Wednesday, December 31, 2025

ಸತ್ಯ | ನ್ಯಾಯ |ಧರ್ಮ

ಡಿಎನ್ಎ ಪರೀಕ್ಷೆಯಲ್ಲಿ ಪಿತೃತ್ವ ಸಾಬೀತಾದರೂ ಮದುವೆಗೆ ನಕಾರ: ಪುತ್ತೂರಿನ ಬಿಜೆಪಿ ಮುಖಂಡನ ಪುತ್ರನ ವಿರುದ್ಧ ನ್ಯಾಯಾಂಗ ಹೋರಾಟಕ್ಕೆ ಸಂತ್ರಸ್ತೆ ಸಿದ್ಧ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್ ಎಂಬಾತ ಯುವತಿಯೊಬ್ಬಳಿಗೆ ಮದುವೆಯಾಗುವುದಾಗಿ ನಂಬಿಸಿ, ಗರ್ಭಿಣಿ ಮಾಡಿ ಈಗ ಕೈಕೊಟ್ಟಿರುವ ಪ್ರಕರಣ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ನ್ಯಾಯಾಲಯದ ಆದೇಶದಂತೆ ನಡೆಸಲಾದ ಡಿಎನ್ಎ ಪರೀಕ್ಷೆಯಲ್ಲಿ ಮಗುವಿಗೆ ಕೃಷ್ಣ ರಾವ್ ಅವರೇ ತಂದೆ ಎಂಬುದು ಸಾಬೀತಾಗಿದ್ದರೂ, ಆತ ಸಂತ್ರಸ್ತೆಯನ್ನು ಮದುವೆಯಾಗಲು ನಿರಾಕರಿಸುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ಅನ್ಯಮಾರ್ಗವಿಲ್ಲದೆ ಸಂತ್ರಸ್ತೆ ನ್ಯಾಯಾಲಯದ ಮೂಲಕವೇ ತನಗಾಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡಲು ನಿರ್ಧರಿಸಿದ್ದಾರೆ.

ಶಾಲಾ ದಿನಗಳಿಂದಲೇ ಯುವತಿಯ ಪರಿಚಯ ಹೊಂದಿದ್ದ ಕೃಷ್ಣ ರಾವ್, ಮದುವೆಯ ಆಮಿಷವೊಡ್ಡಿ ಆಕೆಯನ್ನು ಗರ್ಭಿಣಿ ಮಾಡಿದ್ದ ಎನ್ನಲಾಗಿದೆ. ಯುವತಿ ಮಗುವಿಗೆ ಜನ್ಮ ನೀಡಿದ ನಂತರ ಪೊಲೀಸರಿಗೆ ದೂರು ನೀಡಲಾಗಿತ್ತು. ಆರಂಭದಲ್ಲಿ ಬಂಧಿತನಾಗಿದ್ದ ಕೃಷ್ಣ ರಾವ್, ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ತನಗೂ ಮಗುವಿಗೂ ಯಾವುದೇ ಸಂಬಂಧವಿಲ್ಲ ಎಂದು ವಾದಿಸಿದ್ದ. ಈ ಹಂತದಲ್ಲಿ ನ್ಯಾಯಾಲಯವು ಡಿಎನ್ಎ ಪರೀಕ್ಷೆಗೆ ಆದೇಶಿಸಿತು. ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ (FSL) ನಡೆಸಿದ ಪರೀಕ್ಷೆಯಲ್ಲಿ ಕೃಷ್ಣ ರಾವ್ ಅವರೇ ಮಗುವಿನ ಜೈವಿಕ ತಂದೆ ಎಂದು ದೃಢಪಟ್ಟಿದೆ.

ವರದಿ ಪಾಸಿಟಿವ್ ಬಂದ ನಂತರ ಸಂತ್ರಸ್ತೆಗೆ ನ್ಯಾಯ ಕೊಡಿಸಲು ಅನೇಕ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಮಧ್ಯಸ್ಥಿಕೆ ವಹಿಸಿದ್ದರು. ಆರ್‌ಎಸ್‌ಎಸ್ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸೇರಿದಂತೆ ಹಲವರು ರಾಜೀ ಪಂಚಾಯಿತಿ ನಡೆಸಲು ಪ್ರಯತ್ನಿಸಿದರು. ಆದರೆ, ಕೃಷ್ಣ ರಾವ್ ಕುಟುಂಬವು ಮದುವೆಗೆ ಒಪ್ಪದ ಕಾರಣ ಈ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ. ಹಣದ ಆಮಿಷವನ್ನೂ ನೀಡಲಾಗಿತ್ತು ಆದರೆ ತಮಗೆ ನ್ಯಾಯವೇ ಮುಖ್ಯ ಎಂದು ಸಂತ್ರಸ್ತೆಯ ಕುಟುಂಬವು ಹೇಳಿದೆ.

“ಮಗುವಿಗೆ ತಂದೆಯ ಅಧಿಕೃತ ಹೆಸರು ಮತ್ತು ನನಗೆ ಪತ್ನಿಯ ಸ್ಥಾನಮಾನ ಸಿಗುವವರೆಗೂ ನಾನು ಹೋರಾಡುತ್ತೇನೆ” ಎಂದು ಸಂತ್ರಸ್ತೆ ತಿಳಿಸಿದ್ದಾರೆ. ರಾಜಕೀಯ ಒತ್ತಡಗಳ ನಡುವೆಯೂ ಬಿಜೆಪಿ ಈಗಾಗಲೇ ಜಗನ್ನಿವಾಸ ರಾವ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದೆ. ಆದರೆ, ಕೃಷ್ಣ ರಾವ್ ಕುಟುಂಬವು ಮದುವೆಯ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವುದು ಸಾಮಾಜಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈಗ ಪ್ರಕರಣವು ನ್ಯಾಯಾಲಯದಲ್ಲಿದ್ದು, ಅಂತಿಮ ತೀರ್ಪಿನ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page