Friday, April 11, 2025

ಸತ್ಯ | ನ್ಯಾಯ |ಧರ್ಮ

ಶ್ರೀ ಸದ್ಗುರು ಯರ‍್ರಿತಾತನವರ ವಾರ್ಷಿಕ ಜಾತ್ರೆ/ರಥೋತ್ಸವ ನಿಷೇಧಿಸಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಆದೇಶ

ಬಳ್ಳಾರಿ ತಾಲ್ಲೂಕಿನ ಕೊಳಗಲ್ ಗ್ರಾಮದಲ್ಲಿ ಏ.04 ರಂದು ನಡೆಯುವ ಶ್ರೀ ಸದ್ಗುರು ಯರ‍್ರಿತಾತನವರ ವಾರ್ಷಿಕ ಜಾತ್ರೆ/ರಥೋತ್ಸವವನ್ನು ಕರ್ನಾಟಕ ಪೊಲೀಸ್ ಕಾಯ್ದೆ 1963 ರ ಕಲಂ 35 ರಡಿ ಪ್ರದತ್ತವಾದ ಅಧಿಕಾರದ ಮೇರೆಗೆ ನಿಷೇಧಿಸಿ ಜಿಲ್ಲಾ ದಂಡಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶಿಸಿದ್ದಾರೆ.

ಕೊಳಗಲ್ಲು ಗ್ರಾಮದಲ್ಲಿ ಶ್ರೀ ಸದ್ಗುರು ಯರ‍್ರಿತಾತನವರ ದೇವಸ್ಥಾನದ ಆಸ್ತಿ-ಪಾಸ್ತಿ ಮತ್ತು ಆಡಳಿತ ವಿಚಾರವಾಗಿ ಗಲಾಟೆಗಳಾಗಿ ವಿವಾದ ಇರುತ್ತದೆ ಹಾಗೂ 2024 ರ ಫೆ.24 ರಂದು ಬೆಳಿಗ್ಗೆ 04 ಗಂಟೆಗೆ ಶ್ರೀ ಸದ್ಗುರು ಯರ‍್ರಿತಾತನವರ ಮಠದ ಆವರಣದಲ್ಲಿ ಹೊಸದಾಗಿ ಕಟ್ಟಿರುವ ಎರಿಯಪ್ಪ ತಾತ ಗುಡಿಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿರುವ ವಿಚಾರವಾಗಿ ಧಾರವಾಡ ಉಚ್ಛ ನ್ಯಾಯಾಲಯ ಪೀಠವು ಪ್ರತಿಷ್ಠಾಪಿಸಿದ ಮೂರ್ತಿಯನ್ನು ತೆರವುಗೊಳಿಸಬೇಕು ಎಂದು ಆದೇಶಿಸಿರುತ್ತಾರೆ.

ಉಚ್ಛ ನ್ಯಾಯಾಲಯದ ಆದೇಶದ ಮೇರೆಗೆ ಮೂರ್ತಿ ತೆರವುಗೊಳಿಸಿರುವುದರಿಂದ ಕೊಳಗಲ್ ಗ್ರಾಮದಲ್ಲಿ ಪರ-ವಿರೋಧ ಇರುವ ವಿವಿಧ ಜಾತಿ ಜನಾಂಗದವರ ಮಧ್ಯೆ ವೈಷಮ್ಯ ಉಂಟಾಗಿ 2024 ರ ಏ.07 ರಂದು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಹಲ್ಲೆ ಮಾಡಿದ್ದು ಮತ್ತು ದೇವಸ್ಥಾನದ ಆಸ್ತಿ-ಪಾಸ್ತಿ ಹಾಗೂ ಆಡಳಿತದ ವಿಚಾರವಾಗಿ ಗಲಾಟೆಗಳಾಗಿ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿರುತ್ತವೆ.

ಶ್ರೀ ಸದ್ಗುರು ಯರ‍್ರಿತಾತನವರ ವಾರ್ಷಿಕ ಜಾತ್ರೆ/ರಥೋತ್ಸವವು ಆಚರಣೆ ಮಾಡಿದಲ್ಲಿ ಸಾರ್ವಜನಿಕರಿಗೆ ಪ್ರಾಣ ಹಾನಿ, ಆಸ್ತಿ-ಪಾಸ್ತಿ ನಷ್ಟ ಉಂಟಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇರುವುದರಿಂದ ಕೊಳಗಲ್ ಗ್ರಾಮದಲ್ಲಿ ಇದೇ ಏ.04 ರಂದು ನಡೆಯುವ ಶ್ರೀ ಸದ್ಗುರು ಯರ‍್ರಿತಾತನವರ ವಾರ್ಷಿಕ ಜಾತ್ರೆ/ರಥೋತ್ಸವವನ್ನು ಆಚರಣೆ ಮಾಡದಂತೆ ಕರ್ನಾಟಕ ಪೊಲೀಸ್ ಕಾಯ್ದೆ 1963 ರ ಕಲಂ 35 ರಂತೆ ನಿಷೇಧಿಸಿ ಆದೇಶ ಹೊರಡಿಸಲು ಕೋರಿರುತ್ತಾರೆ.

ಅದರಂತೆ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಮಾ.28 ರಂದು ನಡೆದ ಸಭೆಯ ನಡವಳಿಗಳಲ್ಲಿ ಜಾತ್ರೆ ಆಚರಿಸಲು ಅನುಮತಿ ನೀಡಿದಲ್ಲಿ ಗ್ರಾಮದಲ್ಲಿ ಅಹಿತಕರ ಘಟನೆಗಳು ನಡೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ತಿಳಿಸಿರುತ್ತಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕರು ಸಹ ಕೊಳಗಲ್ ಗ್ರಾಮದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಜಾತ್ರೆ/ರಥೋತ್ಸವ ಆಚರಣೆ ಮಾಡದಂತೆ ನಿಷೇಧಿಸುವುದು ಸೂಕ್ತ ಎಂದು ತಿಳಿಸಿರುತ್ತಾರೆ.

ಹಾಗಾಗಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಕೊಳಗಲ್ ಗ್ರಾಮದಲ್ಲಿ ಏ.04 ರಂದು ನಡೆಯುವ ಶ್ರೀ ಸದ್ಗುರು ಯರ‍್ರಿತಾತನವರ ವಾರ್ಷಿಕ ಜಾತ್ರೆ/ರಥೋತ್ಸವವನ್ನು ನಿಷೇಧಿಸಿ ಆದೇಶಿಸಿದ್ದು, ಜಿಲ್ಲಾ ಪೊಲೀಸ್ ಅಧೀಕ್ಷಕರು ಈ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೆ ಬರುವಂತೆ ಕ್ರಮ ಕೈಗೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page