Monday, June 17, 2024

ಸತ್ಯ | ನ್ಯಾಯ |ಧರ್ಮ

ದಲಿತ ಮಹಿಳೆ ತಯಾರಿಸಿದ ಅಡುಗೆ ತಿನ್ನದಂತೆ ಮಕ್ಕಳನ್ನು ತಡೆದ ಪೋಷಕರು, ಶಾಲೆಗೆ ತೆರಳಿ ಮಕ್ಕಳೊಡನೆ ಕುಳಿತು ತಿಂಡಿ ತಿಂದ ಸಂಸದೆ ಕನಿಮೊಳಿ

ತಮಿಳುನಾಡು: (DMK MP Kanimozhi) ತಮಿಳುನಾಡಿನ ಉಸಿಲಂಪಟ್ಟಿಯ ಶಾಲೆಯೊಂದರಲ್ಲಿ ಎರಡು ದಿನಗಳ ಹಿಂದೆ ನಡೆದ ಘಟನೆಯ ಕುರಿತು ನೀವೂ ಓದಿರಬಹುದು. ಅಲ್ಲಿ ಮುಖ್ಯಮಂತ್ರಿಗಳ ಉಪಹಾರ ಯೋಜನೆಯಡಿ ನೀಡಲಾಗುವ ತಿಂಡಿಯನ್ನು ದಲಿತ ಮಹಿಳೆಯೊಬ್ಬರು ತಯಾರಿಸಿದ್ದಾರೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ತಿನ್ನಲು ನಿರಾಕರಿಸಿದ್ದರು.

ಈ ಘಟನೆ ದೇಶವ್ಯಾಪಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆದರೆ, ಈಗ ಸ್ಥಳೀಯ ಆಡಳಿತ ಪಕ್ಷದ ನಾಯಕಿ ಹಾಗೂ ಸಂಸದೆ ಕನಿಮೊಳಿ ಅವರು ಈ ಘಟನೆಗೆ ನೀಡಿರುವ ಪ್ರತಿಕ್ರಿಯೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸ್ವಸಹಾಯ ಸಂಘದ ಸದಸ್ಯೆ ದಲಿತ ಮಹಿಳೆ ಮುನಿಯಸೆಲ್ವಿ ಉಸಿಲಂಪಟ್ಟಿ ಪ್ರಾಥಮಿಕ ಶಾಲೆಯಲ್ಲಿ ಅಡುಗೆಯವರಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಆ ಶಾಲೆಯ 11 ವಿದ್ಯಾರ್ಥಿಗಳಲ್ಲಿ ಒಂಬತ್ತು ವಿದ್ಯಾರ್ಥಿಗಳು ಆಕೆ ತಯಾರಿಸಿದ ಉಪಹಾರವನ್ನು ತಿನ್ನಲು ನಿರಾಕರಿಸಿದ್ದರು.

ಆ ಮಕ್ಕಳ ಪೋಷಕರು ತಮ್ಮ ಮಕ್ಕಳ ಬಳಿ ಅದನ್ನು ತಿನ್ನದಿರುವಂತೆ ಹೇಳಿದ್ದರು ಎಂದು ಮುನಿಯಸೆಲ್ವಿ ಹೇಳುತ್ತಾರೆ. ಇದಕ್ಕೆ ಕಾರಣ ಅವರು ದಲಿತ ಸಮುದಾಯಕ್ಕೆ ಸೇರಿದವರು. ತಾನು ತಯಾರಿಸಿದ ತಿಂಡಿ ತಿಂದರೆ ಗ್ರಾಮಸ್ಥರು ಹೊಡೆಯುತ್ತಾರೆ ಎಂದು ಮಕ್ಕಳು ಹೇಳುತ್ತಿದ್ದಾರೆ ಎಂದು ಅವರು ಅಳಲು ತೋಡಿಕೊಂಡರು.

ಹೀಗೆ ಮಕ್ಕಳು ತಿಂಡಿ ತಿನ್ನಲು ನಿರಾಕರಿಸಿದ ಕಾರಣ ಅವರೂ ಮಕ್ಕಳನ್ನು ಒತ್ತಾಯಿಸಲಿಲ್ಲ. ಅಧಿಕಾರಿಗಳು ಅಡುಗೆಯವರ ಬಳಿ ಆಹಾರ ದಾಸ್ತಾನು ವಿವರ ಕೇಳಿದಾಗ ಈ ವಿಷಯ ಬೆಳಕಿಗೆ ಬಂತು. ನಂತರ ಈ ಸುದ್ದಿ ವ್ಯಾಪಕವಾಗಿ ಹರಡಿ ಅದು ಡಿಎಂಕೆ ಸಂಸದೆ ಕನಿಮೊಳಿ ಅವರಿಗೂ ತಲುಪಿದೆ.

ವಿಷಯ ತಿಳಿದ ಕನಿಮೊಳಿ ಸೀದಾ ಶಾಲೆಗೆ ಹೋದವರೇ ಅದೇ ಮಹಿಳೆಯ ಬಳಿ ಅಡುಗೆ ಮಾಡಿಸಿ ಶಾಲಾ ಮಕ್ಕಳೊಡನೆ ಕುಳಿತು ತಿಂದರು. ಈಗ ಅವರ ನಡೆಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

ನಂತರ ಈ ಕುರಿತು ಜಿಲ್ಲಾಧಿಕಾರಿ ಜತೆ ಮಾತನಾಡಿದ ಅಧಿಕಾರಿಗಳು ವಿದ್ಯಾರ್ಥಿಗಳ ಪೋಷಕರೊಂದಿಗೂ ಮಾತನಾಡಿದ್ದಾರೆ. ನಂತರ ಡಿಎಂಕೆ ಸಂಸದೆ ಕನಿಮೊಳಿ, ರಾಜ್ಯ ಸಚಿವೆ ಗೀತಾಜೀವನ್ ಮತ್ತು ಜಿಲ್ಲಾಧಿಕಾರಿ ಸೆಂಥಿಲ್ ರಾಜ್ ಶಾಲೆಗೆ ಭೇಟಿ ನೀಡಿದರು. ಈ ವೇಳೆ ಅವರು ಶಾಲೆಯ ಮಕ್ಕಳೊಂದಿಗೆ ಉಪಹಾರ ಸೇವಿಸಿದರು.

ತಮಿಳುನಾಡಿನ ವಿದ್ಯಾರ್ಥಿಗಳಿಗೆ ಪೌಷ್ಠಿಕ ಉಪಹಾರ ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಕಳೆದ ವರ್ಷ ಆಗಸ್ಟ್‌ನಲ್ಲಿ ‘ಮುಖ್ಯಮಂತ್ರಿ ಉಪಾಹಾರ ಯೋಜನೆ’ಯನ್ನು ಪ್ರಾರಂಭಿಸಿದ್ದರು. ಇದರಡಿ ದಿನಕ್ಕೆ 15.75 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಉಪಾಹಾರ ನೀಡಲಾಗುತ್ತದೆ.

Related Articles

ಇತ್ತೀಚಿನ ಸುದ್ದಿಗಳು