Wednesday, November 19, 2025

ಸತ್ಯ | ನ್ಯಾಯ |ಧರ್ಮ

ಡಿಕೆಶಿ, ನಿತಿನ್ ಗಡ್ಕರಿ ಭೇಟಿ : ಬ್ರಾಂಡ್ ಬೆಂಗಳೂರಿಗೆ ಅಡಿಗಲ್ಲು!?

ಬೆಂಗಳೂರಿನ ಸಂಚಾರ ದಟ್ಟಣೆ ಹಾಗೂ ಹೆದ್ದಾರಿ ಸಂಬಂಧಿತ ಪ್ರಮುಖ ಯೋಜನೆಗಳ ವಿಚಾರವಾಗಿ ಆಗಸ್ಟ್ 3 ರ ಗುರುವಾರ ಕರ್ನಾಟಕದ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಸನ್ಮಾನ್ಯ ಡಿ.ಕೆ.ಶಿವಕುಮಾರ್ ಅವರು ಭೂಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿರವರನ್ನು ಭೇಟಿ ಮಾಡಿ ಸಮಾಲೋಚಿಸಿದರು.

ಭೇಟಿಯ ಬಳಿಕ ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, “ಈಗಾಗಲೇ ಬಿಬಿಎಂಪಿ ಹಾಗೂ ಬಿಡಿಎ ಮೂಲಕ ಎಕ್ಸ್‌ಪ್ರೆಷನ್ ಆಫ್ ಇ-ಟ್ರಸ್ಟ್ ಮೂಲಕ ಜಾಗತಿಕ ಟೆಂಡರ್ ಕರೆಯಲಾಗಿದ್ದು, ಟೆಂಡರ್ ಸಲ್ಲಿಕೆಗೆ ಆಗಸ್ಟ್ 8 ಕೊನೇ ದಿನವಾಗಿದೆ” ಎಂದರು.

ಇನ್ನು ನಿತಿನ್ ಗಡ್ಕರಿ ಅವರ ಭೇಟಿಯ ಬಗ್ಗೆ “ಬೆಂಗಳೂರು ನಗರದ ಸಂಚಾರ ದಟ್ಟಣೆ ನಿವಾರಣೆ ಸಂಬಂಧ ಕೇಂದ್ರ ಸಚಿವ ನಿತಿನ್ ಗಡ್ಕರಿ ಜೊತೆ ಚರ್ಚೆ ಮಾಡಲಾಗಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ವಿಸ್ತೃತ ಯೋಜನಾ ವರದಿ ಸಲ್ಲಿಸುವಂತೆ ತಿಳಿಸಿದ್ದಾರೆ” ಎಂದು ಹೇಳಿದ್ದಾರೆ.

“ಬೆಂಗಳೂರಿನಲ್ಲಿ 4 ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿದ್ದು, ಈ ರಸ್ತೆಗಳ ಮೂಲಕ ಬೆಂಗಳೂರಿಗೆ ಹೆಚ್ಚಿನ ವಾಹನಗಳು ಆಗಮಿಸಿ ಸಂಚಾರ ದಟ್ಟಣೆಗೆ ಕಾರಣವಾಗಿವೆ. ಈ ಸಂಚಾರ ದಟ್ಟಣೆ ನಿವಾರಣೆಗೆ ಕೇಂದ್ರ ಹೆದ್ದಾರಿ ಪ್ರಾಧಿಕಾರದ ಮೂಲಕ ಕ್ರಮ ಕೈಗೊಳ್ಳಬೇಕು. ಅದಕ್ಕೆ ಬೇಕಾದ ಸಹಕಾರ ನೀಡಬೇಕು ಎಂದು ನಿತಿನ್ ಗಡ್ಕರಿ ಅವರಲ್ಲಿ ಕೇಳಿದ್ದೇನೆ. ಅವರೂ ಸಹ ಸೂಕ್ತವಾಗಿ ಸ್ಪಂದಿಸಿದ್ದಾರೆ” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಬ್ರಾಂಡ್ ಬೆಂಗಳೂರು ವಿಚಾರವಾಗಿ ಮತ್ತೊಮ್ಮೆ ಪ್ರಸ್ತಾಪಿಸಿದ ಡಿ.ಕೆ.ಶಿವಕುಮಾರ್ “ಬೆಂಗಳೂರನ್ನು ಜಾಗತಿಕ ನಗರ ಎಂದು ಸ್ವೀಕರಿಸಿರುವ ಹಿನ್ನೆಲೆಯಲ್ಲಿ ಕೇವಲ ಬೆಂಗಳೂರಿನ ಸಂಚಾರ ದಟ್ಟಣೆ ಬಗ್ಗೆ ಮಾತ್ರ ಹೆಚ್ಚಾಗಿ ಮಾತನಾಡುತ್ತಾರೆ. ಸಂಚಾರ ದಟ್ಟಣೆ ನಿವಾರಣೆಗೆ ಕಾರ್ಯಕ್ರಮ ರೂಪಿಸಲು ನಾವು ಸಜ್ಜಾಗುತ್ತಿದ್ದು, ಈಗಾಗಲೇ ಚೀನಾ, ಸಿಂಗಾಪುರ, ಇಸ್ರೇಲ್ ಸೇರಿದಂತೆ ಹತ್ತಾರು ಕಂಪನಿಗಳು ಬಂದು ತಮ್ಮ ವಿಚಾರ ತಿಳಿಸಿವೆ. ಈ ಕಂಪನಿಗಳಿಗೆ ಈಗಾಗಲೇ ಎಕ್ಸ್ ಪ್ರೆಷನ್ ಆಫ್ ಇ-ಟ್ರಸ್ಟ್ ಮೂಲಕ ಕರೆಯಲಾಗಿರುವ ಟೆಂಡರ್‌ನಲ್ಲಿ ಭಾಗವಹಿಸಿ, ಇಡೀ ಯೋಜನೆ ಹೇಗೆ ಜಾರಿ ಮಾಡಬಹುದು? ಎಂದು ವಿವರಿಸುವಂತೆ ತಿಳಿಸಿದ್ದೇವೆ” ಎಂದರು.

“ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದ ವಕೀಲರ ಜತೆಗೂ ಚರ್ಚೆ ಮಾಡಿ, ಎಷ್ಟು ಪ್ರಕರಣಗಳು ಬಾಕಿ ಉಳಿದಿವೆ, ಎಷ್ಟು ಪ್ರಕರಣ ದಾಖಲಾಗಿತ್ತು, ಎಷ್ಟು ಗೆಲ್ಲಲಾಗಿದೆ, ಎಷ್ಟು ಸೋತಿದ್ದೇವೆ ಎಂಬ ಮಾಹಿತಿ ಕೇಳಿದ್ದೇನೆ. ಸದ್ಯ 350 ಪ್ರಕರಣ ನಡೆಯುತ್ತಿದೆ ಎಂಬ ಮಾಹಿತಿ ಇದೆ. ಈ ವಿಚಾರವಾಗಿ ಮಾಹಿತಿ ಪಡೆದು, ಅವರ ಕಾರ್ಯವೈಖರಿ ನೋಡಿ ತೀರ್ಮಾನ ಮಾಡುತ್ತೇವೆ” ಎಂದು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page