Thursday, November 7, 2024

ಸತ್ಯ | ನ್ಯಾಯ |ಧರ್ಮ

ಬೊಗಸೆಗೆ ದಕ್ಕಿದ್ದು – 39 : ಪ್ರಪಂಚದ ಎಲ್ಲೆಲ್ಲಾ ಮ್ಯಾಂಗಲೋರ್, ಮಂಗಳೂರು ಇದೆ ಗೊತ್ತೇ?

“…ಮಂಗಳೂರು ಎಂಬುದು- ಕನ್ನಡ ಮಾತನಾಡುವವರಿಗೆ ಮಾತ್ರ. ತುಳುವರಿಗೆ ಅದು ಇನ್ನೂ ಕುಡ್ಲವೇ. ಜಿಎಸ್‌ಬಿ ಕೊಂಕಣಿಗಳಿಗೆ ಅದು ಕೊಡಿಯಾಲ, ಕ್ರೈಸ್ತ ಕೊಂಕಣಿಗಳಿಗೆ ಮೆಂಗ್ಲೂರು, ಬ್ಯಾರಿಗಳಿಗೆ ಅದು ಮೈಕಾಲ, ಮಲಯಾಳಿಗಳಿಗೆ ಅದು ಮಂಗಳಾಪುರಂ, ಪೋರ್ಚುಗೀಸರೋ, ಅರಬರೋ ಗೊತ್ತಿಲ್ಲ- ಇದನ್ನು ಕರೆದದ್ದು ಮಂಜರೂನ್ ಎಂದು…” ನಿಖಿಲ್ ಕೋಲ್ಪೆಯವರ ಬರಹದಲ್ಲಿ

ತುಳುವರು ಕುಡ್ಲ ಎಂದು ಕರೆಯುವ ಮಂಗಳೂರಿಗೆ “ಮಂಗಳೂರು” ಎಂಬ ಹೆಸರಿಟ್ಟವರು ಪುರೋಹಿತರು. ಮಂಗಳಾದೇವಿ ದೇವಸ್ಥಾನ ಇರುವುದರಿಂದ ಆ ಹೆಸರು ಬಂತು ಎಂದು ಅವರು ಹೇಳಿದ್ದನ್ನು ಎಲ್ಲರೂ ನಂಬುತ್ತಾರೆ. ಅವರು ಹೇಳುವ ಮಂಗಳಾದೇವಿ ದೇವಸ್ಥಾನದ ಇತಿಹಾಸವೇ ಪುರಾಣವಾಗಿದೆ. ಐತಿಹಾಸಿಕವಾಗಿ ಈ ದೇವಾಲಯವನ್ನು ಆಲುಪ ಅರಸ ಕುಂದವರ್ಮ ಎಂಬಾತ 10ನೇ ಶತಮಾನದ ಕೊನೆಯ ಭಾಗದಲ್ಲಿ ಕಟ್ಟಿಸಿದ ಎಂದು ಹೇಳಲಾಗುತ್ತದೆ. ಈ ದೇವಾಲಯದ ಜೊತೆ ಸಂಬಂಧ ಇರುವ ಕದ್ರಿ ದೇವಸ್ಥಾನದ ಎದುರಿನ ಕದ್ರಿಗುಡ್ಡದಲ್ಲಿ ನೆಲೆಯಾಗಿರುವ, ಉತ್ತರದಿಂದ ಬಂದ ನಾಥ ಪಂಥದ ಇಬ್ಬರು ಸನ್ಯಾಸಿಗಳಾದ ಗೋರಖನಾಥ ಮತ್ತು ಮಚ್ಛೇಂದ್ರನಾಥ ಅವರ ಉಪಸ್ಥಿತಿಯಲ್ಲಿ ಆ ರಾಜ ಈ ದೇವಸ್ಥಾನ ಕಟ್ಟಿಸಿದ ಎಂದೂ ಹೇಳಲಾಗುತ್ತದೆ. ಇದು ನಿಜವಿರಬಹುದು. ಎರಡೂ ದೇವಾಲಯಗಳ ನಡುವೆ ಇಂದೂ ಕೊಡುಕೊಳ್ಳುವಿಕೆಯಿದೆ. ಕದ್ರಿ ಮಂಜುನಾಥ ದೇವಾಲಯವು ಹಿಂದೆ ಬೌದ್ಧ ದೇವಾಲಯಗಿತ್ತು ಎಂದು ದಿವಂಗತರಾದ ಡಾ. ಶಿವರಾಮ ಕಾರಂತರೂ, ಡಾ. ಅಮೃತ ಸೋಮೇಶ್ವರರೂ ಬಹಳ ಹಿಂದೆಯೇ ಪ್ರತಿಪಾದಿಸಿದ್ದರು. ಒಳಗಿದ್ದ ಕಲ್ಲಿನ ವಿಗ್ರಹವನ್ನು ಎಸೆಯಲಾಗದೆ, ದೇವಸ್ಥಾನದ ದ್ವಾರದ ಬಳಿ ಇರಿಸಲಾಗಿತ್ತು. ಈ ವಿಗ್ರಹ ಅವಲೋಕಿತೇಶ್ವರನದ್ದು (ಬುದ್ಧ) ಎಂದು ಅವರಿಬ್ಬರಲ್ಲದೆ ಕೆಲವು ಇತಿಹಾಸ ತಜ್ಞರೂ ಹೇಳಿದ್ದಾರೆ. ಇದನ್ನು ಮಾಡಿದ್ದು ಉತ್ತರ ಪ್ರದೇಶದ ಗೋರಖಪುರದಿಂದ ಬಂದ ನಾಥ ಪಂಥದವರೇ ಎಂದೂ ಹೇಳಲಾಗಿದೆ. ಹಾಗಾಗಿ ಕಾಲ ಸರಿಸುಮಾರು ಒಂದೇ ಆಗಿರಬಹುದು.

ಆದರೆ, ಈ ಪುರೋಹಿತರ “ಇತಿಹಾಸ” ಬೇರೆಯೇ! ಅದು ಎಲ್ಲಾ ಊರುಗಳ ಹೆಸರುಗಳನ್ನು ದೇವಸ್ಥಾನಗಳಿಗೆ ಥಳಕುಹಾಕುವುದು ಪುರೋಹಿತರ ಹಳೆಯ ಚಾಳಿ. ಸಾವಿರಾರು ಸ್ಥಳಪುರಾಣಗಳೆಂಬ ಕಟ್ಟು ಕತೆಗಳು ಹುಟ್ಟಿದ್ದು ಹೀಗೆಯೇ. ಇಲ್ಲಿನ ಕತೆ ಎಂದರೆ, ಇಲ್ಲಿಯ ನೇತ್ರಾವತಿ ನದಿ ಕಪಿಲ ಮಹರ್ಷಿಯ ವಾಸಸ್ಥಾನವಾಗಿತ್ತಂತೆ. ಸಮುದ್ರರಾಜನನ್ನು ಕೊಡಲಿ ಎಸೆದು ಹಿಂದೆ ಸರಿಸಿ “ಸೃಷ್ಟಿಸಿದ” ಪರಶುರಾಮ ಮತ್ತು ಕಪಿಲನನ್ನು ಭೇಟಿಯಾದ ರಾಜನ ಭಕ್ತಿಗೆ ಮೆಚ್ಚಿದ ಅವರು, ಹಿಂದೆ ದೇವಿಯು ಯಾರೋ ರಾಕ್ಷಸನನ್ನು ಕೊಂದ ಜಾಗ ಇದೇ ಎಂದೂ, ಇಲ್ಲಿ ಅಗೆದರೆ ಶಿವಲಿಂಗ ಸಿಗುತ್ತದೆ, ಇಲ್ಲಿ ಅಲ್ಲಿ ದೇವಸ್ಥಾನ ಕಟ್ಟಿಸು ಎಂದು ಹೇಳಿದರೆಂದೂ, ರಾಜನು ಹಾಗೆಯೇ ಮಾಡಿದ ಎಂದೂ ಈ ಕತೆ ಹೇಳುತ್ತದೆ. ಹತ್ತನೇ ಶತಮಾನದ ರಾಜ, ಪುರಾಣದ ಕಪಿಲ ಮತ್ತು ಪರಶುರಾಮನನ್ನು ಹೇಗೆ ಭೇಟಿಯಾದ? ಚಂದಮಾಮ ಕತೆಗಳು ನಾಚಿ ನೀರಾಗಬೇಕು!

ಇನ್ನೊಂದು ಐತಿಹ್ಯ ಎಂದರೆ, ಕೇರಳದ ಮಲಬಾರಿನ ರಾಜಕುಮಾರಿ ಪರಿಮಳಾ ಅಥವಾ ಪ್ರೇಮಲಾದೇವಿ ಎಂಬಾಕೆ ರಾಜ್ಯತ್ಯಾಗ ಮಾಡಿ, ನಾಥ ಪಂಥದ ಮತ್ಸ್ಯೇಂದ್ರನಾಥನ ಶಿಷ್ಯೆಯಾದಳಂತೆ. ಅವನು ಅವಳಿಗೆ ಮಂಗಳಾದೇವಿ ಎಂದು ಹೆಸರಿಟ್ಟನಂತೆ. ಇಲ್ಲಿ ಮಚ್ಚೇಂದ್ರನಾಥ- ಮತ್ಸ್ಯೇಂದ್ರನಾಥನಾದ ವಿಷಯ ಗಮನಿಸಿ- ಹಿಂದಿಯ ಮೀನು ಮಚ್ಚಿ- ಸಂಸ್ಕೃತದಲ್ಲಿ ಮತ್ಸ್ಯ. ಏನಿದ್ದರೂ, ದೇವಸ್ಥಾನಕ್ಕೆ ಅವಳ ಹೆಸರನ್ನು ಇವರು ಇಟ್ಟದ್ದು ಯಾಕೆ? ಆದರೆ, ಇಲ್ಲಿ ಕೇರಳೀಯ ವಾಸ್ತುಶೈಲಿ ಇರುವುದು ನಿಜ. ಬಾಲ್ಯದಲ್ಲಿಂದ ಹಿಡಿದು ಯೌವನದ ವರೆಗೆ ಈ ದೇವಸ್ಥಾನಕ್ಕೆ ಹೋಗಿರುವ ನಾನು ಮನಗಂಡಿದ್ದೇನೆ. ತಜ್ಞರೂ ಹೇಳಿದ್ದಾರೆ. ಲೋಹದ ತಗಡುಗಳನ್ನು ಹೊದಿಸಿದ್ದ, ಆವರಣ ಹೊಂದಿದ್ದ ದೇವಾಲಯವೀಗ ಮಿಶ್ರ ಶೈಲಿಯ ಆಧುನಿಕ ಗೋಪುರಗಳನ್ನು ಹೊಂದಿದೆ. ಮೂಲ ಯಾರ ಕಣ್ಣಿಗೂ ಬೀಳದಂತೆ ಮರೆಯಾಗಿದೆ. ಆಲುಪ ಅರಸ ಕೇರಳ ಶೈಲಿಯಲ್ಲಿ ಯಾಕೆ ದೇವಸ್ಥಾನ ಕಟ್ಟಿಸಿದ? ಒಂದು ದೇವಳಕ್ಕೆ ಒಂದು ಕೇರಳದ ರಾಜಕುಮಾರಿಯ ಹೆಸರು ಇಟ್ಟದ್ದು ಯಾಕೆ? ನೂರಾರು ವರ್ಷಗಳಿಂದ ಇರುವ ಈ ಊರಿಗೆ ದೇವಸ್ಥಾನದ ಪ್ರಭಾವದ ಹೆಸರು ಬಂದದ್ದು ಹೇಗೆ? ಕದ್ರಿ, ಶರವು ಮುಂತಾದ ಅದಕ್ಕಿಂತಲೂ ಪುರಾತನ ದೇವಾಲಯಗಳ ಪ್ರಭಾವದ ಹೆಸರುಗಳು ಯಾಕೆ ಬರಲಿಲ್ಲ? ಮೇಲಾಗಿ ಈ ದೇವಾಲಯ ಇರುವುದೇ ನಾನು ಹುಟ್ಟಿದ ಬೋಳಾರದಲ್ಲಿ! ಮಂಗಳಾದೇವಿ ವಾಸ್ತವದಲ್ಲಿ ಒಂದು ಸಾವಿರಾರು ಭಕ್ತರು ಇರುವ ಒಂದು ಸಿಟಿ ಬಸ್ ಸ್ಟಾಪ್ ಮಾತ್ರ!

ಇವರೆಷ್ಟೇ ಸರ್ಕಸ್ ಮಾಡಲಿ; ಮಂಗಳೂರು ಎಂಬುದು- ಕನ್ನಡ ಮಾತನಾಡುವವರಿಗೆ ಮಾತ್ರ. ತುಳುವರಿಗೆ ಅದು ಇನ್ನೂ ಕುಡ್ಲವೇ. ಜಿಎಸ್‌ಬಿ ಕೊಂಕಣಿಗಳಿಗೆ ಅದು ಕೊಡಿಯಾಲ, ಕ್ರೈಸ್ತ ಕೊಂಕಣಿಗಳಿಗೆ ಮೆಂಗ್ಲೂರು, ಬ್ಯಾರಿಗಳಿಗೆ ಅದು ಮೈಕಾಲ, ಮಲಯಾಳಿಗಳಿಗೆ ಅದು ಮಂಗಳಾಪುರಂ, ಪೋರ್ಚುಗೀಸರೋ, ಅರಬರೋ ಗೊತ್ತಿಲ್ಲ- ಇದನ್ನು ಕರೆದದ್ದು ಮಂಜರೂನ್ ಎಂದು. ಮಂಗಳೂರಿನಲ್ಲಿದ್ದ ಮೊದಲ ಫೈವ್ ಸ್ಟಾರ್ ಹೊಟೇಲಿಗೆ ಅದೇ ಹೆಸರಿತ್ತು! ಆದರೆ, ಬ್ರಿಟಿಷರು ಇದನ್ನು ತಮ್ಮ ನಾಲಗೆ ಹೊರಳದ್ದಕ್ಕೆ ಕರೆದದದ್ದು ಮ್ಯಾಂಗಲೋರ್ ಎಂದು. ಇಂಗ್ಲೀಷ್ ಶಿಕ್ಷಣ ಪಡೆದವರ ಎರಡು ಮೂರು ತಲೆಮಾರು ಕೂಡ ಅದನ್ನು ಮ್ಯಾಂಗ್ಲೋರ್ ಎಂದು ಕರೆಯುತ್ತಿತ್ತು. ಈಗಲೂ ಕರೆಯುತ್ತಿದೆ.

ಏಳು ಹೆಸರುಗಳ ನಗರ ಪ್ರಪಂಚದಲ್ಲಿ ಬೇರೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಮಂಗಳೂರು ಹೆಸರಿನ ಜಾಗಗಳು ಭಾರತದಲ್ಲಿ ಕೆಲವಿವೆ. ಆದರೆ, Mangalore ಮತ್ತು ಮಂಗಳೂರು ಎಂಬ ಹೆಸರಿನ ಪಟ್ಟಣಗಳು, ರಸ್ತೆಗಳು, ರಿಸರ್ವ್‌ ಪಾರ್ಕ್‌ಗಳು, ವಸತಿ ಬಡಾವಣೆಗಳು ಪ್ರಪಂಚದ ಎಲ್ಲೆಡೆ ಇವೆ ಎಂದರೆ ಹಲವರಿಗೆ ಆಶ್ಚರ್ಯ ಆಗಬಹುದು. ಇಂಗ್ಲೆಂಡ್, ಸ್ಪೇನ್, ಫ್ರಾನ್ಸ್ ಮುಂತಾದ ದೇಶಗಳವರು ವಸಾಹತು ದೇಶಗಳಲ್ಲಿ ತಮ್ಮದೇ ಮೂಲ ಊರುಗಳ ಹೆಸರಿಟ್ಟಿದ್ದಾರೆ. ಒಳ್ಳೆಯ ಉದಾಹರಣೆ ಎಂದರೆ, ಇಂಗ್ಲೆಂಡಿನ ಯಾರ್ಕ್ ಮತ್ತು,ಯುಎಸ್ಎಯ ನ್ಯೂಯಾರ್ಕ್, ಇಂಗ್ಲೆಂಡಿನ ವೇಲ್ಸ್- ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್. ಭಾರತದಲ್ಲೂ ನೋಡಿ- ಕಬ್ಬನ್ ಪಾರ್ಕ್, ಕರ್ಜನ್ ರೋಡ್ ಇತ್ಯಾದಿ. ಆದರೆ, ಅವರು ತಮ್ಮ ಹುಟ್ಟಿದ ನಾಡಲ್ಲದ, ಕೆಲಸ ಮಾಡಿದ ನಾಡಿನ ಹೆಸರನ್ನು ಇಟ್ಟಿದ್ದಾರೆಯೇ? ಇಟ್ಟಿದ್ದಾರೆ.

ದಕ್ಷಿಣ ಆಸ್ಟ್ರೇಲಿಯಾದ ವಿಕ್ಟೋರಿಯಾ ಪ್ರಾಂತ್ಯದ ಸ್ಟ್ರಾತ್‌ಬೂಗಿ ಶೈರ್ (ಶಹರ್?)ನ ಒಂದು ಪಟ್ಟಣ ಹೆಸರು: ಮ್ಯಾಂಗಲೋರ್ (Mangalore). ಇದನ್ನು ದಕ್ಷಿಣ ಕನ್ನಡದ ಮಂಳೂರಿನ ಹೆಸರನ್ನು ಅನುಸರಿಸಿಯೇ ಇಡಲಾಗಿದೆ ಎಂದು ಸ್ಥಳೀಯಾಡಳಿತ ಗಜೆಟ್ ಪ್ರಕಟಣೆಯೊಂದನ್ನು ಹೊಡಿಸಿದೆಯಂತೆ. 1867ರಲ್ಲಿ ಅಂದರೆ, ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಅಥವಾ ಸಿಪಾಯಯಿದಂಗೆ ನಡೆದ ಭರ್ತಿ ಹತ್ತು ವರ್ಷಗಳ ನಂತರ ಈ ಪಟ್ಟಣದ ಸ್ಥಾಪನೆಯಾಯಿತು. ಇಲ್ಲಿ 2022ರ ಜನಗಣತಿಯ ಪ್ರಕಾರ, 308 ಮಂದಿ ವಾಸವಾಗಿದ್ದಾರೆ. ಭಾರತದಲ್ಲಿ ಒಂದು ವರ್ಷದಲ್ಲಿ ಹುಟ್ಟುವ ಮಕ್ಕಳ ಸಂಖ್ಯೆಯಷ್ಟೇ ಒಟ್ಟು ಜನಸಂಖ್ಯೆ ಹೊಂದಿರುವ ಆಸ್ಟ್ರೇಲಿಯಾದಲ್ಲಿ ಇದು ಗಮನಾರ್ಹ ಸಂಖ್ಯೆಯೇ.

ಕೃಷಿ ಮತ್ತು ದ್ರಾಕ್ಷಿಯ ವೈನ್ ತಯಾರಿಕೆ ಇಲ್ಲಿನ ಮುಖ್ಯ ಉದ್ಯೋಗ. ಜೊತೆಗೆ ಗ್ರಾಮೀಣ ಪ್ರವಾಸೋದ್ಯಮ ಕೂಡಾ ಒಂದ ಪ್ರಮುಖ ಆದಾಯ ಮೂಲ. ಆಸ್ಟ್ರೇಲಿಯಾ ಅಷ್ಟು ದೊಡ್ಡ ಖಂಡವಾಗಿದ್ದರೂ ಪೂರ್ವ, ಪಶ್ಚಿಮ ದಕ್ಷಿಣ ಮತ್ತು. ಉತ್ತರ ಕರಾವಳಿಗಳ ಚಿಕ್ಕ ಭಾಗದಲ್ಲಿಯೇ ಹೆಚ್ಚಿನ ಜನವಸತಿ ಇದ್ದು, ಉಳಿದ ಭಾಗಗಳು ಬಹುತೇಕ ಮರಳುಭೂಮಿ ಆಗಿದ್ದು, ಜನಸಂಖ್ಯೆ ತೀರಾ ವಿರಳವಾಗಿರುವುದರಿಂದ ಮತ್ತು ಹೆಚ್ಚಿವರು ನಗರಗಳಲ್ಲೇ ವಾಸವಾಗಿರುವುದರಿಂದ, ಬಹಳಷ್ಟು ಮಂದಿ ಗ್ರಾಮೀಣ ಜೀವನವನ್ನು ಹತ್ತಿರದಿಂದ ನೋಡಲು ಇಲ್ಲಿಗೆ ಬರುತ್ತಾರೆ. ಜೊತೆಗೆ ಹತ್ತಿರದಲ್ಲಿಯೇ ನಗಾಂಬಿ ಸರೋವರವೂ ಇರುವುದು ಇನ್ನೊಂದು ಆಕರ್ಷಣೆ.

ಇಲ್ಲಿ ಮ್ಯಾಗಲೋರ್ ರೈಲು ನಿಲ್ದಾಣವೂ ಇತ್ತು. ಈಶಾನ್ಯ ಆಸ್ಟ್ರೇಲಿಯಾದ ಅಲ್ಬರಿಗೆ ಹೋಗುವ ರೈಲು ಹಾದಿಯಲ್ಲಿ ಇದು ಇದ್ದು, 1989ರಲ್ಲಿ ಜಂಕ್ಷನನ್ನು ಹತ್ತಿರದ ಸೈಮೋರ್‌ಗೆ ಸ್ಥಳಾಂತರಿಸಿದುದರಿಂದ ಅದನ್ನು ಮುಚ್ಚಲಾಯಿತು. ಇಲ್ಲಿ ಒಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಇದೆ. ಎರಡನೇ ಮಹಾಯುದ್ಧದ ಕಾಲದಲ್ಲಿ ಇದನ್ನು ನಿರ್ಮಿಸಲಾಗಿತ್ತು. ನಂತರ ಇದನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸಲಾಯಿತು. ಇದನ್ನು ಸಾಮಾನ್ಯವಾಗಿ ಒಂದು ವೇಳೆ ಹತ್ತಿದ ಮೆಲ್ಬೋರ್ನ್ ವಿಮಾನ ನಿಲ್ದಾಣವು ಹವಾಮಾನ ಮತ್ತಿತರ ಕಾರಣಗಳಿಂದ ಅಲಭ್ಯವಾದರೆ, ಬಳಸಲಾಗುತ್ತದೆ. ಪ್ರವಾಸೋದ್ಯಮದ ಕಾರಣ ಇಲ್ಲಿ ಅನೇಕ ಐಷಾರಾಮಿ ಹೊಟೇಲುಗಳೂ ಇವೆ. ಅವುಗಳಲ್ಲಿ ದೊಡ್ಡ ಹೋಟೇಲಿನ ಹೆಸರು ಕೂಡಾ ಮ್ಯಾಂಗಲೋರ್! ಈ ಪಟ್ಟಣವು ಚಿತ್ರಗಳಲ್ಲಿ ನಮ್ಮ ನಗರಗಳ ಅನೇಕ ಬಡಾವಣೆಗಳಿಗಿಂತ ಸುಂದರವಾಗಿ ಕಾಣುತ್ತದೆ.

ಇದರ ಸ್ಥಾಪಕ ನೆಲ್‌ಫೋಕ್ ದ್ವೀಪದಲ್ಲಿ ಅಪರಾಧಿಗಳ ಕಾಲನಿಯ ಕಮಾಂಡೆಂಟ್ ಆಗಿದ್ದ ಲೆಫ್ಟಿನೆಂಟ್ ಕರ್ನಲ್ ಜೋಸೆಫ್ ಆಂಡರ್ಸನ್. ಈತ 1838ರಲ್ಲಿಯೇ 85,000 ಎಕರೆ ಜಮೀನು ಖರೀದಿಸಿದ. ಹತ್ತಿರದಲ್ಲೇ ಚಿನ್ನದ ನಿಕ್ಷೇಪಗಳು ಪತ್ತೆಯಾಗಿ, ವಲಸಿಗರು ಇತ್ತ ನುಗ್ಗಿ ಬಂದುದರಿಂದ ಅಲ್ಲಿ ಪಟ್ಟಣ ಬೆಳೆಯಿತು. ಜೋಸೆಫ್‌ನ ಸಹೋದರ, ಜನರಲ್ ಜಾನ್ ಆಂಡರ್ಸನ್, ಮಂಗಳೂರಿನಲ್ಲಿ ಬ್ರಿಟಿಷ್ ಸೇನೆಯ ಕಮಾಂಡರ್ ಆಗಿದ್ದ. ಆ ನೆನಪಿನಲ್ಲಿ ಈ ಪಟ್ಟಣಕ್ಕೆ ಮ್ಯಾಂಗಲೋರ್ ಎಂದು ಹೆಸರಿಡಲಾಯಿತು.

ಹಿಂದಿನಿಂದಲೂ ಕುತೂಹಲಕ್ಕಾಗಿ ಭೂಪಟಗಳನ್ನು ಗಂಟೆಗಟ್ಟಲೆ ನೋಡುವ ಹವ್ಯಾಸವಿದ್ದ ನಾನು, ಕೆಲವರ್ಷಗಳ ಹಿಂದೆ ಗೂಗಲ್ ಅರ್ಥ್‌ನಲ್ಲಿ ಮುಳುಗಿದ್ದಾಗ ಈ ಮ್ಯಾಂಗಲೋರ್ ಪತ್ತೆಯಾಗಿ ಅಚ್ಚರಿ ಉಂಟಾಗಿತ್ತು. ಕೆಲಸಮಯದ ಹಿಂದೆ ಇದು ನೆನಪಿಗೆ ಬಂದು ಹುಡುಕಾಡಿದಾಗ ಇನ್ನಷ್ಟು ಅಚ್ಚರಿ ಕಾದಿತ್ತು. ಪ್ರಪಂಚದ ಹಲವು ಕಡೆಗಳಲ್ಲಿ ಮಂಗಳೂರು ಅಥವಾ ಮ್ಯಾಂಗಲೋರ್ ಪಟ್ಟಣ, ರಕ್ಷಿತ ಪಾರ್ಕ್, ರಸ್ತೆಗಳು ಮತ್ತು ಬಡಾವಣೆಗಳು ಇವೆ! ಇವೆಲ್ಲವೂ ನಾನು ಹುಡುಕಿ ಕಂಡುಕೊಂಡ ವಿಷಯಗಳೇ ಆಗಿದ್ದು, ನನ್ನ ವೈಯುಕ್ತಿಕ ಜ್ಞಾನವೇನಲ್ಲ.

ಆಸ್ಟ್ರೇಲಿಯಾದ ದಕ್ಷಿಣದಲ್ಲಿರುವ ಟಾಸ್ಮೇನಿಯಾ ದ್ವೀಪ ಪ್ರಾಂತ್ಯದಲ್ಲಿ, ದಕ್ಷಿಣ ಮಿಡ್‌ಲ್ಯಾಂಡ್ ಕೌನ್ಸಿಲ್‌ನಲ್ಲಿಯೂ ಒಂದು ಮ್ಯಾಂಗಲೋರ್ ಇದೆ. ಇದರ ಸ್ಥಾಪನೆಯಾದದ್ದು ವಿಕ್ಟೋರಿಯಾದ ಮ್ಯಾಂಗಲೋರ್ ಸ್ಥಾಪನೆಯಾದುದಕ್ಕಿಂತಲು ಬಹಳ ಮೊದಲು, ಅಂದರೆ, 1820ರ ದಶಕದಲ್ಲಿ. ಇದನ್ನು ಕೂಡಾ ಕರ್ನಾಟಕದ ಮಂಗಳೂರಿನ ನೆನಪಲ್ಲೇ ಸ್ಥಾಪಿಸಲಾಗಿದ್ದು, ಬಹುಶಃ ಇಲ್ಲಿ ಇದ್ದು, ಅಥವಾ ಬಂದರಾಗಿರುವ ಮಂಗಳೂರಿನ ಜೊತೆಗೆ ವ್ಯಾಪಾರಿ, ವಾಣಿಜ್ಯ ಸಂಬಂಧ ಹೊಂದಿದ್ದ ಯುರೋಪಿಯನ್ ಯಾರೋ ಈ ಪಟ್ಟಣವನ್ನು ಕಟ್ಟಿಸಿರಬಹುದು. ಒಂದು ಕಡೆ ಫ್ರೆಂಚ್ ಕುಟುಂಬವೊಂದು ಇದನ್ನು ಸ್ಥಾಪಿಸಿದೆ ಎಂದು ನೋಡಿದೆ. ಫ್ರೆಂಚರು ಕೂಡಾ ಇಲ್ಲಿ ಇದ್ದು, ಟಿಪ್ಪುಸುಲ್ತಾನ್ ಜೊತೆ ನಿಕಟ ಸಂಪರ್ಕ ಹೊಂದಿದ್ದುದನ್ನು ಇಲ್ಲಿ ನೆನಪಿಸಬಹುದು. ಭಾರತದಿಂದ ಬಂದ ಬ್ರಿಟಿಷ್ ವಲಸಿಗರು ಇದನ್ನು ಸ್ಥಾಪಿಸಿದ್ದು ಎಂದೂ ಹೇಳಲಾಗುತ್ತದೆ. ಹತ್ತಿರವೇ ಸ್ಟೋನರರ್ ಸಂರಕ್ಷಿತ ಪ್ರದೇಶವಿದ್ದು, ಗ್ರಾಮೀಣ ಪ್ರವಾಸಿಗಳನ್ನು ಆಕರ್ಷಿಸುತ್ತಿದೆ. 2008ರ ಜನಗಣತಿಯ ಪ್ರಕಾರ, ಇಲ್ಲಿನ ಜನಸಂಖ್ಯೆ 422 ಮತ್ತು 2021ರ ಜನಗಣತಿ ಪ್ರಕಾರ, ಇಲ್ಲಿನ ಜನಸಂಖ್ಯೆ 243. ಹೆಚ್ಚಿನ ಜನರು ನಗರಗಳತ್ತ ವಲಸೆ ಹೋಗುತ್ತಿದ್ದಾರೆ ಎಂದು ಇದರ ಅರ್ಥ. ಬಹುತೇಕ ಬರಡು ಆಸ್ಟ್ರೇಲಿಯಾದಲ್ಲಿ ಕೇವಲ ಐದಾರು ಜನರನ್ನು ಹೊಂದಿರುವ ಕೆಲವು ಸಾವಿರ ಎಕರೆ ವಿಸ್ತೀರ್ಣದ ಖಾಸಗಿ ಪಶುಪಾಲನಾ ಪ್ರದೇಶಗಳಿವೆ ಮತ್ತು ಇಲ್ಲಿಗೆ ತಿಂಗಳಿಗೆ ಅಗತ್ಯ ವಸ್ತುಗಳು, ವೈದ್ಯಕೀಯ ತುರ್ತುಸ್ಥಿತಿಯಲ್ಲಿ ಲಭ್ಯವಾಗುವ ಚಿಕ್ಕ ವಿಮಾನ ಸೇವೆಗಳ ಸೌಲಭ್ಯಗಳಿವೆ, ಸ್ಥಳೀಯ ರೇಡಿಯೋ ಸ್ಟೇಷನ್‌‌ಗಳೇ ಇವರ ಸಂಪರ್ಕದ ಮಾಧ್ಯಮ ಎಂಬುದನ್ನು ಗಮನಿಸಿದಾಗ ಈ ಜನಸಂಖ್ಯೆ ಚಿಕ್ಕದೆನಿಸದು. ಬಹುದೊಡ್ಡ ಕೃಷಿಭೂಮಿಯನ್ನು ಇದು ಹೊಂದಿದೆ. ಲೆಕ್ಕ- ನೂರಾರು ಎಕರೆಗಳಲ್ಲಿ!

ಇನ್ನೊಂದು ಮ್ಯಾಂಗಲೋರ್ ಇರುವುದು ನ್ಯೂಜಿಲ್ಯಾಂಡ್‌ನ ಹೋಬಾರ್ಟ್ ಬಳಿಯ ವೈಕಾಟೋ ಪ್ರದೇಶದಲ್ಲಿ. ಇದು ಹ್ಯಾಮಿಲ್ಟನ್ ನಗರದ ಹೊರವಲಯದಲ್ಲಿ ಇರುವುದರಿಂದ ನಿರ್ದಿಷ್ಟ ಜನಸಂಖ್ಯೆ ಪ್ರತ್ಯೇಕವಾಗಿ ತಿಳಿಯದು. ಇದನ್ನು ಭಾರತದಿಂದ ಬಂದು ನೆಲೆನಿಂತ ಬ್ರಿಟಿಷ್ ಅಥವಾ ಐರಿಷ್ ಜನರೇ ಸ್ಥಾಪಿಸಿದರು ಎಂದಿದ್ದರೂ, ನಿರ್ದಿಷ್ಟ ಇತಿಹಾಸ ತಿಳಿಯಲಾಗಿಲ್ಲವಾದರೂ, ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಎಂದು ಸ್ಥಾಪನೆಯ ಕಾಲಂದಾಜು ಮಾಡಲಾಗಿದೆ. 1820ರಲ್ಲಿ ಅವರು ಹೋಬಾರ್ಟ್ ನಗರವನ್ನು ಕಟ್ಟಿದ್ದರು ಎಂಬುದು ಗಮನಾರ್ಹ .ಇಲ್ಲಿನ ಕೃಷಿಯೇ ಈ ಪ್ರದೇಶದಲ್ಲಿ ಪ್ರಾಧಾನ್ಯ ಪಡೆದಿದೆಯಂತೆ. ಹತ್ತಿರದಲ್ಲೇ ಜೋರ್ಡಾನ್ ಹೆಸರಿನ ನದಿ ಹರಿಯುತ್ತಿರುವುದು ಅದಕ್ಕೆ ಕಾರಣವಿರಬಹುದು. 1870ರಲ್ಲಿ ಇಲ್ಲಿಗೆ ರೈಲ್ವೇ ಬಂದಿತ್ತು. 1970ರಲ್ಲಿ ಈ ಹೆಸರು ಕರ್ನಾಟಕದ ಮಂಗಳೂರು ಮೂಲದ್ದು ಎಂದು ಸ್ಥಳೀಯಾಡಳಿತವು ಗೆಜೆಟ್ ಪ್ರಕಟಣೆಯೊಂದನ್ನು ಹೊರಡಿಸಿತ್ತು. 2016ರ ಜನಗಣತಿ ಪ್ರಕಾರ ಇಲ್ಲಿನ ಜನಸಂಖ್ಯೆ 422. ಇಲ್ಲಿ 1891ರಿಂದ ಮ್ಯಾಂಗಲೋರ್ ಪೋಸ್ಟ್ ಆಫೀಸು ಇದ್ದು, 1969ರಲ್ಲಿ ಮುಚ್ಚಿತು. ಇಲ್ಲಿ ಇರಾಕ್ ರಾಜದಾನಿ ಬಗ್ದಾದ್ ಹೆಸರಿನ ಪಟ್ಟಣವೂ ಪಕ್ಕದಲ್ಲೇ ಇದೆ.

ನ್ಯೂಜಿಲ್ಯಾಂಡ್‌ನ ಉತ್ತರ ದ್ವೀಪದ ವಾಯವ್ಯ ಭಾಗದಲ್ಲಿ ಶನ್ನನ್ ಪಟ್ಟದ ಹತ್ತಿರ ಇಪ್ಪತ್ತೇ ಜನರು ವಾಸವಿರುವ ಮ್ಯಾಂಗಲೋರ್ ಪಾರ್ಕ್ ಎಂಬ ಸಂರಕ್ಷಿತ ಅರಣ್ಯ ಪಾರ್ಕ್ ಇದೆ. ಇಲ್ಲಿ ಒಂದು “ಸ್ನೇಕ್ ಗಲಿ” ಎಂಬ ಚಾರಣ ಕಾಲುದಾರಿ ಇದ್ದು, ಇಲ್ಲಿ 200 ಜನರು ಸೇರಬಹುದಾದ ಸಭಾಭವನ ಕೂಡಾ ಇದೆ. ಅದರ ಹೆಸರು ಮ್ಯಾಂಗಲೋರ್ ಹಾಲ್.

ಭಾರತೀಯರು ದೊಡ್ಡ ಸಂಖ್ಯೆಯಲ್ಲಿ ಇರುವ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ 1940-50ರ ದಶಕದಲ್ಲಿ ಸ್ಥಳೀಯಾಡಳಿತವು ಮ್ಯಾಂಗಲೋರ್ ಪಾರ್ಕ್ ಎಂಬ ಬಡಾವಣೆಯನ್ನು ಸ್ಥಾಪಿಸಿತು ಎಂದೂ ಹೇಳಲಾಗಿದೆ. ಸಿಂಗಾಪುರದಲ್ಲಿ ಮ್ಯಾಂಗಲೋರ್ ರೋಡ್ ಇದೆ. 19-20ನೇ ಶತಮಾನದ ನಡುವೆ, ಬ್ರಿಟಿಷ್ ವಸಾಹತುಶಾಹಿಗಳು ಈ ಹೆಸರಿಟ್ಟರು ಎಂಬುದು ಸ್ಥಾಪಿತವಾಗಿದೆ. ಕೆನಡಾದಲ್ಲಿ ಮ್ಯಾಂಗಲೋರ್ ಸ್ಟ್ರೀಟ್ ಎಂಬ ಹೆಸರಿನ ರಸ್ತೆಯಿದೆ. ಪಟ್ಟಣ ಆಡಳಿತವು ಈ ಹೆಸರಿಟ್ಟಿತ್ತಾದರೂ ಕಾಲ ತಿಳಿದಿಲ್ಲ. ಯುಎಇಯಲ್ಲಿಯೂ ಒಂದು ಮ್ಯಾಂಗಲೋರ್ ಸ್ಟ್ರೀಟ್ ಇದೆಯಾದರೂ, ಕರ್ನಾಟಕ ಕರಾವಳಿಯ ಅನೇಕ ವಲಸಿಗರು ಅಲ್ಲಿ ನೆಲೆನಿಂತಿರುವುದರಿಂದ ಇದರಲ್ಲಿ ವಿಶೇಷವೇನೂ ಇಲ್ಲ. ವಿಶೇಷವೆಂದರೆ, ಬಾಂಗ್ಲಾ ದೇಶದ ಡಾಕ್ಕಾದಲ್ಲಿ ಮತ್ತು ಶ್ರೀಲಂಕಾದಲ್ಲಿ “ಮಂಗಳೂರು ನಗರ” ಎಂಬ ಬಡಾವಣೆಗಳಿವೆಯಂತೆ! ಬ್ರಿಟಿಷ್ ಸ್ಥಳೀಯಾಡಳಿತಗಾರರು ಈ ಹೆಸರಿಟ್ಟಿದ್ದು, ಕಾಲ ಸ್ಪಷ್ಟವಿಲ್ಲ.

ಇದೇ ರೀತಿಯಲ್ಲಿ ಬ್ರೆಜಿಲ್‌ನಲ್ಲೂ ಈ ಹೆಸರಿನ ಊರುಗಳಿದ್ದು, ಹೆಚ್ಚಿನ ಮಾಹಿತಿ ನನಗೆ ಸಿಗಲಿಲ್ಲ. ಬ್ರೆಜಿಲನ್ನು ಆಳಿದ್ದ ಪೋರ್ಚುಗೀಸರು ಈ ಹೆಸರು ಇಟ್ಟಿರಲೂಬಹುದು. ನಿಮ್ಮ ಊರೂ ಪ್ರಪಂಚದ ಬೇರೆಡೆ ಇರಬಹುದು; ಹುಡುಕಿ! ಥ್ರಿಲ್ ಆಗುತ್ತದೆ!

Related Articles

ಇತ್ತೀಚಿನ ಸುದ್ದಿಗಳು

You cannot copy content of this page