Sunday, June 16, 2024

ಸತ್ಯ | ನ್ಯಾಯ |ಧರ್ಮ

ಕೋಮುಶಕ್ತಿಗಳ ಅಟ್ಟಹಾಸಕ್ಕೆ ಕಡಿವಾಣ | ನಿರಾಸೆಗೊಳಿಸಿದ ಸರಕಾರ

ಕರ್ನಾಟಕದಲ್ಲಿ ಹೀನಾಯವಾಗಿ ಸೋತಿರುವ ಬಿಜೆಪಿ ಪರಿವಾರ ಕೋಮು ವಿಷಯವನ್ನು ಖಂಡಿತಾ ತನ್ನ ಲಾಭಕ್ಕೆ ಬಳಸಿಕೊಳ್ಳುತ್ತದೆ ಎಂಬುದು ಎಲ್ಲರಿಗೂ ಗೊತ್ತಿತ್ತು. ಇಂತಹ ಹೊತ್ತಿನಲ್ಲಿ ಸರಕಾರ ಹೇಗೆ ವರ್ತಿಸಬೇಕಿತ್ತು? ಮುಖ್ಯವಾಗಿ ಹಲವು ಲಕ್ಷ ಬೆಂಬಲಿಗರನ್ನು ಹೊಂದಿರುವ ಸೋಶಿಯಲ್ ಮೀಡಿಯಾ ಪ್ರಭಾವಿಗಳು ಸುಳ್ಳುಸುದ್ದಿಗಳನ್ನು ಸುಳ್ಳು ವೀಡಿಯೋಗಳನ್ನು ಹಂಚುತ್ತಾ, ನೇರವಾಗಿ ಹಿಂದೂ ಮುಸ್ಲಿಂ ಸಂಘರ್ಷಕ್ಕೆ ಪ್ರಚೋದನೆ ನೀಡುತ್ತಿದ್ದಾಗ ತಕ್ಷಣ ಅವರಿಗೆ ಎಚ್ಚರಿಕೆ ನೀಡಬೇಡವೇ? ಅತ್ಯಂತ ಪ್ರಚೋದಕ ಪೋಸ್ಟ್ ಹಾಕಿದ ಮತ್ತು ಆಮೇಲೆಯೂ ಮತ್ತೆ ಮತ್ತೆ ಪ್ರಚೋದಕ ಹೇಳಿಕೆ ನೀಡಿದ ರಶ್ಮಿ ಸಾಮಂತ್ ಮೇಲೆ ಕಾನೂನು ಕ್ರಮ ಜರುಗಿಸಬೇಡವೇ? – ಶ್ರೀನಿವಾಸ ಕಾರ್ಕಳ

ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜನರು ಬಿಜೆಪಿಗೆ ಹೀನಾಯ ಸೋಲುಣಿಸಲು ಅದರ ಕೋಮುವಾದಿ ರಾಜಕಾರಣವೂ ಒಂದು ಕಾರಣವಾಗಿತ್ತು. ಬೆಲೆ ಏರಿಕೆ, ನಿರುದ್ಯೋಗ ಹೀಗೆ ಜನಸಾಮಾನ್ಯರ ನಿತ್ಯಬದುಕಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತನಾಡುವ ಬದಲು, ತನ್ನ ವಿಭಜನಕಾರಿ ರಾಜಕಾರಣದ ಮೂಲಕ ಅದು ಒಂದಲ್ಲ ಒಂದು ರೀತಿಯಲ್ಲಿ ರಾಜ್ಯದಲ್ಲಿ ನಿರಂತರ ಉದ್ವಿಗ್ನ ಸ್ಥಿತಿಯನ್ನು ಕಾಪಾಡಿಕೊಂಡು ಬಂದಿತ್ತು. ದುಡಿದುಣ್ಣುವ ಶಾಂತಿಪ್ರಿಯ ಬಡ ಜನತೆಗೆ ಇವರ ಆಡಳಿತ ‘ಸಾಕಪ್ಪಾ ಸಾಕು, ಪೀಡೆಗಳು ಒಮ್ಮೆ ತೊಲಗಿದರೆ ಸಾಕು..’ ಅನಿಸಿತ್ತು.

ಅದೇ ಹೊತ್ತಿನಲ್ಲಿ, ‘ತಾನು ಅಧಿಕಾರಕ್ಕೆ ಬಂದರೆ, ದ್ವೇಷ ರಾಜಕಾರಣದ ಮೂಲಕ ಸಮಾಜದ ಶಾಂತಿ ಹಾಳುಮಾಡುವ ಕೋಮುವಾದಿ ಶಕ್ತಿಗಳಿಗೆ ಕಡಿವಾಣ ಹಾಕುತ್ತೇನೆ, ನೈತಿಕ ಪೊಲೀಸ್ ಗಿರಿಯನ್ನು ಖಾಯಮ್ಮಾಗಿ ನಿಲ್ಲಿಸುತ್ತೇನೆ’ ಎಂದು ಕಾಂಗ್ರೆಸ್ ಹೇಳಿತ್ತು. ಈ ಕಾರಣಕ್ಕೂ ಜನರು ಕಾಂಗ್ರೆಸ್ ನ ಆಗಮನವನ್ನು ಸ್ವಾಗತಿಸಿದ್ದರು.

ಆದರೆ, ತಮ್ಮದು ‘ನುಡಿದಂತೆ ನಡೆವ ಸರಕಾರ’ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕದ ಕಾಂಗ್ರೆಸ್ ಸರಕಾರಕ್ಕೆ ಈ ವಿಷಯದಲ್ಲಿ ಜುಲೈ ಮಹಾ ಸವಾಲಿನ ತಿಂಗಳಾಗಿತ್ತು. ಈ ಸವಾಲನ್ನು ದಿಟ್ಟವಾಗಿ ಎದುರಿಸುವಲ್ಲಿ ಸರಕಾರ ವಿಫಲವಾಯಿತೇ? ಆಮೂಲಕ ರಾಜ್ಯಕ್ಕೆ ಕೆಟ್ಟ ಸಂದೇಶವೊಂದು ರವಾನೆಯಾದಂತಾಯಿತೇ?

ನಾಲ್ಕು ಘಟನೆಗಳು

ಉದಾಹರಣೆಗೆ, ಈ ಜುಲೈ ತಿಂಗಳಲ್ಲಿ ರಾಜ್ಯದಲ್ಲಿ ನಾಲ್ಕು ಬಹುಮುಖ್ಯ ಅಹಿತಕರ ಘಟನೆಗಳು ನಡೆದವು.

ಘಟನೆ 1: ಜುಲೈ 5 ರಂದು ಬೆಳಗಾವಿ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಜೈನ ಆಶ್ರಮದ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಕೊಲೆಯಾಯಿತು.

ಘಟನೆ 2: ಜುಲೈ 9 ರಂದು ಮೈಸೂರಿನ ಟಿ ನರಸೀಪುರದಲ್ಲಿ ಹನುಮ ಜಯಂತಿಯ ವೇಳೆ ಗುಂಪು ಘರ್ಷಣೆ ನಡೆದು ಯುವ ಬ್ರಿಗೇಡ್ ನ ವೇಣುಗೋಪಾಲ್ ನಾಯಕ್ ಎಂಬ ಯುವಕನ ಹತ್ಯೆಯಾಯಿತು.

ಘಟನೆ 3: ಬೆಂಗಳೂರಿನಲ್ಲಿ ಜುಲೈ 11 ರಂದು ಏರೋನಾಟಿಕ್ಸ್ ಇಂಟರ್ ನೆಟ್ ಕಂಪೆನಿಯ ಎಂಡಿ ಫಣೀಂದ್ರ ಸುಬ್ರಹ್ಮಣ್ಯ ಮತ್ತು ಸಿಇಒ ವಿನುಕುಮಾರ್ ಇವರಿಬ್ಬರನ್ನು ಇರಿದು ಕೊಲ್ಲಲಾಯಿತು.

ಘಟನೆ 4: ಉಡುಪಿ ಕಾಲೇಜೊಂದರ ರೆಸ್ಟ್ ರೂಮ್ ನಲ್ಲಿ ಯುವತಿಯರು ತಮ್ಮ ಕಾಲೇಜಿನ ಇನ್ನೊಬ್ಬ ಯುವತಿಯ ಚಿತ್ರೀಕರಣ ನಡೆಸಿದ ಘಟನೆ ಜುಲೈ 25 ರಂದು ಬೆಳಕಿಗೆ ಬಂದಿತು.

ಮೊದಲ ಘಟನೆ ನಡೆದುದು ಹಣಕಾಸು ವ್ಯವಹಾರ ಸಂಬಂಧ ಎಂದು ಪೊಲೀಸರು ಹೇಳಿದ್ದಾರೆ. ಜೈನಮುನಿಯ ಹತ್ಯೆಯ ಮುಖ್ಯ ಆರೋಪಿ ನಾರಾಯಣ ಮಾಳಿ ಮತ್ತು ಸಹಕರಿಸಿದ ಹಸನ್ ದಲಾಯತ್ ಎಂಬ ಇಬ್ಬರನ್ನು ತಕ್ಷಣ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಕಾನೂನು ಪ್ರಕಾರ ಶಿಕ್ಷಿಸುವ ಪ್ರಕ್ರಿಯೆ ಜಾರಿಯಲ್ಲಿದೆ.

ಎರಡನೆಯ ಘಟನೆ ನಡೆದುದು ಹನುಮ ಜಯಂತಿ ಮೆರವಣಿಗೆಯಲ್ಲಿ ಪುನೀತ್ ರಾಜಕುಮಾರ್ ಫೋಟೋ ಇರಿಸುವ ಕುರಿತ ವಿವಾದದಿಂದ ಎನ್ನಲಾಗಿದೆ. ವೇಣುಗೋಪಾಲ್ ಹತ್ಯೆಯ ಆರೋಪಿಗಳಾದ ಮಣಿಕಂಠ, ಸಂದೇಶ್, ಅನಿಲ್, ಶಂಕರ್ ಅಲಿಯಾಸ್ ತುಪ್ಪ, ಮಂಜು, ಹ್ಯಾರಿಸ್ ರನ್ನು ಬಂಧಿಸಿದ್ದು ಈಗ ಅವರು ಜೈಲಿನಲ್ಲಿದ್ದಾರೆ.

ಮೂರನೆಯ ಘಟನೆ ನಡೆದುದು ಉದ್ಯೋಗಿಗಳ ನಡುವಣ ವೈಯಕ್ತಿಕ ದ್ವೇಷದಿಂದ. ಈ ಸಂಬಂಧ ಶಬರೀಶ್, ವಿನಯ ರೆಡ್ಡಿ, ಸಂತೋಷ್ ಬಂಧನಕ್ಕೊಳಗಾಗಿ ಈಗ ಜೈಲಿನಲ್ಲಿದ್ದಾರೆ.

ನಾಲ್ಕನೆಯ ಘಟನೆಯ ಆರೋಪಿಗಳ ಮೇಲೆ ಎಫ್ ಐ ಆರ್ ಆಗಿದ್ದು ಅವರು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದಾರೆ. ತನಿಖೆ ಮುಂದುವರಿದಿದೆ.

ಸಿಇಒ ವಿನುಕುಮಾರ್ ಮತ್ತು ಎಂಡಿ ಫಣೀಂದ್ರ ಸುಬ್ರಹ್ಮಣ್ಯ

ಈ ನಾಲ್ಕೂ ಘಟನೆಯಲ್ಲಿ ಪೊಲೀಸರು ತಾವು ಮಾಡಬೇಕಾದುದನ್ನು ದಕ್ಷತೆಯಿಂದ ಮತ್ತು ಕ್ಷಿಪ್ರವಾಗಿ ಮಾಡಿದ್ದಾರೆ. ಬಹುಷಃ ತಕ್ಷಣಕ್ಕೆ ಯಾವುದೇ ಜವಾಬ್ದಾರಿಯುತ ಸರಕಾರವೊಂದು ಮಾಡಬಹುದಾದುದು ಇಷ್ಟೇ.

ಮುಸ್ಲಿಂ ಲಿಂಕ್ ಯತ್ನ

ಆದರೆ ಈ ನಾಲ್ಕೂ ಘಟನೆಯ ಬಳಿಕ ನಡೆದ ವಿದ್ಯಮಾನಗಳಲ್ಲಿ ಒಂದು ಸಾಮಾನ್ಯ ಎಳೆಯಿದೆ. ಅದೆಂದರೆ, ಅವಕ್ಕೆ ಕೋಮು ಬಣ್ಣ ಬಳಿದು, ಸಮಾಜದ ಶಾಂತಿ ಕದಡಿ, ಆಮೂಲಕ ರಾಜಕೀಯ ಲಾಭ ಪಡೆಯುವ ಯತ್ನ.

ಜೈನ ಮುನಿ ಹತ್ಯೆಯ ಕೊಲೆ ‘ಅದು ಅಂತಿಂಥ ಕೊಲೆಯಲ್ಲ, ಅದು ಐಸಿಸ್ ನವರು ಮಾಡುವ ರೀತಿಯಲ್ಲಿ ಕೊಲೆ ನಡೆದಿದೆ’ ಎಂದು ಅದಕ್ಕೆ ಮುಸ್ಲಿಂ ಲಿಂಕ್ ಕೊಡುವ ಯತ್ನ ಬಿಜೆಪಿ ಶಾಸಕರಿಂದಲೇ ನಡೆಯಿತು. ಅಲ್ಲಿ ಹಸನ್ ಎಂಬ ಯುವಕನೂ ಆರೋಪಿಯಾಗಿದ್ದುದರಿಂದ ದ್ವೇಷಭಕ್ತರ ಕೆಲಸ ಸುಲಭವಾಯಿತು. ಆದರೆ ಅಲ್ಲಿ ನಾಗರಾಜ ಮಾಳಿ ಎಂಬಾತ ಪ್ರಮುಖ ಆರೋಪಿಯಾದುದರಿಂದ ಮುಸ್ಲಿಂ ದ್ವೇಷದ ರಾಜಕಾರಣವನ್ನು ಬಹಳ ದೂರ ಮುಂದುವರಿಸಲು ಅಲ್ಲಿ ಹೆಚ್ಚಿನ ಅವಕಾಶವಾಗಲಿಲ್ಲ.

ಯುವ ಬ್ರಿಗೇಡ್ ನ ವೇಣುಗೋಪಾಲ್ ನಾಯಕ್

ಎರಡನೆಯ ಘಟನೆಯಲ್ಲಿಯೂ ಆರಂಭದಲ್ಲಿ ಮುಸ್ಲಿಮರನ್ನು ಕಟಕಟೆಯಲ್ಲಿ ನಿಲ್ಲಿಸುವ ಯತ್ನ ನಡೆಯಿತು. ಆದರೆ ಇದು ಹನುಮಜಯಂತಿಯಲ್ಲಿ ತೊಡಗಿಕೊಂಡಿದ್ದ ಗೆಳೆಯರ ನಡುವೆ ತಕರಾರಿನಿಂದಾಗಿ ನಡೆದ ಕೊಲೆ ಎಂಬುದು ಬೆಳಕಿಗೆ ಬರುತ್ತಲೇ, ಅಲ್ಲೂ ಮತೀಯ ದ್ವೇಷದ ಹೀನ ರಾಜಕಾರಣಕ್ಕೆ ಹೆಚ್ಚಿನ ಅವಕಾಶ ಸಿಗಲಿಲ್ಲಆದರೂ ಅದನ್ನು ಕಾಂಗ್ರೆಸ್ ತಲೆಗೆ ಕಟ್ಟುವ ಒಂದು ವಿಫಲ ಯತ್ನ ನಡೆಯಿತು.

ಮೂರನೆಯ ಘಟನೆಯಲ್ಲಿ, ಫಣೀಂದ್ರ ಸುಬ್ರಹ್ಮಣ್ಯ ಅವರು ಕಾವಿ ತೊಟ್ಟು ಪೂಜೆ ಮಾಡುವುದಕ್ಕೆ ಕುಳಿತಂತೆ ಇದ್ದ ಫೋಟೋವೊಂದನ್ನು ಬಳಸಿಕೊಂಡು, ‘ಬೆಂಗಳೂರಿನಲ್ಲಿ ಸ್ವಾಮೀಜಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ, ಕಾಂಗ್ರೆಸ್ ಸರಕಾರದಲ್ಲಿ ಸ್ವಾಮೀಜಿಗಳೂ ಸುರಕ್ಷಿತರಲ್ಲ’ ಎಂದು ದೂರುತ್ತಾ, ಸುಳ್ಳು ಸುದ್ದಿ ಹಬ್ಬಿಸಿ ಕಿಚ್ಚು ಹಚ್ಚುವ ಯತ್ನವನ್ನು ಸಾಮಾಜಿಕ ಮಾಧ್ಯಮದಲ್ಲಿ ಮಾಡಲಾಯಿತು. ಅಲ್ಲೂ ಇದ್ದುದು ಮುಸ್ಲಿಮರನ್ನು ಕಟಕಟೆಯಲ್ಲಿ ನಿಲ್ಲಿಸುವ ಯತ್ನ. ಆದರೆ ಸತ್ಯದ ಮುಂದೆ ಇದೂ ಹೆಚ್ಚು ಹೊತ್ತು ನಿಲ್ಲಲಿಲ್ಲ.

ನಾಲ್ಕನೆಯ ಘಟನೆಯಂತೂ ಸಾಮಾಜಿಕ ಮಾಧ್ಯಮದಲ್ಲಿ ಬಲಪಂಥೀಯರ ಶಕ್ತಿಯ ಅಗಾಧತೆಯ ಮತ್ತು ಸರಕಾರದ ದೌರ್ಬಲ್ಯದ ದರ್ಶನವನ್ನು ಮಾಡಿತು. ಕಾಲೇಜಿನಲ್ಲಿ ನಡೆದು, ಅಲ್ಲೇ ಮುಗಿದುಹೋದ ಘಟನೆಯೊಂದನ್ನು, ಅದರಲ್ಲಿ ಮೂವರು ಮುಸ್ಲಿಂ ಯುವತಿಯರು ಒಳಗೊಂಡಿದ್ದಾರೆ ಎನ್ನುವ ಏಕೈಕ ಕಾರಣಕ್ಕೆ ಎತ್ತಿಕೊಂಡು, ಸಾಮಾಜಿಕ ಮಾಧ್ಯಮದ ಮೂಲಕ ಭಾರೀ ಕೋಲಾಹಲ ಉಂಟು ಮಾಡಲಾಯಿತು. ಆನ್ ಲೈನ್ ಅಭಿಯಾನವು ಆಫ್ ಲೈನ್ ನಲ್ಲೂ ಪರಿಣಾಮ ಬೀರುವಂತೆ ಮಾಡಲಾಯಿತು. ಈ ಗೊಂದಲದ ಬೆಂಕಿಗೆ ಬಿಜೆಪಿ ನಾಯಕರೂ ತುಪ್ಪ ಸುರಿಯಲು ಹಿಂದೆ ಮುಂದೆ ನೋಡಲಿಲ್ಲ, ಸುಪಾರಿ ಮಾಧ್ಯಮಗಳೂ ತಮ್ಮ ಪಾಲಿನ ಕೊಡುಗೆ ನೀಡಲು ಮರೆಯಲಿಲ್ಲ.

ಹೀಗೆ ಮಾಡುವಾಗ ಫ್ಯಾಸಿಸ್ಟ್ ಶಕ್ತಿಗಳಿಗೆ ಈ ನೆಲದ ಯಾವುದೇ ಕಾನೂನಿನ ಭಯ ಇಲ್ಲ ಎಂಬುದು ಸಾಬೀತಾಯಿತು. ‘ಮುಸ್ಲಿಂ ಯುವತಿಯರು ನೂರಾರು ಅಮಾಯಕ ಹಿಂದೂ ಯುವತಿಯರ ನಗ್ನ ಚಿತ್ರವನ್ನು ಚಿತ್ರೀಕರಿಸಿ, ಮುಸ್ಲಿಂ ವಾಟ್ಸಪ್ ಗುಂಪುಗಳಲ್ಲಿ ಹಂಚಿದ್ದಾರೆ’ ಎಂದು ನೇರವಾಗಿ ಯುವತಿಯರ ಹೆಸರು ಉಲ್ಲೇಖಿಸಿಯೇ ಹೇಳಲಾಯಿತು. ಅದರಲ್ಲೂ ರಶ್ಮಿ ಸಾಮಂತ್ ಎನ್ನುವಾಕೆ ಟ್ವಟರ್ ನಲ್ಲಿ ಹಾಕಿದ ಪೋಸ್ಟ್ ಭಯಾನಕ ಕೋಮು ಗಲಭೆಗೆ ನೇರ ಪ್ರಚೋದನೆ ನೀಡುವಂತಿತ್ತು. ಆದರೆ, ಬಿಜೆಪಿ ನಾಯಕಿಯೇ ಆಗಿರುವ ರಾಷ್ಟ್ರೀಯ ಮಹಿಳಾ ಆಯೋಗದ ಪದಾಧಿಕಾರಿ ಖುಷ್ಬೂ ಸುಂದರ್ ಹಾಗೂ ಪೊಲೀಸರು ಹೇಳುವಂತೆ ಕಾಲೇಜಿನಲ್ಲಿ ಅಂತಹ ಗಂಭೀರ ಘಟನೆ ನಡೆದೇ ಇಲ್ಲ. ಪಸರಿಸಲಾಗಿದೆ ಎಂದು ಹೇಳಲಾದ ಒಂದೇ ಒಂದು ವೀಡಿಯೋ ದಾಖಲಾತಿ ಇದುವರೆಗೂ ಸಿಕ್ಕಿಲ್ಲ.

ಮೊದಲ ಮೂರು ಘಟನೆಯಲ್ಲಿ ಮುಸ್ಲಿಮರನ್ನು ಟಾರ್ಗೆಟ್ ಮಾಡಲು ಹೆಚ್ಚಿನ ಅವಕಾಶ ಸಿಗಲಿಲ್ಲ. ಆದರೆ ಉಡುಪಿ ಘಟನೆಯಲ್ಲಿ ಮೂವರು ಮುಸ್ಲಿಮ್ ವಿದ್ಯಾರ್ಥಿನಿಯರು ಆರೋಪಿಗಳಾದುದರಿಂದ ಮತ್ತು ಉಡುಪಿ ಸಹಿತ ಕರ್ನಾಟಕದ ಕರಾವಳಿ ಕೋಮು ರಾಜಕಾರಣದ ಆಡುಂಬೊಲವಾದ ಕಾರಣ ಇಲ್ಲಿ ಗದ್ದಲ ಎಬ್ಬಿಸಲು ಸುಲಭವಾಯಿತು.

ಸರಕಾರ ಹೇಗೆ ವರ್ತಿಸಬೇಕಿತ್ತು?

ಕರ್ನಾಟಕದಲ್ಲಿ ಹೀನಾಯವಾಗಿ ಸೋತಿರುವ ಬಿಜೆಪಿ ಪರಿವಾರ ಇಂತಹ ಕೋಮು ವಿಷಯವನ್ನು ಖಂಡಿತಾ ತನ್ನ ಲಾಭಕ್ಕೆ ಬಳಸಿಕೊಳ್ಳುತ್ತದೆ ಎಂಬುದು ಎಲ್ಲರಿಗೂ ಗೊತ್ತಿತ್ತು. ಅದರಲ್ಲಿ ವಿಶೇಷವೇನೂ ಇಲ್ಲ. ಆದರೆ, ಇಂತಹ ಹೊತ್ತಿನಲ್ಲಿ ಸರಕಾರ ಹೇಗೆ ವರ್ತಿಸಬೇಕಿತ್ತು? ಮುಖ್ಯವಾಗಿ ಹಲವು ಲಕ್ಷ ಬೆಂಬಲಿಗರನ್ನು ಹೊಂದಿರುವ ಸೋಶಿಯಲ್ ಮೀಡಿಯಾ ಪ್ರಭಾವಿಗಳು ಸುಳ್ಳುಸುದ್ದಿಗಳನ್ನು ಸುಳ್ಳು ವೀಡಿಯೋಗಳನ್ನು ಹಂಚುತ್ತಾ, ನೇರವಾಗಿ ಹಿಂದೂ ಮುಸ್ಲಿಂ ಸಂಘರ್ಷಕ್ಕೆ ಪ್ರಚೋದನೆ ನೀಡುತ್ತಿದ್ದಾಗ ತಕ್ಷಣ ಅವರಿಗೆ ಎಚ್ಚರಿಕೆ ನೀಡಬೇಡವೇ? ಅತ್ಯಂತ ಪ್ರಚೋದಕ ಪೋಸ್ಟ್ ಹಾಕಿದ ಮತ್ತು ಆಮೇಲೆಯೂ ಮತ್ತೆ ಮತ್ತೆ ಪ್ರಚೋದಕ ಹೇಳಿಕೆ ನೀಡಿದ ರಶ್ಮಿ ಸಾಮಂತ್ ಮೇಲೆ ಕಾನೂನು ಕ್ರಮ ಜರುಗಿಸಬೇಡವೇ? ಇಂತಹ ಕಾನೂನುಕ್ರಮಕ್ಕೆ ಹೊಸ ಕಾಯ್ದೆಯ ಅಗತ್ಯವಿಲ್ಲ. ಈಗ ಇರುವ ಐಟಿ ಕಾಯ್ದೆಯಲ್ಲಿಯೇ ಅವಕಾಶವಿದೆ. ಹಾಗೆ ಮಾಡುತ್ತಿದ್ದರೆ ಆಕೆಗೆ ಮಾತ್ರವಲ್ಲ, ಇತರರಿಗೂ ಅದು ಒಂದು ಕಟುವಾದ ಸಂದೇಶ ರವಾನೆಯಾಗುತ್ತಿರಲಿಲ್ಲವೇ?

ಆದರೆ ಇಲ್ಲಿ ಸರಕಾರ ತುಂಬಾ ದುರ್ಬಲವಿದ್ದಂತೆ ಕಂಡಿತು. ತಕ್ಷಣ ಪೊಲೀಸರಿಂದ ಒಂದು ಅಧಿಕೃತ ಹೇಳಿಕೆಯೂ ಬರಲಿಲ್ಲ. ಸೋಶಿಯಲ್ ಮೀಡಿಯಾದ ಮೂಲಕ ಬೆಂಕಿ ಹಚ್ಚಿದವರ ವಿರುದ್ಧ ಕನಿಷ್ಠ ಕಾನೂನು ಕ್ರಮವೂ ಜರುಗಲಿಲ್ಲ. ಬಿಜೆಪಿ ಪರಿವಾರದ ಒತ್ತಡಕ್ಕೆ ಮಣಿಯದೆ ಸತ್ಯದ ಪರ ಗಟ್ಟಿಯಾಗಿ ನಿಲ್ಲುವ ಧೈರ್ಯವನ್ನೇ ತೋರಿದಂತೆ ಕಾಣಲಿಲ್ಲ.

ಮುಂದುವರಿದೇ ಇರುವ ‘ಮೋರಲ್ ಪೊಲೀಸಿಂಗ್’

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬಂದು ಮೂರು ತಿಂಗಳಾಗುತ್ತಾ ಬಂತು. ವಿಶೇಷವಾಗಿ ಕರಾವಳಿ ಕರ್ನಾಟಕ ಕಳೆದ ಒಂದೆರಡು ದಶಕಗಳಿಂದ ಮೋರಲ್ ಪೊಲೀಸಿಂಗ್ ಹಾವಳಿಗೆ ತುತ್ತಾಗಿ ಕೆಟ್ಟ ಹೆಸರು ಸಂಪಾದಿಸಿದೆ. ಇಲ್ಲಿರುವ ಶಿಕ್ಷಣ ಸಂಸ್ಥೆಗಳಿಗೆ ಬರಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ. ಹೂಡಿಕೆ ಮಾಡಲು ಉದ್ಯಮಿಗಳು ಮುಂದೆ ಬರುತ್ತಿಲ್ಲ. ‘ಮೋರಲ್ ಪೊಲೀಸಿಂಗ್ ಗೆ ಕಡಿವಾಣ ಹಾಕುತ್ತೇವೆ, ಅದಕ್ಕಾಗಿ ವಿಶೇಷ ಪೊಲೀಸ್ ವಿಂಗ್ ಸ್ಥಾಪಿಸುತ್ತೇವೆ’ ಎಂದು ಸರಕಾರ ಹೇಳುತ್ತಿದೆ. ಗೃಹ ಸಚಿವರೇ ಹೀಗೆ ಘೋಷಿಸಿದ ಆ ಬಳಿಕವೂ ಮಂಗಳೂರು ಭಾಗದಲ್ಲಿ ಎರಡು ಮೋರಲ್ ಪೊಲೀಸಿಂಗ್ ಘಟನೆಗಳು ನಡೆದಿವೆ. ಇದೇ ಜುಲೈ 27 ರಂದು ಬಂಟ್ವಾಳ ಬಿ ಸಿ ರೋಡ್ ನಲ್ಲಿ ಪೊಲೀಸ್ ಸಿಬ್ಬಂದಿಯ ಕುಟುಂಬದ ಮೇಲೆಯೇ ‘ಅನೈತಿಕ ಪೊಲೀಸರು’ ಹಲ್ಲೆ ನಡೆಸಿದ್ದಾರೆ ಎಂದರೆ, ಇಲ್ಲಿ ಈಗಲೂ ಪರಿಸ್ಥಿತಿ ಹೇಗಿದೆ ಎನ್ನುವುದು ಯಾರಿಗೂ ಅರ್ಥವಾದೀತು.

ಕ್ರಿಮಿನಲ್ ಚಟುವಟಿಕೆಯಲ್ಲಿ ದೀರ್ಘಕಾಲದಿಂದ ತೊಡಗಿಕೊಂಡಿರುವ ಮಂಗಳೂರಿನ ಕೆಲವರನ್ನು ಗಡಿಪಾರು ಮಾಡುವ ಸುದ್ದಿ ಹೊರಬಿದ್ದಾಗ, ಬಿಜೆಪಿಯ ಶಾಸಕರ ಸಹಿತ ಕೇಸರಿ ಸಂಘಟನೆಗಳಿಂದ ಅವರನ್ನು ತಮ್ಮವರು ಎನ್ನುವ ಕಾರಣಕ್ಕೆ ಸಮರ್ಥಿಸುವ ಮತ್ತು ರಕ್ಷಿಸುವ ಯತ್ನ ನಡೆಯಿತು. ಉಡುಪಿ ಕಾಲೇಜು ಪ್ರಕರಣದಲ್ಲಿಯೂ ಸುಳ್ಳು ಸುದ್ದಿ ಹಬ್ಬಿಸಿದವರನ್ನು, ಮುಖ್ಯಮಂತ್ರಿಗಳ ಕುಟುಂಬದವರ ನಿಂದನೆ ಮಾಡಿದವರನ್ನೂ ಸಂಘಪರಿವಾರ ಸಮರ್ಥಿಸಿತು ಮತ್ತು ರಕ್ಷಿಸಿತು. ಅಂದರೆ ಎಲ್ಲೋ ಒಂದು ಕಡೆ ಸರಕಾರವು ಬಲಪಂಥೀಯರ ಒತ್ತಡಕ್ಕೆ ಒಳಗಾಗಿ ಕಾನೂನು ಅಡಿ ಆಡಳಿತ ನಡೆಸಲು ಹಿಂದೇಟು ಹಾಕುತ್ತಿರುವ ಸೂಚನೆ ಲಭಿಸುತ್ತಿದೆ.

ಇದು ಆಗ ಕೂಡದು. ಅಪರಾಧಿಗಳು ಯಾವ ಜಾತಿ, ಧರ್ಮ, ರಾಜಕೀಯ ಪಕ್ಷಗಳಿಗೇ ಸೇರಿರಲಿ ಅವರನ್ನು ಕೇವಲ ಅಪರಾಧಿಗಳೆಂದು ಪರಿಗಣಿಸಿ ಕಾನೂನು ಕ್ರಮ ಜರುಗಿಸಬೇಕು. ಕಾನೂನು ಪ್ರಕಾರ ಆಡಳಿತ ನಡೆಸಿದರೆ ಸಾಲದು, ಕಾನೂನು ಪ್ರಕಾರ ಆಡಳಿತ ನಡೆಸಿದಂತೆ ಕಾಣಬೇಕು ಕೂಡಾ. ಇಲ್ಲವಾದರೆ ಈ ಅಪರಾಧ ಚಟುವಟಿಕೆಗಳಿಗೆ ಕೊನೆಯೇ ಇಲ್ಲವಾಗುತ್ತದೆ. ನಾಡಿನಲ್ಲಿ ಶಾಂತಿ ಸೌಹಾರ್ದ ನೆಲೆಸಬೇಕು ಎಂದು ಹೊಸ ಸರಕಾರದ ಪರ ಮತ ಚಲಾಯಿಸಿದವರಿಗೂ ನಿರಾಶೆಯಾಗುತ್ತದೆ.

ಶ್ರೀನಿವಾಸ ಕಾರ್ಕಳ

ಚಿಂತಕರೂ ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.

ಇದನ್ನೂ ಓದಿ-ಉಡುಪಿ ವಿಡಿಯೋ ಪ್ರಕರಣಕ್ಕೆ ಕೋಮು ಬಣ್ಣ ಬಳಿಯದಿರಿ: ಖುಷ್ಬೂ ಸುಂದರ್

Related Articles

ಇತ್ತೀಚಿನ ಸುದ್ದಿಗಳು