ಮಣಿಹಾರ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಖರ್ಗೋನ್ ಜಿಲ್ಲೆಯ ಬರ್ವಾಹಾ ಬಳಿ ಶನಿವಾರ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾಗ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಆಯತಪ್ಪಿ ಬಿದ್ದಿದ್ದಾರೆ. ಈ ಘಟನೆಯು ರಾಜ್ಯದ ರಸ್ತೆಗಳ ಸ್ಥಿತಿಯ ಬಗ್ಗೆ ವಿರೋಧ ಪಕ್ಷ ಮತ್ತು ಆಡಳಿತಾರೂಢ ಭಾರತೀಯ ಜನತಾ ಪಕ್ಷದ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.
ಮೆರವಣಿಗೆಯ ನಡುವೆ ಚಹಾ ವಿರಾಮದ ಸಮಯದಲ್ಲಿ ರಸ್ತೆ ಬದಿಯ ರೆಸ್ಟೋರೆಂಟ್ ಕಡೆಗೆ ಚಲಿಸುವಾಗ ದಿಗ್ವಿಜಯ್ ಸಿಂಗ್ ಬಿದ್ದು ಗಾಯಗೊಂಡಿದ್ದಾರೆ.
ಈ ಕುರಿತು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮಾಧ್ಯಮ ಉಸ್ತುವಾರಿ ಜೈರಾಮ್ ರಮೇಶ್ ಸುದ್ದಿಗಾರರೊಂದಿಗೆ ಮಾತನಾಡಿದ್ದು, ‘ದಿಗ್ವಿಜಯ್ ಸಿಂಗ್ ಅವರು ಭಾರತ್ ಜೋಡೋ ಯಾತ್ರೆಯಲ್ಲಿ ಈವರೆಗೆ ನಾಲ್ಕು ಬಾರಿ ನೆಲಕ್ಕೆ ಬಿದ್ದಿದ್ದಾರೆ. ಆದಾಗ್ಯೂ, ಮಧ್ಯಪ್ರದೇಶದಲ್ಲಿ ಅವರು ಮೊದಲ ಬಾರಿಗೆ ಕುಸಿದಿದು ಬಿದ್ದಿದ್ದು, ರಾಜ್ಯವು ಕೆಟ್ಟ ರಸ್ತೆಗಳನ್ನು ಹೊಂದಿರುವುದು ಇದಕ್ಕೆ ಕಾರಣʼ ಎಂದು ವ್ಯಂಗಿಸಿದ್ದಾರೆ.
ಆಡಳಿತಾರೂಢ ಬಿಜೆಪಿಯನ್ನು ಅಣಕಿಸಿದ ರಮೇಶ್‌ರವರು, ಮಧ್ಯಪ್ರದೇಶದ ರಸ್ತೆಗಳು ಅಮೆರಿಕದ ವಾಷಿಂಗ್ಟನ್ ಡಿಸಿಗಿಂತ ಉತ್ತಮವಾಗಿವೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಹಳೆಯ ಹೇಳಿಕೆಯನ್ನು ಉಲ್ಲೇಖಿಸಿ ಟೀಕಿಸಿದ್ದಾರೆ.
ʼಮಧ್ಯಪ್ರದೇಶದ ರಸ್ತೆಗಳು ಕಿಲ್ಲರ್ ರಸ್ತೆಗಳಾಗಿವೆ ಮತ್ತು ವಾಷಿಂಗ್ಟನ್ ಡಿಸಿಗಿಂತ ಉತ್ತಮವಾಗಿಲ್ಲ. ಕೆಟ್ಟ ರಸ್ತೆಗಳಿಂದಾಗಿ ರಾಜ್ಯದಲ್ಲಿ ಮೂರು ಬಾರಿ ಬೀಳುವುದರಿಂದ ನನ್ನನ್ನು ನಾನು ರಕ್ಷಿಸಿಕೊಂಡಿದ್ದೇನೆʼ ಎಂದು ರಮೇಶ್ ಹೇಳಿದ್ದಾರೆ.
ಬಿಜೆಪಿ ನಾಯಕ ನರೇಂದ್ರ ಸಲೂಜಾ ಅವರು ಘಟನೆಯ ವೀಡಿಯೊವನ್ನು ಟ್ವೀಟ್ ಮಾಡಿ, ರಾಜ್ಯಸಭಾ ಸಂಸದರು ರಸ್ತೆ ಸ್ಥಿತಿಗಿಂತ ಹೆಚ್ಚಾಗಿ ಕಾಂಗ್ರೆಸ್ ಕಾರ್ಯಕರ್ತರನ್ನು ತಳ್ಳುವ ಕಾರಣದಿಂದಾಗಿ ಬಿದ್ದಿದ್ದಾರೆ ಎಂದು ಹೇಳಿದ್ದಾರೆ.