ಬೊಗಸೆಗೆ ದಕ್ಕಿದ್ದು…17
-ನಿಖಿಲ್ ಕೋಲ್ಪೆ
ಕರ್ನಾಟಕ ಕರಾವಳಿಯಲ್ಲಿ ಕೋಮುವಾದದ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ, ದಕ್ಷಿಣ ಕನ್ನಡ ಜಿಲ್ಲೆಯ ಸಾಮಾಜಿಕ ಪರಿಸ್ಥಿತಿಯನ್ನೂ ಗಮನಿಸಬೇಕು. ಹಿಂದೆ ಬಹುತೇಕ ಗ್ರಾಮೀಣ ಹಿಂದೂಗಳು ಕೃಷಿ ಮತ್ತು ಹೈನುಗಾರಿಕೆ ಮುಂತಾದ ಕೃಷಿ ಸಂಬಂಧಿ ಉದ್ಯೋಗಗಳು, ಮೂರ್ತೆದಾರಿಕೆ (ತಾಳೆ ಮರದಿಂದ ಶೇಂದಿ ಇಳಿಸುವುದು), ಮೀನುಗಾರಿಕೆ, ಕುಂಬಾರಿಕೆಯಂತಹಾ ಜಾತಿ ಸಂಬಂಧಿ ಉದ್ಯೋಗಗಳಲ್ಲಿ ಮತ್ತು ಕೃಷಿಕೂಲಿಯಲ್ಲಿ ತೊಡಗಿದ್ದರು. ಮುಸ್ಲಿಮರು ಮೀನು, ದಿನಸಿ ಸೇರಿದಂತೆ ಬೇರೆಬೇರೆ ವ್ಯಾಪಾರಗಳಲ್ಲಿ ತೊಡಗಿದ್ದರು. ಈ ಉದ್ಯೋಗಗಳು ಪರಸ್ಪರ ಪೂರಕವಾಗಿದ್ದುದರಿಂದ ಯಾವುದೇ ಸ್ಪರ್ಧೆ ಇಲ್ಲದೇ ಸಾಮರಸ್ಯ ನೆಲೆಸಿತ್ತು.
ಇದನ್ನು ಇಂದಿಗೂ ನಡೆಯುತ್ತಿರುವ ಮೀನುಗಾರಿಕೆಯ ವೃತ್ತಿಯಲ್ಲಿ ಗಮನಿಸಬಹುದು. ಮೊಗವೀರ ಸಮುದಾಯದ ಮುಖ್ಯ ಉದ್ಯೋಗವೇ ಮೀನುಗಾರಿಕೆ. ಗಂಡಸರು ಮೀನು ಹಿಡಿಯುವ ಕೆಲಸವನ್ನು ಮಾಡಿದರೆ, ಮಹಿಳೆಯರು ಕರಾವಳಿ ಭಾಗದಲ್ಲಿ ಮೀನು ಮಾರಾಟ ಮಾಡುತ್ತಾರೆ. ಅವರೇ ದೈನಂದಿನ ವ್ಯವಹಾರದಲ್ಲಿ ಗಂಡಸರಿಗೆ ಸರಿಸಾಟಿಯಾಗಿ ಪಾಲುಗೊಳ್ಳಬೇಕಾಗಿದೆ. ಆದುದರಿಂದ, ಅವರು ದಿಟ್ಟತನಕ್ಕೆ ಹೆಸರಾಗಿದ್ದಾರೆ. ಆದರೆ, ಒಳಭಾಗದ ಹಳ್ಳಿಗಳಿಗೆ ಮೀನು ಪೂರೈಕೆ, ಮಾರಾಟ ಮಾಡುವವರಲ್ಲಿ 90 ಶೇಕಡಾ ಮುಸ್ಲಿಮರೇ ಆಗಿದ್ದಾರೆ. ಈಗ ಪೈಪೋಟಿಗೆಂದು ಆರೆಸ್ಸೆಸ್ ಪ್ರೇರಿತ ಶೂದ್ರರೂ ಮೀನು ಮಾರಾಟ ಆರಂಭಿಸಿದ್ದಾರೆ. ಈ ಎರಡೂ ವೃತ್ತಿಗಳು ಪರಸ್ಪರ ಪೂರಕವಾಗಿದ್ದು, ಸೌಹಾರ್ದ ಅನಿವಾರ್ಯವಾಗಿದೆ. ಆದರೆ, ವ್ಯವಹಾರ ಸಂಬಂಧಿ ಚೌಕಾಶಿಯ ಜೊತೆಗೆ, ಪರಸ್ಪರ ಅಸೂಯೆಗಳೂ ಇರುತ್ತವೆ. ಇದು ಕೋಮುಗಲಭೆಗಳ ಸಂದರ್ಭದಲ್ಲಿ ಭುಗಿಲೇಳುತ್ತದೆ. ಅನಿವಾರ್ಯವಾಗಿ ಅಷ್ಟೇ ಬೇಗನೇ ತಣಿಯುತ್ತದೆ ಕೂಡಾ.
ಜಿಲ್ಲೆಯಲ್ಲಿ ಕೋಮು ಗಲಭೆಗಳು ನಡೆದಾಗ ಅವು ಹೆಚ್ಚಿನ ತೀವ್ರತೆ ಪಡೆಯುವುದು ಮೊಗವೀರ ಮತ್ತು ಮುಸ್ಲಿಂ ಸಮುದಾಯಗಳು ಹೆಚ್ಚಾಗಿರುವ ಸ್ಥಳಗಳಲ್ಲಿ ಎಂಬ ಕುತೂಹಲಕಾರಿ ಅಂಶವನ್ನು ಗಮನಿಸಬಹುದು. (ಉದಾಹರಣೆಗೆ ಬೈಕಂಪಾಡಿ, ಸುರತ್ಕಲ್, ಕೃಷ್ಣಾಪುರ, ಕಾಟಿಪಳ್ಳ, ಉಳ್ಳಾಲ ಇತ್ಯಾದಿ). ಈ ಮೂಲಕ ಕೋಮುವಾದದ ಸಮಸ್ಯೆಯು ಒಂದು ರೀತಿಯ ಮನೋವೈಜ್ಞಾನಿಕ ಆಯಾಮ ಹೊಂದಿರುವುದನ್ನು ಕಾಣಬಹುದು. ಕೋಮುಗಲಭೆಗಳ ಸಂದರ್ಭಗಳಲ್ಲಿ, ಹಳ್ಳಿಗಳಲ್ಲಿ ಮುಸ್ಲಿಂ ಮೀನು ವ್ಯಾಪಾರಿಗಳ ಮೇಲೆ ನಡೆದ ಅಪ್ರಚೋದಿತ ದಾಳಿಗಳನ್ನು ಗಮನಿಸಬಹುದು.
ಆದರೆ, ಜಿಲ್ಲೆಯಲ್ಲಿ ಇನ್ನೊಂದು ವ್ಯಾವಹಾರಿಕ ವೈರುಧ್ಯವನ್ನು ಕಾಣಬಹುದು. ಗೌಡ ಸಾರಸ್ವತ ಸಮುದಾಯದ ಬಹುತೇಕ ಜನರು ಅಂಗಡಿ ವ್ಯಾಪಾರವನ್ನು ಅವಲಂಬಿಸಿದವರು. ಅದೇ ರೀತಿಯಲ್ಲಿ ಮುಸ್ಲಿಮರು ಕೂಡಾ ವ್ಯಾಪಾರವನ್ನೇ ಅವಲಂಬಿಸಿರುವುದರಿಂದ ಹಿತಾಸಕ್ತಿ ಸಂಘರ್ಷಗಳು ಇರುತ್ತವೆ. ಜಿಲ್ಲೆಯಲ್ಲಿರುವ ಪೇಟೆಗಳ ರಚನೆಯನ್ನು ಗಮನಿಸಬಹುದು. ಮುಖ್ಯಪೇಟೆಯನ್ನು ಮೇಲಿನ ಪೇಟೆ ಎಂದು ಕರೆಯಲಾಗುತ್ತಿದ್ದು, ಅಲ್ಲಿ ಜಿಎಸ್‌ಬಿ ಸಮುದಾಯದ ಪ್ರಾಬಲ್ಯ ಇರುತ್ತದೆ. ಅದೇ ರಸ್ತೆಯ ಇನ್ನೊಂದು ಭಾಗದಲ್ಲಿ ತಪ್ಪದೇ ಒಂದು ‘ಕೆಳಗಿನ ಪೇಟೆ’ ಇದ್ದು, ಅಲ್ಲಿ ಮುಸ್ಲಿಮರ ಪ್ರಾಬಲ್ಯ ಇರುತ್ತದೆ. ಮೇಲಿನ ಪೇಟೆಯಲ್ಲಿ ದೇವಾಲಯಗಳೂ, ಕೆಳಗಿನ ಪೇಟೆಯಲ್ಲಿ ಮಸೀದಿಗಳೂ ಇರುತ್ತವೆ.
ಕೋಮುಗಲಭೆಗಳು, ತಂಟೆಗಳು ಇಂತಹಾ ಪೇಟೆಗಳಲ್ಲಿ ಹೆಚ್ಚಾಗಿ ಭುಗಿಲೇಳುವುದನ್ನು ಗಮನಿಸಬಹುದು. (ಉದಾಹರಣೆಗೆ ಬಿ.ಸಿ.ರೋಡ್-ಕೈಕಂಬ, ಬಂಟ್ವಾಳ, ಕಲ್ಲಡ್ಕ, ಪಾಣೆಮಂಗಳೂರು, ಬಂದರು-ಕಾರ್‌ಸ್ಟ್ರೀಟ್, ಪುತ್ತೂರು, ವಿಟ್ಲ, ಉಪ್ಪಿನಂಗಡಿ) ಇಲ್ಲಿನ ಹಿಂದೂ-ಮುಸ್ಲಿಂ ವ್ಯಾಪಾರಿಗಳು ನೇರವಾಗಿ ಗಲಭೆಗಳಲ್ಲಿ ಭಾಗವಹಿಸಿರುವುದಾಗಲೀ, ಬಂಧನಕ್ಕೆ ಒಳಗಾಗಿರುವುದಾಗಲೀ ತೀರಾ ಅಪರೂಪ. ಆದರೆ, ಹಿನ್ನೆಲೆಯಲ್ಲಿ ಅವರ ಪಾತ್ರವಿರುವುದು ಕಂಡುಬರುತ್ತದೆ. ಅಲ್ಲಿ ನಡೆಯುವ ಗಲಭೆಗಳಲ್ಲಿ ಭಾಗವಹಿಸುವವರು ಸಾಮಾನ್ಯವಾಗಿ, ಸಾಮಾನ್ಯ ಮುಸ್ಲಿಮರು ಮತ್ತು ಬಿಲ್ಲವ, ಕುಲಾಲ (ಕುಂಬಾರ) ಇತ್ಯಾದಿಯಾಗಿ ಗ್ರಾಮೀಣ ಸಮುದಾಯದವರು. ಬ್ರಾಹ್ಮಣ ಅಥವಾ ಗೌಡ ಸಾರಸ್ವತ ಸಮುದಾಯಗಳ ಒಬ್ಬರೂ ಇಂತಹ ಗಲಭೆಗಳಲ್ಲಿ ಸತ್ತದ್ದಾಗಲೀ, ಬಂಧನಕ್ಕೆ ಒಳಗಾದದ್ದಾಗಲೀ ನನಗಂತೂ ಗೊತ್ತಿಲ್ಲ. ಊರು ಹೊತ್ತಿ ಉರಿಯುತ್ತಿರುವಾಗ ಅವರು ಮನೆಯ ಬಾಗಿಲು ಭದ್ರಪಡಿಸಿಕೊಂಡು ಪಿಟೀಲು ಬಾರಿಸುತ್ತಾರೆ.
ಇತ್ತೀಚೆಗೆ ಆಧುನೀಕರಣ, ನಗರೀಕರಣದ ಕಾರಣದಿಂದ ಸಾಂಪ್ರದಾಯಿಕ ಉದ್ಯೋಗಗಳು ನಶಿಸಿ, ಹೊಸಹೊಸ ರೀತಿಯ ಉದ್ಯೋಗ, ಉದ್ದಿಮೆ, ವ್ಯಾಪಾರಗಳನ್ನು ಅವಲಂಬಿಸಲೇ ಬೇಕಾಗಿರುವುದರಿಂದ, ಅವುಗಳಿಗಾಗಿ ವಿವಿಧ ಸಮುದಾಯಗಳ ನಡುವೆ ಉಂಟಾಗುವ ಪೈಪೋಟಿ, ವ್ಯವಹಾರಗಳು ಕೋಮುಸಂಘರ್ಷಕ್ಕೆ ಕುಮ್ಮಕ್ಕು ನೀಡುತ್ತವೆ ಎಂಬುದನ್ನು ಗಮನಿಸಬೇಕು.
ರಾಜಕೀಯ ಕಾರಣಗಳಿಗಾಗಿ ವಿವಿಧ ಪಕ್ಷಗಳು ಮತ್ತು ಸಂಘಟನೆಗಳು ಇಂತಹ ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸಿವೆ. ಕೋಮು ಧ್ರುವೀಕರಣ ಮತ್ತು ಮತಬ್ಯಾಂಕ್ ರಾಜಕಾರಣವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಸಮಸ್ಯೆ ಉಲ್ಭಣಿಸುವುದಕ್ಕೆ ಕಾರಣಗಳಾಗಿವೆ. ರಾಜಕೀಯ ಪಕ್ಷಗಳ ಅಪರಾಧೀಕರಣ, ಕ್ರಿಮಿನಲ್‌ಗಳಿಗೆ ರಾಜಕೀಯ ಆಶ್ರಯ, ಪೊಲೀಸ್ ಕೆಲಸಗಳಲ್ಲಿ ಪ್ರಭಾವಿ ರಾಜಕಾರಣಿಗಳ ಹಸ್ತಕ್ಷೇಪ, ಠಾಣೆಗಳಿಗೆ ಮುತ್ತಿಗೆ ಹಾಕಿ ಒತ್ತಡ ಹೇರುವ ತಂತ್ರ, ಕೋಮು ಉದ್ವಿಗ್ನತೆಯನ್ನು ಶಮನ ಮಾಡುವ ಬದಲು ಇನ್ನಷ್ಟು ಪ್ರಚೋದನೆ ನೀಡುವ ಉದ್ರೇಕಕಾರಿ ಭಾಷಣಗಳನ್ನು ಮಾಡುವುದು ಇತ್ಯಾದಿಗಳೂ ಕೋಮುವಾದದ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿವೆ. ಗಾಂಜಾ ಇತ್ಯಾದಿ ಮಾದಕ ವಸ್ತುಗಳ ಮಾರಾಟ ಜಾಲಗಳೂ ತಮ್ಮ ಪಾಲು ಸಲ್ಲಿಸಿವೆ. ಅದನ್ನು ಪರಿಶೀಸುವುದಕ್ಕಿಂತ ಮೊದಲು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊತ್ತಮೊದಲಾಗಿ ಕೋಮುಗಲಭೆ ಆರಂಭವಾದ ಹಿನ್ನೆಲೆಯನ್ನು ಪರಿಶೀಲಿಸುವುದು ಅಗತ್ಯ.
ಸುಲಭವಾಗಿ ಸಿಗುವ ದಾಖಲೆಗಳನ್ನು ಮಾತ್ರವೇ ನೋಡಿ ಹೇಳುವುದಾದರೆ, 1968ರಲ್ಲಿ ಕರಾವಳಿ ಕರ್ನಾಟಕದಲ್ಲಿ ಅದರಲ್ಲೂ ಉತ್ತರ ಕನ್ನಡದಲ್ಲಿ ಕೋಮು ಉದ್ವಿಗ್ನತೆ ಹೆಚ್ಚಿತ್ತು. ಸುಳ್ಳು ವದಂತಿಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೂ ತಲಪಿದವು. ಆ ಸಂದರ್ಭದಲ್ಲಿಯೇ ಮಂಗಳೂರಿನಲ್ಲಿ ಮಟನ್ ಖಾದರ್ ಎಂಬಾತನಿಗೂ, ಮೀನು ಮಾರುವ ಒಬ್ಬರು ಮೊಗವೀರ ಮಹಿಳೆಗೂ ಪ್ರೇಮಸಂಬಂಧವಿದೆ ಎಂಬ ವದಂತಿ ಮೊದಲ ಗಲಭೆಗೆ ಕಾರಣವಾಯಿತು. ಈ ಗಲಭೆಯಲ್ಲಿ ಮಂಗಳೂರಿನ ಹಳೆ ಬಂದರು ಪ್ರದೇಶದಲ್ಲಿ ಒಬ್ಬ ಮುಸ್ಲಿಂ ವ್ಯಕ್ತಿ ಸಾವಿಗೀಡಾದ ಬಗ್ಗೆ ಮಾಹಿತಿ ಸಿಗುತ್ತದೆ.
1975ರ ಹೊತ್ತಿಗೆ, ಅಂದರೆ ತುರ್ತು ಪರಿಸ್ಥಿತಿಯ ಹೊತ್ತಿಗೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವು ಪ್ರಬಲವಾಗಿದ್ದು, ಬಹುತೇಕ ಎಲ್ಲಾ ಮುಸ್ಲಿಮರು, ಕ್ರೈಸ್ತರು ಹಾಗೂ ಬಹುಸಂಖ್ಯೆಯಲ್ಲಿ ಹಿಂದೂಗಳು ಕಾಂಗ್ರೆಸನ್ನು ಬೆಂಬಲಿಸುತ್ತಿದ್ದರು. ಮುಸ್ಲಿಂ ಲೀಗ್ ಇದ್ದರೂ, ಪ್ರಬಲವಾಗಿರಲಿಲ್ಲ. ಕಾಂಗ್ರೆಸ್‌ಗೆ ಎದುರಾಳಿಯಾಗಿ ಇದ್ದದ್ದು, ಆರೆಸ್ಸೆಸ್ ಮತ್ತು ಸಂಘ ಪರಿವಾರದ ಬೆಂಬಲವಿರುವ ಹಿಂದೂವಾದಿ ಜನಸಂಘ. ಅದು ಆರೆಸ್ಸೆಸ್ಸಿನ ಸಂಘಟಿತ ಅಪಪ್ರಚಾರ, ಕೋಮುವಿಷ ಬಿತ್ತನೆಯ ಹೊರತಾಗಿಯೂ ಹೆಚ್ಚಿನ ಹಿಂದೂಗಳು ಅದಕ್ಕೆ ಓಟು ಹಾಕುತ್ತಿರಲಿಲ್ಲ. ಅದು ನಂತರ ಪ್ರತಿಪಕ್ಷಗಳ ಕೂಟವಾದ ಜನತಾ ಪಕ್ಷದಲ್ಲಿ ವಿಲಯನವಾಗಿ, ಆ ಬಳಿಕ ವಿಭಜನೆಗೊಂಡು ಈಗಿನ ಭಾರತೀಯ ಜನತಾ ಪಕ್ಷವಾಗಿ, ತನ್ನನ್ನು ಹಿಂದೂ ಪಕ್ಷ ಎಂದು ಘೋಷಿಕೊಂಡಿತು.
ಆ ಹೊತ್ತಿನಲ್ಲಿ ಮಂಗಳೂರು, ಕಲ್ಲಡ್ಕ, ಪಾಣೆಮಂಗಳೂರು, ವಿಟ್ಲ, ಬಂಟ್ವಾಳ, ಉಪ್ಪಿನಂಗಡಿ ಮತ್ತು ಪುತ್ತೂರಿನಲ್ಲಿ ಕೋಮುವಾದಿ ಧ್ರುವೀಕರಣದ ಪ್ರಯತ್ನಗಳು ಜೋರಾಗಿ ನಡೆಯುತ್ತಿದ್ದವು. ಅಲ್ಲಿ ಆರೆಸ್ಸೆಸ್, ಸಂಘಟನಾತ್ಮಕವಾಗಿ ಹೆಚ್ಚಿನ ಬಲ ಹೊಂದಿತ್ತು. ಮುಸ್ಲಿಮರಲ್ಲಿ ಹೇಳಿಕೊಳ್ಳುವ ಸಂಘಟನೆಗಳು ಇರಲಿಲ್ಲವಾದರೂ, ದೊಡ್ಡ ಸಂಖ್ಯೆ ಮತ್ತು ಕಾಂಗ್ರೆಸ್ ಬೆಂಬಲದಿಂದ ಅವರಲ್ಲಿ ಕೆಲವರು ರಾಜಕೀಯವಾಗಿ ಸಾಕಷ್ಟು ಸಶಕ್ತರಾಗಿದ್ದರು. ವಿಟ್ಲ ವಿಧಾನಸಭಾ ಕ್ಷೇತ್ರವು ಬಿ.ಎ. ಉಮ್ಮರಬ್ಬ ಸೇರಿದಂತೆ ಹಲವಾರು ಮುಸ್ಲಿಂ ಶಾಸಕರನ್ನು ಆಯ್ಕೆ ಮಾಡಿದ್ದು, ಜನರು ಸಾಮಾನ್ಯವಾಗಿ ಕೋಮುವಾದಿಗಳಾಗಿರಲಿಲ್ಲ ಎಂಬುದನ್ನು ಸೂಚಿಸುತ್ತದೆ.
ಇಂತಹಾ ಸಂದರ್ಭದಲ್ಲಿ, ಅಂದರೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕಲ್ಲಡ್ಕದಲ್ಲಿ ಇಸ್ಮಾಯಿಲ್ ಎಂಬ ವ್ಯಾಪಾರಿಯೊಬ್ಬರು ಕಾಂಗ್ರೆಸ್‌ನಲ್ಲಿ ಪ್ರಬಲ ನಾಯಕನಾಗಿ ಬೆಳೆಯುತ್ತಾ, ಪೊಲೀಸ್ ವಲಯದಲ್ಲೂ ಪ್ರಭಾವ ಹೊಂದಿದ್ದರು. ಆ ಸಂದರ್ಭದಲ್ಲಿ ಪ್ರತಿಪಕ್ಷಗಳ ಅನೇಕ ನಾಯಕರು, ಹಿಂದೂ ಸಂಘಟನೆಗಳ ನಾಯಕರು ಆಂತರಿಕ ಭದ್ರತಾ ಕಾಯಿದೆ (Maintenance of Internal Security Act-MISA) ಅನ್ವಯ ಬಂಧಿತರಾಗಿದ್ದರು. ಪೊಲೀಸ್ ದೌರ್ಜನ್ಯವೂ ನಡೆಯುತ್ತಿತ್ತು. ಇದಕ್ಕೆ ಇಸ್ಮಾಯಿಲ್ ಅವರ ಕುಮ್ಮಕ್ಕು ಕಾರಣ ಎಂದು ಈ ಸಂಘಟನೆಗಳವರು ಭಾವಿಸಿದ್ದರು.
ಒಂದು ರಾತ್ರಿ ಇಸ್ಮಾಯಿಲ್ ಅವರನ್ನು ನಕಲಿ ಪೊಲೀಸ್ ಜೀಪ್‌ನಲ್ಲಿ, ನಕಲಿ ಪೋಲೀಸ್ ಉಡುಪಿನಲ್ಲಿ ಬಂದವರು ಕರೆದೊಯ್ದಿದ್ದರು. ಅವರ ಶವ ನಂತರ ಕೊಳೆತ ಸ್ಥಿತಿಯಲ್ಲಿ ನದಿಯಲ್ಲಿ ಪತ್ತೆಯಾಗಿತ್ತು. ಇಸ್ಮಾಯಿಲ್ ಕೊಲೆ ಪ್ರಕರಣ ಎಂದು ಕುಖ್ಯಾತವಾದ ಈ ಪ್ರಕರಣದಲ್ಲಿ, ಪೊಲೀಸರು ಬಂಟ್ವಾಳ ಮತ್ತು ಪುತ್ತೂರು ತಾಲೂಕುಗಳ ಹಿಂದೂ ಸಂಘಟನೆಗಳ ಕೆಲವು ಪ್ರಮುಖ ನಾಯಕರನ್ನು ಬಂಧಿಸಿದ್ದರು. ಅವರಲ್ಲಿ ಕೆಲವರು ಅಮಾಯಕ ವ್ಯಾಪಾರಿಗಳೂ ಇದ್ದರು. ಆಗ ತುರ್ತು ಪರಿಸ್ಥಿತಿ ಇದ್ದುದರಿಂದ ಪೊಲೀಸರನ್ನು ಪ್ರಶ್ನಿಸುವ ಧೈರ್ಯ ಯಾರಿಗೂ ಇರಲಿಲ್ಲ. ಕೊಲೆಯಿಂದಾಗಿ ಮುಸ್ಲಿಮರಿಗೂ, ಯದ್ವಾತದ್ವಾ ಬಂಧನದಿಂದಾಗಿ ಹಿಂದೂಗಳಿಗೂ ಅಸಮಾಧಾನ ಒಳಗೊಳಗೇ ಹೊಗೆಯಾಡುತ್ತಿತ್ತು. ಈ ಪ್ರಕರಣದ ಸಂದರ್ಭದಲ್ಲಿಯೇ ಕಲ್ಲಡ್ಕ ಪ್ರಭಾಕರ ಭಟ್ಟ ಈ ಭಾಗದಲ್ಲಿ ಪ್ರಖ್ಯಾತ ಮತ್ತು ಕುಖ್ಯಾತ ಎರಡೂ ಆದದ್ದು.
ಇದು ಕೋಮುಗಲಭೆಯ ರೂಪದಲ್ಲಿ ಹೊರಹೊಮ್ಮಿದ್ದು, 1977ರ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು, ಜನತಾ ಪಕ್ಷ ಅಧಿಕಾರಕ್ಕೆ ಬಂದ ನಂತರ. ಮೊರಾರ್ಜಿ ದೇಸಾಯಿ ಸರಕಾರ ಅಧಿಕಾರಕ್ಕೆ ಬಂದಾಗ ಇಂದಿರಾ ಗಾಂಧಿಯವರನ್ನು ಬಂಧಿಸಲಾಯಿತು. ಆಗ ಪ್ರತಿಭಟನೆಯಾಗಿ ಕಾಂಗ್ರೆಸ್ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಹೊರಟಿತು. ಹಿಂದೂ ಬಾಹುಳ್ಯವಿದ್ದ ಮೇಲಿನ ಪೇಟೆ, ಮುಸ್ಲಿಂ ಪ್ರಾಬಲ್ಯದ ಕೆಳಗಿನ ಪೇಟೆಗಳು ಇದ್ದಂತಹ ಪಾಣೆಮಂಗಳೂರು, ಬಂಟ್ವಾಳ, ಬಿ.ಸಿ.ರೋಡ್ ಮುಂತಾದ ಪೇಟೆಗಳಲ್ಲಿ ಇದು ಅಪಾಯಕಾರಿಯಾಗಿತ್ತು. ಏಕೆಂದರೆ, ಅಂಗಡಿಗಳನ್ನು ಮುಚ್ಚಿಸಲು ಹೊರಟ ಕಾಂಗ್ರೆಸಿಗರಲ್ಲಿ ಮುಸ್ಲಿಮರೇ ಹೆಚ್ಚಾಗಿದ್ದರು.
ಘರ್ಷಣೆಗಳು ನಡೆದು, ಇಡೀ ಪ್ರಕರಣ ಕೋಮುಗಲಭೆಯ ಸ್ವರೂಪ ಪಡೆಯಿತು. ಬೇಕಾಬಿಟ್ಟಿ ವದಂತಿಗಳು ಹಬ್ಬಿ ಗ್ರಾಮೀಣ ಪ್ರದೇಶಗಳಿಂದ ಯುವಕರು ಬರುತ್ತಿದ್ದಂತೆ, ಗಲಭೆ ಗಂಭೀರ ಸ್ವರೂಪ ಪಡೆದು ಎಲ್ಲಡೆ ವ್ಯಾಪಿಸಿತು. ಬಿ.ಸಿ. ರೋಡ್ ಕೈಕಂಬದ ಮಸೀದಿ ಸೇರಿದಂತೆ ಹಲವು ಪೂಜಾಸ್ಥಳಗಳ ಮೇಲೆ ದಾಳಿ, ಕಲ್ಲೆಸೆತ ಇತ್ಯಾದಿ ನಡೆದು ಹಲವರು ಗಂಭೀರವಾಗಿ ಗಾಯಗೊಂಡರು. ಈ ಸಂದರ್ಭದಲ್ಲಿ ಹಲವರನ್ನು ಪೊಲೀಸರು ಬಂಧಿಸಿದರು. ಆದರೆ, ಆಗ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದುದರಿಂದ ಹಿಂದೂ ಮತ್ತು ಮುಸ್ಲಿಂ ಬಂಧಿತರ ನಡುವೆ ಪೊಲೀಸರು ತಾರತಮ್ಯ ನಡೆಸುತ್ತಿದ್ದಾರೆ ಎಂದೂ, ಕಾಂಗ್ರೆಸ್ ಮುಸ್ಲಿಮರನ್ನು ಮಾತ್ರ ರಕ್ಷಿಸುತ್ತಿದೆ ಎಂದೂ ವದಂತಿ ಹಬ್ಬಿಸಲಾಯಿತು. ಆರೆಸ್ಸೆಸ್ ಆಗಲೂ, ಈಗಲೂ ಈ ವಿಷಯದಲ್ಲಿ ಎತ್ತಿದ ಕೈ.
ಆಗ ಉಂಟಾದ ಕಂದರ ವರ್ಷದಿಂದ ವರ್ಷಕ್ಕೆ ವಿಸ್ತಾರವಾಗುತ್ತಿದ್ದು, ಹಿಂದೂವಾದಿ ಸಂಘಟನೆಗಳು ಪ್ರಾಬಲ್ಯ ಹೆಚ್ಚಿಸುತ್ತಾ ಬಂದಿವೆ. ಒಂದು ಬಣ್ಣದ ಕೋಮುವಾದ ಇನ್ನೊಂದು ಬಣ್ಣದ ಕೋಮುವಾದವನ್ನು ಹುಟ್ಟುಹಾಕುತ್ತದೆ ಮತ್ತು ಅವು ಪರಸ್ಪರರ ಕಾರಣದಿಂದ ಬೆಳೆಯುತ್ತದೆ ಎಂಬುದಕ್ಕೆ ಸರಿಯಾಗಿ ಮುಸ್ಲಿಮರಲ್ಲಿಯೂ ಹಲವಾರು ಸಂಘಟನೆಗಳು ಹುಟ್ಟಿಕೊಂಡವು. ಇವುಗಳು ಕಾಂಗ್ರೆಸಿಗೆ ವಿರೋಧವಾಗಿದ್ದು, ತೀವ್ರಗಾಮಿ ನಿಲುವನ್ನು ಹೊಂದಿದ್ದವು. ಈಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳೆದುನಿಂತಿರುವ ಕೋಮುವಾದದ ಸಮಸ್ಯೆಯ ಮೂಲಕಾರಣ ಇರುವುದು ಇಲ್ಲಿಯೇ!
ಮತ್ತೆ 1979ರಲ್ಲಿ ಖ್ಯಾತ ಚಿತ್ರ ನಿರ್ದೇಶಕ, ಲೇಖಕ ವಿಶುಕುಮಾರ್ ಅವರ ಕನ್ನಡ ಚಿತ್ರ ‘ಕರಾವಳಿ’ಯ ಕಾರಣದಿಂದ ಗಲಭೆ ಉಂಟಾಯಿತು. ಅದು ಮೀನುಗಾರ ಮುಸ್ಲಿಂ ಯುವಕ ಮತ್ತು ಮೊಗವೀರ ಸಮುದಾಯದ ಮಹಿಳೆಯ ನಡುವಿನ ಪ್ರೇಮಕತೆಯಾಗಿದ್ದುದೇ ಇದಕ್ಕೆ ಕಾರಣ. ಈ ಗಲಭೆಗಳಲ್ಲಿ ಭಾಗವಹಿಸಿದವರಲ್ಲಿ ಬಿಲ್ಲವರೂ ಇದ್ದು, ಇದೇ ವಿಶುಕುಮಾರ್ ಅವರೇ ಬಿಲ್ಲವ ಅವಳಿ ವೀರರಾದ ಕೋಟಿ-ಚೆನ್ನಯರ ಸೂಪರ್ ಹಿಟ್ ಚಿತ್ರ ತೆಗೆದವರು ಎಂದೂ ಅವರು ನೋಡಲಿಲ್ಲ.
ಈ ಗಲಭೆಗಳು ಮಂಗಳೂರಿನ ಹೊಯ್ಗೆಬಜಾರ್, ಕುದ್ರೋಳಿ, ಬಂದರು ಮುಂತಾದ ಪ್ರದೇಶಗಳಲ್ಲಿ ತೀವ್ರವಾಗಿತ್ತು. ಈ ಘಟನೆಯಲ್ಲಿ ಕೆಲವರು ಪ್ರಾಣಕಳೆದುಕೊಂಡರು ಎಂದು ಹೇಳಲಾಗುತ್ತದೆಯಾದರೂ, ನಿಖರ ಮಾಹಿತಿ ಸದ್ಯಕ್ಕೆ ನನ್ನಲ್ಲಿ ಲಭ್ಯವಿಲ್ಲ. ಈ ಘಟನೆಯಲ್ಲಿ ಮುಸ್ಲಿಮರ ಮತ್ತು ಗೌಡ ಸಾರಸ್ವತ ಸಮುದಾಯದವರ ಹಲವಾರು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿತ್ತು ಎಂದು ಮಾಹಿತಿ ಸಿಗುತ್ತದೆ.
ಹಿಂದೆಲ್ಲಾ ಉಳ್ಳಾಲ ಪ್ರದೇಶವು ಕೋಮುಸೌಹಾರ್ದಕ್ಕೆ ಹೆಸರಾಗಿತ್ತು. ಇದಕ್ಕೆ ದೊಡ್ಡ ಇತಿಹಾಸವಿದ್ದು, ಆ ಕುರಿತು “ಬೊಗಸೆಗೆ ದಕ್ಕಿದ್ದು-16″ರಲ್ಲಿ ಬರೆದಿದ್ದೇನೆ. ಕೃಷ್ಣಜನ್ಮಾಷ್ಟಮಿಯ ಸಂದರ್ಭದಲ್ಲಿ ಮುಸ್ಲಿಮರು ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. 1980ರ ದಶಕದಲ್ಲಿ ಮಲ್ಲಕಂಭಕ್ಕೆ ಹಂದಿಯ ಕೊಬ್ಬನ್ನು ಸವರಲಾಗುತ್ತದೆ ಎಂದು ಇಂತಹಾ ಉತ್ಸವಗಳಲ್ಲಿ ಭಾಗವಹಿಸುವುದನ್ನು ‘ಶಿರ್ಕ್’ ಎಂದು ಕರೆಯುವ ಕೆಲವು ಅತಿಸಂಪ್ರದಾಯವಾದಿ ಮುಸ್ಲಿಮರು ಈ ವದಂತಿ ಹಬ್ಬಿಸಿದರು ಎಂದು ಸುದ್ದಿಯಾಗಿತ್ತು. ಆಗಿನಿಂದ ಮುಸ್ಲಿಮರ ಭಾಗವಹಿಸುವಿಕೆ ಕಡಿಮೆಯಾಗುತ್ತಾ ಹೋಯಿತು. ಇಂದು ಸಾಮಾನ್ಯ ಸ್ಥಿತಿಯಲ್ಲಿ ಹಿಂದೂ-ಮುಸ್ಲಿಮರು ಸೌಹಾರ್ದದಿಂದಲೇ ಸಹಬಾಳ್ವೆ ನಡೆಸುತ್ತಿದ್ದರೂ, ಸದಾ ಬೂದಿ ಮುಚ್ಚಿದ ಕೆಂಡದಂತೆ ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಅದು ಸ್ಫೋಟಕ ಸ್ಥಿತಿ ತಲಪುತ್ತದೆ. ಚುನಾವಣೆಗಳು ಹತ್ತಿರ ಬಂದಾಗ ಬೆಂಕಿ ಹಚ್ಚುವ ಸಂಸದರೂ, ಶಾಸಕರೂ, ದ್ವೇಷಪ್ರೇಮಿಗಳೂ ಒಂದು ಬೆಂಕಿ ಕಡ್ಡಿ ಹೊತ್ತಿಸಿದರೂ ಸಾಕು, ಅದು ಸಿಡಿಯುತ್ತದೆ.
ನಂತರ, 1989ರಲ್ಲಿ ಬೈಕಂಪಾಡಿ, ಹೊಸಬೆಟ್ಟು- ಹೀಗೆ ದಕ್ಷಿಣ ಕನ್ನಡದ ಕಡಲತಡಿಯ ಉದ್ದಕ್ಕೂ ಕೋಮುಗಲಭೆ ಉಂಟಾಗಿತ್ತಾದರೂ, ಅದು ಮುಖ್ಯವಾಗಿ ಭಾರೀ ಪ್ರಮಾಣದಲ್ಲಿ ಅಂಗಡಿಗಳ ಲೂಟಿ, ಬೆಂಕಿ ಹಚ್ಚುವಿಕೆ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಲ್ಲಿಯೇ ಕೊನೆಗೊಂಡಿತು. ಜೀವಹಾನಿಯೇನೂ ಆಗಲಿಲ್ಲ.
ನಂತರ ಸಣ್ಣಪುಟ್ಟ ಸಂಘರ್ಷಗಳು ಅಲ್ಲಲ್ಲಿ ನಡೆದೇ ಇದ್ದರೂ, ಇತಿಹಾಸದ ಅತೀ ದೊಡ್ಡ ಕೋಮುಗಲಭೆ ನಡೆದದ್ದು 1998-99ರಲ್ಲಿ. 1998ರ ಡಿಸೆಂಬರ್ 29ರಂದು ಆರಂಭವಾದ ಈ ಗಲಭೆ ಸುರತ್ಕಲ್ ಸಮೀಪದ ಚೊಕ್ಕಬೆಟ್ಟುವಿನಲ್ಲಿ ಆರಂಭವಾಗಿ ನಂತರದಲ್ಲಿ ಸುತ್ತಲಿನ ಕೃಷ್ಣಾಪುರ, ಬೈಕಂಪಾಡಿ, ಕುಳಾಯಿ, ಹೊಸಬೆಟ್ಟು, ತಡಂಬೈಲ್, ಕಾನ, ಕಾಟಿಪಳ್ಳ, ನಂತರ ಮಂಗಳೂರು ನಗರ, ಬಂಟ್ವಾಳ ಮತ್ತು ಪುತ್ತೂರು ತಾಲೂಕುಗಳಿಗೆ ವ್ಯಾಪಿಸಿತ್ತು. ಈ ಗಲಭೆಯಲ್ಲಿ ಎಂಟು ಮಂದಿ ಅಧಿಕೃತ ಮೂಲಗಳ ಪ್ರಕಾರ ಪ್ರಾಣ ಕಳೆದುಕೊಂಡಿದ್ದರು. ಇವರಲ್ಲಿ ಆರು ಮಂದಿ ಮುಸ್ಲಿಮರು ಮತ್ತು ಇಬ್ಬರು ಹಿಂದೂಗಳು. ಅನಧಿಕೃತ ವರದಿಗಳ ಪ್ರಕಾರ ಈ ಸಂಖ್ಯೆ 16 ಆಗಿತ್ತು. 100ಕ್ಕೂ ಹೆಚ್ಚು ಮಂದಿ ಮಾರಣಾಂತಿಕವಾಗಿ ಗಾಯಗೊಂಡಿದ್ದರು. ಮನೆಗೆ ನುಗ್ಗಿ ಹೆಂಗಸರು, ಮಕ್ಕಳು, ವೃದ್ಧರ ಮೇಲೆಯೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಅಮಾನುಷ ಘಟನೆಗಳೂ ನಡೆದಿದ್ದವು. ಘಟನೆಯಲ್ಲಿ ಭಾರೀ ಆಸ್ತಿಪಾಸ್ತಿ ಹಾನಿ ಸಂಭವಿಸಿದ್ದು, 165 ಮನೆಗಳನ್ನು ಧ್ವಂಸ ಮಾಡಲಾಗಿದ್ದು, ಇವುಗಳಲ್ಲಿ 98 ಮುಸ್ಲಿಮರು ಮತ್ತು 67 ಹಿಂದೂಗಳ ಮನೆಗಳಾಗಿದ್ದವು. ಮುಸ್ಲಿಮರ ನಾಲ್ಕು ಆರಾಧನಾ ಸ್ಥಳಗಳನ್ನು ಧ್ವಂಸ ಮಾಡಲಾಗಿತ್ತು. ಈ ಅಂಕಿ-ಅಂಶಗಳನ್ನು ನೀಡುತ್ತಿರುವ ಕಾರಣವೆಂದರೆ- ಕಾರಣ ಏನೇ ಇರಲಿ, ಯಾರೇ ಇರಲಿ- ಎರಡೂ ಕಡೆಗಳವರು ಧರ್ಮಗಳ ಹೆಸರಿನಲ್ಲಿ ಮನುಷ್ಯತ್ವ ಮರೆತು ನಾಯಿಗಳ ರೀತಿ ಕಾದಾಡಿದ್ದರು ಎಂಬುದನ್ನು ಸೂಚಿಸುವುದಾಗಿದೆ.
ಗಲಭೆ ಕಾರಣ ಕ್ಷುಲ್ಲಕವಾದದ್ದು. ಚೊಕ್ಕಬೆಟ್ಟುವಿನಲ್ಲಿ ಗುಜರಿ ಮಾರುವವನೊಬ್ಬ ಒಂದು ಮನೆಯಿಂದ ಗುಜರಿ ಕದ್ದಿದ್ದ. ಆತನನ್ನು ಹಿಡಿದ ಮನೆಯವರು, ನೆರೆಯವರು ಆತನಿಗೆ ಥಳಿಸಿದ್ದರು. ಇದು ಒಂದು ಸಮುದಾಯದ ಕೆಲವರು, ಕಲ್ಲೆಸೆತ ಆರಂಭಿಸುವುದಕ್ಕೆ ಕಾರಣವಾಗಿತ್ತು. ಆದರೆ, ಇದು ಕೇವಲ ನೆಪವಾಗಿತ್ತು. ಇದಕ್ಕಿಂತಲೂ ಮೊದಲು ಬೇರೆ ಮೂರು ಪ್ರತ್ಯೇಕ ಘಟನೆಗಳು ನಡೆದಿದ್ದವು.
1998ರ ನವೆಂಬರ್‌ನಲ್ಲಿ ಕುಳಾಯಿಯಲ್ಲಿ ಕ್ರೈಸ್ತರ ಸಣ್ಣ ಪಂಥವಾದ ಇವಾಂಜಲಿಕ್ (ಇವರು ಕೆಥೋಲಿಕ್ ಅಲ್ಲ) ಚರ್ಚಿಗೆ ನುಗ್ಗಿದ ಹಿಂದೂತ್ವವಾದಿಗಳು ರಾಜಾರೋಷವಾಗಿ ನುಗ್ಗಿ ಎಲ್ಲರನ್ನು ಥಳಿಸಿ, ಅದನ್ನು ಧ್ವಂಸಗೊಳಿಸಿದ್ದರು. ಇದು ದೇಶದಾದ್ಯಂತ ಕ್ರೈಸ್ತ ಧಾರ್ಮಿಕ ಸಂಸ್ಥೆಗಳ ಮೇಲೆ ನಡೆಯುತ್ತಿದ್ದ ದಾಳಿಗಳ ಭಾಗವಾಗಿತ್ತು. ಇಲ್ಲಿ ಆ ತನಕ ಕೆಥೋಲಿಕರ ಮೇಲೆ ಯಾವುದೇ ದಾಳಿಗಳು ನಡೆದಿರಲಿಲ್ಲವಾದರೂ (ನಂತರ ನಡೆದವು) ಇಂತಹಾ ಭಯಹುಟ್ಟಿಸುವ ಕೃತ್ಯ ಎಲ್ಲಾ ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಆತಂಕ ಸೃಷ್ಟಿಸಿತ್ತು.
ಇನ್ನೊಂದು ಘಟನೆ ಎಂದರೆ, ಮುಸ್ಲಿಂ ಹುಡುಗನೊಬ್ಬ ಹಿಂದೂ ಹುಡುಗಿಯನ್ನು ಚುಡಾಯಿಸಿದ ಎಂಬ ಆರೋಪದಲ್ಲಿ ಆತನಿಗೆ ಹಿಂದೂತ್ವವಾದಿಗಳ ಗುಂಪೊಂದು ಥಳಿಸಿದ್ದು. ಅದರ ಆರೋಪಿಗಳನ್ನು ಪೊಲೀಸರು ಬಂಧಿಸಿದಾಗ ಪೊಲೀಸರು ಪಕ್ಷಪಾತ ಮಾಡುತ್ತಿದ್ದಾರೆ ಎಂಬ ಆರೋಪ ಹೊರಿಸಲಾಗಿತ್ತು. ಪೊಲೀಸರ ಕೆಲಸವನ್ನು ತಾವೇ ಮಾಡುತ್ತೇವೆ, ತಮ್ಮನ್ನು ಅವರು ಬಂಧಿಸುವಂತಿಲ್ಲ ಎಂಬ ಮನೋಭಾವ ಹುಟ್ಟಿ ಇಂದಿನ ವರೆಗೆ ಬೆಳೆದುಬಂದಿರುವುದು ಬಹುಶಃ ಇದೇ ಘಟನೆಯಿಂದ. ಈ ಘಟನೆ ಕೂಡಾ ಕಂದರವನ್ನು ಆಳಗೊಳಿಸಿತ್ತು. ಮೋರಲ್ ಪೊಲೀಸಿಂಗ್ ಎಂಬ ನಾಜಿ ದುಷ್ಟ ವಿದ್ಯಮಾನದ ಆರಂಭ ಇಲ್ಲಿಯೇ ಆದುದು.
ಆಗಲೇ ಇನ್ನೊಂದು ಘಟನೆಯೂ ನಡೆದಿತ್ತು. ಸುರತ್ಕಲ್‌ನಲ್ಲಿ ಹಾಕಿದ್ದ ಯಕ್ಷಗಾನದ ಬ್ಯಾನರ್ ಒಂದನ್ನು ಕಿಡಿಗೇಡಿಗಳು ಹರಿದುಹಾಕಿದ್ದರು. ಆಗ ಉಂಟಾದ ಉದ್ವಿಗ್ನತೆಯಿಂದ ಯಕ್ಷಗಾನ ಪ್ರದರ್ಶನವೇ ನಿಂತಿತ್ತು. ಇದು ಕೂಡಾ ಧಾರ್ಮಿಕ ಭಾವನೆಗೆ ನೋವುಂಟುಮಾಡುವ ಕೆಲಸವೇ ಆಗಿತ್ತು. ಕೆಲವೇ ಕಿಡಿಗೇಡಿ ಕೃತ್ಯಗಳು, ಪರಿಸ್ಥಿತಿ ಅರಿಯುವುದರಲ್ಲಿ ಪೊಲೀಸ್ ಗುಪ್ತಚರ್ಯೆಯ ವೈಫಲ್ಯ, ಪೊಲೀಸರ ಕಾರ್ಯದಲ್ಲಿ ರಾಜಕಾರಣದ ಹಸ್ತಕ್ಷೇಪ, ಕಾನೂನನ್ನು ಕೈಗೆತ್ತಿಕೊಳ್ಳುವುದು ಇತ್ಯಾದಿಗಳು ಹೇಗೆ ಪರಿಸ್ಥಿತಿಯನ್ನು ಹದಗೆಡಿಸಬಲ್ಲವು ಎಂಬುದನ್ನು ಈ ಘಟನೆಗಳು ತೋರಿಸುತ್ತವೆ.
ಈ ಗಲಭೆ ಹರಡುವುದಕ್ಕೆ ವದಂತಿಗಳೂ ಕಾರಣವಾಗಿದ್ದವು. ಇವುಗಳನ್ನು ಹರಡುವುದಕ್ಕೆ ಎರಡೂ ಕಡೆಗಳ ರಾಜಕೀಯ ಹಿತಾಸಕ್ತಿಗಳ ಪ್ರೇರಣೆಯೂ ಇತ್ತು. ವದಂತಿಯ ಸ್ವರೂಪಗಳು ಉಳಿದ ಕಡೆಗಳಂತೆಯೇ ಇದ್ದವು; ಈಗಲೂ ಇವೆ. ‘ನಮ್ಮವರ’ ಮೇಲೆ ದಾಳಿ ಮಾಡುತ್ತಿದ್ದಾರೆ, ‘ನಮ್ಮವರ’ ಮನೆಗೆ ನುಗ್ಗಿ ಹೊಡೆದಿದ್ದಾರೆ, ನಮ್ಮ ಹೆಣ್ಣು ಮಕ್ಕಳ ಮೇಲೆ, ಅಕ್ಕತಂಗಿಯರ ಮೇಲೆ ಅತ್ಯಾಚಾರ ಮಾಡಿದ್ದಾರೆ, ‘ನಮ್ಮ’ ತಂದೆ ತಾಯಿಯ ಮೇಲೆ ಕೈ ಹಾಕಿದ್ದಾರೆ, ಪೊಲೀಸರು ಪಕ್ಷಪಾತದಿಂದ ವರ್ತಿಸುತ್ತಿದ್ದಾರೆ, ‘ನಮ್ಮವರಿಗೆ’ ಹೊಡೆದಿದ್ದಾರೆ- ಇವು ಹಿಂದೆ ಬಾಯಿಮಾತಿನ ಮೂಲಕ ನಡೆಯುತ್ತಿದ್ದವು, ಇಂದು ಸಾಮಾಜಿಕ ಜಾಲತಾಣಗಳ ಕಾರಣದಿಂದ ಕ್ಷಣಮಾತ್ರದಲ್ಲಿ ನಡೆಯುತ್ತಿವೆ.
ಇಲ್ಲಿ ಆರಂಭವಾದ ಗಲಭೆಗಳ ಪರಿಣಾಮ ಇಲ್ಲಿಗೇ ನಿಲ್ಲಲಿಲ್ಲ. ಸುರತ್ಕಲ್ ಪರಿಸರದಲ್ಲಿಯೇ ಹಲವಾರು ಕೊಲೆಗಳು, ಪ್ರತೀಕಾರಗಳು ನಂತರದ ವರ್ಷಗಳಲ್ಲಿ ನಡೆದವು, ಈಗಲೂ ಈ ಉದ್ವಿಗ್ನತೆ ಮುಂದುವರಿಯುತ್ತಿದೆ. ಆಗಾಗ ಬೆಂಕಿ ಹಚ್ಚಲಾಗುತ್ತಿದೆ. ಬಿಜೆಪಿ ಸಂಸದ, ಶಾಸಕರು ಮತ್ತು ಆರೆಸ್ಸೆಸ್ ಗಿರಾಕಿಗಳು ಅದರಲ್ಲಿ ಚಳಿಕಾಯಿಸುತ್ತಿದ್ದಾರೆ.