Monday, July 28, 2025

ಸತ್ಯ | ನ್ಯಾಯ |ಧರ್ಮ

ಚುನಾವಣಾ ಕಣದಿಂದ ಹಿಂದೆ ಸರಿದ ದಿಂಗಾಲೇಶ್ವರ ಶ್ರೀ ; ಕಾಂಗ್ರೆಸ್ ಗೆ ಸಂಪೂರ್ಣ ಬೆಂಬಲಕ್ಕೆ ಚಿಂತನೆ

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ವಿರುದ್ಧ ಬಹಿರಂಗ ಸಮರ ಸಾರಿ, ಲಿಂಗಾಯತರ ಮತ ತಮಗಿಲ್ಲ ಎಂಬ ಸ್ಪಷ್ಟ ಸಂದೇಶದ ಮೂಲಕ ಲೋಕಸಭಾ ಚುನಾವಣೆ ಕಣಕ್ಕೆ ಇಳಿದಿದ್ದ ದಿಂಗಾಲೇಶ್ವರ ಸ್ವಾಮಿಗಳು ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.

ಲಿಂಗಾಯತ ನಾಯಕರನ್ನು ರಾಜಕೀಯವಾಗಿ ತುಳಿಯುತ್ತಿರುವ ಲಿಂಗಾಯತ ವಿರೋಧಿ ಪ್ರಹ್ಲಾದ್ ಜೋಶಿ ಅವರನ್ನು ಸೋಲಿಸಲು ಚುನಾವಣೆಗೆ ನಿಲ್ಲುತ್ತಿದ್ದೇನೆ ಎಂದು ಘೋಷಿಸಿ ಹುಬ್ಬಳ್ಳಿ-ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರವಾಗಿ ಕಣಕ್ಕೆ ಇಳಿದಿದ್ದರು. ಇದೀಗ ಶಿರಹಟ್ಟಿಯ ಬಾಳೆಹೊಸೂರು ಫಕೀರೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.


ದಿಂಗಾಲೇಶ್ವರ ಸ್ವಾಮೀಜಿ ತಮ್ಮ ಸೂಚಕಾರದ ಸಚ್ಚಿನ್​ ಪಾಟೀಲ್​ ಮತ್ತು ಅಮೃತ ಬಳ್ಳೊಳ್ಳಿ ಮೂಲಕ ನಾಮಪತ್ರ ಚುನಾವಣಾ ಆಯೋಗದಿಂದ ತರೆಸಿದ್ದಾರೆ.


ಪ್ರಹ್ಲಾದ ಜೋಶಿ ಅವರನ್ನು ಸೋಲಿಸುವುದೇ ತಮ್ಮ ಗುರಿ ಎಂದು ದಿಂಗಾಲೇಶ್ವರ ಸ್ವಾಮೀಜಿ ಬಹಿರಂಗವಾಗಿಯೇ ಹೇಳಿದ್ದರು. ನಾನು ಸ್ವಂತವಾಗಿ ಮಾತನಾಡುತ್ತಿಲ್ಲ, ಪ್ರಲ್ಹಾದ್ ಜೋಶಿಯವರ ಕೈಯಲ್ಲಿ ನೋವು ಅನುಭವಿಸಿದ ಜನರ ಧ್ವನಿಗಾಗಿ ನಾನು ಹೋರಾಟ ನಡೆಸುತ್ತಿದ್ದೇನೆ. ಅವರ ಆಡಳಿತ ವಿನಾಶಕಾರಿಯಾಗಿದೆ. ಮತ್ತು ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯಕ್ಕೆ ಮತ್ತು ಲಿಂಗಾಯತ ಸಮುದಾಯದ ಹಿರಿಯ ನಾಯಕ ಜಗದೀಶ್​ ಶೆಟ್ಟರ್​ ಅವರಿಗೆ ಅನ್ಯಾಯುತವಾಗಿ ನಡೆಸಿಕೊಳ್ಳಲಾಗಿದೆ ಎಂದು ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ಆರೋಪಿಸಿದ್ದರು.


ಕಾಂಗ್ರೆಸ್ ತಂತ್ರಗಾರಿಕೆ ; ಜೋಷಿಗೆ ಕಂಟಕ : ಪ್ರಹ್ಲಾದ್ ಜೋಷಿಯನ್ನು ಸೋಲಿಸಿಯೇ ತೀರುತ್ತೇನೆ ಎಂದು ಕಣಕ್ಕಿಳಿದಿದ್ದ ದಿಂಗಾಲೇಶ್ವರ ಸ್ವಾಮಿಗಳು ನಾಮಪತ್ರ ಸಲ್ಲಿಸಿದ್ದರು. ಸ್ವಾಮಿಗಳ ಸ್ಪರ್ಧೆಯಿಂದ ಜಾತ್ಯತೀತ ಮನಸ್ಥಿತಿ ಹಾಗೂ ಲಿಂಗಾಯತರ ಮತಗಳು ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳಿಗೆ ಚದುರಿ ಹೋಗುವ ಸಾಧ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮಧ್ಯಸ್ಥಿಕೆಯಿಂದ ದಿಂಗಾಲೇಶ್ವರ ಸ್ವಾಮಿಗಳು ತಮ್ಮ ನಾಮಪತ್ರ ಹಿಂಪಡೆದಿದ್ದಾರೆ ಎನ್ನಲಾಗಿದೆ. ನೇರವಾಗಿ ಸಿಎಂ ಮತ್ತು ಡಿಸಿಎಂ ಕರೆ ಮಾಡಿ, ‘ನಮ್ಮ ಇಬ್ಬರ ಉದ್ದೇಶವು ಜೋಷಿ ಇಳಿಸುವುದಾಗಿದೆ. ನಮ್ಮಿಬ್ಬರ ಸ್ಪರ್ಧೆಯಿಂಂದ ಪ್ರಹ್ಲಾದ್ ಜೋಷಿ ಗೆಲ್ಲಲು ದಾರಿಯಾಗಬಹುದು. ಹೀಗಾಗಿ ನೀವು ಕಣದಿಂದ ಹಿಂದೆ ಸರಿಯುವುದು ಸೂಕ್ತ’ ಎಂದು ಮನವಿ ಮಾಡಿದ ನಂತರ ಸ್ವಾಮಿಗಳು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಡಿಕೆ ಶಿವಕುಮಾ‌ರ್ ಅವರು ದಿಂಗಾಲೇಶ್ವರ ಸ್ವಾಮಿಗಳಿಗೆ ಕರೆ ಮಾಡಿ ಮಾತನಾಡಿದ್ದು, ನಿಮ್ಮ ನಿರ್ಧಾರ ನಮಗೆ ಮೊದಲೇ ಗೊತ್ತಿದ್ದರೆ ನಮ್ಮ ಪಕ್ಷದಿಂದಲೇ ಅವಕಾಶ ಮಾಡಲು ಸುಲಭವಾಗುತ್ತಿತ್ತು. ಇದೀಗ ಪಕ್ಷ ದಿಂದ ವಿನೋದ್ ಅಸೂಟಿ ಅವರಿಗೆ ಟಿಕೆಟ್ ನೀಡಿದ್ದೇವೆ. ಕಾಂಗ್ರೆಸ್ ಹಾಗೂ ನಿಮ್ಮ ನಡುವೆ ಮತ ವಿಭಜನೆಯಾದರೆ ಜೋಶಿ ಗೆಲುವು ಸುಲಭವಾಗಲಿದೆ. ಹೀಗಾಗಿ ನಾವು ಇಬ್ಬರೂ ಸೇರಿ ಅವರ ವಿರುದ್ದ ಹೋರಾಡಬೇಕು ಎಂದಿದ್ದಾರೆ.

ಸಧ್ಯ ಸಿಎಂ ಮತ್ತು ಡಿಸಿಎಂ ಅವರ ಸಂಧಾನಕ್ಕೆ ದಿಂಗಾಲೇಶ್ವರ ಶ್ರೀಗಳು ಒಪ್ಪಿದ್ದು, ನಾಮಪತ್ರ ವಾಪಸ್​ ಪಡೆಯುವ ಮೂಲಕ ಕಾಂಗ್ರೆಸ್​ನ ತಂತ್ರ ಸಫಲಾವಾಗಿದ್ದು, ಚದುರುತ್ತಿದ್ದ ಮತಗಳು ಒಂದಡೆಯಾಗಲಿವೆ ಎಂಬುವುದು ಕಾಂಗ್ರೆಸ್​ನ ಚಿಂತನೆಯಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page