ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆ ತೀವ್ರಗೊಂಡಿದೆ. ಇಂದು ಸಂಜೆ 4 ಗಂಟೆಗೆ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿರುವ ಬೆನ್ನಲ್ಲೇ, ಸಚಿವ ಸ್ಥಾನದಿಂದ ವಂಚಿತರಾದ ಹಲವು ಹಿರಿಯ ಹಾಗೂ ಪ್ರಭಾವಿ ನಾಯಕರ ಬೆಂಬಲಿಗರು ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗೆ ಇಳಿದಿದ್ದಾರೆ.
ಮೈಸೂರಿನಲ್ಲಿ ಶಾಸಕ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ದೊರೆಯದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ವೇಳೆ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಬೆಂಬಲಿಗನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ. ತಕ್ಷಣವೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಈ ಘಟನೆ ಕಾರ್ಯಕರ್ತರ ಅಸಮಾಧಾನದ ತೀವ್ರತೆಯನ್ನು ಬಿಂಬಿಸಿದೆ.
ಇನ್ನೊಂದೆಡೆ, ವಿಜಯಪುರ ಜಿಲ್ಲೆಯ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯ ಗೌಡ ಪಾಟೀಲ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿದುಬಂದಿದೆ. ಹಿರಿಯ ನಾಯಕರಾಗಿದ್ದರೂ ಸಂಪುಟದಲ್ಲಿ ಅವಕಾಶ ನೀಡದಿರುವುದಕ್ಕೆ ಬೇಸರಗೊಂಡು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಹಾಗೆಯೇ ಸಾಗರ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಇತ್ತೀಚಿನ ದಿನಗಳಲ್ಲಿ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದವರು. ಶಿವಮೊಗ್ಗ ಜಿಲ್ಲೆಯ ಮೂವರು ಪ್ರಮುಖ ಕಾಂಗ್ರೆಸ್ ನಾಯಕರುಗಳಲ್ಲಿ ಗೋಪಾಲಕೃಷ್ಣ ಹೆಚ್ಚು ಕ್ರಿಯಾಶೀಲ. ಅದೂ ಅಲ್ಲದೆ ಈ ಹಿಂದೆ ಸಿದ್ದರಾಮಯ್ಯ ಸಂಪುಟದಲ್ಲಿ ಮಧು ಬಂಗಾರಪ್ಪ ಅವರಿಗೆ ಒಲಿದ ಸಚಿವ ಸ್ಥಾನ, ಡಿಕೆ ಸಂಪುಟದಲ್ಲಿ ತಮಗೆ ಸಿಗಬಹುದು ಎಂಬ ಆಕಾಂಕ್ಷೆ ಇತ್ತು. ಆದರೆ ಕಡೆಯ ಕ್ಷಣದಲ್ಲಿ ಕೈ ತಪ್ಪಿದ ಸಚಿವ ಸ್ಥಾನ ಈಗ ಶಾಸಕ ಬೇಳೂರು ಗೋಪಾಲಕೃಷ್ಣ ಕೂಡಾ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಉಂಟಾಗಿರುವ ಈ ಬೆಳವಣಿಗೆಗಳು ಕಾಂಗ್ರೆಸ್ ಹೈಕಮಾಂಡ್‌ಗೆ ಹೊಸ ತಲೆನೋವಾಗಿ ಪರಿಣಮಿಸಿದ್ದು, ಅಸಮಾಧಾನಗೊಂಡ ನಾಯಕರನ್ನು ಸಮಾಧಾನಪಡಿಸುವುದು ನಾಯಕತ್ವಕ್ಕೆ ದೊಡ್ಡ ಸವಾಲಾಗಿದೆ. ರಾಜಕೀಯ ವಲಯದಲ್ಲಿ ಈ ಬೆಳವಣಿಗೆಗಳು ತೀವ್ರ ಚರ್ಚೆಗೆ ಗ್ರಾಸವಾಗಿವೆ.
