ಕರ್ನಾಟಕ ರಾಜಕಾರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಇಂದೇ ಡಿ.ಕೆ. ಶಿವಕುಮಾರ್ ರಾಜೀನಾಮೆ?

ಗುರುವಾರ ಬೆಳಗ್ಗೆ ಸಿಎಂ ಸಿದ್ದರಾಮಯ್ಯ ಅವರು ಕರೆದಿರುವ ಮಹತ್ವದ ಉಪಾಹಾರ ಕೂಟದಲ್ಲಿ ಎಲ್ಲಾ ಸಚಿವರ ಜೊತೆ ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ ಭಾಗಿಯಾಗಲಿದ್ದಾರೆ. ಮಧ್ಯಾಹ್ನ ಸಿಎಂ ಅವರು ರಾಜ್ಯಪಾಲರ ಭೇಟಿಗೆ ಕಾಲಾವಕಾಶ ಪಡೆದಿದ್ದು, ಅವರು ಸಿಎಂ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸುತ್ತಿದ್ದಂತೆ, ಇತ್ತ ಡಿ.ಕೆ. ಶಿವಕುಮಾರ್ ಅವರೂ ಸಹ ತಮ್ಮ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಪತ್ರವನ್ನು ರವಾನಿಸಲಿದ್ದಾರೆ ಎನ್ನಲಾಗಿದೆ.

ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಹೈಡ್ರಾಮಾ ಮುಂದುವರಿದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೂ ಸಹ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಇಂದು (ಗುರುವಾರ) ರಾಜೀನಾಮೆ ನೀಡಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ರಾತ್ರೋರಾತ್ರಿ ಬೆಂಗಳೂರಿಗೆ ಆಗಮಿಸಿದ ಡಿಕೆಶಿ: ನವದೆಹಲಿಯಲ್ಲಿ ಹೈಕಮಾಂಡ್ ನಾಯಕರೊಂದಿಗೆ ಸುದೀರ್ಘ ಸಭೆ ನಡೆಸಿದ ಬಳಿಕ, ಗುರುವಾರ ಬೆಳಗಿನ ಜಾವ ಬೆಂಗಳೂರಿಗೆ ಮರಳಬೇಕಿದ್ದ ಡಿ.ಕೆ. ಶಿವಕುಮಾರ್ ಬುಧವಾರ ರಾತ್ರಿಯೇ ತುರ್ತಾಗಿ ವಾಪಸ್ ಆಗಿದ್ದಾರೆ. ಬುಧವಾರ ಸಂಜೆ 6.30 ಕ್ಕೆ ದೆಹಲಿಯಿಂದ ಹೊರಟು ರಾತ್ರಿ 9 ಗಂಟೆಗೆ ಬೆಂಗಳೂರಿಗೆ ಬಂದಿಳಿದ ಡಿಸಿಎಂ, ವಿಐಪಿ ಗೇಟ್‌ನಿಂದ ಹೊರಬರುತ್ತಿದ್ದಂತೆ ಸರ್ಕಾರಿ ವಾಹನದ ಬದಲು ಖಾಸಗಿ ಮರ್ಸಿಡಿಸ್ ಬೆಂಜ್ ಜಿ63 ಕಾರನ್ನೇರಿ ನಿರ್ಗಮಿಸಿದರು. ವಿಮಾನ ನಿಲ್ದಾಣದಲ್ಲಿ ಹೂಗುಚ್ಛ ಹಿಡಿದು ಕಾದಿದ್ದ ಅಭಿಮಾನಿಗಳು ಮತ್ತು ಕಾರ್ಯಕರ್ತರಿಂದ ಯಾವುದೇ ಶುಭಾಶಯ ಸ್ವೀಕರಿಸದ ಅವರು, ಯಾರೊಂದಿಗೂ ಮಾತನಾಡದೆ ಕೇವಲ ಕೈಮುಗಿದು ಕಾರು ಹತ್ತಿದರು. ಸದಾಶಿವನಗರದ ನಿವಾಸದ ಬಳಿಯೂ ಜಮಾಯಿಸಿದ್ದ ಬೆಂಬಲಿಗರಿಗೆ ಕೈಮುಗಿದು ನೇರವಾಗಿ ಮನೆ ಒಳಗೆ ಹೋದರು.

ಕೊನೆ ಕ್ಷಣದಲ್ಲಿ ಬದಲಾದ ಕಾರ್ಯಕ್ರಮ: ಸೋಮವಾರ ರಾತ್ರಿ ನವದೆಹಲಿಗೆ ತೆರಳಿದ್ದ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು ಮಂಗಳವಾರ ರಾತ್ರಿಯೇ ಬೆಂಗಳೂರಿಗೆ ಮರಳಿದ್ದರು. ಆದರೆ, ಡಿಸಿಎಂ ಡಿ.ಕೆ. ಶಿವಕುಮಾರ್‌ ಮಾತ್ರ ದೆಹಲಿಯಲ್ಲೇ ಬೀಡು ಬಿಟ್ಟಿದ್ದರು. ಬುಧವಾರ ಸಂಜೆ ಬೆಂಗಳೂರಿಗೆ ಬಂದು ಕೆಪಿಸಿಸಿ ಕಚೇರಿಯಲ್ಲಿ ಜಿಬಿಎ ಚುನಾವಣಾ ಪೂರ್ವತಯಾರಿ ಸಭೆಯಲ್ಲಿ ಭಾಗಿಯಾಗಬೇಕಿದ್ದ ಅವರ ಕಾರ್ಯಕ್ರಮ ಕೊನೆ ಕ್ಷಣದಲ್ಲಿ ಬದಲಾಗಿತ್ತು. ಗುರುವಾರ ಬೆಳಗಿನ ಜಾವ ದೆಹಲಿಯಿಂದ ಹೊರಟು ನೇರವಾಗಿ ಸಿಎಂ ಅವರ ಉಪಾಹಾರ ಕೂಟದಲ್ಲಿ ಭಾಗಿಯಾಗುವುದಾಗಿ ಮೊದಲು ನಿರ್ಧರಿಸಲಾಗಿತ್ತಾದರೂ, ಬುಧವಾರ ರಾತ್ರಿಯೇ ಅವರು ಬೆಂಗಳೂರಿಗೆ ಮರಳಿರುವುದು ತೀವ್ರ ಕುತೂಹಲ ಮೂಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು