ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಮುಂದುವರಿದರೆ ಮತ್ತೆ ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟ ಸಾಧ್ಯತೆ

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಿದ ಬಳಿಕ ಬೂದಿ ಮುಚ್ಚಿದ ಕೆಂಡದಂತಿರುವ ಬಿಜೆಪಿಯಲ್ಲಿ ಈಗ ಮತ್ತೆ ಅಸಮಾಧಾನ ಸ್ಫೋಟಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ಪ್ರಮುಖ ಕಾರಣ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮತ್ತೆ ವಿಜಯೇಂದ್ರ ಮುಂದುವರೆಯುವ ಬಗೆಗಿನ ಸುದ್ದಿ.

ಹೌದು.. ಬಿಜೆಪಿಯಲ್ಲಿ ಅಸಮಾಧಾನ ಹೊರ ಬೀಳಬಾರದು ಎಂಬು ಪ್ರಜ್ಞೆ ವರಿಷ್ಠರಿಗೆ ಇದ್ದರೆ, ಅವಧಿ ಮುಗಿದ ತಕ್ಷಣ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಪಟ್ಟದಿಂದ ಕೆಳಗಿಳಿಸಬೇಕು ಎಂದು ‘ಭಿನ್ನರು’ ಪಟ್ಟು ಹಿಡಿದಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಗುರುವಾರ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಬೆಂಗಳೂರಿನಲ್ಲಿ ವಿಜಯೇಂದ್ರ ವಿರುದ್ಧ ಇರುವವರ ಜೊತೆಗೆ ನಡೆಸಿದ ಸಮಾಲೋಚನೆಯಲ್ಲಿ ಈ ವಿಚಾರ ಹೊರಬಿದ್ದಿದೆ. ಶಾಸಕ ಯತ್ನಾಳ್ ಉಚ್ಛಾಟನೆ ನಂತರ ತಣ್ಣಗಿರುವ ಈ ಬಣ ಈಗ ಮತ್ತೆ ತಕರಾರು ತೆಗೆದಿದ್ದು, ಪ್ರಹ್ಲಾದ್ ಜೋಷಿ ಬಳಿ ವಿಜಯೇಂದ್ರರನ್ನು ಅವಧಿ ಮುಗಿದ ನಂತರ ಕೆಳಗಿಳಿಸಿ, ರಾಜ್ಯಾಧ್ಯಕ್ಷರ ಬದಲಾವಣೆ ಮಾಡುವಂತೆ ಪಟ್ಟು ಹಿಡಿದಿದೆ.

ಈಗಾಗಲೇ ವರಿಷ್ಠರ ಸೂಚನೆ ಹಿನ್ನೆಲೆಯಲ್ಲಿ ಅಖಾಡಕ್ಕೆ ಇಳಿದಿರುವ ಜೋಶಿಯವರು ಭಿನ್ನರ ಮುನಿಸು ಶಮನ ಮಾಡುವ ಪ್ರಯತ್ನ ನಡೆಸಿದ್ದಾರೆ. ಆದರೆ ಭಿನ್ನಮತೀಯ ಬಿಜೆಪಿ ನಾಯಕರ ಪರವಾಗಿ ಮಾಜಿ ಸಂಸದ ಜಿಎಂ ಸಿದ್ದೇಶ್ವರ ಮತ್ತು ಶಾಸಕ ಬಿ.ಪಿ. ಹರೀಶ್‌ ಅವರು ಜೋಶಿಯವರನ್ನು ಭೇಟಿ ಮಾಡಿ ವಿಜಯೇಂದ್ರ ಬದಲಾವಣೆಯ ಬೇಡಿಕೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಇದರ ನಡುವೆ ಬಿಜೆಪಿಯ ತಟಸ್ಥ ಬಣ ಕೂಡಾ ಕೆಲವು ದಿನಗಳಿಂದ ವಿಜಯೇಂದ್ರ ವಿರುದ್ಧ ಮತ್ತೆ ಸಕ್ರಿಯವಾಗಿದೆ. ಕೇಂದ್ರ ಸಚಿವ ವಿ. ಸೋಮಣ್ಣ ಹಾಗೂ ಸಂಸದ ಡಾ ಕೆ. ಸುಧಾಕರ್‌ ರಹಸ್ಯವಾಗಿ ವಿಪಕ್ಷ ನಾಯಕ ಆರ್‌. ಅಶೋಕ್‌ ಅವರನ್ನು ಮೂರ್‍ನಾಲ್ಕು ದಿನಗಳ ಹಿಂದೆ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಚರ್ಚೆಯಲ್ಲಿ ಹೊಸ ರಾಜ್ಯಾಧ್ಯಕ್ಷನ ಆಯ್ಕೆ ಮತ್ತು ವಿಜಯೇಂದ್ರ ವಿರುದ್ಧ ಇರುವ ಬಣದ ವಿಶ್ವಾಸ ತೆಗೆದುಕೊಳ್ಳುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಹಾಗೆಯೇ ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಆರ್‌.ಅಶೋಕ್‌, ಸುನಿಲ್‌ ಕುಮಾರ್‌, ಸಿ.ಸಿ. ಪಾಟೀಲ್‌ ಸಹಿತ ತಟಸ್ಥ ಬಣದ ಮುಖಂಡರು ಚರ್ಚೆ ನಡೆಸಿದ್ದಾರೆ. ಜಿಲ್ಲಾಧ್ಯಕ್ಷರ ನೇಮಕದಲ್ಲಿ ವಿಜಯೇಂದ್ರ ಪಕ್ಷದ ಹಿರಿಯರ ಅಭಿಪ್ರಾಯ ತೆಗೆದುಕೊಳ್ಳದೇ ಇರುವುದು ಸಹ ಚರ್ಚೆ ಮುನ್ನೆಲೆಗೆ ಬಂದಿದೆ. ತನಗೆ ಬೇಕಾದ ಜಿಲ್ಲಾಧ್ಯಕ್ಷರ ನೇಮಕ ಮಾಡಿರುವುದು ಸಹ ವಿಜಯೇಂದ್ರ ವಿರುದ್ಧ ಅಪಸ್ವರ ಭುಗಿಲೇಳುವ ಸಾಧ್ಯತೆ ದಟ್ಟವಾಗಿದೆ.

Related Articles

ಇತ್ತೀಚಿನ ಸುದ್ದಿಗಳು