ಮತದಾನದ ನಮ್ಮ ಹಕ್ಕಿಗಾಗಿ ನಮ್ಮನ್ನು ಭಿಕ್ಷೆ ಬೇಡುವಂತೆ ಮಾಡಬೇಡಿ – ಪ್ರಕಾಶ್‌ ರಾಜ್‌ ಮತ್ತು ಸಂತ್ರಸ್ತ ನಾಗರಿಕರು

ಬೆಂಗಳೂರು : ಬೆಂಗಳೂರಿನ ಪ್ರೆಸ್‌ ಕ್ಲಬ್‌ನಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ನಟ ಪ್ರಕಾಶ್ ರಾಜ್ ಹಾಗೂ ASDDO ಡಿಲಿಷನ್ ಸಂಭಾವ್ಯದ ಪಟ್ಟಿಯಲ್ಲಿ ಗುರುತಿಸಲ್ಪಟ್ಟಿರುವ ಬೆಂಗಳೂರಿನ ವಿವಿಧ ಜನ ವರ್ಗಗಳ ಮತದಾರರು ಹಾಗೂ ನಾಗರಿಕ ಸಮಾಜದ ಸಂಘಟನೆಗಳು, ರಾಜ್ಯದ ಮತದಾರರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಆತಂಕಗಳ ಕುರಿತು ಮಾತನಾಡಿದರು. SIR ಸಾಮಾನ್ಯ ಮತದಾರರು ತಮ್ಮ ಮತದಾನದ ಹಕ್ಕನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳ ಹಿಂದೆ ಅಲೆಯುವಂತೆ ಮಾಡುತ್ತಿದೆ. ಲಕ್ಷಾಂತರ ಅರ್ಹ ಮತದಾರರಿಗೆ ಯಾವುದೇ ನೋಟೀಸ್‌ ಸಹ ನೀಡದೆ ಬಹಳ ಸುಲಭವಾಗಿ ಅವರಿಂದ ಅವರ ಮೂಲಭೂತ ಹಕ್ಕನ್ನೇ ಕಸಿದುಕೊಳ್ಳುತ್ತಿದೆ. ಇನ್ನೂ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಯಾವುದೇ ಚುನಾವಣೆ ನಡೆಯುವುದಿಲ್ಲವಾದಾಗ, ಇಂತಹ ಅವಸರದ ಪ್ರಕ್ರಿಯೆಗೆ ನಮ್ಮನ್ನು ಏಕೆ ಒಳಪಡಿಸಲಾಗುತ್ತಿದೆ? ಮತದಾರನ ಘನತೆಯನ್ನು ಏಕೆ ಅವಮಾನಿಸಲಾಗುತ್ತಿದೆ? ಎಂದು ಪ್ರಶ್ನಿಸಿದರು.

“ಎನ್ಯುಮುರೇಷನ್‌ ಫಾರಂ ಅನ್ನು ಸಲ್ಲಿಸಿದ್ದರೂ ನಮ್ಮನ್ನು ಶಿಪ್ಟೆಡ್‌ ಪಟ್ಟಿಗೆ ಏಕೆ ಸೇರಿಸಲಾಗಿದೆ?” ಎಂದು ಕೊಳೆಗೇರಿಯ ನಿವಾಸಿಗಳು ತಾವು ಸಲ್ಲಿಸಿರುವ ಎನ್ಯುಮುರೇಷನ್‌ ಫಾರಂನ ಸ್ವೀಕೃತಿ ಪತ್ರಗಳನ್ನು ಪ್ರದರ್ಶಿಸಿ ಪ್ರಶ್ನಿಸಿದರು. “ನಮ್ಮ BLOಗಳಿಗೆ ಪದೇ ಪದೇ ಕರೆ ಮಾಡಿದರೂ ಗಣತಿ ನಮೂನೆಗಳನ್ನು ನೀಡದೇ ನಮ್ಮನ್ನು ‘ಸ್ಥಳಾಂತರಗೊಂಡವರು’ ಎಂದು ಏಕೆ ಗುರುತಿಸಲಾಗಿದೆ?”, “ನನ್ನ ಎನ್ಯುಮುರೇಷನ್‌ ಫಾರಂ ಕಲೆಕ್ಟ್‌ ಮಾಡಲಿಕ್ಕೇ ಯಾರೂ ಬಂದಿಲ್ಲ, ನಮ್ಮ ಮನೆಯಲ್ಲಿ 24×7 ಯಾರಾದರೂ ಇದ್ದೇ ಇರುತ್ತಾರೆ, ಹಾಗಿದ್ದರೂ ಶಿಫ್ಟೆಡ್‌ ಅಂತ ಹೇಗೆ ಸರಿಸಿದಿರಿ” ಎಂದು ಪ್ರಶ್ನಿಸಿದರು.

ಶಿಫ್ಟಿಂಗ್‌ ಆದವರಿಗೆ ಫಾರಂ ನಂ 8 ಕೊಟ್ಟು ಹೊಸ ವಿಳಾಸಕ್ಕೆ ಬದಲಾಯಿಸಿಕೊಳ್ಳಲು ಅವಕಾಶ ಕೊಡಬೇಕು. ಆ ಅವಕಾಶವನ್ನೇ ನೀಡದೆ ಡಿಲೀಟ್‌ ಏಕೆ ಮಾಡುತ್ತಿದ್ದೀರಿ? ಈಗಾಗಲೇ ಮತದಾರರಾಗಿರುವ ನಮ್ಮನ್ನು ಡಿಲೀಟ್‌ ಮಾಡಿ ಈಗ ಫಾರಂ ನಂ. 6 ಹಾಕಿ ಹೊಸದಾಗಿ ನೋಂದಾಯಿಸಿಕೊಳ್ಳಲು ಏಕೆ ಕೇಳುತ್ತಿದ್ದೀರಿ ಎಂದು ಪ್ರಶ್ನಿಸಿದರು. ಬಾಡಿಗೆ ಮನೆ ಬದಲಾಯಿಸಿದ್ದು, ದುಡಿಯಲು ಬೇರೆ ಊರಿಗೆ ಹೋಗಿರುವುದು, ಮದುವೆಯಾಗಿ ಗಂಡನ ಮನೆಗೆ ಸ್ಥಳಾಂತರಗೊಂಡಿರುವುದು ಅಪರಾಧವೇ? ಅಲ್ಲ ಎನ್ನುವುದಾದರೆ ಏತಕ್ಕೆ ನಮಗೆ ಈ ಶಿಕ್ಷೆ ಎಂದು ಪ್ರಶ್ನಿಸಿದರು? ಹಿರಿಯ ನಾಗರೀಕರನ್ನೆಲ್ಲಾ ಮಡಿದವರು ಎಂದು ಪೂರ್ವ ನಿರ್ಧಾರ ಮಾಡುತ್ತಿದ್ದೀರಿ. BLO ಅವರು ಸತ್ತಿಲ್ಲ ಎಂದು ನಿರ್ದಿಷ್ಟವಾಗಿ ತಿದ್ದುಪಡಿ ಮಾಡದಿದ್ದರೆ ಅವರನ್ನು ಡೆಡ್‌ ಎಂದು ಸೇರಿಸಿಬಿಡುತ್ತಿದ್ದೀರಿ, ಹಿರಿಯ ನಾಗರೀಕರ ಜೊತೆ ನಡೆದುಕೊಳ್ಳುವ ರೀತಿಯೇ ಇದು ಎಂದು ಸಹ ಪ್ರಶ್ನಿಸಿದರು.

ಇಂಥ ದೊಡ್ಡ ಪ್ರಕ್ರಿಯೆಯನ್ನು ಇಷ್ಟೊಂದು ಕಡಿಮೆ ಅವಧಿಯಲ್ಲಿ ಮಾಡಲು ಹೊರಟಿರುವ ವಿಧಾನವೇ ಸರಿಯಲ್ಲ. ಇದು ಬೂತ್ ಮಟ್ಟದ ಅಧಿಕಾರಿಗಳ (BLOs) ಮೇಲೂ ತೀವ್ರ ಹೊರೆಯನ್ನು ಹೊರಿಸಿದೆ. ಕರ್ನಾಟಕದಲ್ಲಿ ಐವರು BLOಗಳ ಸಾವು ಮತ್ತು SIR ಕೆಲಸದ ಒತ್ತಡವೂ ಕಾರಣವೆಂದು ಹೇಳಲಾಗಿದೆ. ದೇಶಾದ್ಯಂತ SIR ಜಾರಿಯಾಗಿರುವ ಪ್ರದೇಶಗಳಲ್ಲಿ 40ಕ್ಕೂ ಹೆಚ್ಚು BLOಗಳು ಮೃತಪಟ್ಟಿದ್ದಾರೆ; ಅವರಲ್ಲಿ ಹಲವರನ್ನು ಆತ್ಮಹತ್ಯೆಗೆ ದೂಡಲಾಗಿದೆ.

ಓಟರ್‌ ಐಡಿ ಇರುವ ಪ್ರದೇಶದಿಂದ ಬೇರೆ ಕಡೆಗೆ ಸ್ಥಳಾಂತರಗೊಂಡಿರುವವರು ಏನು ಮಾಡಬೇಕು ಎಂಬ ಯಾವ ಪ್ರಕಟಣೆಯನ್ನೂ ಇದುವರೆಗೆ ನೀಡಿಲ್ಲ. ECI ವತಿಯಿಂದ ಯಾವುದೇ ಸಮರ್ಪಕ ಅಭಿಯಾನವೇ ಇಲ್ಲದೆ ಈಗ ಧಿಡೀರೆಂದು ‘Absent’ ಅಥವಾ ‘Shifted’ ಎಂದು ಅಳಿಸಿಹಾಕುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಕೊನೆಗೆ ಚುನಾವಣಾ ಆಯೋಗದ ಮುಂದೆ ಈ ಕೆಳಕಂಡ ಹಕ್ಕೊತ್ತಾಯಗಳನ್ನು ಮುಂದಿಡಲಾಯಿತು.

ಚುನಾವಣಾ ಆಯೋಗಕ್ಕೆ ನಮ್ಮ ಒತ್ತಾಯಗಳು:

  • ಇಡೀ ರಾಜ್ಯದ ಮತದಾರರ ಪಟ್ಟಿಯನ್ನು ಮರುರೂಪಿಸುವ ಪ್ರಕ್ರಿಯೆ ಇಷ್ಟೊಂದು ದುಡುಕಿನಲ್ಲಿ ನಡೆಯುವುದು ಸರಿಯಲ್ಲ, ನಡೆಯುವ ಅಗತ್ಯವೂ ಇಲ್ಲ. ಈ ಪ್ರಕ್ರಿಯೆಯನ್ನು ಪೂರ್ಣ ಒಂದು ವರ್ಷಕ್ಕೆ ವಿಸ್ತರಿಸಿ ವ್ಯವಧಾನದ ಜೊತೆ ನಡೆಸಬೇಕು.
  • ಮನೆ ಇದೆ, ಮನೆಯವರು BLO ಹೋದಾಗ ಮನೆಯಲ್ಲಿ ಇರಲಿಲ್ಲ ಎನ್ನುವವರನ್ನು ಡಿಲೀಟ್‌ ಮಾಡಬಾರದು. ಏಕೆಂದರೆ ಹೆಚ್ಚಿನವರು ದುಡಿಯಲು ಹೋಗುತ್ತಿರುವವರು ಅಥವಾ ದುಡಿಯಲು ಬೇರೆ ಕಡೆ ಹೋಗಿರುವವರು. ದುಡಿಯಲು ಅಲೆದಾಡುತ್ತಿರುವವರ ಜೊತೆ ಘನತೆಯಿಂದ ಮತ್ತು ಮಾನವೀಯತೆಯಿಂದ ನಡೆದುಕೊಳ್ಳಬೇಕು. ಅವರಿಗೆ ಕನಿಷ್ಠ ಮೂರು ತಿಂಗಳ ಸಮಯಾವಕಾಶ ಕೊಡಬೇಕು.
  • ಒಂದು ವಿಳಾಸದಿಂದ ಮತ್ತೊಂದು ವಿಳಾಸಕ್ಕೆ, ಒಂದು ಏರಿಯಾದಿಂದ ಮತ್ತೊಂದು ಏರಿಯಾಗೆ, ಒಂದು ಊರಿಂದ ಮತ್ತೊಂದು ಊರಿಗೆ ಸ್ಥಳಾಂತರಗೊಂಡವರನ್ನು ಮತ್ತು ಮನೆಯಲ್ಲಿ ಇಲ್ಲದಿದ್ದವರನ್ನು ಯಾವುದೇ ಕಾರಣಕ್ಕೂ ಡಿಲೀಟ್‌ ಪಟ್ಟಿಗೆ ಸೇರಿಸಬಾರದು. ಅವರು ಇರುವ ಸ್ಥಳಗಳಲ್ಲೇ ಎನ್ಯುಮುರೇಷನ್‌ ಫಾರಂ ಮತ್ತು ಫಾರಂ 8ನ್ನು ಕೊಡುವ ವ್ಯವಸ್ಥೆ ಆಗಬೇಕು.
  • ಮನೆ ಮನೆಗೂ ಹೋಗಿ ಎನ್ಯುಮುರೇಷನ್‌ ಫಾರಂ ಕೊಟ್ಟಂತೆ ಮತ್ತೊಮ್ಮೆ ಮನೆ ಮನೆಗೆ ಹೋಗಿ ಹೊಸ ಮತದಾರರಿಗೆ ಫಾರಂ ನಂ. 6, ಬೇರೆ ಏರಿಯಾ ಅಥವಾ ಊರುಗಳಿಂದ ಶಿಫ್ಟ್‌ ಆಗಿ ಬಂದವರಿಗೆ ಫಾರಂ ನಂ 8 ಕೊಟ್ಟು ಒಳಗೊಳ್ಳುವ ಕೆಲಸ ಆಗಬೇಕು.
  • ಕರಡು ಪಟ್ಟಿ ಪ್ರಕಟವಾದ ನಂತರ [ಚುನಾವಣಾ ಆಯೋಗದ ಮ್ಯಾನ್ಯುಯಲ್‌ನಲ್ಲಿ ಇರುವ ನಿರ್ದೇಶನದಂತೆ] ಪ್ರತಿ ಬೂತ್‌ ಪ್ರದೇಶಗಳಲ್ಲಿ ಸಾರ್ವಜನಿಕ ಪರಿಶೀಲನಾ ಸಭೆ ನಡೆಸಬೇಕು. ಬಿಟ್ಟು ಹೋದವರನ್ನು, ಸ್ಥಳಾಂತರಗೊಂಡು ಬಂದಿರುವವರನ್ನು ಒಳಗೊಳ್ಳುವ ಕೆಲಸ ನಡೆಯಬೇಕು.
  • ‘ಲಾಜಿಕಲ್‌ ಡಿಸ್ಕ್ರಿಪೆನ್ಸಿ’ ಬಗ್ಗೆ ಚುನಾವಣಾ ಆಯೋಗ ಮಾತನಾಡಬೇಕು. ಅದನ್ನು ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಬಳಸಬಾರದು.

ಪ್ರಕಾಶ್‌ ರಾಜ್‌ ಮತ್ತು ಸಂತ್ರಸ್ತ ನಾಗರಿಕರು ಹಾಗೂ ನಾಗರಿಕ ಸಂಘಟನೆಗಳ ಪರವಾಗಿ ಪತ್ರಿಗಾಗೋ‍ಷ್ಠಿಯಲ್ಲಿ ಮನವಿ ಮಾಡಿದರು.

Related Articles

ಇತ್ತೀಚಿನ ಸುದ್ದಿಗಳು