Monday, June 17, 2024

ಸತ್ಯ | ನ್ಯಾಯ |ಧರ್ಮ

‘ಮಣಿಪುರದ ವಿಷಯದಲ್ಲಿ ಮಹಿಳಾ ಸಚಿವರು ಬಾಯಿ ಬಿಡಿ’ ಅಂದಾಗ ಸ್ಮೃತಿ ಇರಾನಿ ಏನಂದ್ರು ಗೊತ್ತಾ?

ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ನಡೆಯುತ್ತಿರುವ ದೊಡ್ಡ ಮಟ್ಟದ ಹಿಂಸಾಚಾರ ಇಡೀ ದೇಶದ ಗಮನ ಸೆಳೆಯುವಂತಾಗಿದೆ. ದೇಶ ಮಾತ್ರವಲ್ಲ, ಯಾವಾಗ ಮೇ ತಿಂಗಳ ಮೊದಲ ವಾರದಲ್ಲಿ ನಡೆದ ಕುಕಿ ಸಮುದಾಯದ ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಬೆತ್ತಲೆ ಮೆರವಣಿಗೆ ದೊಡ್ಡ ಸುದ್ದಿಯಾಯಿತೋ ಭಾರತದ ಮಿತ್ರರಾಷ್ಟ್ರ ಅಮೇರಿಕಾ ಕೂಡಾ ಒಂದು ಕ್ಷಣ ದಿಗಿಲಾಗಿತ್ತು. ಭಾರತದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಕಳವಳ ವ್ಯಕ್ತಪಡಿಸಿ, ಇದನ್ನು ತಣ್ಣಗಾಗಿಸಲು ಭಾರತ ಸರ್ಕಾರ ಕ್ರಮ ಕೈಗೊಳ್ಳಲು ಅಮೇರಿಕಾ ಒತ್ತಾಯಿಸಿದೆ.

ಇತ್ತ ದೇಶದ ಒಳಗೂ ಸಹ ಮಣಿಪುರ ಹಿಂಸಾಚಾರ ರಾಜಕೀಯ ಪಕ್ಷಗಳ ಕೆಸರೆರಚಾಟದ ಒಂದು ಭಾಗವಾಗಿ ಮಾರ್ಪಟ್ಟಿದೆ. ಕೇಂದ್ರ ಮತ್ತು ರಾಜ್ಯ ಎರಡೂ ಕಡೆಗಳಲ್ಲಿ ಆಡಳಿತದಲ್ಲಿರುವ ಬಿಜೆಪಿ ಪಕ್ಷ ಜಾಣ ಕುರುಡು, ಜಾಣ ಕಿವುಡು ಹಾಗೂ ಜಾಣ ಮೌನ ಪ್ರದರ್ಶನ ಮಾಡಿರುವುದು ಮಣಿಪುರ ಮಾತ್ರವಲ್ಲ ಭಾರತದ ಮಟ್ಟಿಗೆ ಅತ್ಯಂತ ಆಘಾತಕಾರಿ ಸಂಗತಿ.

ಇನ್ನೂ ವಿಶೇಷವೆಂದರೆ ಮಣಿಪುರದ ಮಹಿಳೆಯರ ಬೆತ್ತಲೆ ಮೆರವಣಿಗೆ ನಂತರ ಇಡೀ ದೇಶವೇ ಈ ಬಗ್ಗೆ ದನಿ ಎತ್ತಿದರೂ ಸರ್ಕಾರ ಮಾತ್ರ ಬಾಯಿ ಮುಚ್ಚಿಕೊಂಡಿದೆ. ಅದರಲ್ಲೂ ಸರ್ಕಾರದ ಮಹಿಳಾ ಪ್ರತಿನಿಧಿಗಳು ಮೌನ ಸರ್ಕಾರದ ನಿಲುವಿನ ಬಗ್ಗೆ ಯೋಚಿಸುವಂತಿದೆ. ಇದೇ ವಿಚಾರವಾಗಿ ಸಂಸತ್ತಿನ ರಾಜ್ಯಸಭೆಯಲ್ಲಿ ಬುಧವಾರ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸಂಸದ ಅಮೀ ಯಾಜ್ಞಿಕ್ ಅವರು ಮಣಿಪುರ ಹಿಂಸಾಚಾರದ ಬಗ್ಗೆ ಪ್ರಶ್ನೆ ಎತ್ತಿದ್ದು, ಮಣಿಪುರದ ಬಗ್ಗೆ ಮಹಿಳಾ ಸಚಿವರು ಮಾತನಾಡುತ್ತಾರೆಯೇ ಎಂದು ಕೇಳಿದರು.

ಇದಕ್ಕೆ ಪೂರಕವಾಗಿ ಸ್ಪಂದಿಸಬೇಕಾಗಿದ್ದ ಬಿಜೆಪಿ ಪಕ್ಷದ ಮಹಿಳಾ ಸಚಿವರು ವ್ಯತಿರಿಕ್ತವಾಗಿ ವರ್ತಿಸಿದ್ದು ಸಂಸತ್ತಿನ ರಾಜ್ಯಸಭಾ ಅಧಿವೇಶನ ಸಾಕ್ಷಿಯಾಗಿದೆ. ಕಾಂಗ್ರೆಸ್ ಸಂಸದರ ಪ್ರಶ್ನೆಗೆ ಕೋಪಗೊಂಡ ಸ್ಮೃತಿ ಇರಾನಿ ಎದ್ದು, ಬಿಜೆಪಿಯೇತರ ರಾಜ್ಯಗಳಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಬಗ್ಗೆ ವಿರೋಧ ಪಕ್ಷಗಳು ಧ್ವನಿ ಎತ್ತುತ್ತಿಲ್ಲ ಎಂದು ಆರೋಪಿಸಿದರು.

ಅಷ್ಟೆ ಅಲ್ಲದೆ ‘ಬಿಜೆಪಿ ಪಕ್ಷದ ಮಹಿಳಾ ರಾಜಕಾರಣಿಗಳು ಮಣಿಪುರ ಮಾತ್ರವಲ್ಲ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ಬಿಹಾರದ ಬಗ್ಗೆಯೂ ಮಾತನಾಡಿರುವುದರಿಂದ ನಿಮ್ಮ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತೇನೆ. ರಾಜಸ್ಥಾನದ ಬಗ್ಗೆ ಚರ್ಚಿಸಲು ನಿಮಗೆ ಯಾವಾಗ ಧೈರ್ಯವಿಲ್ಲ. ಛತ್ತೀಸ್‌ಗಢದ ಬಗ್ಗೆ ಚರ್ಚಿಸಲು ನಿಮಗೆ ಧೈರ್ಯವೆಲ್ಲಿದೆ, ಬಿಹಾರದಲ್ಲಿ ಏನಾಗುತ್ತಿದೆ ಎಂದು ಚರ್ಚಿಸಲು ನಿಮಗೆ ಯಾವಾಗ ಧೈರ್ಯ ಬರುತ್ತದೆ’ ಎಂದು ಸ್ಮೃತಿ ಇರಾನಿ ಮರು ಪ್ರಶ್ನೆ ಹಾಕಿದ್ದಾರೆ.

“ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಮಹಿಳೆಯರ ಮೇಲೆ ಹೇಗೆ ಅತ್ಯಾಚಾರ ನಡೆಯುತ್ತಿದೆ ಎಂದು ನಮಗೆ ಗೊತ್ತಿದೆ. ಇದನ್ನು ಹೇಳುವ ಧೈರ್ಯ ನಿಮಗಿಲ್ಲ. ರಾಹುಲ್ ಗಾಂಧಿ ಮಣಿಪುರಕ್ಕೆ ಹೇಗೆ ಬೆಂಕಿ ಹಚ್ಚಿದರು ಎಂದು ಹೇಳುವ ಧೈರ್ಯ ನಿಮಗಿಲ್ಲ. ಅದು ಬಿಟ್ಟು ಕ್ಯಾಬಿನೆಟ್‌ನಲ್ಲಿರುವ ಮಹಿಳಾ ಮಂತ್ರಿಗಳ ಮೇಲೆ ಆರೋಪ ಮಾಡಬೇಡಿ,” ಎಂದು ಅವರು ಏರುಧ್ವನಿಯಲ್ಲಿ ಕೇಳಿದ್ದಾರೆ.

ಒಟ್ಟಾರೆಯಾಗಿ ಮಣಿಪುರ ವಿಚಾರದಲ್ಲಿ, ಅಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ವಿಚಾರದಲ್ಲಿ ದನಿ ಎತ್ತಬೇಕಾದ ಬಿಜೆಪಿ ಪಕ್ಷದ ಮಹಿಳಾ ಸದಸ್ಯರು ಈ ರೀತಿಯಲ್ಲಿ ರಾಜಕೀಯ ಆರೋಪ ಮತ್ತು ಪ್ರತ್ಯಾರೋಪಕ್ಕೆ ಇಳಿದಿರುವುದು ದುರಂತ. ಇಂತಹ ಕಾರಣಕ್ಕೇ ಈಗ ಸುಪ್ರೀಂಕೋರ್ಟ್ ತಾನೇ ಅಲ್ಲಿನ ಶಾಂತಿ ಸುವ್ಯವಸ್ಥೆ ಕಲ್ಪಿಸಲು ಮುಂದಾಗುವುದಾಗಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು