Home ರಾಜಕೀಯ ಸಂಸದ ಶ್ರೇಯಸ್ ಪಟೇಲ್ ಆಗಮನಕ್ಕೂ ಮುನ್ನವೇ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಆರಂಭ: ಕಾಂಗ್ರೆಸ್ ಕಚೇರಿಯಲ್ಲಿ ಕೆಲಕಾಲ...

ಸಂಸದ ಶ್ರೇಯಸ್ ಪಟೇಲ್ ಆಗಮನಕ್ಕೂ ಮುನ್ನವೇ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಆರಂಭ: ಕಾಂಗ್ರೆಸ್ ಕಚೇರಿಯಲ್ಲಿ ಕೆಲಕಾಲ ಗೊಂದಲ

0

ಹಾಸನ: ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಸಮಾರಂಭದ ಆರಂಭದಲ್ಲೇ ಪಕ್ಷದ ಕಚೇರಿಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ. ಸಂಸದ ಶ್ರೇಯಸ್ ಎಂ. ಪಟೇಲ್ ಕಾರ್ಯಕ್ರಮಕ್ಕೆ ಆಗಮಿಸುವ ಮುನ್ನವೇ ಸಮಾರಂಭ ಆರಂಭಿಸಿರುವುದು ಹಾಗೂ ಉದ್ಘಾಟನಾ ಸಂದರ್ಭದಲ್ಲಿ ಅವರ ಹೆಸರನ್ನು ಉಲ್ಲೇಖಿಸದಿರುವುದು ಕೆಲ ಕಾರ್ಯಕರ್ತರು ಮತ್ತು ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಯಿತು.

ಸಂಸದರು ಆಗಮಿಸುವವರೆಗೆ ಕಾರ್ಯಕ್ರಮವನ್ನು ಆರಂಭಿಸಬಾರದಿತ್ತು ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ, ಉದ್ಘಾಟನಾ ಹಂತದಲ್ಲಾದರೂ ಸಂಸದರ ಹೆಸರನ್ನು ಪ್ರಸ್ತಾಪಿಸಬೇಕಿತ್ತು ಎಂದು ಪ್ರಶ್ನಿಸಿದರು. ಈ ವಿಚಾರವಾಗಿ ಮುಖಂಡರು ಹಾಗೂ ಕಾರ್ಯಕರ್ತರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದ ಪರಿಣಾಮ ಕಾರ್ಯಕ್ರಮದ ಆರಂಭದಲ್ಲೇ ಪಕ್ಷದ ಕಚೇರಿಯಲ್ಲಿ ಗೊಂದಲದ ಪರಿಸ್ಥಿತಿ ನಿರ್ಮಾಣವಾಯಿತು.

ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸದಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಮಧ್ಯಪ್ರವೇಶಿಸಿದರು. ಶ್ರೇಯಸ್ ಪಟೇಲ್ ಅವರಿಗೆ ತಾವೇ ದೂರವಾಣಿ ಮೂಲಕ ಸಂಪರ್ಕಿಸಿದ್ದು, ಅವರು ಮತ್ತೊಂದು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದಾಗಿ ತಿಳಿಸಿದ್ದರಿಂದ ನಿಗದಿಯಂತೆ ಕಾರ್ಯಕ್ರಮ ಮುಂದುವರಿಸುವಂತೆ ಸೂಚಿಸಿದ್ದರು ಎಂದು ಸಚಿವರು ಕಾರ್ಯಕರ್ತರಿಗೆ ಸ್ಪಷ್ಟಪಡಿಸಿದರು.

ಈ ವೇಳೆ ಮಾತನಾಡಿದ ಸಚಿವ ಶಿವಲಿಂಗೇಗೌಡ, ಪಕ್ಷದ ಕಾರ್ಯಕ್ರಮದಲ್ಲಿ ಗೊಂದಲಕ್ಕೆ ಅವಕಾಶ ನೀಡದೆ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು. ಆದರೆ ಸಚಿವರ ಮನವಿಗೂ ಕೆಲ ಕಾರ್ಯಕರ್ತರಿಂದ ಅಸಮಾಧಾನದ ಪ್ರತಿಕ್ರಿಯೆ ವ್ಯಕ್ತವಾಯಿತು.

ನಂತರ ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರು. ಪಕ್ಷದ ಕಚೇರಿಯಲ್ಲೇ ಮುಖಂಡರು ಹಾಗೂ ಕಾರ್ಯಕರ್ತರ ನಡುವೆ ಗೊಂದಲ ಮುಂದುವರಿದರೆ, ಅದು ಸಾರ್ವಜನಿಕ ವಲಯದಲ್ಲಿ ಪಕ್ಷದ ಸಂಘಟನೆ ಕುರಿತಂತೆ ಬೇರೆ ರೀತಿಯ ಸಂದೇಶಕ್ಕೆ ಕಾರಣವಾಗಬಹುದು ಎಂದು ಅವರು ಮನವರಿಕೆ ಮಾಡಿದರು. ಎಲ್ಲರೂ ಶಾಂತವಾಗಿ ನಡೆದುಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಹಿರಿಯ ಮುಖಂಡರ ಮಧ್ಯಸ್ಥಿಕೆಯಿಂದ ಕಾರ್ಯಕರ್ತರನ್ನು ಸಮಾಧಾನಪಡಿಸಿದ ಬಳಿಕ ಕಾರ್ಯಕ್ರಮ ಮುಂದುವರಿಯಿತು. ಕೆಲ ನಿಮಿಷಗಳ ನಂತರ ಸಂಸದ ಶ್ರೇಯಸ್ ಎಂ. ಪಟೇಲ್ ಅವರು ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿದರು.

ಸಂಸದರು ಆಗಮಿಸುವ ಮುನ್ನವೇ ಕಾರ್ಯಕ್ರಮ ಆರಂಭವಾದ ವಿಚಾರ ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಯಕರ್ತರ ಅಸಮಾಧಾನವು ಪದಗ್ರಹಣ ಸಮಾರಂಭದ ಆರಂಭದಲ್ಲೇ ಪಕ್ಷದೊಳಗಿನ ಸಮನ್ವಯದ ಪ್ರಶ್ನೆಯನ್ನು ಮುನ್ನೆಲೆಗೆ ತಂದಿತು.

You cannot copy content of this page

Exit mobile version