ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿದೆ,ಜೊತೆಗೆ ಮಳೆಯೂ ಆಗುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳ ಆತಂಕ ಎದುರಾಗಿದ್ದು, ಆರೋಗ್ಯ ಇಲಾಖೆಯಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.ಜಿಲ್ಲೆಯಲ್ಲಿ ಕಳೆದ ತಿಂಗಳು ವಿಪರೀತ ಬಿಸಿಲು ಕಾಣಿಸಿಕೊಂಡಿತ್ತು. ಇದೀಗ ವಾತಾವರಣ ಬದಲಾಗಿದ್ದು, ಬಿಸಿಲಿನೊಂದಿಗೆ ಸಂಜೆ ಸಮಯದಲ್ಲಿ ಮಳೆಯಾಗುತ್ತಿದೆ. ಮಳೆಯ ನೀರು ಅಲ್ಲಲ್ಲಿ ಸಂಗ್ರಹವಾಗುವುದರಿಂದ ಸೊಳ್ಳೆಗಳು ಹೆಚ್ಚಾಗುವ ಸಾಧ್ಯತೆಯಿದ್ದು, ಸಾಂಕ್ರಾಮಿಕ ರೋಗಗಳ ತಡೆಗೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.
ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಜಿಲ್ಲೆಯಾದ್ಯಂತ ಲಾರ್ವಾ ಉತ್ಪತ್ತಿ ತಡೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಸೊಳ್ಳೆಗಳ ಸಂತತಿ ಹೆಚ್ಚಾಗದಿರಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಆರೋಗ್ಯ ಇಲಾಖೆಯಿಂದ ಮಾಡಲಾಗುತ್ತದೆ.ಕಳೆದ ವರ್ಷ ಬೇಸಿಗೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಡೆಂಗ್ಯು ಪ್ರಕರಣಗಳು ಪತ್ತೆಯಾಗಿದ್ದವು. ಸುಂಟಿಕೊಪ್ಪ, ಸಿದ್ದಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಡೆಂಗ್ಯು ಪ್ರಕರಣಗಳು ಹೆಚ್ಚು ಕಾಣಿಸಿಕೊಂಡಿದ್ದವು. ಆದರೆ ಈ ಬಾರಿ ಈ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದ್ದು, ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಂದೇ ಒಂದು ಡೆಂಗ್ಯು ಪ್ರಕರಣ ವರದಿಯಾಗಿದೆ.
ಬೇಸಿಗೆ ಬಿಸಿಲಿನ ಝಳದಿಂದ ಬಳಲಿಕೆ ಉಂಟಾಗುವುದು ಮಾತ್ರವಲ್ಲದೆ, ನಿಧಾನವಾಗಿ ಕಾಯಿಲೆಗಳೂ ಬರಲಾರಂಭಿಸಿವೆ. ಸೂಕ್ತ ರೀತಿಯಲ್ಲಿ ಮುಂಜಾಗ್ರತೆ ವಹಿಸದೇ ಹೋದರೆ ಖಾಯಿಲೆ ಮತ್ತಷ್ಟು ಹರಡುವ ಸಾಧ್ಯತೆ ಇದೆ.ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 492 ಮಂದಿಗೆ ವಾಂತಿ, ಭೇದಿ ಕಾಣಿಸಿಕೊಂಡಿದೆ. ಇವರೆಲ್ಲ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದೇ ತಾವೇ ಸ್ವಯಂ ಆರೈಕೆ ಮಾಡಿಕೊಂಡು, ಔಷಧ ಅಂಗಡಿಗಳಲ್ಲಿ ತಾವೇ ಮಾತ್ರೆ ಖರೀದಿಸಿ ಬಳಸಿ ಸುಧಾರಿಸಿಕೊಂಡವರೂ ಬಹಳ ಮಂದಿ ಇದ್ದಾರೆ. ಹೀಗಾಗಿ ಬೇಸಿಗೆಯ ಸಂದರ್ಭ ಆಹಾರ, ಪರಿಸರ ಸ್ವಚ್ಛತೆ ಮತ್ತು ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಆರೋಗ್ಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ಆಹಾರ ಕಲುಷಿತಗೊಳ್ಳುವುದೂ ಅಧಿಕ. ಬೇಸಿಗೆ ವೇಳೆ ಸೊಳ್ಳೆಗಳು ಮಾತ್ರವಲ್ಲ ನೊಣಗಳೂ ಅಧಿಕ ಸಂಖ್ಯೆಯಲ್ಲಿ ವೃದ್ಧಿಯಾಗುತ್ತವೆ. ರೋಗವಾಹಕಗಳೆಂದೇ ಗುರುತಿಸಲಾಗುವ ಇವುಗಳು ಚರಂಡಿ ಸೇರಿದಂತೆ ಕಲುಷಿತ ನೀರು ಮತ್ತು ಕಲುಷಿತ ವಸ್ತುಗಳ ಮೇಲೆ ಕುಳಿತು ನಂತರ ಆಹಾರ ಪದಾರ್ಥಗಳ ಮೇಲೂ ಕುಳಿತು ರೋಗಾಣುಗಳನ್ನು ಅತ್ಯಂತ ಸುಲಭವಾಗಿ ಹರಡುತ್ತವೆ. ಹಾಗಾಗಿ, ಈ ವೇಳೆ ಅತಿ ಎಚ್ಚರ ವಹಿಸುವುದು ಒಳಿತು ಎಂಬುದು ಆರೋಗ್ಯ ಇಲಾಖೆ ಅಧಿಕಾರಿಗಳ ಸಲಹೆಯಾಗಿದೆ.
ಬೇಸಿಗೆಯಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ
ಕುದಿಸಿ ಆರಿಸಿದ ನೀರನ್ನೇ ಕುಡಿಯಬೇಕು. ತೆರೆದಿಟ್ಟ ಆಹಾರ ಪದಾರ್ಥಗಳನ್ನು ಸೇವಿಸಬಾರದು. ಆಹಾರ ಪದಾರ್ಥಗಳನ್ನು ಜಿರಲೆ, ನೊಣಗಳಿಂದ ರಕ್ಷಿಸುವ ಸಲುವಾಗಿ ಮುಚ್ಚಿಡಬೇಕು. ವಾಂತಿ, ಭೇದಿ ಕಾಣಿಸಿಕೊಂಡರೆ ತಕ್ಷಣ ವೈದ್ಯರ ಸಲಹೆ ಪಡೆಯಬೇಕು. ಬಿಸಿ ಇರುವ ಆಹಾರವನ್ನೇ ಸೇವಿಸಬೇಕು. ಮೀನು, ಮಾಂಸವನ್ನು ಸಮರ್ಪಕವಾಗಿ ಬೇಯಿಸಿ ತಿನ್ನಬೇಕು. ತಾಜಾ, ಮೀನು, ಮಾಂಸಾಹಾರವನ್ನೇ ಸೇವಿಸಬೇಕು. ಸೊಳ್ಳೆ, ನೊಣಗಳಿಂದ ರಕ್ಷಿಸಿಕೊಳ್ಳಬೇಕು. ಎಳನೀರು, ಒಆರ್‌ಎಸ್, ತಾಜಾ ಹಣ್ಣಿನ ರಸ, ಮಜ್ಜಿಗೆಯನ್ನು ಸೇವಿಸಬೇಕು. ವಾಂತಿ ಭೇದಿ ಕಾಣಿಸಿಕೊಂಡಾಗ ಮೂಢನಂಬಿಕೆಗಳನ್ನು ಅನುಸರಿಸದೆ ವೈದ್ಯರ ಸಲಹೆ ಪಡೆಯಬೇಕು. ಬೇಸಿಗೆಯಲ್ಲಿ ವಾಂತಿ ಭೇದಿಯಂತಹ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಅಲ್ಲದೆ ಈಗ ಬಿಸಿಲಿನ ಜತೆ ಮಳೆಯೂ ಬೀಳುತ್ತಿರುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತದೆ. ಹೀಗಾಗಿ ಆರೋಗ್ಯ ಇಲಾಖೆ ಡೆಂಗ್ಯು ಮತ್ತಿತರ ರೋಗಗಳು ಹರಡದಂತೆ ಎಚ್ಚರ ವಹಿಸುತ್ತಿದೆ. ಜನರು ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಮನೆ ಸುತ್ತಮುತ್ತ ಮಳೆ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು.
– ಡಾ. ಕೆ. ಎಂ. ಸತೀಶ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ