Friday, June 14, 2024

ಸತ್ಯ | ನ್ಯಾಯ |ಧರ್ಮ

ರಾಹುಲ್‌ ಅನರ್ಹತೆ | ಮಹತ್ವದ ತಿರುವು

 ಭಾರತದ ರಾಜಕೀಯ- ಸಮಾಜ ಶಾಸ್ತ್ರದ ಪರಿಣಿತ  ಕ್ರಿಸ್ಟೋಪರ್ ಜಫರ್‌ ಲಾಟ್‌ ಲಂಡನ್ನಿನ  ಹೆಸರಾಂತ ಪ್ರಾಧ್ಯಾಪಕ.‌ ಇವರು ಭಾರತದ ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ಬರೆಯುತ್ತಾ ರಾಹುಲ್‌ ಗಾಂಧಿಯ ಅನರ್ಹತೆ ಟರ್ಕಿ, ಇಸ್ರೇಲ್‌, ಹಂಗೇರಿಗಳಲ್ಲಾದಂತೆ ವಿರೋಧ ಪಕ್ಷಗಳ ಒಗ್ಗಟ್ಟಿಗೆ ಕಾರಣವಾಗುತ್ತದೆ. ವಿರೋಧ ಪಕ್ಷದ ನಾಯಕರು ವೈಮನಸ್ಯ ಮರೆತು ಒಂದಾದಾಗ ಸರ್ವಾಧಿಕಾರಿ ನಾಯಕರ ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತೆ. ಅವರ ಧ್ರುವೀಕರಣ ತಂತ್ರ ತಿರುಗುಬಾಣವಾಗುತ್ತದೆ ಎಂದು ವಿಶ್ಲೇಷಿಸುತ್ತಾರೆ. ಇವರ ಇಂಗ್ಲೀಷ್‌ ಲೇಖನವನ್ನು ಕೆ.ಪಿ ಸುರೇಶ ಕನ್ನಡಕ್ಕೆ ಅನುವಾದಿಸಿದ್ದಾರೆ

 ಮೋದಿಯ ಭಾರತ ರಾಷ್ಟ್ರೀಯ ಜನಪ್ರಿಯ ಸನ್ನಿಯಿಂದ ಚುನಾವಣಾ ಸರ್ವಾಧಿಕಾರದ ಕಡೆ ಚಲಿಸುತ್ತಿರುವುದನ್ನು  ಗಮನಿಸಿದ್ದೆ. ಮುಖ್ಯ ಸಂಸ್ಥೆಗಳನ್ನು( ಚುನಾವಣಾ ಆಯೋಗವೂ ಸೇರಿ) ಕೈ ವಶ ಮಾಡಿಕೊಳ್ಳುವುದು, ಚೇಲಾ ಬಂಡವಾಳಿಗರ ಮೂಲಕ ಮಾಧ್ಯಮವನ್ನು ಪಳಗಿಸುವುದು ಇದರ ಭಾಗ. ಈ ಅವಧಿಯಲ್ಲಿ ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ( ಬೇರೆ ದೇಶಗಳಲ್ಲೂ ಇದು ನಡೆಯುತ್ತಿದೆ) ಯಾಕೆಂದರೆ ಸರ್ವೋಚ್ಛ ನಾಯಕನಿಗೆ  ಜನಪ್ರಿಯ ಒಪ್ಪಿಗೆಯ ನೆಲೆ ಬೇಕು. ಆದರೆ ಈ ಚುನಾವಣೆಗಳು ಸಮಬಲದ ಹೋರಾಟದ ಅಖಾಡಾ ಆಗಿರುವುದೇ ಇಲ್ಲ. ಮಾಧ್ಯಮದ ಕೈವಾಡವಷ್ಟೇ ಅಲ್ಲ, ದುಡ್ಡಿನ ಮೂಟೆಗಳ ಪ್ರಭಾವವೂ ಇದಕ್ಕೆ ಕೈ ಜೋಡಿಸುತ್ತದೆ (ಚುನಾವಣಾ ಬಾಂಡ್ಇತ್ಯಾದಿ)

ಈಗ ಹೊಸ ಘಟನಾವಳಿಯ ಸರಣಿ ಆರಂಭವಾಗಿದೆ. ಗಣರಾಜ್ಯದ ಸಂಸ್ಥೆಗಳನ್ನು ಪ್ರಭುತ್ವ ವಶಪಡಿಸಿಕೊಂಡಾಗ ವಿರೋಧ ಪಕ್ಷಗಳು ಹೊಸ ಪರ್ಯಾಯಗಳನ್ನು ಹುಡುಕುವ ಅನಿವಾರ್ಯತೆ ಬರುತ್ತದೆ. ರಾಹುಲ್‌ ಗಾಂಧಿ ಮೊದಲು ಸಂಸತ್ತನ್ನು ಬಳಸಿದರು. ಪ್ರಜಾಸತ್ತೆಯ ಮೇಲೆ ಮೋದಿಯ ಧಾಳಿಯನ್ನೂ ;  ಮೋದಿ ಮತ್ತು ಕಾಸಿನ ಕುಳಗಳ ನಡುವೆ ಇರುವ ಸಂಬಂಧವನ್ನೂ ಎತ್ತಿಕೊಂಡು ರಾಹುಲ್‌ ಸಂಸತ್ತಿನಲ್ಲಿ  ಧಾಳಿ ಮಾಡಿದರು. ಆದರೆ ಅದು ಸಾಕಾಗಲಿಲ್ಲ. ಯಾಕೆಂದರೆ ಸಂಸತ್ತನ್ನು ಆಗಲೇ ಕ್ಷೀಣಗೊಳಿಸಿ ಆಗಿತ್ತು. ಅಲ್ಲಿನ ಕೆಲವು ಚರ್ಚೆ, ಮಂಜೂರಾತಿ ಗಮನಿಸಿದರೆ ಅವು ತುರ್ತು ಪರಿಸ್ಥಿತಿ ಕಾಲದಂತೇ ಇತ್ತು. ವಿರೋಧ ಪಕ್ಷದ ನಾಯಕ ಜನರ ಬಳಿಗೆ ಹೋಗುವುದು ಅನಿವಾರ್ಯವಾಗಿತ್ತು. ಸುರಿವ ಅಪಮಾಹಿತಿಯ ಕಾರಣಕ್ಕೆ ಜನರೂ ಮಂಪರಿನಲ್ಲಿರುವುದು ಗೋಚರಿಸತೊಡಗಿತ್ತು. ಭಾರತ್‌ ಜೋಡೋ ಯಾತ್ರಾ ಇಂಥಾ ಒಂದು ಯತ್ನ. ಕಾಂಗ್ರೆಸ್ಸಿನ ಕಾರ್ಯಕರ್ತರನ್ನು ಪುನಶ್ಚೇತನಗೊಳಿಸುವುದು ಕೂಡಾ ಇದರ ಭಾಗ. ಮಾಧ್ಯಮ ಇದನ್ನು ನಿರ್ಲಕ್ಷಿಸಿದರೂ ಈ 4000 ಕಿಮೀ ಯಾತ್ರೆ ಅಭೂತಪೂರ್ವ ಯಶಸ್ಸು ಕಂಡಿತು. ಕಾಂಗ್ರೆಸ್ ಮತ್ತೆ ತನ್ನ ಹಿಂದಿನ ದಿನಗಳ  ಹಾದಿಗೆ ಬರತೊಡಗಿತ್ತು.

 ಇದಕ್ಕೆ ಪ್ರಭುತ್ವದ  ಪ್ರತಿಕ್ರಿಯೆಯ ನಡೆ ಏನು? ಅದೂ ನಿರೀಕ್ಷಿತ. ಈ ರಾಹುಲ್‌ ಗಾಂಧಿಯನ್ನು ನಿಶ್ಚೇತನ ಗೊಳಿಸಬೇಕು.  ಮೋದಿಗಳ ಮಾನಹಾನಿ ಎಂಬುದು ನೆಪ. ಇದು ಬಿಟ್ಟರೆ ಈ ಪ್ರಭುತ್ವಕ್ಕೆ ಬೇರೇನೂ ಸಿಗಲಿಲ್ಲ. ಮೋದಿ ಬಳಸಿದ ಮಾನ ಹಾನಿಕರ ಪದಗಳನ್ನು ನೋಡಿದರೆ ಇದು ವಿರೋಧಾಭಾಸವೇ ಸರಿ ( ಪಾಸ್ಟಾ ಬಹೆನ್‌, ಜೆರ್ಸಿ ಹಸು, ಮೌನ್‌ ಮೋಹನ್‌ ಸಿಂಗ್‌ ನೆನಪಿಸಿಕೊಳ್ಳಿ) ಎರಡು ವರ್ಷ ಜೈಲು ಶಿಕ್ಷೆ ಆದರೆ ಸಂಸದನನ್ನು ಅನರ್ಹಗೊಳಿಸಬಹುದು ಎಂಬುದಷ್ಟೇ ನೆಪ. ಉದ್ದೇಶ ರಾಹುಲ್‌ ಗಾಂಧಿಯನ್ನು ಸಂಸತ್ತಿನಿಂದ ದೂರ ಇಡುವುದು.

ಈ ಹೆಜ್ಜೆ ನರೇಂದ್ರ ಮೋದಿ- ಅದಾನಿಯ ನಡುವಿನ ಸಂಬಂಧದ ಚರ್ಚೆ ಹೆಚ್ಚುತ್ತಿರುವಂತೆ ಪ್ರಭುತ್ವದ ನಡುಕವನ್ನು ಬಿಂಬಿಸುತ್ತದೆ. ಉದ್ಯಮಪತಿಗಳು ದೇಶ-ವಿದೇಶಗಳಲ್ಲಿ ಉಸಿರು ಬಿಗಿ ಹಿಡಿದು ಗಮನಿಸುತ್ತಿದ್ದಾರೆ. ಇದೆಲ್ಲಾ ಪ್ಲಾನ್ ಅಷ್ಟೇ. ಅಂದರೆ ಇನ್ನಷ್ಟು ಅವಾಂತರ ಆಗುವುದನ್ನು ತಡೆಯಲು ಪ್ರಭುತ್ವ ಮಾಡುವ ಪ್ರಯತ್ನಗಳು. ಆದರೆ ಇದು ಪ್ರತಿಕೂಲ ಪರಿಣಾಮಗಳನ್ನೂ ಹುಟ್ಟು ಹಾಕುತ್ತವೆ.

ಹೆಚ್ಚಿನ ಉದಾರವಾದಿ ಪ್ರಜಾಸತ್ತೆಗಳಲ್ಲಿ ಇಂಥಾ ಕ್ಷುಲ್ಲಕ ಕಾರಣಗಳಿಗೆ ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ದೂಡುವ ಕ್ರಮ ಇಲ್ಲ. ಆದ್ದರಿಂದಲೇ ಪ್ರಜಾಸತ್ತೆಯ ತಾಯಿ, ವಿಶ್ವಗುರು ಮುಂತಾದ ಸರಕಾರದ ಕ್ಲೈಮುಗಳಿಗೆ  ಹೊಡೆತ ಬೀಳುತ್ತದೆ. ಟರ್ಕಿ, ಇಸ್ರೇಲ್‌, ಹಂಗೇರಿಗಳಲ್ಲಾದಂತೆ ಇದು ವಿರೋಧ ಪಕ್ಷಗಳ ಒಗ್ಗಟ್ಟಿಗೆ ಕಾರಣವಾಗುತ್ತದೆ. ರಾಹುಲ್‌ ಅವರ ಸ್ಪರ್ಧಿಗಳಿಗೆ ಇದೀಗ ಇದು ಅರ್ಥವಾಗುತ್ತಿದೆ. ಉದಾ: ಕೇಜ್ರಿವಾಲ್.‌ ಪ್ರತಿರೋಧ ಒಡ್ಡುವವರಿಗೆ ಈ ಪ್ರಭುತ್ವ ಎಷ್ಟು ಮಾರಕ ಎಂಬುದು ಸಿಸೋಡಿಯಾ ಬಂಧನದಿಂದಲೇ ಕೇಜ್ರಿವಾಲಾಗೆ ಅರ್ಥವಾಗಿದೆ.

 ವಿರೋಧ ಪಕ್ಷದ ನಾಯಕರು ವೈಮನಸ್ಯ ಮರೆತು ಒಂದಾದಾಗ ಸರ್ವಾಧಿಕಾರಿ ನಾಯಕರ ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತೆ. ಅವರ ಧ್ರುವೀಕರಣ ತಂತ್ರ ತಿರುಗುಬಾಣವಾಗುತ್ತದೆ. ಈ ಹೊಸ ಸಂದರ್ಭ ಅವರನ್ನು ಇನ್ನಷ್ಟು ಕಠೋರವಾಗಿಸುತ್ತೆ. ಹೊಸ ಬೆಂಬಲಿಗರು ಸಿಕ್ಕಿದರೆ ಪರವಾಗಿಲ್ಲ. ಜ್ಯೋತಿರಾದಿತ್ಯ ಸಿಂಧಿಯಾ ತರದವರನ್ನು ಬುಟ್ಟಿಗೆ ಹಾಕಿಕೊಂಡರೆ ಪರವಾಗಿಲ್ಲ. ಮುಂದಿನ ದಿನಗಳಲ್ಲಿ ಕಾದು ನೋಡಬೇಕಾದ ಸಂಗತಿ ಇದು. ಆದರೆ ಪ್ರಾದೇಶಿಕ ಪಕ್ಷಗಳು- ದೆಹಲಿ, ಪಂಜಾಬ್‌ ಅಲ್ಲದೇ, ಬಿಹಾರ್‌, ಯುಪಿ, ಪಶ್ಚಿಮ ಬಂಗಾಳ, ಒಡಿಶಾ, ಝಾರ್ಖಂಡ್‌, ಕೇರಳ ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣಾಗಳ ನಾಯಕರೂ ವೈಮನಸ್ಯ/ ಭಿನ್ನ ಮತ ಮರೆತು ಒಂದಾಗುವ ಸಾಧ್ಯತೆ ಇದೆ. ಕರ್ನಾಟಕ, ಆಮೇಲೆ ಮಧ್ಯಪ್ರದೇಶ, ಛತ್ತೀಸಗಡ, ರಾಜಸ್ತಾನಗಳ ಚುನಾವಣೆಯ ಭವಿಷ್ಯ ೨೦೨೪ರ ಲೋಕಸಭಾ ಚುನಾವಣೆಯ ಹಣೆಬರಹ ನಿರ್ಧರಿಸಬಲ್ಲುದು.

 ರಾಹುಲ್‌ ಗಾಂಧಿಯನ್ನು ಅನರ್ಹಗೊಳಿಸಿರುವುದು (ಜೈಲಿಗೆ ಕಳಿಸುವುದು) ಈ ದೇಶದ ಆಳುವವರಿಗೆ ಉಲ್ಟಾ ಹೊಡೆಯಬಹುದು. 

ರಾಹುಲ್‌ ಜೈಲು ಪಾಲಾದರೆ ಬಲಿಪಶು ಎಂಬ ಕಥನ ಸ್ಥಾನಪಲ್ಲಟಗೊಳ್ಳುತ್ತದೆ!

 ೨೦೦೨ರಿಂದಲೂ ಉದಾರವಾದಿಗಳು, ಲುಟ್ಯೇನನ ದೆಹಲಿ, ಖಾನ್‌ ಮಾರ್ಕೆಟ್‌ ಗ್ಯಾಂಗಿನ ಬಲಿಪಶು ನಾನು ಎಂದೇ ನರೇಂದ್ರ ಮೋದಿ ಬಿಂಬಿಸಿಕೊಂಡು ಬಂದಿದ್ದಾರೆ. ಈ ಕುಲೀನ ಗುಂಪುಗಳ ಬಲಿ ಪಶು ನಾನು, ಶ್ರೀ ಸಾಮಾನ್ಯನ ಪ್ರತಿನಿಧಿ ನಾನು ಎಂದೇ ಬಿಂಬಿಸಿದ್ದಾರೆ. ಚಾಯ್‌ ವಾಲಾ, ಒಬಿಸಿ ಎಂಬ ಕಥನವೂ ಇದೆಯಷ್ಟೇ. ಆದರೆ ಈಗ ನೆಹರೂ ಮರಿಮಗನೇ ಬಲಿಪಶುವಾದರೆ ಮೋದಿಯ ಕಥನ ತೂಕ ಕಳೆದುಕೊಳ್ಳುತ್ತದೆ.

 ರಾಹುಲ್‌ ನನ್ನು ಜೈಲಿಗೆ ಕಳಿಸದೇ ಹೋದರೆ ಅವರು ಬೀದಿ ಹೋರಾಟ ಮುಂದುವರಿಸುತ್ತಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯಾತ್ರೆ ಮಾಡಿಯಾಗಿದೆಯಷ್ಟೇ. ಇನ್ನೀಗ ಗುಜರಾತಿನಿಂದ ಈಶಾನ್ಯ ಭಾರತದವರೆಗೆ ಇನ್ನೊಂದು ಯಾತ್ರೆ ಶುರುವಾಗಬಹುದು. ಕಾಂಗ್ರೆಸ್‌ಗೆ ಈ ಬಾರಿ ತನ್ನ ಕಾರ್ಯಕರ್ತರ ಪಡೆ ಅಷ್ಟೇ ಅಲ್ಲ; ಮೋದಿಗೆ ಪರ್ಯಾಯ  ರಾಹುಲ್ ಎಂದು ಭಾವಿಸುವವರ ಬೆಂಬಲವೂ ದೊರಕೀತು.

ಇತ್ತೀಚೆಗಿನವರೆಗೂ ಭಾಜಪಿಗಳು ಈ ರಾಹುಲ್‌ ಮಮತಾ, ಕೇಜ್ರಿವಾಲಾರಷ್ಟು ಬಲಿಷ್ಠ ಅಲ್ಲ ಎಂದು ತಮ್ಮನ್ನು  ತಾವೇ ನಂಬಿಸಿಕೊಂಡಿದ್ದರು. ಆದರೆ ಕಾಲ ಬದಲಾಗುತ್ತಿದೆ.  ರಾಹುಲ್‌ ಅವರ ದೈಹಿಕ ಕ್ಷಮತೆ ಅವರಿಗೆ ಹೊಸ ಹೊಳಪು, ಕರಿಶ್ಮಾ ನೀಡಿದೆ. ಹಾಗೇ ಭಾಜಪ ನಾಯಕರು ಅವರ ಮೇಲೆ ಧಾಳಿ ಮಾಡಿದ ರೀತಿಯೇ ಹೊಸ ಬೆಂಬಲಿಗರನ್ನು ಸೃಷ್ಟಿಸಿದೆ.  ತಮ್ಮ ಎದುರಾಳಿಯ ಸೃಷ್ಟಿಗೆ ಈ ಭಾಜಪಿಗಳೇ ಕಷ್ಟಪಟ್ಟು ನೀರೆರೆಯುತ್ತಿದ್ದಾರೆ.

ಮುಂದಿನ  ಹಾದಿ:

ರಾಹುಲ್‌ ಗಾಂಧಿಗೆ ಶಿಕ್ಷೆಯಾಗುತ್ತದೆಯೋ ಎಂಬುದು ನ್ಯಾಯಾಂಗದ  ಪಾತ್ರದ ಮೇಲೆ ನಿಂತಿದೆ. ಮುಖ್ಯ ನ್ಯಾಯಾಧೀಶ ಚಂದ್ರಚೂಡ್‌ ಅವರು ಇತ್ತೀಚೆಗೆ ಸಂವಿಧಾನದ ಮೂಲ ಸಂರಚನೆ  ದೇಶದ ಧ್ರುವ ನಕ್ಷತ್ರ ಎಂದು ಬಣ್ಣಿಸಿದ್ದಾರೆ. ಇದನ್ನು ರಕ್ಷಿಸಿಕೊಳ್ಳಲು ನ್ಯಾಯಾಂಗ ಹೋರಾಡುತ್ತಾ ಎಂಬುದು ಪ್ರಶ್ನೆ. ಒಂದು ವೇಳೆ ರಕ್ಷಿಸಲು ಮನಸ್ಸು ಮಾಡಿದರೆ ಆರು ವರ್ಷಗಳ  ತೂಕಡಿಕೆಯಿಂದ ನ್ಯಾಯಾಂಗ  ಎಚ್ಚೆತ್ತು ಗಣರಾಜ್ಯದ ರಕ್ಷಣೆಗೆ ಕಟಿ ಬದ್ಧವಾದಂತಾಗುತ್ತದೆ.

ಒಟ್ಟು ಸಾರಾಂಶದಲ್ಲಿ ಹೇಳುವುದಾದರೆ ಪಶ್ಚಿಮದ ದೇಶಗಳು ಪ್ರತಿಕ್ರಿಯಿಸಲಾರವು! ಅವುಗಳ ಪ್ರತಿಕ್ರಿಯೆ ಈ  ಹೋರಾಟಕ್ಕೆ ಹಾನಿ ಮಾಡಲೂಬಹುದು.

 ಮೂಲ :  ಕ್ರಿಸ್ಟೋಪರ್ ಜಫರ್‌ ಲಾಟ್‌

ಅನುವಾದ: ಕೆ.ಪಿ.ಸುರೇಶ

Related Articles

ಇತ್ತೀಚಿನ ಸುದ್ದಿಗಳು