ರಾಯಪುರ: ‘ಆತ್ಮಹತ್ಯೆ ಮಾಡಿಕೊಂಡು ಸಾಯುತ್ತೇನೆ’ ಎಂದು ಆಗಾಗ್ಗೆ ಗಂಡನಿಗೆ ಬೆದರಿಕೆ ಹಾಕುವುದು ಮತ್ತು ಆತನಿಗೆ ಮತಾಂತರಗೊಳ್ಳುವಂತೆ ಒತ್ತಡ ಹೇರುವುದು ‘ಮಾನಸಿಕ ಕ್ರೌರ್ಯ’ವಾಗುತ್ತದೆ ಎಂದು ಛತ್ತೀಸ್‌ಗಢ ಉಚ್ಚ ನ್ಯಾಯಾಲಯವು ತೀರ್ಪು ನೀಡಿದೆ.
ಈ ಕಾರಣಗಳಿಗಾಗಿ, ಬಲೋಡ್ ಜಿಲ್ಲೆಯ ನ್ಯಾಯಾಲಯವು ಪತ್ನಿಯಿಂದ ಪತಿಗೆ ವಿಚ್ಛೇದನ ನೀಡಿ ನೀಡಿದ್ದ ತೀರ್ಪನ್ನು ಹೈಕೋರ್ಟ್ ಸಮರ್ಥಿಸಿದೆ. ವಿಚ್ಛೇದನ ಮಂಜೂರಾತಿಯನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಪೀಠವು, ಕ್ರೌರ್ಯವು ಕೇವಲ ದೈಹಿಕ ಹಿಂಸೆಗೆ ಮಾತ್ರ ಸೀಮಿತವಾಗಿಲ್ಲ, ಸಂಗಾತಿಯ ಮನಸ್ಸಿನಲ್ಲಿ ತರ್ಕಬದ್ಧವಾದ ಭಯವನ್ನು ಉಂಟುಮಾಡುವ ವರ್ತನೆಯೂ ಹಿಂಸೆಯ ಅಡಿಯಲ್ಲಿ ಬರುತ್ತದೆ ಎಂದು ಹೇಳಿದೆ.
ಈ ಪ್ರಕರಣದಲ್ಲಿ ಪತ್ನಿಯು ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪದೇ ಪದೇ ಗಂಡನಿಗೆ ಬೆದರಿಕೆ ಹಾಕಿದ್ದಲ್ಲದೆ, ಒಂದು ಬಾರಿ ವಿಷ ಸೇವಿಸಲು, ಇನ್ನೊಂದು ಬಾರಿ ಚಾಕುವಿನಿಂದ ಇರಿದುಕೊಳ್ಳಲು ಮತ್ತು ಮತ್ತೊಮ್ಮೆ ಸೀಮೆಎಣ್ಣೆ ಸುರಿದು ನಿಪ್ಪಿಗೆ ಹಚ್ಚಿಕೊಳ್ಳಲು ಪ್ರಯತ್ನಿಸಿದ್ದಳು ಎಂದು ನ್ಯಾಯಪೀಠವು ಪ್ರಸ್ತಾಪಿಸಿತು. ಅಲ್ಲದೆ, ಪತಿಯ ಮೇಲೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದ್ದಳು. ಅಂತಹ ವರ್ತನೆಯು ಮಾನಸಿಕ ಕ್ರೌರ್ಯದ ಅಡಿಯಲ್ಲಿ ಬರುತ್ತದೆ ಎಂದು ಕೆಳ ನ್ಯಾಯಾಲಯ ನೀಡಿದ ತೀರ್ಪನ್ನು ಹೈಕೋರ್ಟ್ ಸಮರ್ಥಿಸಿತು.
