Wednesday, September 3, 2025

ಸತ್ಯ | ನ್ಯಾಯ |ಧರ್ಮ

ವಿರೋಧವನ್ನೂ ಲೆಕ್ಕಿಸದೆ ಬಾನು ಮುಷ್ತಾಕ್‌ರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿದ ಮೈಸೂರು ಜಿಲ್ಲಾಡಳಿತ

ಬಿಜೆಪಿ ಮತ್ತು ಹಿಂದುತ್ವದ ಪರ ನಾಯಕರ ವಿರೋಧದ ನಡುವೆಯೇ ಮೈಸೂರು ಜಿಲ್ಲಾಡಳಿತ ಬಾನು ಮುಷ್ತಾಕ್ ಅವರಿಗೆ ಅಧಿಕೃತ ಆಹ್ವಾನ ನೀಡಿದೆ. ಧರ್ಮದ ಕಾರಣ ಇಟ್ಟು ಬಿಜೆಪಿ ನಾಯಕರು ಎಷ್ಟೇ ವಿರೋಧ ಮಾಡಿದರೂ ಯಾವುದಕ್ಕೂ ಜಗ್ಗದ ಸರ್ಕಾರ ಇಂದು(ಸೆ.3)ರಂದು ಮೈಸೂರು ಜಿಲ್ಲಾಡಳಿತದಿಂದ ಅಧಿಕೃತ ಆಹ್ವಾನ ನೀಡಲು ಮುಂದಾಗಿದೆ.

ಸಂಜೆ ನಾಲ್ಕು ಗಂಟೆಗೆ ಹಾಸನದಲ್ಲಿರುವ ಬಾನು ಮುಷ್ತಾಕ್‌ ನಿವಾಸಕ್ಕೆ ಭೇಟಿ ನೀಡಿ, ಅವರಿಗೆ ಆಹ್ವಾನ ನೀಡಲಾಗಿದೆ. ಸರ್ಕಾರದ ಪರವಾಗಿ ಮೈಸೂರು ಜಿಲ್ಲಾಡಳಿತವೇ ಮುಂದೆ ನಿಂತು ದಸರಾಗೆ ಅಧಿಕೃತ ಆಹ್ವಾನ ನೀಡಿದೆ.

ಈ ಹಿಂದೆ ಬಿಜೆಪಿ ನಾಯಕರಾದ ಪ್ರತಾಪ್ ಸಿಂಹ, ಮುನಿರತ್ನ, ಅರವಿಂದ್ ಲಿಂಬಾವಳಿ ಸೇರಿದಂತೆ ಅನೇಕ ನಾಯಕರು ‘ಬಾನು ಮುಷ್ತಾಕ್ ಅವರಿಗೆ ಹಣೆಗೆ ಕುಂಕುಮ ಹಚ್ಚಿ, ತಲೆಗೆ ಹೂ ಮುಡಿದು ಹಿಂದೂಗಳ ನಂಬಿಕೆಯ ತಾಯಿ ಚಾಮುಂಡೇಶ್ವರಿಯ ಅಸ್ತಿತ್ವವನ್ನು ಒಪ್ಪುವುದಾದರೆ ಮಾತ್ರ ದಸರಾ ಉದ್ಘಾಟನೆ ಮಾಡಲಿ’ ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಬಾನು ಮುಷ್ತಾಕ್ ಕನ್ನಡದ ಬರಹಗಾರ್ತಿ. ಕನ್ನಡದ ಪ್ರೀತಿ ಅಭಿಮಾನ ಇಲ್ಲದಿದ್ದರೆ ಪುಸ್ತಕಗಳನ್ನ ಬರೆಯುತ್ತಿರಲಿಲ್ಲ. ಕುಂಕುಮ ಹಾಕುವುದು ಅವರ ಧರ್ಮದಲ್ಲಿ ಇದ್ಯಾ?ಮತ್ತೊಂದು ಧರ್ಮದವರನ್ನ ಉದ್ಘಾಟನೆಗೆ ಕರೆದು ಕುಂಕುಮ ಹಾಕಿಕೊಳ್ಳಿ ಎಂದು ಹೇಳಲು ಸಾಧ್ಯನಾ?’ ಎಂದು ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿದರು.

ಇನ್ನು ಇಂದು ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಲು ನಿರ್ಧರಿಸಿದ ಮೈಸೂರು ಜಿಲ್ಲಾಡಳಿತ ‘2025 ನೇ ಸಾಲಿನ ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸರ್ಕಾರವು ತೀರ್ಮಾನಿಸಿದೆ. ಈ ಹಿನ್ನೆಲೆ ನಾಡಹಬ್ಬ ದಸರಾ ಮಹೋತ್ಸವದ ಉದ್ಘಾಟನೆಯನ್ನು ಕರ್ನಾಟಕದ ಪ್ರತಿಷ್ಠಿತ ಸಾಹಿತಿಗಳು ಹಾಗೂ ಪ್ರತಿಷ್ಠಿತ ಅಂತರ ರಾಷ್ಟ್ರೀಯ ಬುಕರ್ ಪ್ರಶಸ್ತಿ ವಿಜೇತರಾದ ಶ್ರೀಮತಿ ಭಾನು ಮುಷ್ಟಾಕ್ ರವರಿಂದ ನೆರವೇರಿಸಲು ಸರ್ಕಾರ ನಿರ್ಧರಿಸಿರುವ ಹಿನ್ನೆಲೆ ಭಾನು ಮುಷ್ತಾಕ್ ರವರನ್ನು ಸರ್ಕಾರರ ಪರವಾಗಿ, ಮೈಸೂರು ಜಿಲ್ಲಾಡಳಿತದ ವತಿಯಿಂದ ಅಧಿಕೃತವಾಗಿ ಹಾಸನ ನಗರದಲ್ಲಿರುವ ಗೌರವಾನಿತರ ಸ್ವಗೃಹಕ್ಕೆ ತೆರಳಿ ಆಹ್ವಾನಿಸಲಾಗುವುದು’ ಎಂದು ಪ್ರಕಟಣೆಯಲ್ಲಿ ಬರೆದುಕೊಂಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page