ಬೆಂಗಳೂರು : ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಕೌಂಟ್‌ಡೌನ್ ಆರಂಭವಾಗಿರುವ ಬೆನ್ನಲ್ಲೇ, ಬೆಂಗಳೂರಿನ ಹೈಕೋರ್ಟ್ (High Court) ಗರಂ ಆಗಿದೆ.
ಹೈಕೋರ್ಟ್ ಸುತ್ತಮುತ್ತ ಬೃಹತ್ ಕಟೌಟ್
ಜೂನ್ 3 ರಂದು ಡಿಕೆಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪಟ್ಟಾಭಿಷೇಕ ಮಾಡಿಕೊಳ್ಳುತ್ತಿರುವುದನ್ನು ಸಂಭ್ರಮಿಸಲು ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ವಿಧಾನಸೌಧ ಮತ್ತು ಹೈಕೋರ್ಟ್ ಸುತ್ತಮುತ್ತ ಅಳವಡಿಸಿದ್ದ ಸಾಲು ಸಾಲು ಬೃಹತ್ ಕಟೌಟ್‌ಗಳು ಹಾಗೂ ಫ್ಲೆಕ್ಸ್ ಬ್ಯಾನರ್‌ಗಳನ್ನು ಹೈಕೋರ್ಟ್ ನ್ಯಾಯಾಧೀಶರ ಸೂಚನೆ ಮೇರೆಗೆ ಅಧಿಕಾರಿಗಳು ದಿಢೀರ್ ತೆರವುಗೊಳಿಸಿದ್ದಾರೆ.
ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಕಳೆದ ಕೆಲವು ವಾರಗಳಿಂದ ನಡೆದ ತೀವ್ರ ರಾಜಕೀಯ ಹಗ್ಗಜಗ್ಗಾಟ ಮತ್ತು ಸುದೀರ್ಘ ಚರ್ಚೆಗಳ ನಂತರ, ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉತ್ತರಾಧಿಕಾರಿಯಾಗಿ ಡಿ.ಕೆ. ಶಿವಕುಮಾರ್ ರಾಜ್ಯದ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದಾರೆ. ಈ ಐತಿಹಾಸಿಕ ನಾಯಕತ್ವ ಬದಲಾವಣೆಯ ಖುಷಿಯಲ್ಲಿ ಬೆಂಬಲಿಗರು ವಿಧಾನಸೌಧದ ಎದುರೇ ಆಕಾಶದೆತ್ತರಕ್ಕೆ ನಿಲ್ಲಿಸಿದ್ದ ದೈತ್ಯ ಕಟೌಟ್‌ಗಳು ಹೈಕೋರ್ಟ್ ಮುಖ್ಯ ಕಟ್ಟಡದ ಮುಂಭಾಗದ ನೋಟಕ್ಕೆ ಭಾಗಶಃ ಅಡ್ಡಿಪಡಿಸುತ್ತಿದ್ದವು. ಅಭಿನಂದನಾ ಸಂದೇಶಗಳು ಮತ್ತು ಡಿಕೆಶಿ ಅವರ ಬೃಹತ್ ಚಿತ್ರಗಳಿದ್ದ ಈ ಕಟೌಟ್‌ಗಳು ಹೈಕೋರ್ಟ್ ಆವರಣದ ಒಳಗಿದ್ದ ನ್ಯಾಯಾಧೀಶರ ಗಮನ ಸೆಳೆದಿದ್ದು, ತಕ್ಷಣವೇ ನ್ಯಾಯಾಂಗದ ಕಡೆಯಿಂದ ಕಠಿಣ ನಿರ್ದೇಶನಗಳು ಹೊರಬಿದ್ದಿವೆ.
ಕಟೌಟ್ ಕಿತ್ತೆಸೆದ ಅಧಿಕಾರಿಗಳು
ನ್ಯಾಯಾಧೀಶರ ಗಂಭೀರ ಸೂಚನೆ ಹೊರಬೀಳುತ್ತಿದ್ದಂತೆ ಕಾರ್ಯಪ್ರವೃತ್ತರಾದ ಹೈಕೋರ್ಟ್ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಖಡಕ್ ಆದೇಶ ನೀಡಿದರು. ಇದರ ಬೆನ್ನಲ್ಲೇ ಸ್ಥಳಕ್ಕೆ ಧಾವಿಸಿದ ಪೊಲೀಸ್ ಸಿಬ್ಬಂದಿ, ಸಾರ್ವಜನಿಕ ಸೌಂದರ್ಯಕ್ಕೆ ಧಕ್ಕೆ ತರುತ್ತಿದ್ದ ಮತ್ತು ನ್ಯಾಯಾಲಯದ ಆವರಣದ ಘನತೆಗೆ ಅಡ್ಡಿಯಾಗಿದ್ದ ಎಲ್ಲಾ ಫ್ಲೆಕ್ಸ್ ಬೋರ್ಡ್‌ಗಳು, ಬ್ಯಾನರ್‌ಗಳು ಹಾಗೂ ಬೃಹತ್ ಕಟೌಟ್‌ಗಳನ್ನು ಅವುಗಳಿಗೆ ಆಧಾರವಾಗಿ ನಿಲ್ಲಿಸಿದ್ದ ಮರದ ಚೌಕಟ್ಟುಗಳ ಸಮೇತ ಕಿತ್ತೆಸೆದಿದ್ದಾರೆ. ಪ್ರಮಾಣ ವಚನ ಸಮಾರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ನಡೆದ ಈ ದಿಢೀರ್ ತೆರವು ಕಾರ್ಯಾಚರಣೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
