಲೆಯ ಶಿರಾ ಮೂಲದ ರಾಜಣ್ಣ ಅವರಿಗೆ ಸೇರಿದ್ದವು ಎಂದು ತಿಳಿದುಬಂದಿದೆ. ಕುರಿಗಳನ್ನು ಶಿರಾದಿಂದ ಮೇಯಿಸಲು ರಾಮಣ್ಣ, ಭಾಗ್ಯಮ್ಮ, ರಂಗನಾಥ್ ಸೇರಿದಂತೆ ಹಲವರು ವಲಸೆ ತರಲಾಗಿತ್ತು. ನೂರಾರು ಕುರಿಗಳನ್ನು ಕಳೆದುಕೊಂಡು ಕುರಿ ಮಂದೆ ಮಾಲೀಕರು ಕಂಗಾಲಾಗಿದ್ದು, ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ
